ಸೋಮವಾರ, ಅಕ್ಟೋಬರ್ 22, 2012

ಒಂದೇ ನಾಡು... ಒಂದೇ ಕುಲವು...

ಇನ್ನೇನು ನವಂಬರ್ ೧ ಬಂದೇ ಬಿಟ್ಟಿತು, ಕನ್ನಡಿಗರ ಪಾಲಿಗೆ ಮನೆ ಹಬ್ಬದ ತರಹ ಇರುವ “ಕನ್ನಡ ರಾಜ್ಯೋತ್ಸವ” ಎಲ್ಲಡೆ ಆಚರಿಸಲ್ಪಡುತ್ತದೆ. ಸುಮಾರು ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳೆಲ್ಲ ಒಂದಾಗಿ “ಕನ್ನಡ ನಾಡು” ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನವಿದು. ನಮ್ಮ ಈ ರಾಜ್ಯೋತ್ಸವದ ಹಿಂದೆ ಹಲವು ದಶಕಗಳ ಕಡು ಹೋರಾಟದ ಕಥೆಯಿದೆ. ಈ ಏಕೀಕರಣದ ಹೋರಾಟದಲ್ಲಿ ಹಲವಾರು ಮಹನೀಯರು ತಮ್ಮ ಜೀವನವನ್ನೇ ಇದಕ್ಕಾಗಿ ಮುಡಿಪಾಗಿಟ್ಟಿದ್ದರು. ಹಾಗಿದ್ರೆ ಈ ಏಕೀಕರಣದ ಕಥೆ ಏನು ಅನ್ನೋದನ್ನ ನೋಡೋಣ..

ವಿಜಯನಗರ ಸಾಮ್ರಾಜ್ಯದ ಪತನವಾದ ನಂತರ, ಕನ್ನಡ ದೇಶವು ಹಲವು ಸಾಮಂತರ ಹಾಗೂ ರಾಜರುಗಳ ನಡುವೆ ಹಂಚಿಹೋಗಿತ್ತು. ಇದಾದ ನಂತರ ಭಾರತಕ್ಕೆ ಬಂದ ಬ್ರಿಟೀಷರ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಇದರಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನ, ನಿಜಾಮನ ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಪ್ರಾಂತ್ಯಗಳು ಪ್ರಮುಖವಾಗಿದ್ದವು. ಗಮನಿಸಬೇಕಾದ ಅಂಶವೆಂದರೆ ೨/೩ ನೇ ಭಾಗದಷ್ಟು ಕನ್ನಡಿಗರು ಮೈಸೂರು ಪ್ರಾಂತ್ಯದಿಂದ ಹೊರಗಿದ್ದರು. ಬಾಂಬೆ ಪ್ರಾಂತ್ಯದಲ್ಲಿ ಮರಾಠಿ ಆಡಳಿತ ಭಾಷೆಯಾಗಿತ್ತು, ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಆಡಳಿತ ಭಾಷೆಯಾಗಿತ್ತು, ನಿಜಾಮರ ಆಡಳಿತದಲ್ಲಿ ಉರ್ದು ಭಾಷೆ. ಹೀಗಾಗಿ ಕನ್ನಡಿಗರಿಗೆ ತಾವು ಅನಾಥರಾಗಿದ್ದೇವೆ, ತಮ್ಮ ಮೇಲೆ ಹೇರಿಕೆಯಾಗುತ್ತಿದೆ ಅನ್ನೋ ಭಾವನೆ ಜಾಗೃತವಾಗ ತೊಡಗಿತು. ಬೇರೆಯವರ ಹಂಗಿನಲ್ಲಿ ಪರಕೀಯರಂತೆ ಬಾಳುತ್ತಿದ್ದೇವೆ ಅನ್ನೋ ಭಾವನೆ ಮನೆಮಾಡಿತು. ಕನ್ನಡಿಗರಿಗೆ ತಮ್ಮದೇ ಆದ ಒಂದು ರಾಜ್ಯವಿರಬೇಕು, ಅಲ್ಲಿ ಕನ್ನಡಿಗರಿಗೆ ಎಲ್ಲಾ ಹಕ್ಕುಗಳು ದೊರೆಯುವಂತಿರಬೇಕು ಅನ್ನೋ ಚರ್ಚೆಗಳು ನಡೆಯತೊಡಗಿದವು. ಇದುವೇ ಮುಂದೆ ಅಖಂಡ ಕರ್ನಾಟಕದ ಏಕೀಕರಣದ ಹೋರಾಟಕ್ಕೆ ನಾಂದಿಯಾಯಿತು. ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಹಾಗೂ ಅನೇಕ ಮಹನೀಯರು ಈ ಚಳುವಳಿಗೆ ಹೆಗಲುಕೊಟ್ಟರು.

(ಚಿತ್ರ ಕೃಪೆ: http://www.kamat.com/kalranga/kar/)

೧೮೫೬ರಲ್ಲಿ ಕರ್ನಾಟಕ ಏಕೀಕರಣದ ಮಾತುಗಳು ಕೇಳಿಬರಲು ಶುರುವಾದವು, ಆದರೆ ಇದಕ್ಕೆ ಬಲ ಬಂದಿದ್ದು ೧೮೯೦ ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದ ನಂತರ. ೧೯೦೩ ರಲ್ಲಿ ಸಂಘದಲ್ಲಿ ಭಾಷಣ ಮಾಡಿದ ಬೆನಗಲ್ ರಾಮರಾಯರು ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯದ ಹಾಗೂ ಮುಂಬೈ ಪ್ರಾಂತ್ಯದ ಕನ್ನಡ ಭಾಗಗಳನ್ನು ಕೂಡಿಸಿ ಅಖಂಡ ಕರ್ನಾಟಕವನ್ನು ಕಟ್ಟುವ ಯೋಚನೆಯನ್ನು ಸಂಘದ ಮುಂದಿಟ್ಟರು. ನಂತರ ಚಳುವಳಿಗೆ ಒಂದು ಮೂರ್ತ ರೂಪ ಕೊಟ್ಟಿದ್ದು ಕರ್ನಾಟಕದ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು. ಇದೇ ಸಮಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ನವರು ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇದಾದ ನಂತರ ಪರಿಷತ್ತಿನ ಆಶ್ರಯದಲ್ಲಿ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ನಡೆಸಿ ಏಕೀಕರಣದ ಬೇಡಿಕೆಯನ್ನು ಒತ್ತಾಯಿಸಲಾಗುತ್ತಿತ್ತು. ಸಾಹಿತ್ಯ ಪರಿಷತ್ತಿನ ಸಭೆಗಳು ರಾಜಕಾರಣಿಗಳ ಗಮನ ಸೆಳೆಯುವಲ್ಲಿ ಸಫಲವಾಯಿತು. ೧೯೨೦ರಲ್ಲಿ ಧಾರವಾಡದಲ್ಲಿ ಪ್ರಥಮ ಕರ್ನಾಟಕ ರಾಜಕೀಯ ಪರಿಷತ್ತು ನಡೆಸಿ ದೇಶಮಟ್ಟದ ಗಮನ ಸೆಳೆಯಲಾಯಿತು. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ಕಾಲದಲ್ಲೇ ಸರ್. ಸಿದ್ದಪ್ಪಾ ಕಂಬಳಿಯವರ ಅಧ್ಯಕ್ಷತೆಯಲ್ಲಿ ಪ್ರಥಮ ಏಕೀಕರಣ ಸಮ್ಮೇಳನವನ್ನು ಸೇರಿತು. ಇದೇ ಸಮ್ಮೇಳನದಲ್ಲಿ ಹುಯಿಲುಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು” ಗೀತೆಯನ್ನು ಹಾಡಲಾಯಿತು. ಇದಾದ ನಂತರ ೧೯೪೬ ರ ವರೆಗೆ ಈ ಸಮ್ಮೇಳನಗಳನ್ನು ವಿವಿಧ ಗಣ್ಯರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ೧೯೨೬ರಲ್ಲಿ ಹಿಂದುಸ್ಥಾನೀ ಸೇವಾದಳವು ಸಹಿ ಸಂಗ್ರಹ ಚಳುವಳಿಯನ್ನು ಮಾಡಿ ಏಕೀಕರಣದ ಪರ ೩೬,೦೦೦ ಜನರ ಸಹಿ ಪಡೆಯಿತು. ಇದರ ಪರಿಣಾಮವಾಗಿ ಏಕೀಕರಣ ರಾಜಕೀಯ ವಿಷಯವಾಯಿತು. ೧೯೩೭ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಏಕೀಕರಣ ತನ್ನ ಗುರಿಯಂದು ಹೇಳಿತ್ತು. ಪ್ರಜಾ ಸಂಯುಕ್ತ ಪಕ್ಷವೂ ಸಹ ೧೯೩೭ರಲ್ಲಿ ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿತು. ೧೯೪೭ರಲ್ಲಿ ಮುಂಬೈ ಹಾಗೂ ಮದ್ರಾಸ್ ವಿಧಾನಸಭೆಗಳು ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿದವು. ೧೯೪೭ರ ಡಿಸೆಂಬರ್ ನಲ್ಲಿ ಕಾಸರಗೋಡಿನಲ್ಲಿ ಡಾ| ದಿವಾಕರರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನವು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕರ್ನಾಟಕ ಏಕೀಕರಣವಾಗದ ಬಗ್ಗೆ ಅಸಮಾಧಾನ ಸೂಚಿಸಿತು. 


ಆದರೆ ಕೇಂದ್ರ ಸರ್ಕರಾ ನೇಮಿಸಿದ್ದ ಧಾರ್ ಆಯೋಗವು ಭಾಷಾವಾರು ಪ್ರಾಂತ್ಯದ ರಚನೆಯನ್ನು ವಿರೋಧಿಸಿತು. ಆಗ ಕಾಂಗ್ರೆಸ್ ಧಾರ್ ವರದಿಯ ಬಗ್ಗೆ ಪರಿಶೀಲನೆಗಾಗಿ ಜವಾಹರ್ ಲಾಲ್ ನೆಹರು, ವಲ್ಲಭಭಾಯಿ ಪಟೇಲ್ ಹಾಗೂ ಪಟ್ಟಾಭಿ ಅವರ ಸಮಿತಿಯೊಂದನ್ನು ರಚಿಸಿತು. ಆದರೆ ಈ ಸಮಿತಿಯು ಸಹ ಅಂಧ್ರಪ್ರದೇಶವನ್ನು ಹೊರತು ಪಡಿಸಿ ಬೇರೆ ಭಾಷಾವಾರು ಪ್ರಾಂತಗಳ ಬೇಡಿಕೆಯನ್ನು ಬೆಂಬಲಿಸಲಿಲ್ಲ. ಸ್ವಾಂತಂತ್ಯಕ್ಕಿಂತ ಮುಂಚೆ ೨೦ ಆಡಳಿತಕ್ಕೆ ಸೇರಿದ್ದ ಕರ್ನಾಟಕ ಸ್ವಾತಂತ್ರ್ಯದ ನಂತರ ೫ ಪ್ರಮುಖ ಆಡಳಿತಕ್ಕೆ ಬಂತು. ಆಗ ಮೈಸೂರು ಸಂಸ್ಥಾನದ ಜೊತೆ ಇತರೆ ಭಾಗಗಳನ್ನು ಸೇರಿಸಲು ಮೈಸೂರು ಹಾಗೂ ಕೊಡಗಿನ ಕೆಲವರು ಅಕ್ಷೇಪವೆತ್ತಿದರು. ಆಗ ಗೊರೂರು ರಾಮಸ್ವಾಮಯ್ಯಂಗಾರ್, ಕುವೆಂಪು, ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮುಂತಾದ ನಾಯಕರುಗಳು ಜನಾಭಿಪ್ರಾಯದ ಪರಿವರ್ತನೆಗೆ ಕಾರಣರಾದರು.

೧೯೫೩ರಲ್ಲಿ ಏಕೀಕರಣಕ್ಕಾಗಿ ಸತ್ಯಾಗ್ರಹ ನಡೆಸಿ ೫೦೦೦ ಜನ ಬಂಧಿತರಾದರು. ಅದೇ ವರ್ಷ ಪೊಟ್ಟಿ ಶ್ರೀರಾಮುಲು ಉಪವಾಸ ನಡೆಸಿ ತೀರಿಕೊಂಡಾಗ ಆಂಧ್ರ ಪ್ರಾಂತ ರಚನೆಯಾಗಿ, ಬಳ್ಳಾರಿ ಜಿಲ್ಲೆಯ ಏಳು ತಾಲೂಕುಗಳು ಮೈಸೂರು ರಾಜ್ಯಕ್ಕೆ ಸೇರಿತು. ಇಷ್ಟಾದರೂ ಕರ್ನಾಟಕ ಒಂದಾಗುವ ಲಕ್ಷಣಗಳು ಕಾಣಿಸುತ್ತಿದ್ದಿಲ್ಲ, ಆಗ ಜನರ ಸಿಟ್ಟು ಎಷ್ಟರ ಮಟ್ಟಿಗೆ ಇತ್ತೆಂದರೆ ಧಾರವಾಡ ಹಾಗೂ ಹುಬ್ಬಳ್ಳಿಗಳಲ್ಲಿ ವಿಧಾನಸಭೆಗೆ ಉಪಚುನಾವಣೆಗಳಾದಾಗ ಕಾಂಗ್ರೆಸ್ ಸೋತು ಏಕೀಕರಣದ ಪರ ಅಭ್ಯರ್ಥಿಗಳು ಗೆದ್ದರು. ಇದೇ ಸಮಯದಲ್ಲಿ ಹುಬ್ಬಳ್ಳಿಯ ಬಳಿ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು ಅಖಂಡ ಕರ್ನಾಟಕಕ್ಕೆ ಆಗ್ರಹಿಸಿ ಆಮರಣ ಉಪವಾಸ ಕೈಗೊಂಡರು. ಅದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕೆ.ಪಿ.ಸಿ.ಸಿ ಸಭೆಯ ವೇಳೆ ಏಕೀಕರಣಕ್ಕೆ ಆಗ್ರಹಿಸಿ ಜನರು ಕಲ್ಲು ತೂರಿ ಪ್ರತಿಭಟಿಸಿದರು. ಇದಾದ ನಂತರ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರ ರಾಜ್ಯ ಪುನರ್ಘಟನಾ ಅಯೋಗವನ್ನು ನೇಮಿಸಿತು. ಈ ಆಯೋಗ ಸಲ್ಲಿಸಿದ ವರದಿಯ ಪ್ರಕಾರ ಏಕೀಕೃತ ಕರ್ನಾಟಕ ೧೯೫೬ರ ನವಂಬರ್ ೧ಕ್ಕೆ ಅಸ್ತಿತ್ವಕ್ಕೆ ಬಂತು. ಮೈಸೂರ ಎಂಬ ಹೆಸರಿದ್ದ ರಾಜ್ಯಕ್ಕೆ ೧೯೭೩ರ ನವೆಂಬರ್ ೧ರಂದು “ಕರ್ನಾಟಕ” ಎಂದು ಹೆಸರಿಡಲಾಯಿತು. ಈ ಸಂಧರ್ಭದಲ್ಲಿ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರಿಗೆ ನಮ್ಮೆಲ್ಲರ ನಮನ ಸಲ್ಲಲೇಬೇಕು. ಈ ಮಹನೀಯರು ನಮಗೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದುಕೊಂಡು ಹೋಗಬೇಕು ಹಾಗೂ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕಡೆಗೆ ನಮ್ಮ ನಡೆ ಇರಬೇಕು.

ಭಾನುವಾರ, ಮೇ 20, 2012

ಮುಖ್ಯಮಂತ್ರಿಗಳೇ, ಯಳ್ಳೂರು ಇರೋದು ಮಹಾರಾಷ್ಟ್ರದಲ್ಲಾ?


ಇಷ್ಟಕ್ಕೂ ಈಗ ನಾನು ಹೇಳಲು ಹೊರಟಿರುವ ಊರು ಹೆಚ್ಚು ಜನರಿಗೆ ಪರಿಚಿತವಿಲ್ಲದೇ ಇರಬಹುದು. ಯಳ್ಳೂರು ಅನ್ನೋ ಗ್ರಾಮ ಇರುವುದು ಬೆಳಗಾವಿ ನಗರದಿಂದ ಕೆಲವೇ ಕಿಲೋಮೀಟರ್ ಗಳ ದೂರದಲ್ಲಿ. ಯಳ್ಳೂರಿಗೆ ಬೆಳಗಾವಿಯಿಂದ ಹತ್ತಾರು ಬಸ್ಸುಗಳು ಬೆಳಗ್ಗೆಯಿಂದ ರಾತ್ರಿಯವರಿಗೂ ಓಡಾಡುತ್ತವೆ. ಯಳ್ಳೂರಿನಲ್ಲಿ ಒಂದು ಗ್ರಾಮ ಪಂಚಾಯಿತಿ ಸಹ ಇದೆ. ಯಳ್ಳೂರು ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಸರಿ ಇದರಲ್ಲೇನು ವಿಶೇಷ ಅಂತೀರ?? ಒಂದು ವಿಶೇಷ ಇದೆ ಅದೇನೆಂದರೆ ಯಳ್ಳೂರು ಮಹಾರಾಷ್ಟ್ರದಲ್ಲಿದೆ!!!! ಹೌದು ಸರಿಯಾಗಿ ಓದಿಕೊಳ್ಳಿ, ಯಳ್ಳೂರು ಇರುವುದು ಮಹಾರಾಷ್ಟ್ರದಲ್ಲಿ. ಹಾಗಂತ ನಾನು ಹೇಳುತ್ತಿಲ್ಲ ಬದಲಾಗಿ ಯಳ್ಳೂರಿನಲ್ಲಿರುವ ಬೋರ್ಡ್ ಹೇಳುತ್ತದೆ. ಹಾಗೂ ಈ ಬೋರ್ಡ್ ಹಾಕಿರುವುದು ಎಂ.ಇ.ಎಸ್ ನವರು.

