ಬುಧವಾರ, ಮಾರ್ಚ್ 14, 2012

ತಮಿಳುನಾಡು ಜನರ ಒಗ್ಗಟ್ಟು ನೋಡಿ


ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅದೇನೆಂದರೆ ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳುನಾಡಿನ ಎಲ್ಲಾ ಪಕ್ಷದ ನಾಯಕರುಗಳು ನಿನ್ನೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿ, ಭಾರತ ಸರ್ಕಾರ ಈ ಕ್ರಮವನ್ನು ಖಂಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮುಂದೆ ನಡೆಯಲಿರುವ ಯು.ಎನ್ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ತಮಿಳುನಾಡಿನ ನಾಯಕರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ಈ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಭರವಸೆ ನೀಡಿದೆ.

ಕನ್ನಡಿಗರು ಕಲಿಯಬೇಕಿರುವ ಪಾಠ:
ಮೊದಲಿನಿಂದಲೂ ತಮಿಳುನಾಡಿನ ಸರ್ಕಾರ ತಮ್ಮ ಜನರು ಯಾವುದೇ ರಾಜ್ಯ, ದೇಶದಲ್ಲಿರಲಿ ಅವರ ಯೋಗ ಕ್ಷೇಮದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದೆ. ಅದು ಶ್ರೀಲಂಕಾದಲ್ಲಿರುವ ತಮಿಳರ ಬಗ್ಗೆ ಇರಬಹುದು ಅಥವಾ ಬೇರಿನ್ನಾವುದೇ ಪ್ರದೇಶದಲ್ಲಿರಬಹುದು. ತಮ್ಮ ಜನರಿಗೆ ಒಳಿತಾಗಬೇಕೆಂದರೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಭಿನಾಭಿಪ್ರಾಯವನ್ನು ಮರೆತು ಅವರ ಒಳಿತಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಆದರೆ ಇದೇ ಪರಿಸ್ಥಿತಿ ನಮ್ಮ ರಾಜ್ಯದ ನಾಯಕರುಗಳಿಂದ ನಿರೀಕ್ಷಿಸಲು ಸಾಧ್ಯವೇ? ಇವತ್ತಿನ ಮಟ್ಟಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮದೇ ರಾಜ್ಯದ ನೆಲದಲ್ಲಿ ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುತ್ತದೆ ನಮ್ಮ ಸರ್ಕಾರ, ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಿ ಎಲ್ಲಾ ಮುಗಿದ ಮೇಲೆ ತೇಪೆ ಸಾರಿಸುವ ಕೆಲಸಕ್ಕೆ ಬರುತ್ತದೆ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ತೀರಿಸಲು ಇರುವ ಕಳಸಾ-ಭಂಡೂರ ನಾಲಾ ಯೋಜನೆಯನ್ನು ಇನ್ನೂ ದಶಕಗಳಿಂದ ಜಾರಿಗೆ ತರದೇ ಹಾಗೆ ಮುಂದೆ ತಳ್ಳುತ್ತಿದೆ, ಇದರ ಅನುಷ್ಠಾನಕ್ಕೆ ಇರುವ ತೊಡರನ್ನು ಬಗೆಹರಿಸಲು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾಗಿ ಎಂದು ಕೆಲಸ ಮಾಡಲೇ ಇಲ್ಲ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಲು ಸಿದ್ಧ ಮಾಡಲಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರದೇ ೩ ದಶಕಗಳು ಕಳೆದು ಹೋಗಿವೆ... ಹೀಗೆ ಈ ಪಟ್ಟಿ ಹನುಮಪ್ಪನ ಬಾಲದಂತೆ ದೊಡ್ಡದಿದೆ.

ಇದಕೆಲ್ಲ ಮೂಲ ಹುಡುಕ ಹೊರಟರೆ ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ, ಆ ಪಕ್ಷದಲ್ಲಿರುವ ನಾಯಕರುಗಳ ಹೈಕಮಾಂಡ್ ಗುಲಾಮಗಿರಿ, ತಮ್ಮ ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಶಿಸ್ತಿನ ಪಕ್ಷಗಳು!!! ಇವುಗಳು ಎಂದಿಗೂ ನಮ್ಮ ಪಕ್ಷಗಳು ಅನ್ನಿಸಿಯೇ ಇಲ್ಲ! ಇದರ ಜೊತೆಜೊತೆಗೆ ನಮ್ಮ ಕನ್ನಡಿಗರಲ್ಲಿ ಜಾಗೃತಿಯ ಕೊರತೆ... ಇವುಗಳನ್ನೆಲ್ಲ ಒಟ್ಟಾಗಿ ಎದುರಿಸೋಕೆ ನಮ್ಮ ರಾಜ್ಯದಲ್ಲಿ ನಮ್ಮದೇ ಒಂದು ಪ್ರಾದೇಶಿಕ ಪಕ್ಷ ಬೇಕಾಗಿದೆ.

2 ಕಾಮೆಂಟ್‌ಗಳು:

  1. ಹೈಕಮಾಂಡ್ ಗುಲಾಮಗಿರಿಗಿಂತ ಪ್ರಾದೇಶಿಕ ಪಕ್ಷದ ಆಳ್ವಿಕೆ ಸೂಕ್ತವೆನಿಸಿದರೂ, ಮುಂದೊಮ್ಮೆ ನಾಯಕತ್ವದಲ್ಲಿ ಅಸಮಾಧಾನ, ಪಕ್ಷದೊಳಗೆ ಒಳಜಗಳ ಇವುಗಳನ್ನು ಹೆಚ್ಚು ದಿನ ಹತ್ತಿಕ್ಕಲು ಸಾಧ್ಯವೇ? ಈಗಲಾದರೂ ಕೊನೆಯ ಪಕ್ಷ ಹೈಕಮಾಂಡ್ ಆದೇಶದವರೆಗೆ ನಾಯಕತ್ವ(ಮುಖ್ಯಮಂತ್ರಿ ಗಾದಿ)ಉಳಿದಿರುತ್ತದೆ. ಪ್ರಾದೇಶಿಕ ಪಕ್ಷದಿಂದ ಇಂಥಹ ಚಮತ್ಕಾರವನ್ನು ನಿರೀಕ್ಷಿಸಬಹುದೇ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಶಿವ ಅವರೇ,
      ಯಾವ ಪಕ್ಷವೂ ರಾಜಕೀಯದ ಒಳಜಗಳದಿಂದ ಹೊರತಾಗಿರುವುದಿಲ್ಲ ಅನ್ನುವುದನ್ನು ನೀವು ಒಪ್ಪುತ್ತೀರೆಂದು ಅಂದುಕೊಳ್ಳುತ್ತೇನೆ. ಪ್ರಾದೇಶಿಕ ಪಕ್ಷದ ಚಿಂತನಾ ವ್ಯಾಪ್ತಿ ನಮ್ಮ ರಾಜ್ಯವೇ ಆಗಿರುವುದರಿಂದ ರಾಜ್ಯದ ಅಭಿವೃದ್ಧಿ, ಅದಕ್ಕೆ ಸಿಗಬೇಕಾಗಿರುವ ಸೌಲಭ್ಯಗಳ ಕಡೆಗೆ, ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಬಗ್ಗೆ, ನಮ್ಮ ನೆಲ ಜಲದ ಬಗ್ಗೆ ಕಾಳಜಿಯನ್ನು ನಿರೀಕ್ಷಿಸಬಹುದು. ಇದನ್ನ ನಾವು ತಮಿಳುನಾಡು, ಓಡಿಶಾ ಮುಂತಾದ ರಾಜ್ಯಗಳಲ್ಲಿ ಕಾಣಬಹುದು.

      ಅಳಿಸಿ