ಸೋಮವಾರ, ಏಪ್ರಿಲ್ 18, 2011

ಸೀಟ್ ಬೇಕು ಆದ್ರೆ ರಾಜ್ಯ ಬೇಡಾ....

ಡಾ. ಬಿ. ಆರ್. ಅಂಬೇಡ್ಕರ್ ಅವರ ಜನುಮ ದಿನದಂದು ಒಂದು ಸೋಜಿಗದ ವಿಷಯ ಹೊರಬಿದ್ದಿದೆ. ಪತ್ರಿಕೆಗಳಲ್ಲಿ ಇದರ ಬಗ್ಗೆ ವರದಿಯಾದರು ಸಹ, ಇದನ್ನ ಪತ್ರಿಕೆಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ವಿಷಯ ಏನಪ್ಪ ಅಂದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ ಸಿಂಗ್ ಅವರು, ಸದ್ಯಕ್ಕೆ ಅಸ್ಸಾಂ ರಾಜ್ಯದಲ್ಲಿ ನೆಲೆಸುತ್ತಿದ್ದಾರೆ ಅನ್ನೋದನ್ನ ದಾಖಲೆಗಳು ಹೇಳುತ್ತಿವೆ. ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ದಿಸ್ಪುರ್ ಕ್ಷೇತ್ರದ ಮತದಾರರಾಗಿದ್ದು, ಈ ಸಾರಿಯ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ವರದಿಯಾಗಿದೆ ಹಾಗೂ ಇದನ್ನ ಆ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಚುನಾವಣಾ ಅಧಿಕಾರಿ ಸಹ ನಿಜವೆಂದು ಹೇಳಿದ್ದಾರೆ.

ಮುಖ್ಯವಾದ ವಿಷ್ಯ ಏನಪ್ಪಾ ಅಂದ್ರೆ ಡಾ. ಮನಮೋಹನ್ ಸಿಂಗ್, ಅಸ್ಸಾಂನಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಬಂದಿದ್ದಾರೆ ಹಾಗೂ ಹಿಂದೆಯೂ ಆಯ್ಕೆಯಾಗಿದ್ದರು. ಮತದಾನ ಪ್ರತಿಯೊಬ್ಬ ನಾಗರೀಕನ ಮೂಲ ಕರ್ತವ್ಯ ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಜನಪ್ರಿಯ ಸರ್ಕಾರವನ್ನು ಆರಿಸಲು ಪ್ರತಿಯೊಬ್ಬ ಪ್ರಜೆಗೂ ನೀಡಲಾಗಿರುವ ಪವಿತ್ರ ಹಕ್ಕು ಅನ್ನೋದನ್ನ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮರೆತು ಬಿಟ್ಟಿದ್ದಾರೆಯೇ?? ಪ್ರಜ್ಞಾವಂತ ಜನರು ಚುನಾವಣೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳುತ್ತಿರವ ಈ ಸಮಯದಲ್ಲಿ ಒಬ್ಬ ರಾಜಕಾರಣಿ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮನಮೋಹನ್ ಸಿಂಗ್ ಅವರಿಂದ ಇಂತಹ ನಡೆ ಸರಿಯಾದುದಲ್ಲ.