(ಚಿತ್ರಕೃಪೆ: ಅಂತರ್ಜಾಲ)

ಬೋರ್ಡ್ ತಗೆಯೋದಿಲ್ಲ ಅಂದ ಸರ್ಕಾರ

ಹಲವು ಶತಮಾನಗಳಿಂದ ಇಲ್ಲಿ ಪರಸ್ಪರವಾಗಿ ಸಾಮರಸ್ಯದಿಂದ ಬದುಕುತ್ತಿರುವ ಜನರ ಮಧ್ಯ ಭಾಷಾ ವೈಷ್ಯಮ್ಯವನ್ನು ಬೆಳಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಎಂ.ಇ.ಎಸ್ ನಂತಹ ನಾಡದ್ರೋಹಿ ಸಂಘಟನೆಯೊಂದು ಹಲವು ದಶಕಗಳಿಂದ ಜನರ ನಡುವೆ ಭಾಷಾ ವೈಷಮ್ಯದ ಬೀಜವನ್ನು ಬಿತ್ತಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತ, ಕರಗಿ ಹೋಗುತ್ತಿರುವ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಆದರೆ ರಾಜ್ಯದ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿರುವ ಇಂತಹ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ನಮ್ಮ ಸರ್ಕಾರ ಕೈಕಟ್ಟಿಕೊಂಡು ಸುಮ್ಮನೇ ಕುಳಿತಿದೆ. ಇದಲ್ಲದೇ ಮಹಾ ಮೇಳಾವದ ಹೆಸರಿನಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳನ್ನು ಇಲ್ಲಿಗೆ ಕರೆಸಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವಂತಹ ಉದ್ಧಟತನದ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಸಹ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಲೇ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕನ್ನಡ ಪರ ಸಂಘಟನೆಗಳು, ಅದರಲ್ಲೂ ಪ್ರಮುಖವಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಬಾಹಿರವಾಗಿ ಹಾಕಲಾಗಿರುವ ಮಹಾರಾಷ್ಟ್ರ ಬೋರ್ಡನ್ನು ಹಾಗೂ ಜನರಲ್ಲಿ ವೈಮನಸ್ಯ ಬಿತ್ತುತ್ತಿರುವ ಎಂ.ಇ.ಎಸ್ ನಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹೋರಾಟ ಮಾಡಿದರೆ, ಅವರನ್ನು ಸರ್ಕಾರ ಜೈಲಿಗೆ ಅಟ್ಟುತ್ತದೆ ಹಾಗೂ ಇವರನ್ನು ಮಾಧ್ಯಮಗಳಲ್ಲಿ ಕಿಡಿಗೇಡಿಗಳು ಅನ್ನೋ ಹೆಸರಿನಲ್ಲಿ ಲೇವಡಿ ಮಾಡಲಾಗುತ್ತಿದೆ. ಬೋರ್ಡ್ ತೆಗೆದು ಹಾಕಿ ಎಂದು ಆಗ್ರಹಿಸಿದರೆ, ಇದು ಭಾಷಾ ಸೂಕ್ಷವಾಗಿರುವ ಪ್ರದೇಶ ಹಾಗಾಗಿ ಬೋರ್ಡ್ ತಗೆಯಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿನ ಅಧಿಕಾರಿಗಳು ಹಾಗೂ ಸರ್ಕಾರ ಅಸಾಹಾಯಕತೆ ತೋರಿಸುತ್ತಿದೆ.

ನಮ್ಮ ಹಿಂದಿನ ಯಾವುದೇ ಸರ್ಕಾರಗಳಾಗಲಿ, ಅಧಿಕಾರಸ್ಥ ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಗಟ್ಟಿಯಾಗಿ ನಿಂತು ಇಂತಹ ಕಿಡಿಗೇಡಿ ಜನರನ್ನು, ನಾಡಿನ ಸಾಮರಸ್ಯ ಕದಡುವಂತಹ ಕಾರ್ಯಕ್ರಮಗಳನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಅವರೇನಾದರು ಅವರ ಕೆಲಸಗಳನ್ನು ಸರಿಯಾಗಿ ಮಾಡಿದ್ದರೆ. ಯಾಕೆ ಕರವೇಯ ನೂರಾರು ಕಾರ್ಯಕರ್ತರು ಜೈಲಿನ ವಾಸ ಅನುಭವಿಸಬೇಕಾಗುತ್ತಿತ್ತು? ಅನ್ಯಾಯವನ್ನು ಪ್ರಶ್ನಿಸಿದರೆ ಅವರಿಗೆ ಕಿಡಿಗೇಡಿಗಳು ಅನ್ನೋ ಹಣೆಪಟ್ಟಿ ಬೇರೆ. ಈ ಕೂಡಲೇ ಸರ್ಕಾರ ಭಾಷಾ ಅಲ್ಪಸಂಖ್ಯತರನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣದ ಕೆಲಸ ಬಿಟ್ಟು, ನಾಡು, ನೆಲ. ಜಲಕ್ಕೆ ಬದ್ಧ ಎಂಬ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರಬೇಕು.

ಕೊನೆಯದಾಗಿ: ನಾಡು, ನುಡಿ, ನೆಲ ಹಾಗೂ ಜಲದ ವಿಷಯದಲ್ಲಿ ನಮ್ಮ ನಾಡಿಗೆ ಅನ್ಯಾಯವಾದರೆ ತಾವು ಜೀವ ಕೊಡಲು ಸಿದ್ಧ ಅನ್ನುವ ನಮ್ಮ ಚಿತ್ರರಂಗದ ಗಣ್ಯರು ಎಲ್ಲಿದ್ದಾರೆ? ಬೆಳಗ್ಗೆಯಿಂದ ಟಿವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದದ್ದನ್ನು ನೋಡಿದೆ, ಆದ್ರೆ ಯಾಕೋ ನಮ್ಮ ಚಿತ್ರರಂಗದವರು ಮಾತ್ರ ಯಾರೂ ಕಣ್ಣಿಗೆ ಕಾಣಲೇ ಇಲ್ಲಾ!!!

ಮಂಗಳವಾರ, ಮೇ 1, 2012

ಕನ್ನಡ ಚಿತ್ರರಂಗ ಹಾಗೂ ಟಿವಿ ಮಾಧ್ಯಮಗಳ ತಾಲೀಬಾನಿಕರಣ

ಇತ್ತೀಚಿಗೆ ಡಬ್ಬಿಂಗ್ ವಿರುದ್ಧ ಹಾಗೂ ಅದರಿಂದ ಕನ್ನಡದ ಮೇಲೆ ಆಗುವ ಪರಿಣಾಮಗಳ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಈ ಸಂಧರ್ಭದಲ್ಲಿ ಗೆಳಯ ವಸಂತ್ ಶೆಟ್ಟಿ ಅವರು ಬರಿದ್ದಿದ್ದ ಈ ಲೇಖನ ಚುರುಮುರಿ ಬ್ಲಾಗ್ ನಲ್ಲಿ ಪ್ರಕಟವಾಗಿತ್ತು. ಈ ಲೇಖನವನ್ನು ಅವರ ಅನುಮತಿಯೊಂದಿಗೆ ಕನ್ನಡಕ್ಕೆ ಅನುವಾದಿಸಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.






ಹಿಂದಿ ನಟ ಅಮೀರ್ ಖಾನ್ "ಸತ್ಯ ಮೇವ ಜಯತೇ" ಅನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಅಡಿಯಿಡುವುದನ್ನು ಪ್ರಕಟಿಸಿದರು. ಈ ಕಾರ್ಯಕ್ರಮವನ್ನು ಸ್ಟಾರ್ ಸಮೂಹದ ಚಾನೆಲ್ ಗಳ ಮೂಲಕ ಭಾರತದ ವಿವಿಧ ಭಾಷೆಗಳಲ್ಲಿ ಪ್ರಸಾರ ಮಾಡಲು ಯೋಜಿಸಲಾಗಿತ್ತು. ಕನ್ನಡದಲ್ಲಿ, ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಮೇ ೬ ರಿಂದ ಕನ್ನಡದಲ್ಲಿ ಪ್ರಸಾರವಾಗಬೇಕಿತ್ತು. ಆದ್ರೆ ಈಗ ಕನ್ನಡ ಸಂಸ್ಕೃತಿ, ಭಾಷೆಯ ರಕ್ಷಣೆಯ ನೆಪದಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಹೇರಿರುವ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಈ ಕಾರ್ಯಕ್ರಮ ಕನ್ನಡದಲ್ಲಿ ಪ್ರಸಾರವಾಗುತ್ತಿಲ್ಲ.

ಕಳೆದ ವರ್ಷ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬಗೆಗಿನ ಕಾರ್ಯಕ್ರಮವೊಂದನ್ನು ಡಬ್ ಮಾಡಿ ಪ್ರಸಾರ ಮಾಡಲು ಮುಂದಾದ ಜೀ ಕನ್ನಡ ವಾಹಿನಿಯ ಮೇಲೆ ದಾಳಿ ನಡೆಸಿದ ಗುಂಪುಗಳೇ ಈ ಬಾರಿಯೂ ಇಂತಹ ಕೆಲಸಕ್ಕೆ ಮುಂದಾಗಿವೆ ಅನ್ನಲಾಗಿದೆ. ಪುಣ್ಯಕ್ಕೆ, ಈ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ಮೊದಲೇ ಸುವರ್ಣ ವಾಹಿನಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಘಟನೆಗಳು ನಮ್ಮ ಮುಂದೆ ಒಂದು ದೊಡ್ಡ ಪ್ರಶ್ನೆಯನ್ನು ಎತ್ತುತ್ತವೆ: ಒಂದು ಸಂವಿಧಾನಿಕ ಪ್ರಜಾತಂತ್ರದಲ್ಲಿ ಬ್ಯಾನ್ ಮಾಡುವ ಅಧಿಕಾರವನ್ನು ಈ ಸಂಸ್ಥೆಗಳಿಗೆ ನೀಡಿದ್ದು ಯಾರು?

ಯಾವುದೇ ನಾಗರೀಕ ಪ್ರಜಾಪ್ರಭುತ್ವ ಅನುಸರಿಸುವ ಸಮಾಜದಲ್ಲಿ, ಸರ್ಕಾರವೇ ವಿಧಿಸಿದ ಬ್ಯಾನ್ ಆದರೂ ಸಹ ಅಂತವುಗಳಿಗೆ ಯಾವುದೇ ಜಾಗವಿಲ್ಲ. ಪ್ರಜಾಪ್ರಭುತ್ವದಲ್ಲಿ, ಎಲ್ಲಿಯವರೆಗೆ ನನ್ನ ಬೇಡಿಕೆಗಳು ಕಾನೂನು ಬದ್ಧವಾಗಿದೆಯೋ ಅಲ್ಲಿಯವರೆಗೂ ನಾನೊಬ್ಬ ಗ್ರಾಹಕನಾಗಿ ನನಗೆ ಬೇಕಿರುವ ಎಲ್ಲ ಮಾಹಿತಿ, ಜ್ಞಾನ ಮತ್ತು ಮನರಂಜನೆಯ ಅಗತ್ಯಗಳನ್ನು ನನ್ನ ಇಷ್ಟದ ಭಾಷೆಯಲ್ಲಿ ಪಡೆಯುವ ಎಲ್ಲ ಹಕ್ಕು ನನಗಿದೆ.

ನನ್ನಂತೆಯೇ ಲಕ್ಷಾಂತರ ಕನ್ನಡಿಗರಿಗೂ ಮಕ್ಕಳ ಮನತಣಿಸುವ ಡಿಸ್ನಿಯ ಯಾವುದೋ ಒಂದು ಪಾತ್ರ ಕನ್ನಡದಲ್ಲಿ ಮಾತನಾಡುವುದನ್ನು ನೋಡುವ ಆಸೆಯಿರಬಹುದು, ಇಲ್ಲವೇ,ಡಿಸ್ಕವರಿ, ಅನಿಮಲ್ ಪ್ಲಾನೆಟಿನಲ್ಲಿ ಬರುವ ಅಮೇಜಾನ್ ಕಾಡಿನ ಬಗೆಗಿನ ಕಾರ್ಯಕ್ರಮವನ್ನು ಕನ್ನಡದಲ್ಲೇ ನೋಡುವ ಬಯಕೆಯಿರಬಹುದು, ಅಥವಾ ಅವತಾರ್ ೩ಡಿ ತರಹದ ಸಿನೆಮಾವನ್ನು ಕನ್ನಡದಲ್ಲೇ ನೋಡಿ ಆನಂದಿಸುವ ಮನಸ್ಸಿರಬಹುದು. ನನ್ನ ನುಡಿಯಲ್ಲೇ ಇದೆಲ್ಲವನ್ನು ನೋಡಬೇಕು ಅನ್ನುವ ನನ್ನ ನ್ಯಾಯಯುತ ಬೇಡಿಕೆಯನ್ನು ಯಾಕೆ ನಿರಾಕರಿಸಲಾಗುತ್ತಿದೆ?
  • ಪ್ರಜಾಪ್ರಭುತ್ವವಿರುವ ರಾಜ್ಯವಾಗಿ ಕರ್ನಾಟಕ ಉಳಿದಿಲ್ಲವೇ? 
  • ಪ್ರಜೆಗಳಿಂದ ಆಯ್ಕೆಯಾಗದ ಕೆಲವೇ ಕೆಲವು ದಬ್ಬಾಳಿಕೆಯ ಜನರ ಆಳ್ವಿಕೆ ನಡೆಯುತ್ತಿರುವ ಡಮ್ಮಿ ಪ್ರಜಾಪ್ರಭುತ್ವವಾಗಿ ಕರ್ನಾಟಕ ಬದಲಾಗಿದೆಯೇ? 
  • ಇಂತಹ ನಡೆಯನ್ನು ನೀವು ಬೇರಾವುದಾದರೂ ಚಿತ್ರೋದ್ಯಮದಲ್ಲಿ ಕಂಡಿದ್ದೀರಾ? 
ಬೇರೆ ಯಾವುದೇ ವ್ಯಾಪಾರದಂತೆ ಸಿನೆಮಾ ಉದ್ಯಮ ಕೂಡಾ ಬೇಡಿಕೆ ಮತ್ತು ಪೂರೈಕೆ ಮೇಲೆಯೇ ನಡೆಯುತ್ತೆ. ಯಾವ ವಸ್ತು ಇಲ್ಲವೇ ಸೇವೆಗೆ ಬೇಡಿಕೆ ಇದೆಯೋ ಅದನ್ನು ಲಾಭದ ಜೊತೆ ಪೂರೈಸುವ ಪೂರೈಕೆದಾರರಿರುತ್ತಾರೆ. ಸರಿ ತಾನೇ?

ದುಃಖದ ವಿಚಾರ ಅಂದರೆ ಕನ್ನಡ ಚಿತ್ರೋದ್ಯಮ ಮತ್ತು ಟಿವಿ ಉದ್ಯಮಕ್ಕೆ ಈ ಸೂತ್ರ ಅನ್ವಯಿಸಲ್ಲ.

ಮಾರುಕಟ್ಟೆಯಲ್ಲಿ ಡಬ್ ಆದ ಕಂಟೆಂಟ್ ನ ಸಾಧಕ/ಬಾಧಕಗಳೇನು ಅನ್ನುವುದರ ಆಧಾರದ ಮೇಲೆ ನಡೆಯದೇ ಕನ್ನಡ ಉದ್ಯಮ ಏನಿದ್ದರೂ ತಾಲಿಬಾನ್ ಮಾದರಿಯಲ್ಲಿ ಟಿವಿ ವಾಹಿನಿಗಳಿಗೆ ಡಬ್ ಆದ ಕಾರ್ಯಕ್ರಮ ಪ್ರಸಾರ ಮಾಡದಂತೆ ಫತ್ವಾ ಹೊರಡಿಸುವುದರ ಮೇಲೆ ನಡೆಯುತ್ತೆ. ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಿ ಗೆಲ್ಲುವ ಛಲದ ಮೇಲೆ ನಡೆಯದೇ ಏನಿದ್ದರೂ ಸಬ್ಸಿಡಿ ರೂಪದಲ್ಲಿ ೬೦% ಗೂ ಹೆಚ್ಚು ಚಿತ್ರಗಳಿಗೆ ಜನರ ತೆರಿಗೆ ಹಣವನ್ನು ಹೀರುವುದರ ಬಲದ ಮೇಲೆ ನಡೆಯುತ್ತೆ. ತನ್ನ ವೈಫಲ್ಯಕ್ಕೆ ಹಗಲು ರಾತ್ರಿ ಸರ್ಕಾರವನ್ನು,ಗ್ರಾಹಕರನ್ನು ಹೊಣೆಯಾಗಿಸುವುದರ ಮೇಲೆ ನಡೆಯುತ್ತೆ.


ಕನ್ನಡ ಚಿತ್ರ ಮತ್ತು ಟಿವಿ ಉದ್ಯಮ ಖಾಸಗಿ ವ್ಯಕ್ತಿಗಳಿಂದ ಲಾಭಕ್ಕಾಗಿ ನಡೆಯುವ ಉದ್ಯಮವೇ ಹೊರತು ಸರ್ಕಾರಿ ಪ್ರಾಯೋಜಿತ ಸಾರ್ವಜನಿಕರ ಸೇವೆಗಾಗಿ ಮುಡಿಪಿಟ್ಟ ಉದ್ಯಮವಲ್ಲ ಅನ್ನುವುದೇ ಅವರಿಗೆ ಮರೆತು ಹೋದ ಹಾಗಿದೆ.

ಕನ್ನಡ ಚಿತ್ರೋದ್ಯಮ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಒಂದು ಲಿಂಗ್ವಿಸ್ಟಿಕ್ ರೆಜಿಸ್ಟರ್ ಆಗಿ ಅದರ ಸಾಮಾಜಿಕ ಪರಿಣಾಮ ದೊಡ್ಡದಿದೆ. ಯುವ ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ ಉಳಿಸುವಲ್ಲಿ ಅದರ ಪಾತ್ರ ನಿರ್ಣಾಯಕವೂ ಹೌದು. ಜಾಗತೀಕರಣದ ಈ ದಿನಗಳಲ್ಲಿ ಪ್ರಜಾಸತ್ತಾತ್ಮಕವಲ್ಲದ ಮತ್ತು ಸಂವಿಧಾನ ಬಾಹಿರವಾದ ಈ ಬ್ಯಾನ್ ನಿಂದಾಗಿ ಕನ್ನಡದಲ್ಲೇ ಜ್ಞಾನ ಮತ್ತು ಮನರಂಜನೆ ಪಡೆಯುವ ವಿಷಯದಲ್ಲಿ ಕನ್ನಡಿಗರು ಹೆಚ್ಚಿನ ಆಯ್ಕೆಗಳೇ ಇಲ್ಲದ ಸ್ಥಿತಿ ತಲುಪಿದ್ದಾರೆ. ಅದೇ ಕುಯ್ಯುವ ಧಾರಾವಾಹಿಗಳು, ಕಿತ್ತಾಡುವ ಸುದ್ದಿವಾಹಿನಿಗಳು ಮತ್ತು ಮಚ್ಚು-ಕೊಚ್ಚು ಚಿತ್ರಗಳನ್ನು ಬಿಟ್ಟರೆ ನನ್ನ ಬುದ್ದಿ ಶಕ್ತಿಗೆ ಚುರುಕು ಮುಟ್ಟಿಸುವ ಯಾವ ಅಂಶವೂ ಕನ್ನಡದಲ್ಲಿ ನನಗೆ ಸಿಗುತ್ತಿಲ್ಲ.

ಇಂತಹ ಯಾವುದೇ ಬ್ಯಾನ್ ಇಲ್ಲದ ತೆಲುಗು, ತಮಿಳು ಮತ್ತು ಹಿಂದಿ ಉದ್ಯಮಗಳು ಟಿವಿ ಮತ್ತು ಸಿನೆಮಾ ಎರಡರಲ್ಲೂ ನಮಗಿಂತಲೂ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವುದು ಇಂತಹ ಅಸಂವಿಧಾನಿಕ ಬ್ಯಾನ್ ಗಳನ್ನು ಆದಷ್ಟು ಬೇಗ ಆಚೆ ಸರಿಸಬೇಕು ಅನ್ನುವ ಸ್ಪಷ್ಟ ಸಂದೇಶವನ್ನು ನಮಗೆ ಕೊಡುತ್ತಿವೆ.

ಈ ನಿಟ್ಟಿನಲ್ಲಿ ಕರ್ನಾಟಕದ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಡಬ್ಬಿಂಗ್ ನಿಷೇಧ ಹೇಗೆ ಕನ್ನಡದ ಭವಿಷ್ಯಕ್ಕೆ ಹೊಡೆತ ಕೊಡುತ್ತಿದೆ ಅನ್ನುವ ಅಂಶವನ್ನು ಜನಸಮುದಾಯಕ್ಕೆ,ಸರ್ಕಾರಕ್ಕೆ ತಲುಪಿಸುವ ಕೆಲಸಕ್ಕೆ ಮಾಧ್ಯಮಗಳು ಮುಂದಾಗಬೇಕಿವೆ. ಈ ಬಗ್ಗೆ ಹೆಚ್ಚೆಚ್ಚು ಚರ್ಚೆ, ಮಾತುಕತೆಗಳನ್ನು ನಡೆಸುವಂತೆ ಮಾಧ್ಯಮಗಳು ಈ ವಿಷಯವನ್ನು ಎತ್ತಿ ಹಿಡಿಯಬೇಕಿದೆ ಮತ್ತು ಈ ಎಲ್ಲ ಚರ್ಚೆಗಳಲ್ಲಿ ಎಲ್ಲರಿಗಿಂತ ಪ್ರಮುಖವಾಗಿ ಈ ಉದ್ಯಮಗಳ ಅಸ್ತಿತ್ವಕ್ಕೆ ಬೆನ್ನೆಲುಬಾಗಿರುವ ಗ್ರಾಹಕನಿಗೆ ತನ್ನ ಧ್ವನಿ ತಿಳಿಸಲು ಅವಕಾಶ ಮಾಡಿಕೊಡಬೇಕಾಗಿದೆ. ಗ್ರಾಹಕನಿಂದಲೇ ನಡೆಯುವ ಈ ಉದ್ಯಮಗಳು ಗ್ರಾಹಕನ ಬೇಕು,ಬೇಡಗಳೇನು ಅನ್ನುವುದನ್ನು ಗಮನಿಸುವ ಒತ್ತಡ ಈ ಚರ್ಚೆಗಳಿಂದಾಗಬೇಕಿದೆ.

ಗುರುವಾರ, ಏಪ್ರಿಲ್ 5, 2012

ಕಾವೇರಿ ನದಿ ವಿವಾದ: ಒಂದು ನೋಟ

ದಕ್ಷಿಣ ಭಾರತದ ಬಹು ದೊಡ್ಡ ನದಿಯಾದ ಕಾವೇರಿಯು ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಸಮುದ್ರ ಮಟ್ಟದಿಂದ ಸುಮಾರು ೧೩೪೧ ಮೀ ಎತ್ತರದಲ್ಲಿ ಪಶ್ಚಿಮ ಘಟ್ಟದಲ್ಲಿ ಉಗಮಿಸಿ, ಪೂರ್ವಾಭಿಮುಖಿಯಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಕಾವೇರಿಗೆ ಸೇರಿಕೊಳ್ಳುವ ಪ್ರಮುಖ ಉಪನದಿಗಳು ಹೀಗಿವೆ: ಕಬಿನಿ, ಹಾರಂಗಿ, ಕಕ್ಕಬೆ, ಕದಮುರ್, ಕಮ್ಮನಹೊಳೆ, ಹೇಮಾವತಿ, ಲಕ್ಷ್ಮಣತೀರ್ಥ, ಸುವರ್ಣವತಿ, ಶಿಂಷಾ ಹಾಗು ಅರ್ಕಾವತಿ. ಕಾವೇರಿ ನದಿಯು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಸುಮಾರು ೬೪ ಕಿ.ಮೀ ಗಳಷ್ಟು ಉದ್ದ ಗಡಿಯಾಗಿ ರೂಪಗೊಳ್ಳುತ್ತದೆ. ಇದಾದ ನಂತರ ಹೊಗೇನಕಲ್ ಜಲಪಾತದಲ್ಲಿ ನದಿಯು ತನ್ನ ಪಾತ್ರವನ್ನು ದಕ್ಷಿಣಕ್ಕೆ ತಿರುಗಿಸಿ ತಮಿಳುನಾಡಿನ ಮೆಟ್ಟೂರು ಜಲಾಶಯವನ್ನು ಸೇರುತ್ತದೆ.

ಚಿತ್ರ ಕೃಪೆ: ರೆಡ್ಡಿಫ್ ತಾಣ

ಕಾವೇರಿ ನದಿಯು ಹುಟ್ಟಿ ಸಮುದ್ರ ಸೇರುವವರೆಗಿನ ಅದರ ಒಟ್ಟು ಉದ್ದದ ರಾಜ್ಯವಾರು ಹಂಚಿಕೆಯು ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨೦ ಕಿ.ಮೀ, ತಮಿಳುನಾಡಿನಲ್ಲಿ ೪೧೬ ಕಿ.ಮೀ ನಷ್ಟಿದ್ದು ಉಳಿದ ೬೪ ಕಿ.ಮೀ ಎರೆಡು ರಾಜ್ಯಗಳ ನಡುವೆ ಗಡಿಯನ್ನು ರೂಪಿಸುತ್ತದೆ. ಕಾವೇರಿಯ ಒಟ್ಟು ಜಲಾನಯನ ಪ್ರದೇಶ ೮೧,೧೫೫ ಚ.ಕಿ.ಮೀ ಗಳಾಗಿದ್ದು ವಿವಿಧ ರಾಜ್ಯಗಳ ಪಾಲು ಈ ರೀತಿ ಇದೆ:
ರಾಜ್ಯ
ಜಲಾನಯನ ಪ್ರದೇಶ ಚ.ಕಿ.ಮೀ ಗಳಲ್ಲಿ
ಕರ್ನಾಟಕ
೩೪,೨೭೩
ಕೇರಳ
೨,೮೬೬
ತಮಿಳುನಾಡು
೪೪,೦೧೬

1892 ಹಾಗೂ 1924 ಮದ್ರಾಸ್ – ಮೈಸೂರು ಒಪ್ಪಂದಗಳು:

1982 ರ ಮದ್ರಾಸ್ – ಮೈಸೂರು ಒಪ್ಪಂದದ ಮುಖ್ಯ ಅಂಶವೆಂದರೆ ಅಂದಿನ ಮೈಸೂರು ರಾಜ್ಯ ಸರ್ಕಾರ ಕಾವೇರಿ ನದಿ ಪಾತ್ರದಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಮೈಸೂರು ಸರ್ಕಾರವು ಈಗ ಅಸ್ತಿತ್ವದಲ್ಲಿರುವ ಕಾಮಗಾರಿಗಳನ್ನು ಹೊರತು ಪಡಿಸಿ ಹೊಸ ನೀರಾವರಿ ಜಲಾಶಯಗಳನ್ನು ನಿರ್ಮಿಸತಕ್ಕದ್ದಲ್ಲ. ಒಂದು ವೇಳೆ ನಿರ್ಮಿಸಬೇಕಾದ ಸಂಧರ್ಭದಲ್ಲಿ ಕಾಮಗಾರಿಯ ಪೂರ್ಣ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ಕಳುಹಿಸಬೇಕು. ಮದ್ರಾಸ್ ಸರ್ಕಾರ ಒಪ್ಪಿಗೆ ಪಡೆದು ಹೊಸ ಜಲಾಶಯಗಳನ್ನು ಮೈಸೂರು ರಾಜ್ಯ ನಿರ್ಮಿಸಬೇಕು.

1910ರಲ್ಲಿ ಮೈಸೂರು ಸರ್ಕಾರವು ಕನ್ನಂಬಾಡಿಯಲ್ಲಿ ಕಾವೇರಿ ನದಿ ಮೇಲೆ ಜಲಾಶಯವನ್ನು ನಿರ್ಮಿಸುವ ಪ್ರಸ್ತಾವವನ್ನು ರೂಪಿಸಿ 1892ರ ಒಪ್ಪಂದದ ಅನ್ವಯ ಮದ್ರಾಸ್ ಸರ್ಕಾರದ ಒಪ್ಪಿಗೆಯನ್ನು ಕೋರಿತು. ಆದರೆ ಈ ಯೋಜನೆಗೆ ಮದ್ರಾಸ್ ರಾಜ್ಯವು ಒಪ್ಪಿಗೆ ನೀಡಲಿಲ್ಲ. ಪಟ್ಟು ಬಿಡದ ಮೈಸೂರು ರಾಜ್ಯ, ಆಣೆಕಟ್ಟಿನ ಅವಶ್ಯಕತೆಯನ್ನು ಮನವರಿಕೆ ಮಾಡಿದ ಮೇಲೆ, ನ್ಯಾಯಾಧಿಶರ ಮಧ್ಯಸ್ತಿಕೆಯಲ್ಲಿ ಮೈಸೂರು ಹಾಗೂ ಮದ್ರಾಸ್ ಸರ್ಕಾರಗಳ ನಡುವೆ ಮತ್ತೊಂದು ಒಪ್ಪಂದಕ್ಕೆ ದಿನಾಂಕ 18ನೇ ಫೆಬ್ರವರಿ 1924 ರಂದು ಸಹಿ ಹಾಕಲಾಯಿತು. ಈ ಆದೇಶದ ಪ್ರಕಾರ ಮೈಸೂರು ಸರ್ಕಾರ ಆಣೆಕಟ್ಟು ನಿರ್ಮಿಸಲು ಮದ್ರಾಸ್ ಸರ್ಕಾರ ಒಪ್ಪಿತು ಹಾಗೂ ಈ ಆಣೆಕಟ್ಟಿನ ಮೂಲಕ ಜೂನ್ – ಜನವರಿ ತಿಂಗಳವರೆಗೂ ಬಿಡುಗಡೆ ಮಾಡಬೇಕಾಗಿರುವ ನೀರಿನ ಮೊತ್ತವನ್ನು ಸೂಚಿಸಲಾಯಿತು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮದ್ರಾಸ್ ಪ್ರಾಂತ್ಯವು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾರಣ, ಅವರಿಗೆ ಅನುಕೂಲ ಆಗುವ ಹಾಗೆ ಯೋಜನೆಗಳು ಹಾಗೂ ನೀರಿನ ಹಂಚಿಕೆ ಮಾಡಲಾಯಿತು. ಮೈಸೂರು ಸರ್ಕಾರವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಹಚ್ಚಿನ ವಿರೋಧ ತೋರಿಸುವ ಶಕ್ತಿಯನ್ನು ಹೊಂದಿರಲಿಲ್ಲ.

1956ರಲ್ಲಿ ರಾಜ್ಯಗಳು ಪುನರ್ ವಿಂಗಡಣೆಯಾದಾಗ ಕರ್ನಾಟಕ ಸರ್ಕಾರವು ಕಾವೇರಿ ನದಿಯ ಉಪನದಿಗಳಾದ ಕಬಿನಿ, ಹೇಮಾವತಿ, ಹಾರಂಗಿ ಹಾಗೂ ಸುವರ್ಣಾವತಿ ಜಲಾಶಯ ಯೋಜನೆಗಳನ್ನು ಪ್ರಾರಂಭಿಸಿದಾಗ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿತು. ಸ್ವಾಂತಂತ್ರ್ಯ ಪೂರ್ವ ಮಾಡಿಕೊಂಡಿರುವ ಒಪ್ಪಂದಕ್ಕೆ ವಿರುದ್ಧವಾಗಿದೆ ಅನ್ನೋ ಕಾರಣಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತು.  ಸ್ವಾಂತಂತ್ರ್ಯದ ನಂತರ ಮತ್ತೊಮ್ಮೆ ವೈಜ್ಞಾನಿಕವಾಗಿ ಎರಡು ರಾಜ್ಯಗಳಿಗೆ ಒಪ್ಪಿಗೆಯಾಗುವಂತೆ ನದಿ ನೀರು ಹಂಚಿಕೆಯಾಗಬೇಕಾಗಿತ್ತು. ಆದ್ರೆ ಇದರ ಬಗ್ಗೆ ನಮ್ಮ ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳಲ್ಲಿಲ್ಲ.

ಗಮನಿಸಬೇಕಾದ ಅಂಶವೆಂದರೆ ಕಾವೇರಿ ನದಿಪಾತ್ರದಲ್ಲಿ ವಿವಿಧ ರಾಜ್ಯಗಳ ನದಿ ನೀರಿನ ಬಳಕೆಯನ್ನು ತಿಳಿಯಲು ಕೇಂದ್ರ ಸರ್ಕಾರ 1972ರಲ್ಲಿ ಕಾವೇರಿ ಸತ್ಯಶೋಧನಾ ಸಮಿತಿಯನ್ನು ಸ್ಥಾಪಿಸಿತು. ತನ್ನ ವರದಿಯನ್ನು ಸಲ್ಲಿಸಿದಾಗ ತಮಿಳುನಾಡಿನಲ್ಲಿ ನೀರಾವರಿಗೊಳಪಟ್ಟ ಪ್ರದೇಶ ಸುಮಾರು 1,440,000 ಎಕರೆಗಳಿಂದ 2,580,000 ಎಕರೆಗಳಿಗೆ ಹೆಚ್ಚಿಗೆಯಾಗಿತ್ತು. ಆದರೆ ಕರ್ನಾಟಕದಲ್ಲಿ ನೀರಾವರಿಗೊಳಪಟ್ಟ ಪ್ರದೇಶ 6,80,000 ಎಕರೆಗಳಷ್ಟಿತ್ತು. ತಮಿಳುನಾಡು ಸರ್ಕಾರ ಅದರ ಇಚ್ಚೆಯಂತೆ ಆಗಿದ್ದ ಸ್ವಾತಂತ್ರ್ಯಪೂರ್ವ ನಿಯಮಗಳನ್ನು ಮೀರಿತ್ತು.

ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಯಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ತಮಿಳುನಾಡಿನ ರೈತರು  ಅಂತರ್ ರಾಜ್ಯ ಜಲ ವಿವಾದ ಅಧಿನಿಯಮ, 1956 ರ ಪ್ರಕರ ನ್ಯಾಯ ಮಂಡಳಿ ರಚಿಸಬೇಕು ಎಂದು ಕೇಳಿ ಸುಪ್ರೀಂ ಕೋರ್ಟ್ ಮೊರೆಹೋದರು. ಇದರ ಪ್ರಕರವಾಗಿ ಸುಪ್ರೀಂ ಕೋರ್ಟ್ 4ನೇ ಮೇ 1990 ರಂದು ಜಲವಿವಾದ ನ್ಯಾಯ ನಿರ್ಣಯಕ್ಕಾಗಿ ಒಂದು ಸೂಕ್ತ ನ್ಯಾಯಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು.

ನ್ಯಾಯಮಂಡಳಿ ರಚನೆ ಹಾಗೂ ಕರ್ನಾಟಕದ ಪಾಲಿಗೆ ಶಾಪ:

ಚಿತ್ತತೋಷ್ ಮುಖರ್ಜಿ ಅವರ ನೇತ್ರತ್ವದಲ್ಲಿ ರಚನೆಯಾದ ನ್ಯಾಯಮಂಡಳಿ 2 ಜೂನ್ 1990  ರಂದು ತನ್ನ ಕಾರ್ಯ ಆರಂಭಿಸಿತು. ನ್ಯಾಯಮಂಡಳಿಯ ಮುಂದೆ ಕೆಳಕಂಡ ರಾಜ್ಯಗಳು ಈ ರೀತಿ ಬೇಡಿಕೆ ಇಟ್ಟವು
  • ಕರ್ನಾಟಕ ತನಗೆ 465 ಟಿಎಂಸಿ ನೀರು ಬೇಕು ಎಂದು ಹೇಳಿತು
  • ಕೇರಳ ತನಗೆ 99.8 ಟಿಎಂಸಿ ನೀರು ಬೇಕು ಎಂದು ಹೇಳಿತು
  • ಪಾಂಡಿಚೇರಿ ತನಗೆ 9.3 ಟಿಎಂಸಿ ಬೇಕು ಎಂದು ಹೇಳಿತು
  • ಆದ್ರೆ ತಮಿಳುನಾಡು ಮಾತ್ರ ಈ ಹಿಂದಿನಂತೆ ಇದ್ದ ಒಪ್ಪಂದದಂತೆ ತನಗೆ ಹಾಗೂ ಪಾಂಡಿಚೇರಿಗೆ 566 ಟಿಎಂಸಿ, 177 ಟಿಎಂಸಿ ಕರ್ನಾಟಕಕ್ಕೆ ಹಾಗೂ 5 ಟಿಎಂಸಿ ಕೇರಳಕ್ಕೆ ನೀಡಬೇಕು ಎಂದು ಕೇಳಿತು

ಇದಾದ ನಂತರ ತಮಿಳುನಾಡು ಸರ್ಕಾರ ನ್ಯಾಯಮಂಡಳಿಯ ಮುಂದೆ ಈ ಕೂಡಲೇ ಮಧ್ಯಂತರವಾಗಿ ತನಗೆ ನೀರು ಬಿಡಲು ಕಾರ್ಯಸೂಚಿ ರೂಪಿಸಬೇಕು ಎಂದು ನ್ಯಾಯಮಂಡಳಿಯ ಮುಂದೆ ಹೋಯಿತು. ಆಗ ಕಳೆದ ಹತ್ತು ವರ್ಷಗಳ ಮಾಹಿತಿಯನ್ನು ಕಲೆಹಾಕಿದ ನ್ಯಾಯಮಂಡಳಿ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ನೀರು ಬಿಡಬೇಕು ಹಾಗೂ ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು 1,120,000 ಎಕರೆಗಿಂತ ಹೆಚ್ಚಿಗೆ ಮಾಡಿಕೊಳ್ಳಬಾರದು ಎಂದು ಆದೇಶ ನೀಡಿತು. ಇದರಿಂದ ಕೋಪಗೊಂಡ ಕರ್ನಾಟಕದ ಇದಕ್ಕೆ ತಮಗೆ ಒಪ್ಪಿಗೆಯಿಲ್ಲ, ಅಂತಿಮ ತೀರ್ಪು ನೀಡಿ ಎಂದು ನ್ಯಾಯಮಂಡಳಿಯ ಮುಂದೆ ಹೇಳಿತು. ಆದರೆ ತಮಿಳುನಾಡು ಸರ್ಕಾರ ರಾಷ್ಟ್ರಪತಿಗಳ ಮೂಲಕ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಹೇಳಿಸಿ, ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಈ ತೀರ್ಪನ್ನು ಒಪ್ಪಿಕೊಳ್ಳಬೇಕಾಯಿತು ಹಾಗೂ ಈ ಮಧ್ಯಂತರ ಅದೇಶವನ್ನು ಕೇಂದ್ರ ಸರ್ಕಾರದ ಗೆಜೆಟ್ ನಲ್ಲಿ ದಾಖಲಾಗುವಂತೆ ತಮಿಳುನಾಡು ಸರ್ಕಾರ ನೋಡಿಕೊಂಡಿತು.
ಇದರಿಂದ ಸಿಟ್ಟಿಗೆದ್ದ ಕರ್ನಾಟಕದ ಜನತೆ ರಾಜ್ಯಾದ್ಯಂತ ತೀರ್ಪಿನ ವಿರುದ್ಧ ಹೋರಾಟಗಳನ್ನು ಶುರು ಮಾಡಿದರು. ಇದೇ ರೀತಿ ತಮಿಳುನಾಡಿನಲ್ಲೂ ದಂಗೆಗಳು ಶುರುವಾದವು. ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

1995-1996 ರಲ್ಲಿ ಕರ್ನಾಟಕದಲ್ಲಿ ಮಳೆಯ ಅಭಾವ ಕಾಣಿಸಿದ್ದರಿಂದ ತಮಿಳುನಾಡಿಗೆ ಮಧ್ಯಂತರ ಆದೇಶದಂತೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದು ಗೊತ್ತಿದ್ದರೂ ಸಹ ತಮಿಳುನಾಡು ಮಧ್ಯಂತರ ಆದೇಶದಂತೆ ಕರ್ನಾಟಕ ತನಗೆ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಮುಂದೆ ಹೋಯಿತು. ಆದರೆ ಇದನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ನ್ಯಾಯಮಂಡಳಿಗೆ ಈ ಕೇಸನ್ನು ವರ್ಗಾಯಿಸುತು. ಅಲ್ಲಿ ತನ್ನ ಪ್ರಭಾವ ಬೀರಿದ ತಮಿಳುನಾಡು 11 ಟಿಎಂಸಿ ನೀರನ್ನು ಬಿಡಲು ಆದೇಶ ನೀಡಿತು. ಆ ಕಾಲದಲ್ಲಿ ಅದು ಕರ್ನಾಟಕದ ಪಾಲಿಗೆ ಅಸಾಧ್ಯವಾಗಿತ್ತು. ನಂತರ ಪ್ರಧಾನ ಮಂತ್ರಿಗಳ ಮಧ್ಯಸ್ತಿಕೆಯಲ್ಲಿ 6 ಟಿಎಂಸಿ ನೀರನ್ನು ಪಡೆಯುವಲ್ಲಿ ತಮಿಳುನಾಡು ಸಫಲವಾಯಿತು.

ಸಿ.ಆರ್. ಎಂಬ ಒಕ್ಕೂಟ ವಿರೋಧಿ ಮಂಡಳಿ

1997 ರಲ್ಲಿ ಕೇಂದ್ರ ಸರ್ಕಾರವು ಮಧ್ಯಂತರ ಆದೇಶವನ್ನು ಸಮರ್ಪಕವಾಗಿ ಜಾರಿಗೆ ತರಲು ಸಿ.ಆರ್.ಎ ಎಂಬ ಮಂಡಳಿಯೊಂದನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಎರಡು ರಾಜ್ಯಗಳ ಮುಂದೆ ಇಟ್ಟಿತು. ಇದರ ಅನ್ವಯ ಈ ಮಂಡಳಿಗೆ ಮದ್ಯಂತರ ಆದೇಶವನ್ನು ಜಾರಿಗೆ ತರಲು ಆಣೆಕಟ್ಟುಗಳನ್ನು ತನ್ನ ವಶಕ್ಕೆ ತಗೆದುಕೊಳ್ಳುವ ಹಕ್ಕನ್ನು ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಇಂತಹ ಒಕ್ಕೂಟ ವಿರೋಧಿ ಮಂಡಳಿಯನ್ನು ಸಾರಸಗಟಾಗಿ ತಿರಸ್ಕರಿಸಿತು. ಇದಾದ ನಂತರ ಕೇಂದ್ರ ಇಂತಹ ಅವೈಜ್ಞಾನಿಕ ಹಕ್ಕುಗಳನ್ನು ತಗೆದು ಹಾಕಿ ಕೊನೆಗೆ ಕಾವೇರಿ ರಿವರ್ ಅಥಾರಿಟಿ ಹಾಗೂ ಕಾವೇರಿ ಮಾನಿಟರಿಂಗ್ ಕಮಿಟಿಯಂಬ ಎರೆಡು ಸಮಿತಿಗಳನ್ನು ಸ್ಥಾಪಿಸಿತು.

2002ರಲ್ಲಿ ಕಾವೇರಿದ ಕಾವೇರಿ ಹೋರಾಟ

2002ರಲ್ಲಿ ಹಿಂದೆ 1995ರಲ್ಲಿ ಕಾಣಿಸಿಕೊಂಡ ಬರಗಾಲದ ಪರಿಸ್ಥಿತಿ ಮತ್ತೊಮೆ ಎದುರಾಯಿತು. ರಾಜ್ಯದ ಯಾವುದೇ ಜಲಾಶಯದಲ್ಲೂ ತನ್ನ ಬಳಕೆಗೆ ಬೇಕಾಗುವಷ್ಟು ನೀರು ಸಹ ಇರಲಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ತನ್ನ ಜನರಿಗಾಗಿ ನೀರನ್ನು ಬಿಡುವಂತೆ ಆಗ್ರಹಿಸಿ ನ್ಯಾಯಮಂಡಳಿಯ ಮುಂದೆ ಹೋಯಿತು. ಆದರೆ ನ್ಯಾಯಮಂಡಳಿ ತನ್ನ ಮಧ್ಯಂತರ ತೀರ್ಪಿನಲ್ಲಿ ಬರಗಾಲದ ಪರಿಸ್ಥಿತಿಯಲ್ಲಿರಬೇಕಾದ ಹಂಚಿಕೆ ಸೂತ್ರವನ್ನು ಹೇಳಿರಲಿಲ್ಲ. ಹಾಗಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಈ ಸಾರಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಕಾವೇರಿ ರಿವರ್ ಅಥಾರಿಟಿ ಬದಲಾವಣೆ ಮಾಡುವ ತನಕ ಪ್ರತಿ ದಿನ 1.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಹೇಳಿತು. ಸರ್ಕಾರ ಇದೇ ಹೊತ್ತಿನಲ್ಲಿ ಸಿ.ಆರ್.ಎ ಮತ್ತೊಂದು ಸಭೆಯನ್ನು ಕರೆಯಬೇಕು ಎಂದು ಹೇಳಿತು. ಸಿ.ಆರ್.ಎ ಪ್ರಕಾರ ಕರ್ನಾಟಕ ಪ್ರತಿದಿನ ತಮಿಳುನಾಡಿಗೆ 0.8 ಟಿಎಂಸಿ ನೀರನ್ನು ಬಿಡಬೇಕು ಎಂದು ಹೇಳಿತು.

ಆದರೆ ಅದಾಗಲೇ ಕರ್ನಾಟಕದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ದೊಡ್ಡ ಹೋರಾಟ ಶುರುವಾಯಿತು. ಜನರ ಹೋರಾಟಕ್ಕೆ ಮಣಿದ ಸರ್ಕಾರ ತಮಿಳುನಾಡಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಿತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ನೀರು ಬಿಡಲು ಶುರುಮಾಡಿದಾಗ ಕರ್ನಾಟಕದ ರೈತರೊಬ್ಬರು ಸೆಪ್ಟಂಬರ್ 18ರಂದು ನದಿಗೆ ಹಾರಿ ಪ್ರಾಣ ಬಿಟ್ಟರು. ಇದರಿಂದಾಗಿ ಪರಿಸ್ಥಿತಿ ಇನ್ನೂ ಕೆಟ್ಟಿತು. ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆದರೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕ ಸರ್ಕಾರ ನೀರು ಬಿಡಲು ಒಪ್ಪಲಿಲ್ಲ. ಇದಕ್ಕೆ ಪ್ರತಿಯಾಗಿ ತಮಿಳುನಾಡು ಮತ್ತೆ ಕೋರ್ಟ್ ಮೆಟ್ಟಿಲೇರಿತು. ನಂತರ ಈ ಸಂಬಂಧ ಕರ್ನಾಟಕ ಸರ್ಕಾರ ಕೋರ್ಟ್ ಆದೇಶ ಪಾಲಿಸದಿರುವ ಸಲುವಾಗಿ ಕೋರ್ಟ್ ಮುಂದೆ ಬೇಷರತ್ ಕ್ಷಮೆ ಯಾಚಿಸಿತ್ತು.

2007ರಲ್ಲಿ ಬಂದ ನ್ಯಾಯಮಂಡಳಿಯ ಅನ್ಯಾಯದ ತೀರ್ಪು

ಫೆಬ್ರವರಿ 5 2007 ರಲ್ಲಿ ಕಾವೇರಿ ನ್ಯಾಯಮಂಡಳಿಯು ತನ್ನ ತೀರ್ಪನ್ನು ಪ್ರಕಟಿಸಿತು. ತೀರ್ಪಿನ ಪ್ರಕಾರ ತಮಿಳುನಾಡಿಗೆ 419 ಟಿಎಂಸಿ ನೀರು, ಕರ್ನಾಟಕಕ್ಕೆ 270ಟಿಎಂಸಿ ನೀರು, ಪ್ರತಿ ವರ್ಷ ಕರ್ನಾಟಕ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು. ಕೇರಳ ರಾಜ್ಯಕ್ಕೆ 30 ಟಿಎಂಸಿ ಹಾಗೂ ಪಾಂಡಿಚೇರಿ ಗೆ 7 ಟಿಎಂಸಿ ನೀರನ್ನು ನ್ಯಾಯ ಮಂಡಳಿ ತನ್ನ ತೀರ್ಪಿನಲ್ಲಿ ಹಂಚಿಕೆ ಮಾಡಿತ್ತು. ತೀರ್ಪನ್ನು ತಮಿಳುನಾಡು ಸ್ವಾಗತಿಸಿದರೆ ಕರ್ನಾಟಕ ಸರ್ಕಾರ ತೀರ್ಪನ್ನು ವಿರೋಧಿಸಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಿತು. ಈ ತೀರ್ಪನ್ನು ನೀಡುವಾಗ ತಮಿಳುನಾಡು ಸರ್ಕಾರ ತನ್ನ ಪ್ರಭಾವವನ್ನು ನ್ಯಾಯಮಂಡಳಿಯ ಮೇಲೆ ಬೀರುರುವ ಶಂಕೆ ಉಂಟಾಗುತ್ತದೆ. ಕಾರಣ:
  • ಮೊದಲಿನಿಂದಲೂ ಕರ್ನಾಟಕದಲ್ಲಿ ನೀರಾವರಿಗೆ ನೀರು ದೊರಕದಂತೆ ಮಾಡಿ ತನ್ನ ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಂಡ ತಮಿಳುನಾಡು ನಂತರ ಅದು ತನಗೆ ಹೆಚ್ಚಿನ ಪಾಲಿನ ನೀರು ಬರಬೇಕಿರುವುದು ತನ್ನ ಹಕ್ಕು ಎನ್ನುವಂತೆ ನ್ಯಾಯಧಿಕರಣದ ಮುಂದೆ ವಾದ ಮಾಡಿ ಹೆಚ್ಚಿನ ಪಾಲನ್ನು ಪಡೆಯಿತು.
  • ಕರ್ನಾಟಕ ಹಾಗೂ ತಮಿಳುನಾಡಿನ ನಡುವ ಹರಿದ ನೀರನ್ನು ಮಾಪನ ಮಾಡಲು ಮೆಟ್ಟೂರಿನಲ್ಲಿ ಅಳೆಯಲಾಗುತ್ತಿತ್ತು, ಆದರೆ ಈ ತೀರ್ಪಿನಲ್ಲಿ ಅದನ್ನು ಕರ್ನಾಟಕದ ಬಿಳಿಗುಂಡ್ಲುವಿನಲ್ಲಿ ಅಳೆಯಲು ತೀರ್ಪು ನೀಡಲಾಯಿತು. ಗಮನಿಸಬೇಕಾದ ಅಂಶವೆಂದರೆ ಬಿಳಿಗುಂಡ್ಲುವಿನಿಂದ ಮೆಟ್ಟೂರಿಗೆ ಸುಮಾರು 25 ಟಿಎಂಸಿ ನೀರು ಹರಿದು ಹೋಗುತ್ತದೆ, ಆದರೆ ಇದರ ಲೆಕ್ಕವನ್ನು ಕರ್ನಾಟಕ ಬಿಡುವ ನೀರಿಗೆ ಸೇರಿಸುವ ಹಾಗಿಲ್ಲ.
  • ಕೇರಳಕ್ಕೆ ಕರ್ನಾಟಕದಿಂದ 21 ಟಿಎಂಸಿ ಹಾಗೂ ತಮಿಳುನಾಡಿನಿಂದ 9 ಟಿಎಂಸಿ ನೀರು ಬಿಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ಈ ನೀರನ್ನು ಉಪಯೋಗಿಸದ ಕಾರಣ ತಮಿಳುನಾಡು ತನ್ನ 9 ಟಿಎಂಸಿ ನೀರನ್ನು ಉಪಯೋಗಿಸಲು ನ್ಯಾಯಾಧಿಕರಣ ಅವಕಾಶ ನೀಡಿತು. ಆದರೆ ಕರ್ನಾಟಕಕ್ಕೆ ಮಾತ್ರ 21 ಟಿಎಂಸಿ ನೀರನ್ನು ಬಳಕೆ ಮಾಡಲು ಅವಕಾಶ ಕೊಡದೆ ತಮಿಳುನಾಡಿಗೆ ಹರಿಸಲು ಆದೇಶ ನೀಡಿತು ಹಾಗೂ ಬೇಕಾದಲ್ಲಿ ತಮಿಳುನಾಡು ಈ ನೀರನ್ನು ಬಳಸಲು ಅವಕಾಶ ನೀಡಿತು.
  • ಪರಿಸರ ರಕ್ಷಣೆಗಾಗಿ ಕರ್ನಾಟಕ 10 ಟಿಎಂಸಿ ನೀರು ಬಿಡಬೇಕು, ಆದರೆ ತಮಿಳುನಾಡಿಗೆ ಯಾವುದೇ ನೀರು ಬಿಡಲು ಆದೇಶದಲ್ಲಿ ತಿಳಿಸಲಾಗಿಲ್ಲ. ಪರಿಸರ ರಕ್ಷಣೆ ಕೇವಲ ಕರ್ನಾಟಕದ ಜವಾಬ್ದಾರಿಯಾಗಿದೆಯೇ?
  • ನ್ಯಾಯಾಧಿಕರಣ ಕರ್ನಾಟಕಕ್ಕೆ ಕುಡಿಯುವ ನೀರಿನ ಸಲುವಾಗಿ ತಗೆದಿಟ್ಟಿರುವ ಪಾಲು ಕೇವಲ 2 ಟಿಎಂಸಿ. ಬೆಂಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳನೆಲ್ಲ ಒಟ್ಟಾಗಿ ಸೇರಿಸಿದರೆ ಬೇಕಾಗುವ ನೀರಿನ ಮೊತ್ತ 60 ಟಿಎಂಸಿ.
  • ನ್ಯಾಯಧಿಕರಣದ ತಜ್ಞರ ವರದಿಯ ಪ್ರಕಾರ ತಮಿಳುನಾಡಿಗೆ 395 ಟಿಎಂಸಿ ನೀರು ಅಗತ್ಯವಿತ್ತೆಂದು ಹೇಳಲಾಗಿತ್ತು, ಆದರೆ ನ್ಯಾಯಧಿಕರಣದಲ್ಲಿ ಅದಕ್ಕೆ ಬರೋಬ್ಬರಿ 458 ಟಿಎಂಸಿ ನೀರನ್ನು ನೀಡಲಾಗಿದೆ!!

