ಮಂಗಳವಾರ, ಫೆಬ್ರವರಿ 7, 2012

ಸರೋಜಿನಿ ಮಹಿಷಿ ವರದಿ ಎಂಬ ಕನ್ನಡಿಯೊಳಗಿನ ಗಂಟು


ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸದಾನಂದ ಗೌಡರು “ಬದಲಾದ ಕಾಲಘಟಕ್ಕೆ ಅನುಗುಣವಾಗಿ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಸಮಿತಿ ರಚಿಸಲು ಸರ್ಕಾರದ ಚಿಂತನೆ ನಡೆಸಿದೆ” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ನಂತರ ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂಬ ವರದಿಯ ಬಗ್ಗೆ ಮಾತಾಡಿರುವದು ನಮ್ಮ ಪುಣ್ಯ!!! ಅದಕ್ಕಾಗಿ ನಮ್ಮ ಮುಖ್ಯಮಂತ್ರಿಗಳಿಗೆ ಶುಭಾಷಯ ಹೇಳೋಣ. ಅದ್ರೆ ಮೂರು ದಶಕಗಳಿಂದ ಧೂಳು ಹಿಡಿದು ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುತ್ತೇವೆ ಅನ್ನೋ ಹೇಳಿಕೆ ಬದಲು ಸಮಿತಿ ರಚಿಸಲು ಚಿಂತನೆ ನಡೆಸುತ್ತೇವೆ, ಯೋಚಿಸುತ್ತಿದ್ದೇವೆ, ಜಾರಿ ಮಾಡುತ್ತೇವೆ... ಅನ್ನೋ ಅವರ ಪದ ಪ್ರಯೋಗಗಳು ಗಾಳಿಯಲ್ಲಿ ಗೋಪುರ ಕಟ್ಟುವ ಪ್ರಯತ್ನವಾಗಿ ಕಾಣುತ್ತಿದೆ.
(ಚಿತ್ರಕೃಪೆ: ಅಂತರ್ಜಾಲ)

ಮೂರು ದಶಕಗಳ ಹಿಂದೆ ತಯಾರಿಸಲಾದ ಸರೋಜಿನಿ ಮಹಿಷಿ ವರದಿಯನ್ನು, ಕಳೆದ ೧೫ ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಔದ್ಯೋಗಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂದಿನ ದಿನ ಮಾನಕ್ಕೆ ತಕ್ಕಂತೆ ಶಿಫಾರಸ್ಸುಗಳನ್ನು ಬದಲಾಯಿಸಬೇಕಾಗಿರುವುದು ಇಂದಿನ ಅವಶ್ಯಕತೆ. ಇಷ್ಟರಲ್ಲಾಗಲೇ ಈ ಕೆಲಸ ಮಾಡಬೇಕಾಗಿದ್ದ ಸರ್ಕಾರ ಇನ್ನೂ ಸಮಿತಿ ರಚಿಸುವಲ್ಲಿ, ಚಿಂತನೆ ನಡೆಸುವಲ್ಲಿ, ಬೇಡಿಕೆ ಪರಿಶೀಲಿಸುವುದರಲ್ಲಿ ಮೀನಾಮೇಷ ಎಣಿಸುತ್ತ ಜನರ ಕಿವಿಯ ಮೇಲೆ ಹೂವು ಇಡುತ್ತಿದೆ.

ಸರೋಜಿನಿ ಮಹಿಷಿಯಲ್ಲಿ ಹೇಳಿರುವ ಉದ್ಯೋಗ ಮೀಸಲಾತಿಯ ಬಗ್ಗೆ ನೋಡುತ್ತಿದ್ದಾಗ, ಈ ಯೋಚನೆಯನ್ನ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಮಾಡಿದ್ದಾರೆಯೇ? ಇದರ ಅನುಷ್ಠಾನ ಬಲು ಕಷ್ಟವಾದ ಕ್ರಿಯೆಯೇ? ಈ ತರಹದ ಯೋಜನೆಗಳನ್ನು ಬೇರೆ ರಾಜ್ಯದಲ್ಲಿ ಮಾಡಲಾಗಿದೆಯೆ? ಅಂತ ಕುತೂಹಲದಿಂದ ಹುಡಿಕಿದರೆ ನಮಗೆ ಆಶ್ಚರ್ಯ ಕಾದಿದೆ. ಬಿ.ಜೆ.ಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ವಿವಿಧ ರಾಜ್ಯಗಳಲ್ಲಿ ತಮ್ಮ ರಾಜ್ಯದ ಜನರ ಹಿತಾಸಕ್ತಿಗಾಗಿ ಎಲ್ಲಾ ಹಂತದ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿವೆ. ಅಂತಹ ಕೆಲವು ರಾಜ್ಯಗಳ ಮಾಹಿತಿಯನ್ನು ನಾವು ಈಗ ನೋಡೋಣ

ಮಹಾರಾಷ್ಟ್ರ:
ನವೆಂಬರ್ 2008 ರಲ್ಲಿ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿನ ಎಲ್ಲ ಉದ್ಯೋಗಗಳಲ್ಲೂ 80% ಅಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ತೀರ್ಮಾನಿಸಲಾಯಿತು. ಅದರಲ್ಲೂ ಮುಂಬರುವ 140 ಎಸ್..ಜೆಡ್. ಗಳಲ್ಲಿ ಆರಂಭವಾಗು ಎಲ್ಲ ಕಂಪನಿಗಳ ಹುದ್ದೆಗಳಲ್ಲಿ 80% ಸ್ಥಳೀಯರಿಗೆ ಕೊಡಬೇಕು ಎಂದು ಆದೇಶ ಹೊರಡಿಸಿತು. ಇದು, ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಬಗ್ಗೆ 1968 ನಂತರ, ಮಹಾರಾಷ್ಟ್ರ ಸರ್ಕಾರ ಹೊರಡಿಸಿದ 6ನೇ ಸರ್ಕಾರಿ ಆದೇಶ.

ಒರಿಸ್ಸಾ:
ಅಕ್ಟೋಬರ್ 2008 ರಲ್ಲಿ ಒರಿಸ್ಸಾ ಸರ್ಕಾರ ಕೂಡ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಒರಿಸ್ಸಾದಲ್ಲಿನ ಎಲ್ಲ ಗ್ರೂಪ್ ’ಸಿ ಮತ್ತು ’ಡಿ ಉದ್ಯೋಗಗಳಲ್ಲೂ 90% ಅಷ್ಟು ಹುದ್ದೆಗಳನ್ನು, ಹಾಗೂ ಗ್ರೂಪ್ ’ಎ ಮತ್ತು ’ಬಿ ಹುದ್ದೆಗಳಲ್ಲಿ 65% ಅಷ್ಟು ಸ್ಥಳೀಯರಿಗೆ ಮೀಸಲಿಡಬೇಕು ಎಂದು ತೀರ್ಮಾನಿಸಿತು. ಹೊಸ ಉದ್ಯೋಗ ನೀತಿಗಳನ್ನು ಅಳವಡಿಸಿ, ಕಂಪನಿಗಳೊಡನೆ ಆಗಿದ್ದ ಒಪ್ಪಂದ (MoU) ಗಳನ್ನು ಮರುಪರಿಶೀಲಿಸಿ, ಅವಶ್ಯವೆನಿಸಿದರೆ ತಿದ್ದುಪಡಿ ಮಾಡಲಾಗುವುದು ಎಂದು ಸರ್ಕಾರ ತೀರ್ಮಾನಿಸಿತು.

ತಮಿಳುನಾಡು:
2009ರ ಸರ್ಕಾರಿ ಆದೇಶದಲ್ಲಿ ತಮಿಳುನಾಡಿನಲ್ಲಿ ಸ್ಥಾಪಿಸಲಾಗುವ ಎಲ್ಲಾ ಕಾರ್ಖಾನೆಗಳಲ್ಲಿ ಶೇ 75 ರಷ್ಟು ಉದ್ಯೋಗಗಳನ್ನು ತಮಿಳುನಾಡಿನ ಜನರಿಗೆ ನೀಡಬೇಕೆಂಬ ನಿಯಮ ಮಾಡಿದೆ. ಜೊತೆಗೆ ಈ ನಿಬಂಧನೆಗೆ ಒಪ್ಪಿಕೊಳ್ಳುವ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ವಿವಿಧ ಸವಲತ್ತುಗಳನ್ನು ಒದಗಿಸುತ್ತದೆ. ಈ ಹಿಂದೆ ಸ್ಥಾಪಿಸಲಾಗಿರುವ ಸಂಸ್ಥೆಗಳು ಸಹ ಸರ್ಕಾರಿ ಅದೇಶವನ್ನು ಪಾಲಿಸಿದಲ್ಲಿ ಅವರಿಗೂ ಸಹ ಸವಲತ್ತುಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಗುಜರಾತ:
ಗುಜರಾತ ಸರ್ಕಾರವು ತನ್ನ ಉದ್ಯಮ ನೀತಿಯಲ್ಲಿ, ತನ್ನ ರಾಜ್ಯದಲ್ಲಿ ಸ್ಥಾಪಿಸಲಾಗುವ ಉದ್ಯಮಗಳಿಂದ ಸೃಷ್ಠಿಯಾಗುವ ಉದ್ಯೋಗಗಳಲ್ಲಿ ಹೆಚ್ಚಿನ ಪಾಲು ದೊರಕುವಂತೆ ಮಾಡಲು ಯೋಜನೆಯೊಂದನ್ನು ಸ್ಥಾಪಿಸಿದೆ. ಇದರ ಮೂಲಕ ಸ್ಥಳೀಯರಿಗೆ ಹೆಚ್ಚಿನ ಕೆಲಸ ದೊರಕುವಂತೆ ಮಾಡಿದೆ.

ಈ ಮೇಲಿನ ಉದಾಹರಣೆಗಳನ್ನು ನೋಡಿದಾಗ, ಆಯಾ ರಾಜ್ಯಗಳು ತನ್ನ ರಾಜ್ಯದ ಜನರ ಹಿತಕ್ಕಾಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕೆಂಬ ಕಾನೂನು ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ನಮ್ಮ ಭಾರತ ದೇಶದ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ರಾಜ್ಯ ಸರ್ಕಾರವನ್ನು ಹೊಂದಿವೆ. ಜನರಿಂದ ಆರಿಸಲಾಗುವ ಈ ಸರ್ಕಕಾರಗಳು, ತನ್ನನ್ನು ಆರಿಸಿ ಕಳುಹಿಸಿದ ಜನರಿಗೆ ಸವಲತ್ತುಗಳನ್ನು ಒದಗಿಸುವುದು ಸರಿಯಾದ ಕ್ರಮ, ಇದಲ್ಲದೇ ಆಯಾ ರಾಜ್ಯದಲ್ಲಿ ಸ್ಥಾಪಿಸಲಾಗುವ ಉದ್ಯಮಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿ ದರದಲ್ಲಿ ವಿದ್ಯುತ್, ನೀರು, ಭೂಮಿ ಎಲ್ಲವನ್ನೂ ನೀಡುವಾಗ ಖರ್ಚಾಗುವುದು ಜನರ ತೆರಿಗೆಯ ಹಣ. ಹಾಗಾಗಿ ಅಲ್ಲಿಯ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಸಹಜ ನ್ಯಾಯವಾಗಿ ಕಾಣುತ್ತದೆ. ನಮ್ಮ ರಾಜ್ಯ ಸರ್ಕಾರವೂ ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಒಂದು ಕಾಲಮಿತಿ ಯೋಜನೆಯನ್ನಾಗಿ ಮಾಡಿಕೊಂಡು ಅನುಷ್ಠಾನಕ್ಕೆ ತರಲು ಚಿಂತನ-ಮಂಥನ ಮಾಡುವುದನ್ನು ಬಿಟ್ಟು ಜಾರಿಗೆ ತರಲಿ ಎಂದು ಆಶಿಸೋಣ.

ಮುಗಿಸುವುದಕ್ಕಿಂತ ಮುಂಚೆ: ಫೆಬ್ರವರಿ ತಿಂಗಳಿನಲ್ಲಿ ಜೆ.ಪಿ ನಗರದಲ್ಲಿ ನಡೆದ ಉದ್ಯೋಗ ಮೇಳದ ಜಾಹೀರಾತನ್ನು ಇಂಗ್ಲಿಷಿನಲ್ಲಿ ಹಾಕಲಾಗಿತ್ತು, ಇದನ್ನ ನಾನು ಹಾಗೂ ಕೆಲವು ಗೆಳೆಯರು ಪ್ರಶ್ನಿಸಿದಾಗ, ಜಿ.ಪಿ ನಗರದಲ್ಲಿ ಭಾರತದ ಎಲ್ಲಾ ಜನರು ವಾಸಿಸುತ್ತಾರೆ, ಹಾಗಾಗಿ ಕೆಲಸಗಳನ್ನು ಕೇವಲ ಕನ್ನಡಿಗರಿಗೆ ನೀಡಬೇಕು ಎಂದು ಹೇಳುವುದು ಸಂಕುಚಿತತೆ. ನಾವು ಭಾರತೀಯರಾಗಿ ಯೋಚಿಸೋಣ ಎಂಬ ಸಲಹೆಯನ್ನು ಆಳುತ್ತಿರುವ ಪಕ್ಷದ ವಿಧ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ನಮಗೆ ಸಲಹೆ ನೀಡಿದ್ರು. ಹಾಗಿದ್ರೆ ಈ ಸರ್ಕಾರದಿಂದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವ ಕೆಲಸ ಮಾಡೋಕೆ ಆಗುತ್ತಾ ಅನ್ನೋ ಪ್ರಶ್ನೆ ಸಹ ನಮ್ಮನ್ನ ಈಗ ಕಾಡುತ್ತೆ.

ಕೊನೆಯದಾಗಿ: ನಮಗೆ ಗುಜರಾತ ಸರ್ಕಾರವೇ ಮಾದರಿ ಅಂತ ದಿನಕ್ಕೆ ನೂರು ಬಾರಿ ಹೇಳೋ ರಾಜ್ಯ ಸರ್ಕಾರಕ್ಕೆ ಅಲ್ಲಿ ತುಂಬಾ ಹಿಂದೆಯೇ ಉದ್ಯೋಗ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ ಅನ್ನೋ ಅಂಶ ಗೊತ್ತಿದೆಯೋ ಇಲ್ಲವೋ ಪಾಪ!!!