ರಾಜ್ಯಸಭೆ ಸೀಟ್ ಬೇಕು ಆದರೆ ರಾಜ್ಯ ಬೇಡಾ:
ಇಲ್ಲಿ ಮನಮೋಹನ್ ಸಿಂಗ್ ಮತದಾನ ಮಾಡಿಲ್ಲ ಅನ್ನೋದು ಒಂದು ಕಡೆಯಾದರೆ, ವಿವಿಧ ರಾಜ್ಯಗಳ ರಾಜ್ಯಸಭಾ ಸೀಟುಗಳು ಹೊರ ರಾಜ್ಯದವರನ್ನು ಹಿಂಬಾಗಿಲ ಮೂಲಕ ರಾಜ್ಯಸಭೆಗೆ ಕಳಿಸುತ್ತಿರುವ ಕ್ರಿಯೆ ಗಾಬರಿ ಹುಟ್ಟಿಸುವಂತಹುದು. ರಾಷ್ಟ್ರೀಯ ರಾಜಕೀಯ ಪಕ್ಷಗಳು ತಮ್ಮ ನಾಯಕರನ್ನು ಓಲೈಸಲೋ ಅಥವಾ ಬೇಕಾದವರನ್ನು ಮೇಲ್ಮನೆಗೆ ಕಳುಹಿಸಲು ಅಮೂಲ್ಯವಾದ ರಾಜ್ಯಸಭಾ ಸೀಟುಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯಸಭೆಗೆ ಕಳುಹಿಸುವ ಪ್ರತಿನಿಧಿಗಳಿಗೆ ರಾಜ್ಯದ ಬಗ್ಗೆ ಏನೆಂದರೇ ಎನೂ ಗೊತ್ತಿರುವುದಿಲ್ಲಾ ಅಥವಾ ರಾಜ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಅನ್ನಿಸದವರನ್ನು ಆರಿಸಿ ಕಳುಹಿಸುತ್ತಾರೆ. ಈ ಮೂಲಕ ರಾಜ್ಯಸಭೆಯ ಮೂಲ ಉದ್ದೇಶವನ್ನೇ ಹಾಳುಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಮ್ಮ ರಾಜ್ಯದಲ್ಲೇ ಬಿಜೆಪಿಯಿಂದ ವೆಂಕಯ್ಯ ನಾಯ್ಡು, ಉದ್ಯಮಿ ರಾಜೀವ್ ಚಂದ್ರಶೇಖರ್, ಚಿತ್ರನಟಿ ಹೇಮಾ ಮಾಲಿನಿಯನ್ನು ಆರಿಸಿ ಕಳುಹಿಸಿದರೆ, ಜೆಡಿಎಸ್ ಪಕ್ಷ ಎಂ.ಎಂ. ರಾಮಸ್ವಾಮಿ ಎಂಬ ಹೊರನಾಡಿನ ಉದ್ಯಮಿಯನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿದೆ.

ಇಲ್ಲಿಂದ ಆರಿಸಿ ಹೋಗುವ ಯಾವ ಹೊರ ರಾಜ್ಯದ ರಾಜ್ಯಸಭಾ ಸದಸ್ಯರು ನಮ್ಮ ನಾಡಿಗಾಗಿ ದುಡಿದಿದ್ದಾರೆ? ನಾಡಿನ ಯಾವ ಸಮಸ್ಯೆಗೆ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ? ಯಾವ ಅಂತರ್ ರಾಜ್ಯ ಸಮಸ್ಯೆಗಳನ್ನು ಪರಿಹರಿಸಿದ್ದಾರೆ? ಎಷ್ಟು ಸರ್ತಿ ನಾಡಿನ ಪರವಾಗಿ ರಾಜ್ಯ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ? ಇವಕೆಲ್ಲ ಬಹುಷಃ ಇಲ್ಲಾ ಅನ್ನುವ ಉತ್ತರವೇ ದೊರೆಯುತ್ತದೆ. ಹೈಕಮಾಂಡಿನ ಧಣಿಗಳನ್ನು ತಣಿಸುವಲ್ಲೇ ನಿರತರಾಗಿರುವ ಜನರಿಂದ ನಮ್ಮ ನಾಡಿಗೆ ಆಗಿರುವ ಉಪಯೋಗವಾದರು ಏನು???? ಇದಕೆಲ್ಲ ಪರಿಹಾರ ನಮ್ಮ ಜನರ ಕೈಯಲ್ಲೇ ಇದೇ ಅನ್ನೋದನ್ನ ಮತ್ತೆ ಹೇಳಬೇಕಾಗಿಲ್ಲ ಅಲ್ವೆ?

ಸೋಮವಾರ, ಏಪ್ರಿಲ್ 11, 2011

ರಾಷ್ಟ್ರೀಯ ಪಕ್ಷಗಳ ಒಡೆದು ಆಳುವ ನೀತಿ

ಕಳೆದ ಎರಡು ವಾರಗಳಲ್ಲಿ ನಡೆದಿರುವ ಸುದ್ದಿಗಳ ಬಗ್ಗೆ ನಿಮ್ಮ ಗಮನ ಹರಿಸಲು ಇಷ್ಟಪಡುತ್ತೇನೆ. ಪತ್ರಿಕೆಗಳಲ್ಲಿ ಕೇವಲ ಸುದ್ದಿ ಎನ್ನುವಂತೆ ಇವುಗಳನ್ನು ಬಿತ್ತರಿಸಲಾಯಿತು, ಆದರೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ.

ಮರುಚುನಾವಣೆ ಹಾಗೂ ತೆಲುಗಿನಲ್ಲಿ ಭಾಷಣ:
ಮೊನ್ನೆ ನಡೆದ ಮರುಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡವು, ಅದಕ್ಕಾಗಿಯೇ ಹೊರರಾಜ್ಯದ ಚಲನಚಿತ್ರ ನಟ/ನಟಿಯರನ್ನು ಕರೆಸಿದ್ದವು. ಮತದಾರನನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಿರುವ ತಪ್ಪುಗಳು ಮಾತ್ರ ಬಹಳ ದೊಡ್ಡದಾಗಿವೆ. ಬಂಗಾರ ಪೇಟೆಯಲ್ಲಿ ನಡೆದ ಉಪಚುನಾವಣೆಗಾಗಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಲಗು ಚಿತ್ರನಟ ಚಿರಂಜೀವಿಯನ್ನು ಬಳಸಿಕೊಂಡಿತ್ತು. ಅವರು ಸಹ ಭರ್ಜರಿಯಾಗಿ ತೆಲುಗಿನಲ್ಲಿ ಭಾಷಣ ಮಾಡಿ ಹೊರಟು ಹೋದರು. ಇದರಲ್ಲಿ ತಪ್ಪೇನು ಅಂತೀರಾ? ಮತದಾರನನ್ನು ಓಲೈಸುವ ಭರದಲ್ಲಿ ಕರ್ನಾಟಕದ ವಿವಿಧ ಭಾಷಿಕರಲ್ಲಿ ಒಡಕುಂಟು ಮಾಡಲಾಗುತ್ತಿದೆ. ಮೊನ್ನೆ ನಡೆದಿದ್ದು ಸಹ ಅದೇ, ಹಲವು ಶತಮಾನ ಅಥವಾ ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ತೆಲುಗು ಭಾಷಿಕರು ಕನ್ನಡದವರೇ ಆಗಿಹೋಗಿದ್ದಾರೆ. ಆದರೆ ನೀವು ತೆಲುಗರು ನೀವು ಕನ್ನಡಿಗರಲ್ಲಾ ಅಂತಾ ತೋರಿಸೋ ಪ್ರಯತ್ನಗಳೇ ಚಿರಂಜೀವಿ ಯಂತಹ ತೆಲುಗು ನಟರನ್ನು ಕರೆದುಕೊಂಡು ಬಂದು ಕರ್ನಾಟಕದಲ್ಲಿ ಭಾಷಣ ಮಾಡಿಸುವುದು. ಕರ್ನಾಟಕದ ಜನರನ್ನ ಓಲೈಸಲು ಆಂಧ್ರಪ್ರದೇಶದ ಕರಾವಳಿ ತೀರದ ಒಬ್ಬ ನಟ ಬಂದು ನೀವು ಕನ್ನಡಿಗರಲ್ಲಾ ಎಂದು ಸಂದೇಶ ನೀಡಿಸುವ ಕೆಲಸ ಮಾಡುತ್ತಿರುವ ಪಕ್ಷಗಳು ಮಾಡುತ್ತಿರುವುದಾದರು ಏನು ಅನ್ನೋದನ್ನ ತಾವೇ ಪ್ರಶ್ನಿಸಿಕೊಳ್ಳಲಿ.