ಕರ್ನಾಟಕದಲ್ಲಿ ನಡೆದ ಹೋರಾಟಗಳು

ಕರ್ನಾಟಕದ ಪಾಲಿಗೆ ಮರಣ ಮೃದಂಗದಂತಿದ್ದ ಈ ತೀರ್ಪನ್ನು ವಿರೋಧಿಸಿ ರಾಜ್ಯದ ಎಲ್ಲಾ ವರ್ಗಗಳು ಬೀದಿಗೆ ಇಳಿದವು, ರೈತ ಸಂಘ, ಸಾಹಿತಿ ವಲಯ, ರಾಜಕೀಯ ವಲಯ, ಕನ್ನಡಪರ ಸಂಘಟನೆಗಳೆಲ್ಲ ಒಂದಾಗಿ ಈ ತೀರ್ಪನ್ನು ವಿರೋಧಿಸಿದವು. ಕರ್ನಾಟಕ ರಕ್ಷಣಾ ವೇದಿಕೆ ಈ ತೀರ್ಪು ಹೊರಬಂದ ಕೆಲವೇ ನಿಮಿಷಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಹೋರಾಟಗಳನ್ನು ಶುರುಮಾಡಿತು. ಇದರ ಜೊತೆಗೆ ತಲಕಾವೇರಿಯಿಂದ ಬೆಂಗಳೂರಿನ ವರೆಗೂ ಪಾದಯಾತ್ರೆಯನ್ನು ಮಾಡಿ ತೀರ್ಪಿನ ವಿರುದ್ಧ ಜನರನ್ನು ಸಂಘಟಿಸುವ ಕೆಲಸ ಮಾಡಿತು. ರಾಜ್ಯದ ಇತಿಹಾಸದಲ್ಲೇ ಸುಮಾರು 25000 ಜನರನ್ನು ದೆಹಲಿಗೆ ಕರೆದುಕೊಂಡು ಹೋಗಿ ಜಂತರ್ ಮಂತರ್ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸರಿಯಾದ ಎಚ್ಚರಿಕೆಯನ್ನೇ ನೀಡಿತು. ಇದಾದ ನಂತರ ಎಚ್ಚೆತ್ತುಕೊಂಡ ನಮ್ಮ ಸರ್ಕಾರ ಹಾಗೂ ಪ್ರತಿಪಕ್ಷಗಳು ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. 

ನಮ್ಮ ರಾಜ್ಯ ಸರ್ಕಾರಗಳ ನಿಷ್ಕ್ರಿಯತೆ ಹಾಗೂ ಪ್ರಾದೇಶಿಕ ಪಕ್ಷದ ಅವಶ್ಯಕತೆ

ಕಾವೇರಿಯ ನದಿ ನೀರು ಹಂಚೆಕೆಯ ವಿವಾದವು ಉಲ್ಬಣಿಸಿದಾಗಲೆಲ್ಲ, ನಮ್ಮ ಸರ್ಕಾರಗಳಿಗಿಂತ ಮೊದಲು ಪ್ರತಿಭಟನೆ ಹಾಗೂ ಜಾಗೃತಿಗೆ ಮುಂದಾಗಿರುವುದು ರೈತ ಸಂಘ, ಕನ್ನಡ ಪರ ಸಂಘಟನೆಗಳು. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಅನ್ನೋ ಹಾಗೆ ನಮ್ಮ ರಾಜ್ಯ ಸರ್ಕಾರ ಹಾಗೂ ರಾಜಕಾರಣಿಗಳು ಎಚ್ಚೆತ್ತುಕೊಂಡಿದ್ದಾರೆ.

ಇತ್ತೀಚಿಗೆ ಮತ್ತೆ ಈ ವಿಷಯವಾಗಿ ತಮಿಳುನಾಡು ಸರ್ಕಾರ ಮತ್ತೆ ತನ್ನ ಹೆಳೆ ವರಸೆಯನ್ನು ಶುರುಮಾಡಿದೆ. ಕರ್ನಾಟಕ ಸರ್ಕಾರ ಮೇಕೆದಾಟುವಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ರಾಜ್ಯದ ಜನರ ಹಾಗೂ ರೈತರ ಒಳಿತಿಗಾಗಿ ನೀರನ್ನು ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ ಇದಕ್ಕೆ ಕ್ಯಾತೆ ತಗೆದಿರುವ ಜಯಲಲಿತಾ ಅವರ ಸರ್ಕಾರ ಯಾವುದೇ ಕಾರಣಕ್ಕೂ ಕರ್ನಾಟಕ ಆಣೆಕಟ್ಟು ಕಟ್ಟಬಾರದು ಹಾಗೂ ಅದು ಸಂಗ್ರಹಿಸುವ ನೀರನ್ನು ಬೇಸಿಗೆಯ ಬೆಳೆಗೆ ಉಪಯೋಗಿಸಬಾರದು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಮ್ಮ ರಾಜ್ಯಕ್ಕೆ ತನ್ನ ಪಾಲಿಗೆ ನ್ಯಾಯವಾಗಿ ದಕ್ಕಬೇಕಾಗಿದ್ದ ನೀರನ್ನು ಬಳಸಿಕೊಳ್ಳಲು ಹಕ್ಕಿಲ್ಲವೇ? ಯಾವುದೋ ಓಬಿರಾಯನ ಕಾಲದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ ನಿಯಮಗಳನ್ನು ಇನ್ನೂ ಮುಂದುವರೆಸಿಕೊಂಡು ಹೋಗಬೇಕೆ? ಕಾವೇರಿ ನದಿಯ ನೀರು ಕೇವಲ ತನ್ನ ಸ್ವತ್ತು ಅನ್ನುವ ಹಾಗೆ ವರ್ತಿಸುತ್ತಿರುವ ತಮಿಳುನಾಡಿನ ದರ್ಪವನ್ನು ಸಹಿಸಿಕೊಂಡು ಸುಮ್ಮನಿರಬೇಕೆ?

ಇಲ್ಲಿ ನಮ್ಮ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಎದ್ದು ಕಾಣಿಸುತ್ತದೆ. ಇದಕ್ಕೆ ಈ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಗುಲಾಮಗಿರಿ ಕಾರಣ. ಪ್ರತಿಯೊಂದಕ್ಕು ದೆಹಲಿಯತ್ತ ಮುಖಮಾಡುವ ನಮ್ಮ ನಾಯಕರಿಂದ ಹೆಚ್ಚಿನದೇನು ನಿರೀಕ್ಷಿಸಲು ಸಾಧ್ಯ? ಕೇಂದ್ರದಲ್ಲಿ ಒಂದಲ್ಲಾ ಒಂದು ಸರ್ಕಾರದ ಜೊತೆ ಮೈತ್ರಿ ಹೊಂದಿರುವ ತಮಿಳುನಾಡಿನ ರಾಜಕೀಯ ಪಕ್ಷಗಳು ತಮಗೆ ಅನುಕೂಲವಾಗುವಂತೆ ಹಿಂದಿನಿಂದಲು ನಡೆದುಕೊಂಡು ಬಂದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ. ಬಹುಷ: ನಮಗೂ ತಮಿಳುನಾಡಿನಲ್ಲಿರುವಂತೆ ಕರ್ನಾಟಕದ ನೆಲ, ಜಲ ಹಾಗೂ ಜನರ ಹಿತವನ್ನು ಕಾಪಾಡುವ ಒಂದು ರಾಜಕೀಯ ಪಕ್ಷದ ಅವಶ್ಯಕತೆ ಪದೇ ಪದೇ ಎದ್ದು ಕಾಣುತ್ತಿದೆ. 

ಗುರುವಾರ, ಮಾರ್ಚ್ 15, 2012

ರೈಲ್ವೆ ಯೋಜನೆಗಳು ಮತ್ತು ಕರ್ನಾಟಕಕ್ಕೆ ವಲಸೆ

ಚಿತ್ರ ಕೃಪೆ: ಅಂತರ್ಜಾಲ

ನಿನ್ನೆ ಲೋಕಸಭೆಯಲ್ಲಿ ಮಂಡಿಸಲಾದ 2012-2013 ನೇ ಸಾಲಿನ ರೈಲ್ವೆ ಬಜೆಟ್ ಕರ್ನಾಟಕದ ಪಾಲಿಗೆ ನಿರಾಸೆ ಮೂಡಿಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ರೈಲ್ವೆ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಉಪಯೋಗವಾಗುವಂತಹ ಬೆರೆಳೆಣಿಕೆಯಷ್ಟು ಯೋಜನೆಗಳನ್ನು ಬಿಟ್ಟರೆ ಉಳಿದೆಲ್ಲಾ ಯೋಜನೆಗಳು ಹೊರ ರಾಜ್ಯದ ಜನರಿಗೆ ನಮ್ಮ ರಾಜ್ಯಕ್ಕೆ ವಲಸೆ ಬರಲು ಸುಲಭ ಮಾಡಿಕೊಡಲು ಯೋಚಿಸಿದಂತಿದೆ!! ಕೆಳಗಿರುವ ಈ ಪಟ್ಟಿಗಳನ್ನು ನೋಡಿ ೨೦೧೧ ನೇ ಸಾಲಿನ ಹಾಗೂ ೨೦೧೨ ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಲಾಗಿರುವ ಹೊಸ ರೈಲುಗಳ ಸಂಚರಿಸುವ ಮಾರ್ಗವನ್ನು ನೀಡಲಾಗಿದೆ.

2011 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
2012 ರಲ್ಲಿ ಕರ್ನಾಟಕಕಕ್ಕೆ ನೀಡಲಾಗಿರುವ ರೈಲುಗಳು
ಹೌರಾ – ಮೈಸೂರು ಎಕ್ಸ್‘ಪ್ರೆಸ್
ಯಶವಂತಪುರ – ಕುಚುವೇಲಿ
ಮೈಸೂರು – ಚನ್ನೈ ಎಕ್ಸ್‘ಪ್ರೆಸ್
ಚನ್ನೈ – ಬೆಂಗಳೂರು
ಅಹಮದಾಬಾದ್ – ಯಶವಂತಪುರ ಎಕ್ಸ್‘ಪ್ರೆಸ್
ಇಂದೂರ್ – ಯಶವಂತಪುರ
ಗೋರಕ್ಪುರ – ಯಶವಂತಪುರ ಎಕ್ಸ್‘ಪ್ರೆಸ್
ಮೈಸೂರು – ಸಾಯಿನಗರ
ವಾಸ್ಕೋ – ವೆಲಂಕಣಿ ಎಕ್ಸ್‘ಪ್ರೆಸ್
ಸೊಲ್ಲಾಪುರ – ಯಶವಂತಪುರ
ಎರ್ನಾಕುಲಂ – ಬೆಂಗಳೂರು ಎಕ್ಸ್‘ಪ್ರೆಸ್
ಬೀದರ್ – ಸಿಕಂದರಾಬಾದ್
ಹೌರಾ – ಮಂಗಳೂರು ವಿವೇಕ ಎಕ್ಸ್‘ಪ್ರೆಸ್


2012  ರಲ್ಲಿ ಮಾರ್ಗ ವಿಸ್ತರಣೆಯ ರೈಲುಗಳು
ಪಾಲಕ್ಕಾಡ್ – ಮಂಗಳೂರು ಎಕ್ಸ್‘ಪ್ರೆಸ್ ಕೊಯಮುತ್ತೂರುವರೆಗೆ
ದಾದರ್ – ಯಶವಂತಪುರ ಎಕ್ಸ್‘ಪ್ರೆಸ್ – ಪುದುಚೇರಿವರೆಗೂ
ಮಂಗಳೂರು – ತಿರುವನಂತಪುರ ಎಕ್ಸ್‘ಪ್ರೆಸ್ – ನಾಗರಕೊಯಿಲ್ ವರೆಗೂ

ಈ ಹೊಸ ರೈಲು ಯೋಜನೆಗಳು, ವಿಸ್ತರಣೆಗಳು ಎಲ್ಲವೂ ನಮ್ಮ ರಾಜ್ಯದ ಜನರ ಓಡಾಟವನ್ನು ಸುಲಭಗೊಳಿಸುವ ಬದಲು ಹೊರ ರಾಜ್ಯದ ಜನರನ್ನು ನಮ್ಮ ರಾಜ್ಯದ ರಾಜಧಾನಿಗೆ ತಂದಿಳಿಸುವ ಯೋಜನೆಗಳಾಗಿ ಕಾಣುತ್ತವೆ. ಇನ್ನು ನಮ್ಮ ರಾಜ್ಯದ ಯೋಜನೆಗಳ ಪಟ್ಟಿ ನೋಡಿದರೆ ಅಲ್ಲಿ ಇನ್ನು ಗೇಜ್ ಪರಿವರ್ತನೆ, ಮಾರ್ಗಗಳ ಸರ್ವೆ, ಮೇಲ್ಸೇತುವ, ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವಿಕೆ ಯಂತಹ ಸಣ್ಣ ಯೋಜನೆಗಳು ಕಾಣಸುಗುತ್ತವೇ ಹೊರತು ನಮ್ಮ ಜನರ ಸಂಚಾರವನ್ನು ಸುಲಭಗೊಳಿಸುವ ಯೋಜನೆಗಳು ಕಾಣಸಿಗುವುದಿಲ್ಲ. ಈ ಹಿಂದೆ ೨೦೧೧ ನೇ ಸಾಲಿನ ರೈಲ್ವೆ ಬಜೆಟ್ ಸಮಯದಲ್ಲಿ ನಾನು ಮಾಡಿದ್ದ ವಿಶ್ಲೇಷಣೆ ಈ ವರ್ಷಕ್ಕೂ ಅನ್ವಯಿಸಬಹುದು.

ಜನಸಾಂದ್ರತೆ:
ಜನರು ಬೇರೆಡೆಗೆ ವಲಸೆ ಹೋಗಲು ಆಯಾ ರಾಜ್ಯದಲ್ಲಿರುವ ಜನಸಾಂದ್ರತೆಯು ಕಾರಣವಾಗಿರಬಹುದು. ಆಯಾ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯಿಂದಾಗಿ, ಆಲ್ಲಿ ಏರ್ಪಡುವ ಪೈಪೋಟಿಯಿಂದಾಗಿ, ಬದುಕು ಕಂಡುಕೊಳ್ಳಲು ಜನರು ಹೊರ ರಾಜ್ಯಗಳಿಗೆ ವಲಸೆ ಹೋಗುವುದಕ್ಕೆ ಶುರು ಮಾಡುತ್ತಾರೆ. ರೈಲ್ವೆ ಇಲಾಖೆ ತಯಾರಿಸುವ ಇಂತಹ ಯೋಜನೆಗಳು ಜನರಿಗೆ ಕರ್ನಾಟಕದಂತಹ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯಗಳಿಗೆ ವಲಸೆ ಬರಲು ಉತ್ತೇಜನ ನೀಡುವಂತೆ ಕಾಣಿಸುತ್ತವೆ. ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ವಿವಿಧ ರಾಜ್ಯಗಳಲ್ಲಿರುವ ಜನಸಾಂದ್ರತೆಯನ್ನು ನೋಡಿ:

ರಾಜ್ಯ
ಪ್ರತಿ ಚದುರ ಕಿಮಿಗೆ ಇರುವ ಜನಸಾಂದ್ರತೆ
ಬಿಹಾರ್
1102
ಉತ್ತರ ಪ್ರದೇಶ
828
ಪಶ್ಚಿಮ ಬಂಗಾಳ
1030
ತಮಿಳುನಾಡು
555
ಕೇರಳ
859
ಕರ್ನಾಟಕ
319
ಮಾಹಿತಿ: ಮ್ಯಾಪ್ಸ್ ಆಫ್ ಇಂಡಿಯಾ

ರೈಲ್ವೆ ಇಲಾಖೆಯನ್ನು ರಾಜ್ಯಗಳ ಕೈಗೆ ಒಪಿಸಬೇಕು:

ನಮ್ಮ ರಾಜ್ಯದಲ್ಲಿ ಯಾವ ಊರಿಂದ ಊರಿಗೆ ರೈಲುಗಳಿರಬೇಕು, ಎಷ್ಟು ರೈಲುಗಳನ್ನು ಓಡಿಸಬೇಕು ಎಂದು ಈಗ ಕೇಂದ್ರದಲ್ಲಿ ಕುಳಿತಿರುವ ರೈಲ್ವೆ ಮಂಡಳಿ ನಿರ್ಧರಿಸುತ್ತದೆ. ಹಲವು ದಶಕಗಳಿಂದ ಹಲವಾರು ಅವಶ್ಯಕ ಯೋಜನೆಗಳ ಬಗ್ಗೆ ಇಲಾಖೆಗೆ ನಮ್ಮ ಶಾಸಕರು, ಸಂಸದರು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅವಿನ್ನೂ ಧೂಳು ಹಿಡಿದು ಕೂತಿವೆ. ಯಾವ ಊರಿಂದ ಯಾವ ಊರಿಗೆ ರೈಲು ಮಾರ್ಗ ಇರಬೇಕು, ಇದರ ಒಳಿತು ಕೆಡಕೇನು ಅನ್ನುವುದು ಅವರಿಗಿಂತ ನಮಗೆ ಚೆನ್ನಾಗಿ ಗೊತ್ತಿರುತ್ತದೆ ಅಲ್ಲವೇ? ಆದ್ದರಿಂದ ರೈಲ್ವೆ ಇಲಾಖೆಯನ್ನು ರಾಜ್ಯಗಳ ಕೈಗೆ ಕೇಂದ್ರ ಸರ್ಕಾರ ಒಪ್ಪಿಸಬೇಕು ಇದರಿಂದ ಆಯಾ ರಾಜ್ಯಕ್ಕೆ ಬೇಕಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯಾರದೋ ಮರ್ಜಿಗೆ ಕಾಯುವ ಅವಶ್ಯಕತೆ ಇರುವುದಿಲ್ಲ.

ಬುಧವಾರ, ಮಾರ್ಚ್ 14, 2012

ತಮಿಳುನಾಡು ಜನರ ಒಗ್ಗಟ್ಟು ನೋಡಿ


ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅದೇನೆಂದರೆ ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳುನಾಡಿನ ಎಲ್ಲಾ ಪಕ್ಷದ ನಾಯಕರುಗಳು ನಿನ್ನೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿ, ಭಾರತ ಸರ್ಕಾರ ಈ ಕ್ರಮವನ್ನು ಖಂಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮುಂದೆ ನಡೆಯಲಿರುವ ಯು.ಎನ್ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ತಮಿಳುನಾಡಿನ ನಾಯಕರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ಈ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಭರವಸೆ ನೀಡಿದೆ.

ಕನ್ನಡಿಗರು ಕಲಿಯಬೇಕಿರುವ ಪಾಠ:
ಮೊದಲಿನಿಂದಲೂ ತಮಿಳುನಾಡಿನ ಸರ್ಕಾರ ತಮ್ಮ ಜನರು ಯಾವುದೇ ರಾಜ್ಯ, ದೇಶದಲ್ಲಿರಲಿ ಅವರ ಯೋಗ ಕ್ಷೇಮದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದೆ. ಅದು ಶ್ರೀಲಂಕಾದಲ್ಲಿರುವ ತಮಿಳರ ಬಗ್ಗೆ ಇರಬಹುದು ಅಥವಾ ಬೇರಿನ್ನಾವುದೇ ಪ್ರದೇಶದಲ್ಲಿರಬಹುದು. ತಮ್ಮ ಜನರಿಗೆ ಒಳಿತಾಗಬೇಕೆಂದರೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಭಿನಾಭಿಪ್ರಾಯವನ್ನು ಮರೆತು ಅವರ ಒಳಿತಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಆದರೆ ಇದೇ ಪರಿಸ್ಥಿತಿ ನಮ್ಮ ರಾಜ್ಯದ ನಾಯಕರುಗಳಿಂದ ನಿರೀಕ್ಷಿಸಲು ಸಾಧ್ಯವೇ? ಇವತ್ತಿನ ಮಟ್ಟಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮದೇ ರಾಜ್ಯದ ನೆಲದಲ್ಲಿ ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುತ್ತದೆ ನಮ್ಮ ಸರ್ಕಾರ, ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಿ ಎಲ್ಲಾ ಮುಗಿದ ಮೇಲೆ ತೇಪೆ ಸಾರಿಸುವ ಕೆಲಸಕ್ಕೆ ಬರುತ್ತದೆ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ತೀರಿಸಲು ಇರುವ ಕಳಸಾ-ಭಂಡೂರ ನಾಲಾ ಯೋಜನೆಯನ್ನು ಇನ್ನೂ ದಶಕಗಳಿಂದ ಜಾರಿಗೆ ತರದೇ ಹಾಗೆ ಮುಂದೆ ತಳ್ಳುತ್ತಿದೆ, ಇದರ ಅನುಷ್ಠಾನಕ್ಕೆ ಇರುವ ತೊಡರನ್ನು ಬಗೆಹರಿಸಲು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾಗಿ ಎಂದು ಕೆಲಸ ಮಾಡಲೇ ಇಲ್ಲ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಲು ಸಿದ್ಧ ಮಾಡಲಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರದೇ ೩ ದಶಕಗಳು ಕಳೆದು ಹೋಗಿವೆ... ಹೀಗೆ ಈ ಪಟ್ಟಿ ಹನುಮಪ್ಪನ ಬಾಲದಂತೆ ದೊಡ್ಡದಿದೆ.

ಇದಕೆಲ್ಲ ಮೂಲ ಹುಡುಕ ಹೊರಟರೆ ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ, ಆ ಪಕ್ಷದಲ್ಲಿರುವ ನಾಯಕರುಗಳ ಹೈಕಮಾಂಡ್ ಗುಲಾಮಗಿರಿ, ತಮ್ಮ ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಶಿಸ್ತಿನ ಪಕ್ಷಗಳು!!! ಇವುಗಳು ಎಂದಿಗೂ ನಮ್ಮ ಪಕ್ಷಗಳು ಅನ್ನಿಸಿಯೇ ಇಲ್ಲ! ಇದರ ಜೊತೆಜೊತೆಗೆ ನಮ್ಮ ಕನ್ನಡಿಗರಲ್ಲಿ ಜಾಗೃತಿಯ ಕೊರತೆ... ಇವುಗಳನ್ನೆಲ್ಲ ಒಟ್ಟಾಗಿ ಎದುರಿಸೋಕೆ ನಮ್ಮ ರಾಜ್ಯದಲ್ಲಿ ನಮ್ಮದೇ ಒಂದು ಪ್ರಾದೇಶಿಕ ಪಕ್ಷ ಬೇಕಾಗಿದೆ.

ಮಂಗಳವಾರ, ಮಾರ್ಚ್ 6, 2012

ಅನಿಯಂತ್ರಿತ ವಲಸೆ ಕಡಿವಾಣಕ್ಕೆ ಬೇಕು ಕಾನೂನು


ತಮಿಳುನಾಡು ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಪಾತಕ ಕೃತ್ಯಗಳ ಕಡಿವಾಣಕ್ಕಾಗಿ ಅಲ್ಲಿನ ಸರ್ಕಾರ ಹೊರ ರಾಜ್ಯದಿಂದ ತಮಿಳುನಾಡಿಗೆ ವಲಸೆ ಬಂದಿರುವ ಜನರ ಮಾಹಿತಿಯನ್ನು ಕಲೆ ಹಾಕಲು ತೀರ್ಮಾನಿಸಿದೆ ಹಾಗೂ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಮಾಹಿತಿ ಕಲೆ ಹಾಕುವಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ಗಾರ್ಮೆಂಟ್ಸ್ ಹಾಗೂ ಹೋಟೆಲ್ ಉದ್ಯಮದಂಥಹ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಮಾಹಿತಿ ಕಲೆ ಹಾಕುವಿಕೆಯ ಮುಖ್ಯ ಉದ್ದೇಶ ಕೆಲಸ ಅರಸಿ ಬಂದಿರುವ ವಲಸಿಗರನ್ನು ಪಾತಕಿಗಳಿಂದ ಬೇರ್ಪಡಿಸಿ ನೋಡುವುದಕ್ಕೆ ಸುಲಭವಾಗುತ್ತದೆ ಅನ್ನುವ ಕಾರಣಕ್ಕೆ.

ನಮ್ಮ ರಾಜ್ಯದಲ್ಲೂ ಯೋಜನೆ ಜಾರಿಗೆ ಬರಲಿ:

ಈ ಯೋಜನೆ ಕಾನೂನು ವ್ಯವಸ್ಥೆಯನ್ನು ಕಾಪಡುವಲ್ಲಿ ನಿಜಕ್ಕೂ ಒಳ್ಳೆಯ ಹೆಜ್ಜೆಯಾಗಿದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯದಿಂದ ಹೆಚ್ಚಾಗಿ ವಲಸೆಯಾಗುತ್ತಿರುವ ನಮ್ಮ ನಗರಗಳಲ್ಲಿ ಈ ಯೋಜನೆ ಜಾರಿಯಾಗಬೇಕಾಗಿರುವುದು ಅವಶ್ಯಕವಾಗಿದೆ. ನಮ್ಮ ಊರುಗಳಿಗೆ ಯಾರು ಬರುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೂ ಅವರ ಪೂರ್ವಾಪರವೇನು ಅನ್ನೋ ಮಾಹಿತಿಗಳು ನಮಗೆ ಗೊತ್ತಿದ್ದರೆ ಒಳ್ಳೆಯದಲ್ಲವೇ? ಬೆಂಗಳೂರಿನಲ್ಲಿ ನಡೆದಿರುವ ಹಲವಾರುಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದ ಪಾತಕಿಗಳು ಭಾಗಿಯಾಗಿರುವುದು ಕಂಡುಬಂದಿದೆ. ವಲಸೆ ಬಂದಿರುವ ಜನರ ಅಂಕೆ ಸಂಖ್ಯೆಗಳನ್ನು ಹೊಂದಿರುವುದು ಸರ್ಕಾರಕ್ಕೆ ಮುಖ್ಯವಾಗುತ್ತದೆ. ಅನಿಯಂತ್ರಿತ ವಲಸೆಯಿಂದಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿ ಘರ್ಷಣೆಗೆ ಕಾರಣವಾಗಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಮುಂಬೈ ನಗರ.

ಅನಿಯಂತ್ರಿತ ವಲಸೆಯಿಂದಾಗಿ ಒಂದು ರಾಜ್ಯದ Demography ಯೇ ಬದಲಾಗಿ ಹೋಗುವ ಅಪಾಯಕಾರಿ ಪರಿಣಾಮಗಳನ್ನು ಹಲವಾರು ರಾಜ್ಯಗಳು ಇಂದು ಅನುಭವಿಸುತ್ತಿವೆ. ಬೇರೆಲ್ಲೋ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಜನರು ತಲೆತಪ್ಪಿಸಿಕೊಂಡು ನಮ್ಮ ರಾಜ್ಯಗಳಿಗೆ ಬಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳು ಆಗಬಹುದು. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಅನ್ನೋ ಕಾರಣಕ್ಕೆ ಹಿಂದಿನ ಪೂರ್ವಾಪರ ತಿಳಿಯದೇ ಕರೆದುಕೊಂಡು ಬರಲಾಗುವ ಇಂತಹ ಜನರನ್ನು ಒಂದೆಡೆ ಮಧ್ಯವರ್ತಿಗಳು ಶೋಷಿಸಿದರೆ, ಇನ್ನೊಂದೆಡೆ ಇಲ್ಲಿಗೆ ವಲಸೆ ಬರುವ ಜನರು ನಮ್ಮ ಸಮಾಜದ ಜೊತೆ ಬೆರೆಯದೇ ತಮ್ಮದೇ ಒಂದು ದ್ವೀಪ ಕಟ್ಟಿಕೊಂಡು ಸಮಾಜದಲ್ಲಿ ಒಡಕು ತರುವ ಕೆಲಸಗಳಿಗೂ ಕಾರಣವಾಗಬಹುದು. ಕಡಿಮೆ ಸಂಬಳದ ನೆಪವೊಡ್ಡಿ ನಮ್ಮ ಕನ್ನಡಿಗರಿಗೆ ಕೆಲಸಗಳು ದೊರಕದಂತಹ ಪರಿಸ್ಥಿತಿ ನಿರ್ಮಾಣವಾದರೆ, ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಕಾಣುತ್ತಿದೆಯಾದರೆ. ನಮ್ಮ ಜನರಿಗೆ ಸರಿಯಾದ ವ್ಯವಸ್ಥೆಯಿಲ್ಲದ, ನಮ್ಮ ಜನರಿಗೆ ಕೆಲಸ ಸಿಗದ ಇಂತಹ ಅಭಿವೃದ್ಧಿ ನಮಗೆ ಬೇಕೆ ಎನ್ನೋ ಪ್ರಶ್ನೆಯನ್ನ ನಾವುಗಳು ಕೇಳಿಕೊಳ್ಳಬೇಕಾಗಿದೆ?

ವಲಸೆಗೆ ಕಾನೂನು ಜಾರಿಯಾಗಬೇಕು:

ಇಂದು ವಲಸೆ ಕೇವಲ ಸಣ್ಣ ಪ್ರಮಾಣದಲ್ಲಿ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಇದರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವಲಸೆಯ ಕಾರಣದಿಂದಾಗಿ ನಮ್ಮ ಜನರೂ ಸಹ ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದೊದಗಿದ್ದಾರೆ, ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ಸಹ ಪೋಲಿಸ್ ಇಲಾಖೆಗೆ ತೊಂದರೆಯಾಗುತ್ತಿದೆ. ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಕಂದಕ ಏರ್ಪಡುತ್ತಿದೆ. ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನೀತಿಯನ್ನ ರೂಪಿಸಲು ನಮ್ಮ ರಾಜ್ಯಕ್ಕೆ ಹಕ್ಕಿರಬೇಕು. ಬಿಹಾರದಿಂದ, ಪಶ್ಚಿಮ ಬಂಗಾಳದಿಂದ ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನಿರ್ಧಾರ ನಮ್ಮ ರಾಜ್ಯಕ್ಕಿದ್ದರೆ, ನಮ್ಮ ರಾಜ್ಯದಿಂದ ಅಥವಾ ಬೇರೆ ರಾಜ್ಯದಿಂದ ಬಿಹಾರಕ್ಕೆ ಎಷ್ಟು ಜನರು ವಲಸೆ ಹೋಗಬೇಕು ಅನ್ನೋ ನಿರ್ಧಾರವನ್ನು ಬಿಹಾರ ಸರಕಾರಕ್ಕೆ ಬಿಡಬೇಕು, ಇದು ಸರಿಯಾದ ದಾರಿ ಕೂಡ.

ಇಂದು ಸಂವಿಧಾನದಲ್ಲಿ ಈ ತರಹದ ಕಾನೂನಿಗೆ ಅವಕಾಶವಿಲ್ಲವಾದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಸಲಹೆ ಪಡೆದು ವಲಸೆ ನಿಯಂತ್ರಣದ ಬಗ್ಗೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಿದೆ. ವಲಸೆಗೆ ಬರುವ ಜನರಿಗೆ ರಾಜ್ಯ ಸರ್ಕಾರದಿಂದ ಪರ್ಮಿಟ್ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರ ಮೂಲಕ ವಲಸಿಗರ ಸ್ಥಿತಿಗತಿ, ಅಂಕೆ ಸಂಖ್ಯೆ, ಹಾಗೂ ಇತರೇ ವಿಷಯದಲ್ಲಿ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಸುಲಭವಾಗುತ್ತದೆ. ವಲಸೆಯನ್ನು ನಿಯಂತ್ರಿಸುವ ಸಲುವಾಗಿ ಆಯಾ ರಾಜ್ಯದಲ್ಲಿ ಹೆಚ್ಚಿನ  ಉದ್ಯೋಗಗಳನ್ನು ಸೃಷ್ಠಿ ಮಾಡಬೇಕಾದ ಅನಿವಾರ್ಯತೆ ಇಂದು ಎಲ್ಲಾ ರಾಜ್ಯಗಳ ಮೇಲಿದೆ. ನಮ್ಮ ರಾಜ್ಯದಲ್ಲೂ ಕೂಡ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಮಂಗಳವಾರ, ಫೆಬ್ರವರಿ 7, 2012

ಸರೋಜಿನಿ ಮಹಿಷಿ ವರದಿ ಎಂಬ ಕನ್ನಡಿಯೊಳಗಿನ ಗಂಟು


ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸದಾನಂದ ಗೌಡರು “ಬದಲಾದ ಕಾಲಘಟಕ್ಕೆ ಅನುಗುಣವಾಗಿ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಸಮಿತಿ ರಚಿಸಲು ಸರ್ಕಾರದ ಚಿಂತನೆ ನಡೆಸಿದೆ” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ನಂತರ ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂಬ ವರದಿಯ ಬಗ್ಗೆ ಮಾತಾಡಿರುವದು ನಮ್ಮ ಪುಣ್ಯ!!! ಅದಕ್ಕಾಗಿ ನಮ್ಮ ಮುಖ್ಯಮಂತ್ರಿಗಳಿಗೆ ಶುಭಾಷಯ ಹೇಳೋಣ. ಅದ್ರೆ ಮೂರು ದಶಕಗಳಿಂದ ಧೂಳು ಹಿಡಿದು ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುತ್ತೇವೆ ಅನ್ನೋ ಹೇಳಿಕೆ ಬದಲು ಸಮಿತಿ ರಚಿಸಲು ಚಿಂತನೆ ನಡೆಸುತ್ತೇವೆ, ಯೋಚಿಸುತ್ತಿದ್ದೇವೆ, ಜಾರಿ ಮಾಡುತ್ತೇವೆ... ಅನ್ನೋ ಅವರ ಪದ ಪ್ರಯೋಗಗಳು ಗಾಳಿಯಲ್ಲಿ ಗೋಪುರ ಕಟ್ಟುವ ಪ್ರಯತ್ನವಾಗಿ ಕಾಣುತ್ತಿದೆ.
(ಚಿತ್ರಕೃಪೆ: ಅಂತರ್ಜಾಲ)

ಮೂರು ದಶಕಗಳ ಹಿಂದೆ ತಯಾರಿಸಲಾದ ಸರೋಜಿನಿ ಮಹಿಷಿ ವರದಿಯನ್ನು, ಕಳೆದ ೧೫ ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಔದ್ಯೋಗಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂದಿನ ದಿನ ಮಾನಕ್ಕೆ ತಕ್ಕಂತೆ ಶಿಫಾರಸ್ಸುಗಳನ್ನು ಬದಲಾಯಿಸಬೇಕಾಗಿರುವುದು ಇಂದಿನ ಅವಶ್ಯಕತೆ. ಇಷ್ಟರಲ್ಲಾಗಲೇ ಈ ಕೆಲಸ ಮಾಡಬೇಕಾಗಿದ್ದ ಸರ್ಕಾರ ಇನ್ನೂ ಸಮಿತಿ ರಚಿಸುವಲ್ಲಿ, ಚಿಂತನೆ ನಡೆಸುವಲ್ಲಿ, ಬೇಡಿಕೆ ಪರಿಶೀಲಿಸುವುದರಲ್ಲಿ ಮೀನಾಮೇಷ ಎಣಿಸುತ್ತ ಜನರ ಕಿವಿಯ ಮೇಲೆ ಹೂವು ಇಡುತ್ತಿದೆ.

ಸರೋಜಿನಿ ಮಹಿಷಿಯಲ್ಲಿ ಹೇಳಿರುವ ಉದ್ಯೋಗ ಮೀಸಲಾತಿಯ ಬಗ್ಗೆ ನೋಡುತ್ತಿದ್ದಾಗ, ಈ ಯೋಚನೆಯನ್ನ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಮಾಡಿದ್ದಾರೆಯೇ? ಇದರ ಅನುಷ್ಠಾನ ಬಲು ಕಷ್ಟವಾದ ಕ್ರಿಯೆಯೇ? ಈ ತರಹದ ಯೋಜನೆಗಳನ್ನು ಬೇರೆ ರಾಜ್ಯದಲ್ಲಿ ಮಾಡಲಾಗಿದೆಯೆ? ಅಂತ ಕುತೂಹಲದಿಂದ ಹುಡಿಕಿದರೆ ನಮಗೆ ಆಶ್ಚರ್ಯ ಕಾದಿದೆ. ಬಿ.ಜೆ.ಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ವಿವಿಧ ರಾಜ್ಯಗಳಲ್ಲಿ ತಮ್ಮ ರಾಜ್ಯದ ಜನರ ಹಿತಾಸಕ್ತಿಗಾಗಿ ಎಲ್ಲಾ ಹಂತದ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿವೆ. ಅಂತಹ ಕೆಲವು ರಾಜ್ಯಗಳ ಮಾಹಿತಿಯನ್ನು ನಾವು ಈಗ ನೋಡೋಣ

ಮಹಾರಾಷ್ಟ್ರ:
ನವೆಂಬರ್ 2008 ರಲ್ಲಿ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿನ ಎಲ್ಲ ಉದ್ಯೋಗಗಳಲ್ಲೂ 80% ಅಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ತೀರ್ಮಾನಿಸಲಾಯಿತು. ಅದರಲ್ಲೂ ಮುಂಬರುವ 140 ಎಸ್..ಜೆಡ್. ಗಳಲ್ಲಿ ಆರಂಭವಾಗು ಎಲ್ಲ ಕಂಪನಿಗಳ ಹುದ್ದೆಗಳಲ್ಲಿ 80% ಸ್ಥಳೀಯರಿಗೆ ಕೊಡಬೇಕು ಎಂದು ಆದೇಶ ಹೊರಡಿಸಿತು. ಇದು, ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಬಗ್ಗೆ 1968 ನಂತರ, ಮಹಾರಾಷ್ಟ್ರ ಸರ್ಕಾರ ಹೊರಡಿಸಿದ 6ನೇ ಸರ್ಕಾರಿ ಆದೇಶ.

ಒರಿಸ್ಸಾ:
ಅಕ್ಟೋಬರ್ 2008 ರಲ್ಲಿ ಒರಿಸ್ಸಾ ಸರ್ಕಾರ ಕೂಡ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಒರಿಸ್ಸಾದಲ್ಲಿನ ಎಲ್ಲ ಗ್ರೂಪ್ ’ಸಿ ಮತ್ತು ’ಡಿ ಉದ್ಯೋಗಗಳಲ್ಲೂ 90% ಅಷ್ಟು ಹುದ್ದೆಗಳನ್ನು, ಹಾಗೂ ಗ್ರೂಪ್ ’ಎ ಮತ್ತು ’ಬಿ ಹುದ್ದೆಗಳಲ್ಲಿ 65% ಅಷ್ಟು ಸ್ಥಳೀಯರಿಗೆ ಮೀಸಲಿಡಬೇಕು ಎಂದು ತೀರ್ಮಾನಿಸಿತು. ಹೊಸ ಉದ್ಯೋಗ ನೀತಿಗಳನ್ನು ಅಳವಡಿಸಿ, ಕಂಪನಿಗಳೊಡನೆ ಆಗಿದ್ದ ಒಪ್ಪಂದ (MoU) ಗಳನ್ನು ಮರುಪರಿಶೀಲಿಸಿ, ಅವಶ್ಯವೆನಿಸಿದರೆ ತಿದ್ದುಪಡಿ ಮಾಡಲಾಗುವುದು ಎಂದು ಸರ್ಕಾರ ತೀರ್ಮಾನಿಸಿತು.

ತಮಿಳುನಾಡು:
2009ರ ಸರ್ಕಾರಿ ಆದೇಶದಲ್ಲಿ ತಮಿಳುನಾಡಿನಲ್ಲಿ ಸ್ಥಾಪಿಸಲಾಗುವ ಎಲ್ಲಾ ಕಾರ್ಖಾನೆಗಳಲ್ಲಿ ಶೇ 75 ರಷ್ಟು ಉದ್ಯೋಗಗಳನ್ನು ತಮಿಳುನಾಡಿನ ಜನರಿಗೆ ನೀಡಬೇಕೆಂಬ ನಿಯಮ ಮಾಡಿದೆ. ಜೊತೆಗೆ ಈ ನಿಬಂಧನೆಗೆ ಒಪ್ಪಿಕೊಳ್ಳುವ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ವಿವಿಧ ಸವಲತ್ತುಗಳನ್ನು ಒದಗಿಸುತ್ತದೆ. ಈ ಹಿಂದೆ ಸ್ಥಾಪಿಸಲಾಗಿರುವ ಸಂಸ್ಥೆಗಳು ಸಹ ಸರ್ಕಾರಿ ಅದೇಶವನ್ನು ಪಾಲಿಸಿದಲ್ಲಿ ಅವರಿಗೂ ಸಹ ಸವಲತ್ತುಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಗುಜರಾತ:
ಗುಜರಾತ ಸರ್ಕಾರವು ತನ್ನ ಉದ್ಯಮ ನೀತಿಯಲ್ಲಿ, ತನ್ನ ರಾಜ್ಯದಲ್ಲಿ ಸ್ಥಾಪಿಸಲಾಗುವ ಉದ್ಯಮಗಳಿಂದ ಸೃಷ್ಠಿಯಾಗುವ ಉದ್ಯೋಗಗಳಲ್ಲಿ ಹೆಚ್ಚಿನ ಪಾಲು ದೊರಕುವಂತೆ ಮಾಡಲು ಯೋಜನೆಯೊಂದನ್ನು ಸ್ಥಾಪಿಸಿದೆ. ಇದರ ಮೂಲಕ ಸ್ಥಳೀಯರಿಗೆ ಹೆಚ್ಚಿನ ಕೆಲಸ ದೊರಕುವಂತೆ ಮಾಡಿದೆ.

ಈ ಮೇಲಿನ ಉದಾಹರಣೆಗಳನ್ನು ನೋಡಿದಾಗ, ಆಯಾ ರಾಜ್ಯಗಳು ತನ್ನ ರಾಜ್ಯದ ಜನರ ಹಿತಕ್ಕಾಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕೆಂಬ ಕಾನೂನು ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ನಮ್ಮ ಭಾರತ ದೇಶದ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ರಾಜ್ಯ ಸರ್ಕಾರವನ್ನು ಹೊಂದಿವೆ. ಜನರಿಂದ ಆರಿಸಲಾಗುವ ಈ ಸರ್ಕಕಾರಗಳು, ತನ್ನನ್ನು ಆರಿಸಿ ಕಳುಹಿಸಿದ ಜನರಿಗೆ ಸವಲತ್ತುಗಳನ್ನು ಒದಗಿಸುವುದು ಸರಿಯಾದ ಕ್ರಮ, ಇದಲ್ಲದೇ ಆಯಾ ರಾಜ್ಯದಲ್ಲಿ ಸ್ಥಾಪಿಸಲಾಗುವ ಉದ್ಯಮಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿ ದರದಲ್ಲಿ ವಿದ್ಯುತ್, ನೀರು, ಭೂಮಿ ಎಲ್ಲವನ್ನೂ ನೀಡುವಾಗ ಖರ್ಚಾಗುವುದು ಜನರ ತೆರಿಗೆಯ ಹಣ. ಹಾಗಾಗಿ ಅಲ್ಲಿಯ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಸಹಜ ನ್ಯಾಯವಾಗಿ ಕಾಣುತ್ತದೆ. ನಮ್ಮ ರಾಜ್ಯ ಸರ್ಕಾರವೂ ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಒಂದು ಕಾಲಮಿತಿ ಯೋಜನೆಯನ್ನಾಗಿ ಮಾಡಿಕೊಂಡು ಅನುಷ್ಠಾನಕ್ಕೆ ತರಲು ಚಿಂತನ-ಮಂಥನ ಮಾಡುವುದನ್ನು ಬಿಟ್ಟು ಜಾರಿಗೆ ತರಲಿ ಎಂದು ಆಶಿಸೋಣ.

ಮುಗಿಸುವುದಕ್ಕಿಂತ ಮುಂಚೆ: ಫೆಬ್ರವರಿ ತಿಂಗಳಿನಲ್ಲಿ ಜೆ.ಪಿ ನಗರದಲ್ಲಿ ನಡೆದ ಉದ್ಯೋಗ ಮೇಳದ ಜಾಹೀರಾತನ್ನು ಇಂಗ್ಲಿಷಿನಲ್ಲಿ ಹಾಕಲಾಗಿತ್ತು, ಇದನ್ನ ನಾನು ಹಾಗೂ ಕೆಲವು ಗೆಳೆಯರು ಪ್ರಶ್ನಿಸಿದಾಗ, ಜಿ.ಪಿ ನಗರದಲ್ಲಿ ಭಾರತದ ಎಲ್ಲಾ ಜನರು ವಾಸಿಸುತ್ತಾರೆ, ಹಾಗಾಗಿ ಕೆಲಸಗಳನ್ನು ಕೇವಲ ಕನ್ನಡಿಗರಿಗೆ ನೀಡಬೇಕು ಎಂದು ಹೇಳುವುದು ಸಂಕುಚಿತತೆ. ನಾವು ಭಾರತೀಯರಾಗಿ ಯೋಚಿಸೋಣ ಎಂಬ ಸಲಹೆಯನ್ನು ಆಳುತ್ತಿರುವ ಪಕ್ಷದ ವಿಧ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ನಮಗೆ ಸಲಹೆ ನೀಡಿದ್ರು. ಹಾಗಿದ್ರೆ ಈ ಸರ್ಕಾರದಿಂದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವ ಕೆಲಸ ಮಾಡೋಕೆ ಆಗುತ್ತಾ ಅನ್ನೋ ಪ್ರಶ್ನೆ ಸಹ ನಮ್ಮನ್ನ ಈಗ ಕಾಡುತ್ತೆ.

ಕೊನೆಯದಾಗಿ: ನಮಗೆ ಗುಜರಾತ ಸರ್ಕಾರವೇ ಮಾದರಿ ಅಂತ ದಿನಕ್ಕೆ ನೂರು ಬಾರಿ ಹೇಳೋ ರಾಜ್ಯ ಸರ್ಕಾರಕ್ಕೆ ಅಲ್ಲಿ ತುಂಬಾ ಹಿಂದೆಯೇ ಉದ್ಯೋಗ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ ಅನ್ನೋ ಅಂಶ ಗೊತ್ತಿದೆಯೋ ಇಲ್ಲವೋ ಪಾಪ!!!

ಮಂಗಳವಾರ, ಜನವರಿ 24, 2012

ಇಲ್ಲಿ ಕನ್ನಡ ಗೊತ್ತಿಲ್ದಿದ್ರೂ ಕೆಲಸ ಸಿಗುತ್ತೆ!!!


ಜನವರಿ ೨೦ ೨೦೧೨ ರಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಅಸಂಘಟಿತ ಕೆಲಸಗಾರರ ಅನುಕೂಲಕ್ಕಾಗಿ ಜಾಲತಾಣವೊಂದನ್ನು ಹೊರತರಲಾಗಿದೆ ಎಂಬ ಸುದ್ದಿಯನ್ನು ವರದಿ ಮಾಡಿತ್ತು. ಈ ಯೋಜನೆಯನ್ನು ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿ.ಐ.ಐ) ನ ಕರ್ನಾಟಕ ವಿಭಾಗವು ಜಾರಿಗೆ ತಂದಿದೆ, ಈ ಯೋಜನೆಗೆ ಸಿ.ಎಚ್.ಎಫ್ ಇಂಟರ್ ನ್ಯಾಷನಲ್ ಇಂಡಿಯಾ ಎಂಬ ಸಂಸ್ಥೆಯೊಂದು ಈ ಯೋಜನೆಗೆ ಹಣ ಹೂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿಐಐ ನ ಈ ಚಿಂತನೆ ನಿಜಕ್ಕೂ ಉತ್ತಮವಾಗಿದೆ. ಇವತ್ತಿನ ದಿನಗಳಲ್ಲಿ ಕೆಲಸ ಹುಡುಕುವ ಕಷ್ಟ ಅನುಭವಿಸಿದವರಿಗೆ ಗೊತ್ತು. ಇಂತಹುದರಲ್ಲಿ ಅಂಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಉದ್ಯೋಗಾವಕಾಶಗಳ ಮಾಹಿತಿ ಸಿಗುವುದು ಒಂದು ಪತ್ರಿಕೆಗಳಲ್ಲಿ ಬರುವ ಜಾಹಿರಾತಿನಿಂದ ಅಥವಾ ಉದ್ಯೋಗ ಪತ್ರಿಕೆಗಳಿಂದ ಮಾತ್ರ. ಆದರೆ ಈ ಸಿಐಐ ನ ಯೋಜನೆಯಲ್ಲಿ ಕೆಲಸ ಕೊಡುವವರು ಹಾಗೂ ಕೆಲಸ ಬೇಡುವವರನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗುವ ಭರವಸೆಯನ್ನು ಸಿಐಐ ನೀಡುತ್ತಿದೆ. ಇವರ ಜೊತೆಗೆ ರಾಜ್ಯ ಸರ್ಕಾರ ಕೂಡ ಕೈ ಜೋಡಿಸುವ ಬಗ್ಗೆ ಪತ್ರಿಕೆಯಲ್ಲಿ ಬರೆಯಲಾಗಿದೆ.



ಸಿಐಐ ಸಿದ್ಧಪಡಿಸಿರುವ ಜಾಲತಾಣವನ್ನು ಹೊಕ್ಕು ನೋಡಿದರೆ ಈ ಯೋಜನೆ ಮೊದಲ ಹೆಜ್ಜೆಯಲ್ಲಿಯೇ ಎಡವಿದೆಯೇ ಎಂದು ಅನ್ನಿಸುತ್ತದೆ, ಯಾರಿಗಾಗಿ ಈ ಯೋಜನೆಯನ್ನ ತಯಾರಿಸಲಾಗಿದೆ ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಕನ್ನಡವೇ ಇಲ್ಲಾ!!!
ಸಿಐಐ ನ ತಾಣವನ್ನು ನಾವು ನೋಡಿದ ತಕ್ಷಣ ಕಣ್ಣಿಗೆ ಕಾಣುವುದು ಬರಿ ಇಂಗ್ಲೀಶ್. ಹೋಗಲಿ ಕನ್ನಡದಲ್ಲೂ ಈ ಜಾಲತಾಣವನ್ನು ತಯಾರು ಮಾಡಿದ್ದಾರೆಯೇ ಅಂತ ನೋಡಿದರೆ ಕನ್ನಡದ ಒಂದಕ್ಷರವೂ ಈ ಜಾಲತಾಣದಲ್ಲಿ ಇಲ್ಲ!!!. ನೋಂದಣಿ ಮಾಡಿಸಿಕೊಳ್ಳಲು ಹೋದರೆ ಅಲ್ಲೂ ಕೂಡ ಇಂಗ್ಲಿಶ್ ಮಾತ್ರ. ಪ್ರಾಥಮಿಕ, ಹೈಸ್ಕೂಲು, ಕಾಲೇಜು, ಏನು ಓದದೇ ಇರುವ ಹಾಗೂ ಬಿ.ಎ, ಬಿ.ಕಾಂ, ಬಿ.ಎಡ್ ಮತ್ತು ಬಿ.ಎಸ್ಸಿ ಪಧವಿಧರರಿಗೆ ಇಲ್ಲಿ ಕೆಲಸದ ಅವಕಾಶಗಳನ್ನು ನೀಡಲಾಗಿದೆ. ಆದ್ರೆ ಇಲ್ಲಿರುವ ಮುಖ್ಯ ಪ್ರಶ್ನೆ ಏನು ಓದದ ಅಥವಾ ಕಾಲೇಜು ಬಿಟ್ಟಿರುವ  ಅಥವಾ ಇಂಗ್ಲಿಶ್ ಅರಿವು ಇಲ್ಲದ ಜನರು ಇಲ್ಲಿ ಹೇಗೆ ನೋಂದಾಯಿಸಿಕೊಳ್ಳಬೇಕು? ಇಂಗ್ಲಿಶ್ ಗೊತ್ತಿದ್ದರೆ ಮಾತ್ರ ಸಿಐಐ ನವರು ಕೆಲಸ ಕೊಡಿಸುತ್ತಾರಾ?

ತರಬೇತಿ ಸಂಸ್ಥೆಗಳು ಇಂಗ್ಲಿಶ್ ಗೊತ್ತಿಲದವರಿಗೆ ಸಹಾಯ ಮಾಡುತ್ತವೆ ಎಂದು ಸಂಸ್ಥೆ ಹೇಳಿದ್ದರೂ ಸಹ ಇದು ಎಷ್ಟರ ಮಟ್ಟಿಗೆ ಪ್ರಯೋಜಕ ಅನ್ನುವ ಪ್ರಶ್ನೆ ಹುಟ್ಟುತ್ತದೆ? ಮುಂದೆ ಈ ಅಭ್ಯರ್ಥಿ ತನ್ನ ವಿವರಗಳನ್ನು ತುಂಬ ಬೇಕಾದಲ್ಲಿ ಅಥವಾ ಬದಲಾಯಿಸಬೇಕಾದಲ್ಲಿ ಯಾರ ಮುಂದೆ ಹೋಗಿ ಕೈಕಟ್ಟಿ ನಿಲ್ಲಬೇಕು? ಹೊಸ ಕೆಲಸದ ಮಾಹಿತಿ ಬೇಕಾದಲ್ಲಿ ಅಥವಾ ತನ್ನ ಊರಿನಲ್ಲಿರುವ ಕೆಲಸ ಹುಡುಕಬೇಕೆಂದಲ್ಲಿ ಯಾರನ್ನ ಕೇಳಿ ಮಾಹಿತಿ ಪಡೆಯಬೇಕು? ಹೀಗೆ ಮೂರನೆಯ ವ್ಯಕ್ತಿಯ ಮೇಲೆ ಅವಲಂಬಿತಾಗುವ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿಯಾಗಲಾರದು. ಸಿಐಐ ನಂಥ ಸಂಸ್ಥೆಗೆ ಮಾರುಕಟ್ಟೆಯಲ್ಲಿ ಭಾಷೆಗಿರುವ ಆಯಾಮದ ಬಗ್ಗೆ ಅರ್ಥ ಆಗದಿರುವುದು ವಿಪರ್ಯಾಸವೇ ಸರಿ. ತನ್ನ ಬಳಿ ಇರುವ ಅಭ್ಯರ್ಥಿಗಳ ಮಾಹಿತಿಯನ್ನು ಹಂಚಿಕೊಳ್ಳುವ ಯೋಜನೆಯಲ್ಲಿರುವ ರಾಜ್ಯ ಸರ್ಕಾರವೂ ಸಹ ಈ ಯೋಜನೆ ಕನ್ನಡದಲ್ಲಿ ಇಲ್ಲದಿರುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.

ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಉಪಯೋಗಕ್ಕಿಂತ ಹೊರಗಿನಿಂದ ವಲಸೆ ಬರುವ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂಬ ಅನುಮಾನ ಕಾಡಲು ಶುರುವಾಗುತ್ತದೆ ಯಾಕಂದ್ರೆ ಈ ತಾಣದಲ್ಲಿ ಕನ್ನಡ ಗೊತಿಲ್ಲದಿದ್ರೂ ನಿಮಗೆ ಕೆಲಸ ಸಿಗುತ್ತೆ. ದಶಕಗಳ ಹಿಂದೆಯೆ ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಗಬೇಕಾಗಿರುವ ಸ್ಥಾನಮಾನದ ಬಗ್ಗೆ ಹೊರತರಲಾಗಿದ್ದ ಡಾ. ಸರೋಜಿನೆ ಮಹಿಷಿ ವರದಿಯನ್ನು ಇಂದಿಗೂ ಸರ್ಕಾರ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಆದರೆ ಸಿಐಐ ನಂತಹ ಸಂಸ್ಥೆಗಳ ಜೊತೆಗೆ ಕೆಲಸ ಮಾಡುವಾಗ ಕರ್ನಾಟಕದಲ್ಲಿನ ಕೆಲಸಗಳು ಕನ್ನಡಿಗರಿಗೆ ದೊರಕುವಂತೆ ಮಾಡಲು ಒಂದು ಸೂತ್ರವನ್ನು ಹೊರತರಬೇಕು. ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಸ್ಥಾಪಿಸಲಾಗುವ ಯಾವುದೇ ಉದ್ಯಮದಲ್ಲೂ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ಒಂದು ಸರ್ಕಾರಿ ಆದೇಶವನ್ನು ಹೊರಡಿಸಬೇಕು. ನಮ್ಮ ನಾಡಿನ ಏಳಿಗೆಯಲ್ಲಿ ದುಡಿಮೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎನ್ನುವುದನ್ನು ಸರ್ಕಾರ ಮರೆಯಬಾರದು.

ಸಿಐಐ ಸಂಸ್ಥೆ ಮಾಡಿರುವ ತಪ್ಪನ್ನು ತಿದ್ದಿಕೊಂಡು ಈ ಜಾಲತಾಣವನ್ನು ಕನ್ನಡದಲ್ಲಿ ಅಭಿವೃದ್ಧಿ ಪಡಿಸಬೇಕು ಹಾಗೂ ಈ ಮೂಲಕ ಹೆಚ್ಚಿನ ಕನ್ನಡಿಗರಿಗೆ ತಲುಪುವಂತೆ ಮಾಡಬೇಕು. ಈ ಕುರಿತು ನಾವು response@skillconnect.in ಗೆ ಒಂದು ಮಿಂಚೆಯನ್ನು ಬರೆದು, ಕನ್ನಡದಲ್ಲಿ ಈ ಜಾಲಾತಾಣವನ್ನು ಹೊರತರಬೇಕು ಎಂದು ಒತ್ತಾಯಿಸೋಣ. 

ಗುರುವಾರ, ಜನವರಿ 12, 2012

“ಮೊಬೈಲ್ ಆಡಳಿತ” ಜನರನ್ನ ತಲುಪುತ್ತಾ???


(ಚಿತ್ರ ಕೃಪೆ: ಅಂತರ್ಜಾಲ)
ನಿನ್ನೆಯ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ “ಮೊಬೈಲ್ ಆಡಳಿತ” ವನ್ನು ಜಾರಿಗೆ ತರುವುದರ ಬಗ್ಗೆ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಎಂ. ಎನ್. ವಿದ್ಯಾಶಂಕರ್ ಅವರು ಮಾತನಾಡಿದ್ದಾರೆ. “ಇ-ಆಡಳಿತ ಎನ್ನುವುದು ಈಗ ೧೦ ವರ್ಷಗಳಷ್ಟು ಹಳೆಯದಾಗಿದ್ದು, ಈಗ ಮೊಬೈಲ್ ಸೇವೆ ಮೂಲಕ ಆಡಳಿತವನ್ನು ಇನ್ನಷ್ಟು ವೇಗಗೊಳಿಸಲು ಪ್ರಯತ್ನಿಸಲಾಗುತ್ತಿದೆ...” ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಹಿಂದಿನಿಂದಲೂ ತಂತ್ರಜ್ಞಾನವನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿದೆ ಹಾಗೂ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಸಹ ಪಡೆದಿದೆ. ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸಿಕೊಂಡು ಆಡಳಿತವನ್ನು ಜನರ ಬಳಿಗೆ ಒಯ್ಯುವ ಸರ್ಕಾರದ ಈ ಕ್ರಮವನ್ನು ನಾವೆಲ್ಲ ತುಂಬು ಹೃದಯದಿಂದ ಸ್ವಾಗತಿಸೋಣ, ಜನರ ಮನೆಗೆ ಆಡಳಿತ ಮುಟ್ಟಬೇಕಾಗಿರುವುದು ಸರಿಯಾದ ದಾರಿಯು ಹೌದು.

ಆದರೆ ಯಾವುದೇ ಯೋಜನೆಯನ್ನು ಜಾರಿಗೆ ತರುವುದಕ್ಕಿಂತ ಮುಂಚೆ ಆ ಯೋಜನೆಯನ್ನ ಜನರಿಗೆ ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ಬೇಕಾಗಿರುವ ಸಿದ್ಧತೆಗಳ್ಳನ್ನು ಮಾಡಿಕೊಳ್ಳಲಾಗಿದೆಯೇ ಎನ್ನುವುದನ್ನು ಅಧಿಕಾರಿಗಳು ಮೊದಲು ಪರೀಕ್ಷಿಸಬೇಕು. ಅಲ್ಲವೇ? ಹಾಗಿದ್ರೆ ನಮ್ಮ ರಾಜ್ಯ ಮೊಬೈಲ್ ಆಡಳಿತಕ್ಕೆ ಸಜ್ಜಾಗಿದೆಯೇ?

ಪರಿಣಾಮಕಾರಿ ಆಡಳಿತಕ್ಕೆ ಬೇಕು ಕನ್ನಡ ತಂತ್ರಜ್ಞಾನ
ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ಮೊಬೈಲ್ ಆಡಳಿತ ಜನರನ್ನ ತಲುಪುತ್ತಾ???
ಇತ್ತೀಚಿನ ಒಂದು ಉದಾಹರಣೆಯ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ. ಟ್ರಾಫಿಕ್ ಪೋಲಿಸರು ಉಪಯೋಗಿಸುವ ಬ್ಲ್ಯಾಕ್ ಬೆರ್ರಿ ಮೊಬೈಲ್ . ಸಂಚಾರ ನಿಯಮ ಉಲ್ಲಂಘನೆ ಅಥವಾ ಇನ್ನಿತರ ತಪ್ಪುಗಳನ್ನು ಮಾಡಿದಾಗ ಪೋಲಿಸರು ನೀಡುವ ರಸೀತಿಗಳು ಇಂಗ್ಲಿಷಿನಲ್ಲಿ ಇರುತ್ತವೆ. ಇದರ ಬಗ್ಗೆ ನನ್ನ ಗೆಳೆಯನೊಬ್ಬ ಹಿರಿಯ ಅಧಿಕಾರಿಗಳ ಗಮನ ಸೆಳೆದಾಗ ಅವರು  ನೀಡಿದ ಉತ್ತರ “ ಸೇವೆ ನೀಡುತ್ತಿರುವ ಖಾಸಗಿ ಸಂಸ್ಥೆ ಪೂರೈಸುವ ಉಪಕರಣ ಹಾಗೂ ತಂತ್ರಾಂಶಗಳು ಕನ್ನಡವನ್ನು ಬೆಂಬಲಿಸುವುದಿಲ್ಲ ಹಾಗಾಗಿ ಕನ್ನಡದಲ್ಲಿ ರಸೀತಿ ನೀಡಲು ಸಾಧ್ಯವಾಗುತ್ತಿಲ್ಲ”.

ಜನರ ಒಳಿತಿಗಾಗಿ ಸರ್ಕಾರ ಮಾಡಿತ್ತಿರುವ ಯೋಜನೆಗಳಿಗೆ ಖರ್ಚಾಗುವುದು ಸಹ ನಮ್ಮ ತರಿಗೆ ಹಣ, ಆದರೂ ಸಹ ನಮ್ಮ ಸರ್ಕಾರಕ್ಕೆ ತನಗೆ ಯಾವ ಭಾಷೆಯಲ್ಲಿ ತಂತ್ರಾಂಶ ಅಥವಾ ಉಪಕರಣಗಳು ಬೇಕು ಎಂದು ಕೇಳಿ ಪಡೆಯುವ ಹೊಣೆಗಾರಿಕೆಯನ್ನು ತೋರಿಸದೇ ಇರುವುದು ಶೋಚನೀಯ. ಮೇಲಿನದು ಕೇವಲ ಒಂದು ಉದಾಹರಣೆ ಯಷ್ಟೇ, ಕೆ. ಎಸ್. ಆರ್. ಟಿ. ಸಿ ಸಂಸ್ಥೆಯಲ್ಲಿ ನೀವು ಟಿಕೆಟ್ ಕಾಯ್ದಿರಿಸದರೆ ನಿಮ್ಮ ಮೊಬೈಲಿಗೆ ಇಂಗ್ಲೀಷಿನಲ್ಲಿ ಮಾಹಿತಿ ಸಿಗುತ್ತದೆ, ರೈಲ್ವೆ ಇಲಾಖೆಯದೂ ಇದೇ ಕತೆ... ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ಮೇಲೆ ಹೇಳಿದಂತೆ ಪರಿಣಾಮಕಾರಿ ಆಡಳಿತಕ್ಕಾಗಿ ನಾವು ಯಾವುದೇ ತಂತ್ರಜ್ಞಾನ ಅಳವಡಿಸಿಕೊಂಡರೂ ಸಹ ಜನರ ಭಾಷೆಯಲ್ಲಿ ಸೇವೆ ದೊರೆಯದ ಹೊರತು ಆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಇಂದಿನ ಬಹುತೇಕ ಮೊಬೈಲುಗಳಲ್ಲಿ ಕನ್ನಡ ಭಾಷೆಯನ್ನ ಓದಲು ಹಾಗೂ ಬರೆಯಲು ಬೇಕಾಗಿರುವ ತಂತ್ರಾಂಶಗಳಾಗಲಿ, ಕೀಲಿಮಣೆಗಳಾಗಲಿ ದೊರಕುವುದಿಲ್ಲ. ಇದರ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗಿದ್ದ ಸರ್ಕಾರವೂ ಸಹ ಇಂಗ್ಲೀಷಿಗೆ ಮಣೆ ಹಾಕಿ ಕುಳಿತಿದೆ, ಸಾಮಾನ್ಯ ನಾಗರೀಕರ ಉಪಯೋಗಕ್ಕಾಗಿ ಆಡಳಿತದಲ್ಲಿ ಕನ್ನಡ ಬಳಸಬೇಕೆಂಬ ಕನಿಷ್ಠ ಪ್ರಜ್ಞೆಯನ್ನ ಸಹ ಮರೆತಿದೆ. ನಮ್ಮ ಭಾಷೆಯಲ್ಲಿ ನಮಗೆ ಸೇವೆ ಸಿಗದ ಹೊರತು ಆಡಳಿತ ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲ.