ಸೋಮವಾರ, ಅಕ್ಟೋಬರ್ 22, 2012

ಒಂದೇ ನಾಡು... ಒಂದೇ ಕುಲವು...

ಇನ್ನೇನು ನವಂಬರ್ ೧ ಬಂದೇ ಬಿಟ್ಟಿತು, ಕನ್ನಡಿಗರ ಪಾಲಿಗೆ ಮನೆ ಹಬ್ಬದ ತರಹ ಇರುವ “ಕನ್ನಡ ರಾಜ್ಯೋತ್ಸವ” ಎಲ್ಲಡೆ ಆಚರಿಸಲ್ಪಡುತ್ತದೆ. ಸುಮಾರು ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳೆಲ್ಲ ಒಂದಾಗಿ “ಕನ್ನಡ ನಾಡು” ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನವಿದು. ನಮ್ಮ ಈ ರಾಜ್ಯೋತ್ಸವದ ಹಿಂದೆ ಹಲವು ದಶಕಗಳ ಕಡು ಹೋರಾಟದ ಕಥೆಯಿದೆ. ಈ ಏಕೀಕರಣದ ಹೋರಾಟದಲ್ಲಿ ಹಲವಾರು ಮಹನೀಯರು ತಮ್ಮ ಜೀವನವನ್ನೇ ಇದಕ್ಕಾಗಿ ಮುಡಿಪಾಗಿಟ್ಟಿದ್ದರು. ಹಾಗಿದ್ರೆ ಈ ಏಕೀಕರಣದ ಕಥೆ ಏನು ಅನ್ನೋದನ್ನ ನೋಡೋಣ..

ವಿಜಯನಗರ ಸಾಮ್ರಾಜ್ಯದ ಪತನವಾದ ನಂತರ, ಕನ್ನಡ ದೇಶವು ಹಲವು ಸಾಮಂತರ ಹಾಗೂ ರಾಜರುಗಳ ನಡುವೆ ಹಂಚಿಹೋಗಿತ್ತು. ಇದಾದ ನಂತರ ಭಾರತಕ್ಕೆ ಬಂದ ಬ್ರಿಟೀಷರ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಇದರಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನ, ನಿಜಾಮನ ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಪ್ರಾಂತ್ಯಗಳು ಪ್ರಮುಖವಾಗಿದ್ದವು. ಗಮನಿಸಬೇಕಾದ ಅಂಶವೆಂದರೆ ೨/೩ ನೇ ಭಾಗದಷ್ಟು ಕನ್ನಡಿಗರು ಮೈಸೂರು ಪ್ರಾಂತ್ಯದಿಂದ ಹೊರಗಿದ್ದರು. ಬಾಂಬೆ ಪ್ರಾಂತ್ಯದಲ್ಲಿ ಮರಾಠಿ ಆಡಳಿತ ಭಾಷೆಯಾಗಿತ್ತು, ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಆಡಳಿತ ಭಾಷೆಯಾಗಿತ್ತು, ನಿಜಾಮರ ಆಡಳಿತದಲ್ಲಿ ಉರ್ದು ಭಾಷೆ. ಹೀಗಾಗಿ ಕನ್ನಡಿಗರಿಗೆ ತಾವು ಅನಾಥರಾಗಿದ್ದೇವೆ, ತಮ್ಮ ಮೇಲೆ ಹೇರಿಕೆಯಾಗುತ್ತಿದೆ ಅನ್ನೋ ಭಾವನೆ ಜಾಗೃತವಾಗ ತೊಡಗಿತು. ಬೇರೆಯವರ ಹಂಗಿನಲ್ಲಿ ಪರಕೀಯರಂತೆ ಬಾಳುತ್ತಿದ್ದೇವೆ ಅನ್ನೋ ಭಾವನೆ ಮನೆಮಾಡಿತು. ಕನ್ನಡಿಗರಿಗೆ ತಮ್ಮದೇ ಆದ ಒಂದು ರಾಜ್ಯವಿರಬೇಕು, ಅಲ್ಲಿ ಕನ್ನಡಿಗರಿಗೆ ಎಲ್ಲಾ ಹಕ್ಕುಗಳು ದೊರೆಯುವಂತಿರಬೇಕು ಅನ್ನೋ ಚರ್ಚೆಗಳು ನಡೆಯತೊಡಗಿದವು. ಇದುವೇ ಮುಂದೆ ಅಖಂಡ ಕರ್ನಾಟಕದ ಏಕೀಕರಣದ ಹೋರಾಟಕ್ಕೆ ನಾಂದಿಯಾಯಿತು. ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಹಾಗೂ ಅನೇಕ ಮಹನೀಯರು ಈ ಚಳುವಳಿಗೆ ಹೆಗಲುಕೊಟ್ಟರು.