ಹಾಗಂತ ಮತದಾರರೇನು ದಡ್ಡರಲ್ಲ, ಚಿರಂಜೀವಿ ಕೇವಲ ಒಬ್ಬ ನಟ ಅನ್ನೋ ಕಾರಣಕ್ಕೆ ಬಂದು ಸೇರುತ್ತಾರೆಯೇ ಹೊರತು, ಆವರು ಮಾಡುವ ತೆಲುಗು ಭಾಷಣ ಕೇಳಿ, ಕಾಂಗ್ರೆಸ್ ಪಕ್ಷಕ್ಕೆ ಓಟ್ ನೀಡುತ್ತಾರೆ ಅನ್ನೋದು ಹಾಸ್ಯಾಸ್ಪದ ಅನ್ನಿಸುತ್ತೆ. ನಮ್ಮ ರಾಜ್ಯದ ಏಳಿಗೆಯನ್ನೇ ಮರೆತಿರುವ ರಾಷ್ಟ್ರೀಯ ಪಕ್ಷಗಳು ಕನಿಷ್ಠ ಪಕ್ಷ ಸಾಮರಸ್ಯದಿಂದ ಬದುಕುತ್ತಿರುವ ಜನರನ್ನು ಭಾಷೆಯ ಹೆಸರಲ್ಲಿ ಒಡೆದು ಓಟ್ ಬ್ಯಾಂಕ್ ಗಳನ್ನಾಗಿ ಮಾಡದಿದ್ದರೆ ಅಷ್ಟರ ಮಟ್ಟಿಗೆ ಜನರಿಗೆ ಒಳಿತನ್ನ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳೋಣ.

ಕನ್ನಡಿಗ ಮೇಯರ್ ಗೆ ಚಪ್ಪಲಿ ತೋರಿಸಿದ್ದ ಮಹಿಳೆ ಈಗ ಬೆಳಗಾವಿ ಮೇಯರ್:

ಬಹುಷಃ ಇಂತಹ ಘಟನೆಗಳು ಕರ್ನಾಟಕದಲ್ಲಿ ಮಾತ್ರ ನಡೆಯುವುದಕ್ಕೆ ಸಾಧ್ಯ ಅನ್ನಿಸುತ್ತೆ. ಎಂಇಎಸ್ ನಂತಹ ಕೆಟ್ಟ ಸಂಘಟನೆ ಹಲವಾರು ದಶಕಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ತನ್ನ ಹಿತಾಸಕ್ತಿಗಾಗಿ ಕನ್ನಡ ಹಾಗೂ ಮರಾಠಿಗರಲ್ಲಿ ವಿಷದ ಬೀಜ ಬಿತ್ತುತ್ತಾ ಬಂದಿದೆ, ಇದರ ಜೊತೆ ಜೊತೆಗೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ತರಲೆ ಮಾಡುತ್ತಾ ತನ್ನ ಅಸ್ತಿತ್ವ ಕಾಪಾಡಿಕೊಂಡು ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರೇ ಸಂಘಟನೆಗಳು ನಡೆಸಿದ ನಿರಂತರ ಹೋರಾಟದಿಂದಾಗಿ ಎಂಇಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಈ ಸಂಘಟನೆಗೆ ಸೇರಿದ ಕೆಲವು ಸದಸ್ಯರು ಈ ಸರ್ತಿಯ ಮಹಾನಗರ ಪಾಲಿಕೆಯಲ್ಲಿ ಗೆದ್ದು ಬಂದಿದೆ, ಗಮನಾರ್ಹ ಸಂಗತಿ ಎಂದರೆ ಈ ಸಂಖ್ಯೆ ತನ್ನ ಪಕ್ಷದ ಅಭ್ಯರ್ಥಿಯನ್ನು ಮೇಯರ್ ನನ್ನಾಗಿ ಮಾಡುವಷ್ಟು ದೊಡ್ಡದಲ್ಲ.

ಈ ಎಂಇಎಸ್ ಸಂಘಟನೆಯ ಮಹಿಳೆ ಈಗಾ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ. ದುರಂತವೆಂದರೆ ಈ ಮಹಿಳೆ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ತಯಾರಿಯ ಸಭೆಯಲ್ಲಿ ಆಗಿನ ಮೇಯರ್ ಗೆ ಚಪ್ಪಲಿ ತೋರಿಸಿ, ಸಮ್ಮೇಳನ ನಡೆಸಬಾರದು ಎಂದು ತರಲೆ ಮಾಡಿದ್ದರು. ಎಂಇಎಸ್ ಸಂಘಟನೆಯ ಈ ಮಹಿಳೆ ಈಗ ಮೇಯರ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಾರಣ ಎಂಇಎಸ್ ಗೆ ತನ್ನ ಅಭ್ಯರ್ಥಿಯನ್ನು ಮೇಯರ್ ಮಾಡುವಷ್ಟು ಸಂಖ್ಯಾಬಲವಿಲ್ಲ, ಹಾಗಾಗಿ ನಮ್ಮ ರಾಜ್ಯದ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಅಥವಾ ಅಲ್ಲಿನ ರಾಜಕೀಯ ನಾಯಕರ ಬೆಂಬಲವಿಲ್ಲದೆ ಮೇಯರ್ ಆಗೋದಕ್ಕೆ ಸಾಧ್ಯವಾ??? ಇದು ಬೆಳಗಾವಿ ಜಿಲ್ಲೆಯಲ್ಲಿ ಇರುವ ತಾಲುಕೂ ಹಾಗೂ ಜಿಲ್ಲಾ ಪಂಚಾಯತ್ ಗಳಲ್ಲಿ ಅಧಿಕಾರ ಸ್ಥಾಪಿಸಲು ರಾಜಕೀಯ ಪಕ್ಷಗಳು ಸಹಾಯ ಮಾಡಿರಬಹುದಾ ಅನ್ನೋದು ಪ್ರಶ್ನೆ?

ಇದೇ ಎಂಇಎಸ್ ಸಂಘಟನೆಯ ಬಗ್ಗೆ ಏಪ್ರಿಲ್ ೧೦ನೇ ತಾರೀಕು ವಿ.ಕ ದಲ್ಲಿ ಒಂದು ವರದಿ ಪ್ರಕಟವಾಗಿದೆ. ವರದಿಯ ಸಾರಾಂಶವೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಮಾಡಲಾಗುತ್ತಿರುವ ಕಳಸಾ ನಾಲಾ ಯೋಜನೆಯ ಬಗ್ಗೆ ವರದಿ ತಯಾರಿಸಿ, ಗೋವಾ ಸರ್ಕಾರಕ್ಕೆ ನೀಡಿ ಯೋಜನೆ ಜಾರಿಗೆ ಬರದಂತೆ ತಡೆಯುವುದು. ಇಂತ ಹೀನ ಕೆಲಸಗಳಲ್ಲಿ ತೊಡಗಿರುವ ಎಂಇಎಸ್ ಸಂಘಟನೆಯಿಂದ ನಮ್ಮ ನಾಡಿಗೆ ಮಾರಕ. ಇಂತಹ ಸಂಘಟನೆಗಳೊಂದಿಗೆ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಮಹಾನಗರ ಪಾಲಿಕೆಯಲ್ಲಿ(??) ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥವನ್ನಲ್ಲದೇ ರಾಜ್ಯದ ಬಗ್ಗೆಯೂ ಒಂದಷ್ಟೂ ಕಾಳಜಿ ತೋರಿಸಬೇಕು. ಇಲ್ಲದಿದ್ದರೆ ಜನರೇ ಇವರಿಗೆಲ್ಲಾ ಸರಿಯಾಗಿ ಪಾಠ ಕಲಿಸುತ್ತಾರೆ ಅನ್ನೋದು ನಮ್ಮ ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕು.