ಸೋಮವಾರ, ಏಪ್ರಿಲ್ 18, 2011

ಸೀಟ್ ಬೇಕು ಆದ್ರೆ ರಾಜ್ಯ ಬೇಡಾ....

ಡಾ. ಬಿ. ಆರ್. ಅಂಬೇಡ್ಕರ್ ಅವರ ಜನುಮ ದಿನದಂದು ಒಂದು ಸೋಜಿಗದ ವಿಷಯ ಹೊರಬಿದ್ದಿದೆ. ಪತ್ರಿಕೆಗಳಲ್ಲಿ ಇದರ ಬಗ್ಗೆ ವರದಿಯಾದರು ಸಹ, ಇದನ್ನ ಪತ್ರಿಕೆಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ವಿಷಯ ಏನಪ್ಪ ಅಂದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ ಸಿಂಗ್ ಅವರು, ಸದ್ಯಕ್ಕೆ ಅಸ್ಸಾಂ ರಾಜ್ಯದಲ್ಲಿ ನೆಲೆಸುತ್ತಿದ್ದಾರೆ ಅನ್ನೋದನ್ನ ದಾಖಲೆಗಳು ಹೇಳುತ್ತಿವೆ. ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ದಿಸ್ಪುರ್ ಕ್ಷೇತ್ರದ ಮತದಾರರಾಗಿದ್ದು, ಈ ಸಾರಿಯ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ವರದಿಯಾಗಿದೆ ಹಾಗೂ ಇದನ್ನ ಆ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಚುನಾವಣಾ ಅಧಿಕಾರಿ ಸಹ ನಿಜವೆಂದು ಹೇಳಿದ್ದಾರೆ.

ಮುಖ್ಯವಾದ ವಿಷ್ಯ ಏನಪ್ಪಾ ಅಂದ್ರೆ ಡಾ. ಮನಮೋಹನ್ ಸಿಂಗ್, ಅಸ್ಸಾಂನಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಬಂದಿದ್ದಾರೆ ಹಾಗೂ ಹಿಂದೆಯೂ ಆಯ್ಕೆಯಾಗಿದ್ದರು. ಮತದಾನ ಪ್ರತಿಯೊಬ್ಬ ನಾಗರೀಕನ ಮೂಲ ಕರ್ತವ್ಯ ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಜನಪ್ರಿಯ ಸರ್ಕಾರವನ್ನು ಆರಿಸಲು ಪ್ರತಿಯೊಬ್ಬ ಪ್ರಜೆಗೂ ನೀಡಲಾಗಿರುವ ಪವಿತ್ರ ಹಕ್ಕು ಅನ್ನೋದನ್ನ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮರೆತು ಬಿಟ್ಟಿದ್ದಾರೆಯೇ?? ಪ್ರಜ್ಞಾವಂತ ಜನರು ಚುನಾವಣೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳುತ್ತಿರವ ಈ ಸಮಯದಲ್ಲಿ ಒಬ್ಬ ರಾಜಕಾರಣಿ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮನಮೋಹನ್ ಸಿಂಗ್ ಅವರಿಂದ ಇಂತಹ ನಡೆ ಸರಿಯಾದುದಲ್ಲ.

ರಾಜ್ಯಸಭೆ ಸೀಟ್ ಬೇಕು ಆದರೆ ರಾಜ್ಯ ಬೇಡಾ:
ಇಲ್ಲಿ ಮನಮೋಹನ್ ಸಿಂಗ್ ಮತದಾನ ಮಾಡಿಲ್ಲ ಅನ್ನೋದು ಒಂದು ಕಡೆಯಾದರೆ, ವಿವಿಧ ರಾಜ್ಯಗಳ ರಾಜ್ಯಸಭಾ ಸೀಟುಗಳು ಹೊರ ರಾಜ್ಯದವರನ್ನು ಹಿಂಬಾಗಿಲ ಮೂಲಕ ರಾಜ್ಯಸಭೆಗೆ ಕಳಿಸುತ್ತಿರುವ ಕ್ರಿಯೆ ಗಾಬರಿ ಹುಟ್ಟಿಸುವಂತಹುದು. ರಾಷ್ಟ್ರೀಯ ರಾಜಕೀಯ ಪಕ್ಷಗಳು ತಮ್ಮ ನಾಯಕರನ್ನು ಓಲೈಸಲೋ ಅಥವಾ ಬೇಕಾದವರನ್ನು ಮೇಲ್ಮನೆಗೆ ಕಳುಹಿಸಲು ಅಮೂಲ್ಯವಾದ ರಾಜ್ಯಸಭಾ ಸೀಟುಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯಸಭೆಗೆ ಕಳುಹಿಸುವ ಪ್ರತಿನಿಧಿಗಳಿಗೆ ರಾಜ್ಯದ ಬಗ್ಗೆ ಏನೆಂದರೇ ಎನೂ ಗೊತ್ತಿರುವುದಿಲ್ಲಾ ಅಥವಾ ರಾಜ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಅನ್ನಿಸದವರನ್ನು ಆರಿಸಿ ಕಳುಹಿಸುತ್ತಾರೆ. ಈ ಮೂಲಕ ರಾಜ್ಯಸಭೆಯ ಮೂಲ ಉದ್ದೇಶವನ್ನೇ ಹಾಳುಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಮ್ಮ ರಾಜ್ಯದಲ್ಲೇ ಬಿಜೆಪಿಯಿಂದ ವೆಂಕಯ್ಯ ನಾಯ್ಡು, ಉದ್ಯಮಿ ರಾಜೀವ್ ಚಂದ್ರಶೇಖರ್, ಚಿತ್ರನಟಿ ಹೇಮಾ ಮಾಲಿನಿಯನ್ನು ಆರಿಸಿ ಕಳುಹಿಸಿದರೆ, ಜೆಡಿಎಸ್ ಪಕ್ಷ ಎಂ.ಎಂ. ರಾಮಸ್ವಾಮಿ ಎಂಬ ಹೊರನಾಡಿನ ಉದ್ಯಮಿಯನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿದೆ.

ಇಲ್ಲಿಂದ ಆರಿಸಿ ಹೋಗುವ ಯಾವ ಹೊರ ರಾಜ್ಯದ ರಾಜ್ಯಸಭಾ ಸದಸ್ಯರು ನಮ್ಮ ನಾಡಿಗಾಗಿ ದುಡಿದಿದ್ದಾರೆ? ನಾಡಿನ ಯಾವ ಸಮಸ್ಯೆಗೆ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ? ಯಾವ ಅಂತರ್ ರಾಜ್ಯ ಸಮಸ್ಯೆಗಳನ್ನು ಪರಿಹರಿಸಿದ್ದಾರೆ? ಎಷ್ಟು ಸರ್ತಿ ನಾಡಿನ ಪರವಾಗಿ ರಾಜ್ಯ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ? ಇವಕೆಲ್ಲ ಬಹುಷಃ ಇಲ್ಲಾ ಅನ್ನುವ ಉತ್ತರವೇ ದೊರೆಯುತ್ತದೆ. ಹೈಕಮಾಂಡಿನ ಧಣಿಗಳನ್ನು ತಣಿಸುವಲ್ಲೇ ನಿರತರಾಗಿರುವ ಜನರಿಂದ ನಮ್ಮ ನಾಡಿಗೆ ಆಗಿರುವ ಉಪಯೋಗವಾದರು ಏನು???? ಇದಕೆಲ್ಲ ಪರಿಹಾರ ನಮ್ಮ ಜನರ ಕೈಯಲ್ಲೇ ಇದೇ ಅನ್ನೋದನ್ನ ಮತ್ತೆ ಹೇಳಬೇಕಾಗಿಲ್ಲ ಅಲ್ವೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