(ಚಿತ್ರ ಕೃಪೆ: http://www.kamat.com/kalranga/kar/)

೧೮೫೬ರಲ್ಲಿ ಕರ್ನಾಟಕ ಏಕೀಕರಣದ ಮಾತುಗಳು ಕೇಳಿಬರಲು ಶುರುವಾದವು, ಆದರೆ ಇದಕ್ಕೆ ಬಲ ಬಂದಿದ್ದು ೧೮೯೦ ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದ ನಂತರ. ೧೯೦೩ ರಲ್ಲಿ ಸಂಘದಲ್ಲಿ ಭಾಷಣ ಮಾಡಿದ ಬೆನಗಲ್ ರಾಮರಾಯರು ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯದ ಹಾಗೂ ಮುಂಬೈ ಪ್ರಾಂತ್ಯದ ಕನ್ನಡ ಭಾಗಗಳನ್ನು ಕೂಡಿಸಿ ಅಖಂಡ ಕರ್ನಾಟಕವನ್ನು ಕಟ್ಟುವ ಯೋಚನೆಯನ್ನು ಸಂಘದ ಮುಂದಿಟ್ಟರು. ನಂತರ ಚಳುವಳಿಗೆ ಒಂದು ಮೂರ್ತ ರೂಪ ಕೊಟ್ಟಿದ್ದು ಕರ್ನಾಟಕದ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು. ಇದೇ ಸಮಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ನವರು ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇದಾದ ನಂತರ ಪರಿಷತ್ತಿನ ಆಶ್ರಯದಲ್ಲಿ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ನಡೆಸಿ ಏಕೀಕರಣದ ಬೇಡಿಕೆಯನ್ನು ಒತ್ತಾಯಿಸಲಾಗುತ್ತಿತ್ತು. ಸಾಹಿತ್ಯ ಪರಿಷತ್ತಿನ ಸಭೆಗಳು ರಾಜಕಾರಣಿಗಳ ಗಮನ ಸೆಳೆಯುವಲ್ಲಿ ಸಫಲವಾಯಿತು. ೧೯೨೦ರಲ್ಲಿ ಧಾರವಾಡದಲ್ಲಿ ಪ್ರಥಮ ಕರ್ನಾಟಕ ರಾಜಕೀಯ ಪರಿಷತ್ತು ನಡೆಸಿ ದೇಶಮಟ್ಟದ ಗಮನ ಸೆಳೆಯಲಾಯಿತು. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ಕಾಲದಲ್ಲೇ ಸರ್. ಸಿದ್ದಪ್ಪಾ ಕಂಬಳಿಯವರ ಅಧ್ಯಕ್ಷತೆಯಲ್ಲಿ ಪ್ರಥಮ ಏಕೀಕರಣ ಸಮ್ಮೇಳನವನ್ನು ಸೇರಿತು. ಇದೇ ಸಮ್ಮೇಳನದಲ್ಲಿ ಹುಯಿಲುಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು” ಗೀತೆಯನ್ನು ಹಾಡಲಾಯಿತು. ಇದಾದ ನಂತರ ೧೯೪೬ ರ ವರೆಗೆ ಈ ಸಮ್ಮೇಳನಗಳನ್ನು ವಿವಿಧ ಗಣ್ಯರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ೧೯೨೬ರಲ್ಲಿ ಹಿಂದುಸ್ಥಾನೀ ಸೇವಾದಳವು ಸಹಿ ಸಂಗ್ರಹ ಚಳುವಳಿಯನ್ನು ಮಾಡಿ ಏಕೀಕರಣದ ಪರ ೩೬,೦೦೦ ಜನರ ಸಹಿ ಪಡೆಯಿತು. ಇದರ ಪರಿಣಾಮವಾಗಿ ಏಕೀಕರಣ ರಾಜಕೀಯ ವಿಷಯವಾಯಿತು. ೧೯೩೭ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಏಕೀಕರಣ ತನ್ನ ಗುರಿಯಂದು ಹೇಳಿತ್ತು. ಪ್ರಜಾ ಸಂಯುಕ್ತ ಪಕ್ಷವೂ ಸಹ ೧೯೩೭ರಲ್ಲಿ ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿತು. ೧೯೪೭ರಲ್ಲಿ ಮುಂಬೈ ಹಾಗೂ ಮದ್ರಾಸ್ ವಿಧಾನಸಭೆಗಳು ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿದವು. ೧೯೪೭ರ ಡಿಸೆಂಬರ್ ನಲ್ಲಿ ಕಾಸರಗೋಡಿನಲ್ಲಿ ಡಾ| ದಿವಾಕರರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನವು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕರ್ನಾಟಕ ಏಕೀಕರಣವಾಗದ ಬಗ್ಗೆ ಅಸಮಾಧಾನ ಸೂಚಿಸಿತು. 


ಆದರೆ ಕೇಂದ್ರ ಸರ್ಕರಾ ನೇಮಿಸಿದ್ದ ಧಾರ್ ಆಯೋಗವು ಭಾಷಾವಾರು ಪ್ರಾಂತ್ಯದ ರಚನೆಯನ್ನು ವಿರೋಧಿಸಿತು. ಆಗ ಕಾಂಗ್ರೆಸ್ ಧಾರ್ ವರದಿಯ ಬಗ್ಗೆ ಪರಿಶೀಲನೆಗಾಗಿ ಜವಾಹರ್ ಲಾಲ್ ನೆಹರು, ವಲ್ಲಭಭಾಯಿ ಪಟೇಲ್ ಹಾಗೂ ಪಟ್ಟಾಭಿ ಅವರ ಸಮಿತಿಯೊಂದನ್ನು ರಚಿಸಿತು. ಆದರೆ ಈ ಸಮಿತಿಯು ಸಹ ಅಂಧ್ರಪ್ರದೇಶವನ್ನು ಹೊರತು ಪಡಿಸಿ ಬೇರೆ ಭಾಷಾವಾರು ಪ್ರಾಂತಗಳ ಬೇಡಿಕೆಯನ್ನು ಬೆಂಬಲಿಸಲಿಲ್ಲ. ಸ್ವಾಂತಂತ್ಯಕ್ಕಿಂತ ಮುಂಚೆ ೨೦ ಆಡಳಿತಕ್ಕೆ ಸೇರಿದ್ದ ಕರ್ನಾಟಕ ಸ್ವಾತಂತ್ರ್ಯದ ನಂತರ ೫ ಪ್ರಮುಖ ಆಡಳಿತಕ್ಕೆ ಬಂತು. ಆಗ ಮೈಸೂರು ಸಂಸ್ಥಾನದ ಜೊತೆ ಇತರೆ ಭಾಗಗಳನ್ನು ಸೇರಿಸಲು ಮೈಸೂರು ಹಾಗೂ ಕೊಡಗಿನ ಕೆಲವರು ಅಕ್ಷೇಪವೆತ್ತಿದರು. ಆಗ ಗೊರೂರು ರಾಮಸ್ವಾಮಯ್ಯಂಗಾರ್, ಕುವೆಂಪು, ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮುಂತಾದ ನಾಯಕರುಗಳು ಜನಾಭಿಪ್ರಾಯದ ಪರಿವರ್ತನೆಗೆ ಕಾರಣರಾದರು.

೧೯೫೩ರಲ್ಲಿ ಏಕೀಕರಣಕ್ಕಾಗಿ ಸತ್ಯಾಗ್ರಹ ನಡೆಸಿ ೫೦೦೦ ಜನ ಬಂಧಿತರಾದರು. ಅದೇ ವರ್ಷ ಪೊಟ್ಟಿ ಶ್ರೀರಾಮುಲು ಉಪವಾಸ ನಡೆಸಿ ತೀರಿಕೊಂಡಾಗ ಆಂಧ್ರ ಪ್ರಾಂತ ರಚನೆಯಾಗಿ, ಬಳ್ಳಾರಿ ಜಿಲ್ಲೆಯ ಏಳು ತಾಲೂಕುಗಳು ಮೈಸೂರು ರಾಜ್ಯಕ್ಕೆ ಸೇರಿತು. ಇಷ್ಟಾದರೂ ಕರ್ನಾಟಕ ಒಂದಾಗುವ ಲಕ್ಷಣಗಳು ಕಾಣಿಸುತ್ತಿದ್ದಿಲ್ಲ, ಆಗ ಜನರ ಸಿಟ್ಟು ಎಷ್ಟರ ಮಟ್ಟಿಗೆ ಇತ್ತೆಂದರೆ ಧಾರವಾಡ ಹಾಗೂ ಹುಬ್ಬಳ್ಳಿಗಳಲ್ಲಿ ವಿಧಾನಸಭೆಗೆ ಉಪಚುನಾವಣೆಗಳಾದಾಗ ಕಾಂಗ್ರೆಸ್ ಸೋತು ಏಕೀಕರಣದ ಪರ ಅಭ್ಯರ್ಥಿಗಳು ಗೆದ್ದರು. ಇದೇ ಸಮಯದಲ್ಲಿ ಹುಬ್ಬಳ್ಳಿಯ ಬಳಿ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು ಅಖಂಡ ಕರ್ನಾಟಕಕ್ಕೆ ಆಗ್ರಹಿಸಿ ಆಮರಣ ಉಪವಾಸ ಕೈಗೊಂಡರು. ಅದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕೆ.ಪಿ.ಸಿ.ಸಿ ಸಭೆಯ ವೇಳೆ ಏಕೀಕರಣಕ್ಕೆ ಆಗ್ರಹಿಸಿ ಜನರು ಕಲ್ಲು ತೂರಿ ಪ್ರತಿಭಟಿಸಿದರು. ಇದಾದ ನಂತರ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರ ರಾಜ್ಯ ಪುನರ್ಘಟನಾ ಅಯೋಗವನ್ನು ನೇಮಿಸಿತು. ಈ ಆಯೋಗ ಸಲ್ಲಿಸಿದ ವರದಿಯ ಪ್ರಕಾರ ಏಕೀಕೃತ ಕರ್ನಾಟಕ ೧೯೫೬ರ ನವಂಬರ್ ೧ಕ್ಕೆ ಅಸ್ತಿತ್ವಕ್ಕೆ ಬಂತು. ಮೈಸೂರ ಎಂಬ ಹೆಸರಿದ್ದ ರಾಜ್ಯಕ್ಕೆ ೧೯೭೩ರ ನವೆಂಬರ್ ೧ರಂದು “ಕರ್ನಾಟಕ” ಎಂದು ಹೆಸರಿಡಲಾಯಿತು. ಈ ಸಂಧರ್ಭದಲ್ಲಿ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರಿಗೆ ನಮ್ಮೆಲ್ಲರ ನಮನ ಸಲ್ಲಲೇಬೇಕು. ಈ ಮಹನೀಯರು ನಮಗೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದುಕೊಂಡು ಹೋಗಬೇಕು ಹಾಗೂ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕಡೆಗೆ ನಮ್ಮ ನಡೆ ಇರಬೇಕು.

4 ಕಾಮೆಂಟ್‌ಗಳು: