ಇಷ್ಟಕ್ಕೂ ಈಗ ನಾನು ಹೇಳಲು ಹೊರಟಿರುವ ಊರು ಹೆಚ್ಚು
ಜನರಿಗೆ ಪರಿಚಿತವಿಲ್ಲದೇ ಇರಬಹುದು. ಯಳ್ಳೂರು ಅನ್ನೋ ಗ್ರಾಮ ಇರುವುದು ಬೆಳಗಾವಿ ನಗರದಿಂದ ಕೆಲವೇ
ಕಿಲೋಮೀಟರ್ ಗಳ ದೂರದಲ್ಲಿ. ಯಳ್ಳೂರಿಗೆ ಬೆಳಗಾವಿಯಿಂದ ಹತ್ತಾರು ಬಸ್ಸುಗಳು ಬೆಳಗ್ಗೆಯಿಂದ ರಾತ್ರಿಯವರಿಗೂ
ಓಡಾಡುತ್ತವೆ. ಯಳ್ಳೂರಿನಲ್ಲಿ ಒಂದು ಗ್ರಾಮ ಪಂಚಾಯಿತಿ ಸಹ ಇದೆ. ಯಳ್ಳೂರು ಬೆಳಗಾವಿ ದಕ್ಷಿಣ ವಿಧಾನಸಭೆ
ಕ್ಷೇತ್ರಕ್ಕೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಸರಿ ಇದರಲ್ಲೇನು ವಿಶೇಷ
ಅಂತೀರ?? ಒಂದು ವಿಶೇಷ ಇದೆ ಅದೇನೆಂದರೆ ಯಳ್ಳೂರು ಮಹಾರಾಷ್ಟ್ರದಲ್ಲಿದೆ!!!! ಹೌದು ಸರಿಯಾಗಿ
ಓದಿಕೊಳ್ಳಿ, ಯಳ್ಳೂರು ಇರುವುದು ಮಹಾರಾಷ್ಟ್ರದಲ್ಲಿ. ಹಾಗಂತ ನಾನು ಹೇಳುತ್ತಿಲ್ಲ ಬದಲಾಗಿ
ಯಳ್ಳೂರಿನಲ್ಲಿರುವ ಬೋರ್ಡ್ ಹೇಳುತ್ತದೆ. ಹಾಗೂ ಈ ಬೋರ್ಡ್ ಹಾಕಿರುವುದು ಎಂ.ಇ.ಎಸ್ ನವರು.
(ಚಿತ್ರಕೃಪೆ: ಅಂತರ್ಜಾಲ)
ಬೋರ್ಡ್ ತಗೆಯೋದಿಲ್ಲ ಅಂದ ಸರ್ಕಾರ
ಹಲವು ಶತಮಾನಗಳಿಂದ ಇಲ್ಲಿ ಪರಸ್ಪರವಾಗಿ ಸಾಮರಸ್ಯದಿಂದ
ಬದುಕುತ್ತಿರುವ ಜನರ ಮಧ್ಯ ಭಾಷಾ ವೈಷ್ಯಮ್ಯವನ್ನು ಬೆಳಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ
ಎಂ.ಇ.ಎಸ್ ನಂತಹ ನಾಡದ್ರೋಹಿ ಸಂಘಟನೆಯೊಂದು ಹಲವು ದಶಕಗಳಿಂದ ಜನರ ನಡುವೆ ಭಾಷಾ ವೈಷಮ್ಯದ
ಬೀಜವನ್ನು ಬಿತ್ತಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತ, ಕರಗಿ ಹೋಗುತ್ತಿರುವ ತಮ್ಮ
ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಆದರೆ ರಾಜ್ಯದ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿರುವ
ಇಂತಹ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ನಮ್ಮ ಸರ್ಕಾರ ಕೈಕಟ್ಟಿಕೊಂಡು ಸುಮ್ಮನೇ
ಕುಳಿತಿದೆ. ಇದಲ್ಲದೇ ಮಹಾ ಮೇಳಾವದ ಹೆಸರಿನಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳನ್ನು ಇಲ್ಲಿಗೆ
ಕರೆಸಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವಂತಹ ಉದ್ಧಟತನದ ಹೇಳಿಕೆಗಳನ್ನು
ಕೊಡಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಸಹ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ಇಂತಹ
ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಲೇ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕನ್ನಡ ಪರ
ಸಂಘಟನೆಗಳು, ಅದರಲ್ಲೂ ಪ್ರಮುಖವಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಬಾಹಿರವಾಗಿ ಹಾಕಲಾಗಿರುವ
ಮಹಾರಾಷ್ಟ್ರ ಬೋರ್ಡನ್ನು ಹಾಗೂ ಜನರಲ್ಲಿ ವೈಮನಸ್ಯ ಬಿತ್ತುತ್ತಿರುವ ಎಂ.ಇ.ಎಸ್ ನಂತಹ
ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹೋರಾಟ ಮಾಡಿದರೆ, ಅವರನ್ನು ಸರ್ಕಾರ ಜೈಲಿಗೆ ಅಟ್ಟುತ್ತದೆ
ಹಾಗೂ ಇವರನ್ನು ಮಾಧ್ಯಮಗಳಲ್ಲಿ ಕಿಡಿಗೇಡಿಗಳು ಅನ್ನೋ ಹೆಸರಿನಲ್ಲಿ ಲೇವಡಿ ಮಾಡಲಾಗುತ್ತಿದೆ.
ಬೋರ್ಡ್ ತೆಗೆದು ಹಾಕಿ ಎಂದು ಆಗ್ರಹಿಸಿದರೆ, ಇದು ಭಾಷಾ ಸೂಕ್ಷವಾಗಿರುವ ಪ್ರದೇಶ ಹಾಗಾಗಿ ಬೋರ್ಡ್
ತಗೆಯಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿನ ಅಧಿಕಾರಿಗಳು ಹಾಗೂ ಸರ್ಕಾರ ಅಸಾಹಾಯಕತೆ
ತೋರಿಸುತ್ತಿದೆ.
ನಮ್ಮ ಹಿಂದಿನ ಯಾವುದೇ ಸರ್ಕಾರಗಳಾಗಲಿ, ಅಧಿಕಾರಸ್ಥ
ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಗಟ್ಟಿಯಾಗಿ ನಿಂತು ಇಂತಹ ಕಿಡಿಗೇಡಿ ಜನರನ್ನು, ನಾಡಿನ
ಸಾಮರಸ್ಯ ಕದಡುವಂತಹ ಕಾರ್ಯಕ್ರಮಗಳನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಅವರೇನಾದರು ಅವರ
ಕೆಲಸಗಳನ್ನು ಸರಿಯಾಗಿ ಮಾಡಿದ್ದರೆ. ಯಾಕೆ ಕರವೇಯ ನೂರಾರು ಕಾರ್ಯಕರ್ತರು ಜೈಲಿನ ವಾಸ
ಅನುಭವಿಸಬೇಕಾಗುತ್ತಿತ್ತು? ಅನ್ಯಾಯವನ್ನು ಪ್ರಶ್ನಿಸಿದರೆ ಅವರಿಗೆ ಕಿಡಿಗೇಡಿಗಳು ಅನ್ನೋ
ಹಣೆಪಟ್ಟಿ ಬೇರೆ. ಈ ಕೂಡಲೇ ಸರ್ಕಾರ ಭಾಷಾ ಅಲ್ಪಸಂಖ್ಯತರನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣದ
ಕೆಲಸ ಬಿಟ್ಟು, ನಾಡು, ನೆಲ. ಜಲಕ್ಕೆ ಬದ್ಧ ಎಂಬ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರಬೇಕು.
ಕೊನೆಯದಾಗಿ: ನಾಡು, ನುಡಿ, ನೆಲ ಹಾಗೂ ಜಲದ ವಿಷಯದಲ್ಲಿ
ನಮ್ಮ ನಾಡಿಗೆ ಅನ್ಯಾಯವಾದರೆ ತಾವು ಜೀವ ಕೊಡಲು ಸಿದ್ಧ ಅನ್ನುವ ನಮ್ಮ ಚಿತ್ರರಂಗದ ಗಣ್ಯರು ಎಲ್ಲಿದ್ದಾರೆ?
ಬೆಳಗ್ಗೆಯಿಂದ ಟಿವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದದ್ದನ್ನು
ನೋಡಿದೆ, ಆದ್ರೆ ಯಾಕೋ ನಮ್ಮ ಚಿತ್ರರಂಗದವರು ಮಾತ್ರ ಯಾರೂ ಕಣ್ಣಿಗೆ ಕಾಣಲೇ ಇಲ್ಲಾ!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