ಬುಧವಾರ, ಜನವರಿ 19, 2011

ಕೃಷ್ಣಾ ನದಿ ನೀರು ಹಂಚಿಕೆ: ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ನೀರಿನ ಬಗ್ಗೆ ಧ್ವನಿ ಎತ್ತೋಣ

2ನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಬಂದಾಗಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆಯೇ ಅಥವಾ ನ್ಯಾಯ ಸಿಕ್ಕಿದೆಯೇ ಅನ್ನುವ ವಾದಗಳು ಎಲ್ಲಾ ಕಡೆ ನಡೆಯುತ್ತಲಿವೆ. ಇದೇ ವಿಷಯವಾಗಿ ಜನವರಿ 14 ರಂದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿರುವ ಶ್ರೀ ಮತ್ತೀಹಳ್ಳಿ ಮದನ ಮೋಹನ ಅವರು ಕೃಷ್ಣಾ ತೀರ್ಪಿನ ಬಗ್ಗೆ “ರಾಜ್ಯದ ಹಿತ ಕಾಪಾಡಿದ ಕೃಷ್ಣಾ ತೀರ್ಪು” ಎಂಬ ಲೇಖನದಲ್ಲಿ ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಹಾಗೆಯೇ ಜನವರಿ 19 ರಂದು ವಿಜಯ ಕರ್ನಾಟಕದಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು “ಕೃಷ್ಣಾ ಐತೀರ್ಪು: ಕರ್ನಾಟಕಕ್ಕೆ ಲಾಭವಾಗಿದೆಯೇ?” ಎಂಬ ತಮ್ಮ ಲೇಖನದಲ್ಲಿ ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಕುರಿತು ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಇವರಿಬ್ಬರ ಲೇಖನದ ಸಾರಾಂಶವೆಂದರೆ ರಾಜ್ಯಕ್ಕೆ ಕೃಷ್ಣಾ ತೀರ್ಪಿನಲ್ಲಿ ಅನ್ಯಾಯ ಆಗಿಲ್ಲ ಹಾಗೂ ರಾಜ್ಯಕ್ಕೆ ಸಿಗದಿರುವ ನೀರಿನ ಬಗ್ಗೆ ಮರಗುವುದನ್ನು ಬಿಟ್ಟು, ಸಿಕ್ಕಿರುವ ನೀರನ್ನ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಇಬ್ಬರು ಲೇಖಕರು ತೀರ್ಪು ರಾಜ್ಯದ ಪರವಾಗಿದೆ ಅನ್ನುವ ವಾದದಲ್ಲಿ ಕೆಲವು ವಿಷಯಗಳಲ್ಲಿ ಜಾಣ ಮೌನ ಪ್ರದರ್ಶಿಸಿದ್ದಾರೆ. ಈ ಎರೆಡೂ ಲೇಖನಗಳಲ್ಲಿ ಮಾಜಿ ನೀರಾವರಿ ಸಚಿವ ಶ್ರೀ ಎಚ್. ಕೆ. ಪಾಟೀಲ್ ಅವರನ್ನ ಗುರಿಯಾಗಿಸಿ ಉತ್ತರ ನೀಡಿರುವುದು, ರಾಜಕೀಯ ಪ್ರೇರಿತ ಬರಹಗಳಾಗಿ ಕಾಣಿಸಿಕೊಳ್ಳುವ ಅನುಮಾನ ಮೂಡುತ್ತದೆ.

ಈ ಇಬ್ಬರು ಅಂಕಣಕಾರರು ಹೇಳುವುದೇನೆಂದರೆ ಹಿಂದೆ ಬಚಾವತ್ ಆಯೋಗ ನೀಡಿದ್ದ ತೀರ್ಪಿನಲ್ಲಿ ರಾಜ್ಯಕ್ಕೆ ಸಿಕ್ಕಿದ್ದ 734 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ, ಹಾಗಾಗಿ ಈಗ ನಮಗೆ ನ್ಯಾಯವಾಗಿ ಸಿಗಬೇಕಾಗಿದ್ದ 101 ಟಿಎಂಸಿ ನೀರು ಕಡಿಮೆ ಕೊಟ್ಟರೂ ಇದರ ಬಗ್ಗೆ ತಕರಾರು ಎತ್ತಬೇಕಾಗಿಲ್ಲ!!. ಈ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲಾಗದಿದ್ದದ್ದು, ನಮ್ಮ ರಾಜ್ಯವನ್ನು ಆಳಿರುವ ಎಲ್ಲಾ ರಾಜಕೀಯ ಪಕ್ಷದ ಸರ್ಕಾರಗಳ ವೈಫಲ್ಯ, ಅದಕ್ಕಾಗಿ ನಮಗೆ ನ್ಯಾಯವಾಗಿ ಸಿಗಬೇಕಾಗಿರುವ ನೀರು ಬಿಟ್ಟುಕೊಡುವುದು ಎಷ್ಟು ಸರಿ? ಇಲ್ಲಿ ರಾಜ್ಯ ಸರ್ಕಾರದ ಯೋಜನಾ ಅನುಷ್ಠಾನ ವೈಫಲ್ಯ ಒಂದು ಕಡೆಯಾದರೆ, ನದಿ ನೀರು ಹಂಚಿಕೆಯಲ್ಲಿ ನಮಗೆ ಸಿಗಬೇಕಾಗಿದ್ದಕ್ಕಿಂತ ಕಡಿಮೆ ನೀರು ಸಿಕ್ಕಿರುವುದು ಇನ್ನೊಂದು ಕಡೆ. ಈ ಇಬ್ಬರು ಅಂಕಣಕಾರರು ಹೇಳಿರುವಂತೆ ನಮ್ಮ ರಾಜ್ಯ ಸರ್ಕಾರ ಈ ಕೂಡಲೇ ಆದ್ಯತೆಯ ಮೇರೆಗೆ ಕೃಷ್ಣಾ ನದಿ ಯೋಜನೆಗಳನ್ನು ತ್ವರಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಅನುಷ್ಠಾನಕ್ಕೆ ತರಬೇಕು. ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲವೆಂದ ಮಾತ್ರಕ್ಕೆ, ನಮ್ಮ ಪಾಲಿನ ನೀರನ್ನು ಬೇರೆಯವರಿಗೆ ಬಿಟ್ಟಿಕೊಡುವುದು ನಮಗೆ ನಾವೇ ಮಾಡಿಕೊಂಡ ದ್ರೋಹವಾಗುತ್ತದೆ. ಮುಂದುವರೆಯುತ್ತಾ 2ನೇ ನ್ಯಾಯಾಧಿಕರಣ ಕರ್ನಾಟಕ ತನ್ನ ಪಾಲಿಗೆ ದೊರಕಿದ್ದ 734 ಟಿಎಂಸಿ ನೀರಿನಲ್ಲಿ ರಾಜ್ಯ ಬಳಸದೇ ಉಳಿಸಿದ್ದ 230 ಟಿಎಂಸಿ ನೀರನ್ನು ಪರಿಗಣಿಸದೇ ಇದದ್ದು ರಾಜ್ಯದ ಪುಣ್ಯ, ಇಲ್ಲದಿದ್ದರೆ ರಾಜ್ಯಕ್ಕೆ ಹೆಚ್ಚುವರಿ ನೀರಿನಲ್ಲಿ ಯಾವುದೇ ಪಾಲು ಸಿಗದೇ ನಮ್ಮದೇ ನೀರು ಹೋಗುತಿತ್ತು ಎಂದು ಗುಮ್ಮ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬಚಾವತ್ ಆಯೋಗ ಮಾಡಿದ್ದ ನದಿ ನೀರು ಹಂಚಿಕೆ ಸಮಂಜಸವಾಗಿ ಕಂಡಿದ್ದರಿಂದ ಹಾಗೂ ರಾಜ್ಯಕ್ಕೆ ನ್ಯಾಯಯುತವಾಗಿ ಆ ನೀರು ಸಿಗಬೇಕಾಗಿದ್ದರಿಂದ, 2ನೇ ನ್ಯಾಯಧಿಕರಣ ಉಳಿದ ನೀರನ್ನ ಹೆಚ್ಚುವರಿ ನೀರಿಗೆ ಸೇರಿಸಿಲ್ಲ.

ಇನ್ನೂ ಆಂಧ್ರ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿಕೊಂಡಿರುವುದರಿಂದ ಹೆಚ್ಚಿನ ನೀರನ್ನ ಕೊಟ್ಟಿರುವುದು ನ್ಯಾಯವಾಗಿದೇ ಅನ್ನುವುದು ಎರೆಡೂ ಲೇಖನಗಳಲ್ಲಿ ವ್ಯಕ್ತವಾಗಿದೆ. ಆದರೆ ಆಂಧ್ರಪ್ರದೇಶ ಕೇಂದ್ರ ಸರ್ಕಾರದ ಅಥವಾ ನ್ಯಾಯಧಿಕರಣದ ಒಪ್ಪಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ 11 ಯೋಜನೆಗಳ ಬಗ್ಗೆ ಎಲ್ಲೂ ಅಪಸ್ವರ ಎತ್ತಿಲ್ಲ. ಆದರೆ ಇದೇ ಆಂಧ್ರಪ್ರದೇಶ ರಾಜ್ಯ ಸರ್ಕಾರ ನಿರ್ಮಿಸುತ್ತಿದ್ದ ಚಿಕ್ಕ ಪ್ರಮಾಣದ, ಕೇವಲ 1.3 ಟಿಎಂಸಿ ನೀರಿನ ದಂಡಾವತಿಯ ಯೋಜನೆಗೆ ಅಡ್ಡಗಾಲು ಹಾಕಿತ್ತು ಹಾಗೂ ಆಣೆಕಟ್ಟಿನ ಎತ್ತರವನ್ನು 524.26 ಮೀಟರ್ ಎತ್ತರಕ್ಕೆ ಏರಿಸುವುದನ್ನು ವಿರೋಧಿಸಿತ್ತು ಆನೋದನ್ನ ಅಂಕಣಕಾರರು ಮರೆತಿರುವಂತಿದೆ.

ಕೊನೆಯದಾಗಿ ರಾಜ್ಯಕ್ಕೆ ಸುಮಾರು 101 ಟಿಎಂಸಿ ನೀರು ಕಡಿಮೆ ಸಿಕ್ಕಿದೆ ಅನ್ನುವುದನ್ನ ಇಬ್ಬರೂ ಅಂಕಣಕಾರರು ಒಪ್ಪುತ್ತಾರೆ, ಆದರೆ ಕಳೆದುಕೊಂಡಿರುವ ನೀರಿನ ಬಗ್ಗೆ ಯೋಚಿಸದೆ ಸಿಕ್ಕಿರುವ ನೀರನ್ನು ಉಪಯೋಗಿಸಬೇಕು ಎಂದು ಹೇಳಿದ್ದಾರೆ. ಇದೇ ಅಲ್ಪತೃಪ್ತಿಯ ಆಧಾರದ ಮೇಲೆ ನಾವು 101 ಟಿಎಂಸಿ ಅಡಿಗಳಷ್ಟು ನೀರನ್ನ ಬಿಟ್ಟುಕೊಟ್ಟರೆ ತೊಂದರೆಗೊಳಗಾಗುವವರು ನಮ್ಮ ರಾಜ್ಯದ ಜನರೇ ಅಲ್ಲವೇ? ಮೂಲ ಯೋಜನೆಯ ಪ್ರಕಾರ ಕೃಷ್ಣಾ ನದಿ ನೀರಿನಿಂದ ಫಲಾನುಭವಿಗಳಾಗಲಿರುವ ಜಿಲ್ಲೆಗಳ ಸಂಖ್ಯೆ 16. ಇಷ್ಟು ಬೃಹತ್ ಪ್ರಮಾಣದ ನೀರನ್ನ ಬಿಟ್ಟುಕೊಟ್ಟರೆ ನಷ್ಟ ಅನುಭವಿಸುವವರು ನಮ್ಮ ನೆಲದ ಜನರೇ ಅನ್ನುವುದನ್ನ ಈ ಇಬ್ಬರು ಹಿರಿಯರು ಮರೆತಿದ್ದಾದರೂ ಹೇಗೆ?? ನಾಡು, ನುಡಿ ಹಾಗೂ ನಾಡಿಗರಿಗೆ ಅನ್ಯಾಯವಾದಗ, ನಮ್ಮ ನಾಡಿನ ಪ್ರಜ್ಞಾವಂತರು ನ್ಯಾಯ ದೊರಕಿಸಿಕೊಡುವವರೆಗೂ ನಾಡಿನ ಪರ ಧ್ವನಿ ಎತ್ತಬೇಕಾಗಿರುವುದು ಇಂದಿನ ಅವಶ್ಯಕತೆ ಆಗಿದೆ ಅನ್ನುವುದನ್ನ ನಾವುಗಳು ಮರೆಯಬಾರದು.

ಕೃಷ್ಣಾ ನ್ಯಾಯಾಧಿಕರಣದ ತೀರ್ಪುನ ಕುರಿತು ನನ್ನ ಅನಿಸಿಕೆಗಳನ್ನು ಇಲ್ಲಿ ನೋಡಿ

ಶನಿವಾರ, ಜನವರಿ 15, 2011

ತಿರುವಳ್ಳುವರ್ ಜಯಂತಿ ಆಚರಣೆ ಕೇವಲ ಭಾಷಾ ಅಲ್ಪಸಂಖ್ಯಾತರ ಓಲೈಕೆ


ಸರಕಾರದ ಅನುಮತಿ ಅಥವಾ ಪಾಲಿಕೆಯ ಕೌನ್ಸಿಲ್ ನಲ್ಲಿ ತೀರ್ಮಾನಿಸದೆ ಬಿಬಿಎಂಪಿ ತಿರುವಳ್ಳವರ್ ಜಯಂತಿ ಆಚರಣೆಗೆ ಮುಂದಾಗಿರುವ ವಿಷಯ ನಾಡಿನ ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿರುವುದನ್ನ ನೀವುಗಳು ಗಮನಿಸಿರುತ್ತೀರಿ. ಜನವರಿ 16 ರಂದು ತಿರುವಳ್ಳವರ್ ಜಯಂತಿ ಇದೆ, ಅದನ್ನು ಬಿಬಿಎಂಪಿ ವತಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕೆಂದು ಕರ್ನಾಟಕ ತಮಿಳು ಫೆಡೆರೇಷನ್ ಮನವಿಯನ್ನು ಮಾಡಿದ್ದು, ಇದಕ್ಕೆ ಮಹಾನಗರ ಪಾಲಿಕೆಯ ಕೆಲವು ಸದಸ್ಯರು ದನಿಗೂಡಿಸಿರುವುದು ಕಾಣಿಸುತ್ತಿದೆ.

ಈ ತೀರ್ಮಾನದ ಹಿಂದೆ ಮುಖ್ಯವಾಗಿ ಎರಡು ಸಮಸ್ಯೆಗಳು ಕಾಣಿಸತ್ತಿವೆ. ಮೊದಲನೆಯದಾಗಿ ಕೆಲವು ತಮಿಳರ ಮೂಲಭೂತವಾದಿತನ. ಹಲವು ದಶಕಗಳಿಂದ ಇರುವ ತಮಿಳರು ಇಂದಿಗೂ ತಮ್ಮನ್ನು ತಾವು ಕನ್ನಡಿಗರೆಂದೇ ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ತಮಿಳು ಸಂಘಟನೆಗಳು ತಾವು ಯಾವದೇ ಕಾರಣಕ್ಕೂ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯುವುದಿಲ್ಲ ಹಾಗೂ ಬೇರೆಯವರು ಬೆರೆಯುವುದನ್ನು ತಡೆಯುತ್ತಿವೆ. ಇದನ್ನೇ 2009ರಲ್ಲಿ ತಿರುವಳ್ಳುವರ್ ಪ್ರತಿಮೆ ಅನುಷ್ಠಾನದ ಸಮಯದಲ್ಲಿ ನೋಡಿದ್ದು. ಈ ತಮಿಳು ಮೂಲಭೂತವಾದಿತನವನ್ನು ಪ್ರಶ್ನಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗೆ ತಳ್ಳಿ ಪ್ರತಿಮೆ ಅನಾವರಣೆಗೆ ಸರ್ಕಾರ ದಾರಿಮಾಡಿಕೊಟ್ಟಿತು.

ಎರಡನೆಯ ಸಮಸ್ಯೆ ರಾಜಕೀಯ ಪಕ್ಷಗಳ ಓಟಿನ ರಾಜಕಾರಣ. ಈ ತೀರ್ಮಾನದ ಹಿಂದೆ ರಾಷ್ಟ್ರೀಯ ಪಕ್ಷಗಳ ಭಾಷಾ ಅಲ್ಪಸಂಖ್ಯಾತರ ಓಲೈಕೆಯೊಂದನ್ನು ಬಿಟ್ಟರೆ ಬೇರೆ ಯಾವುದೇ ಉದ್ದೇಶ ಕಾಣುತ್ತಿಲ್ಲ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 500ನೇ ಜಯಂತಿಯನ್ನು ವರ್ಷಾಂತರಗಳಿಂದ ನೆಪಗಳನ್ನು ಹೇಳುತ್ತಾ ಮೂಂದುಡುತ್ತಿರುವ ಸರ್ಕಾರ ಹಾಗೂ ಬಿಬಿಎಂಪಿ, ಈಗ ಧಿಡೀರನೆ ತಿರುವಳ್ಳವರ್ ಜಯಂತಿ ಆಚರಿಸುವುದಕ್ಕೆ ಹೊರಟಿರುವುದು ಮತಗಳ ಒಲೈಕೆ ಅಲ್ಲದೇ ಮತ್ತೇನು? ನಮ್ಮ ನಾಡಿನಲ್ಲಿರುವ ಅನೇಕ ಮಹಾನ ಚೇತನಗಳ ನೆನಪಿಗಾಗಿ ಜಯಂತಿ, ಸ್ಮಾರಕಗಳು, ಸಂಗ್ರಹಾಲಯಗಳು ಹೀಗೆ ಅನೇಕ ಕೆಲಸಗಳು ನೆನೆಗುದಿಗೆ ಬಿದ್ದಿರುವಾಗ ಈ ಮತಬ್ಯಾಂಕ್ ರಾಜಕಾರಣ, ಅಲ್ಪಸಂಖ್ಯಾತರ ಓಲೈಕೆ ಎಷ್ಟರ ಮಟ್ಟಿಗೆ ಸಮಂಜಸ? ಇಂತಹುದೇ ಕೆಲಸವನ್ನು ನಾವು ಚನ್ನೈ ಮಹಾನಗರ ಪಾಲಿಕೆ ಅಥವಾ ತಮಿಳುನಾಡು ಸರ್ಕಾರದಿಂದ ಸರ್ವಜ್ಞ ಮೂರ್ತಿಯ ಜಯಂತಿ ಆಚರಿಸುವುದನ್ನು ಕಾಣಲು ಸಾಧ್ಯವಿಲ್ಲಾ. ಅಲ್ಲವೇ????