ಗುರುವಾರ, ಜುಲೈ 28, 2011

ಹೈಕಮಾಂಡ್!!! ಹೈಕಮಾಂಡ್!!!


ಕರ್ನಾಟದಲ್ಲಿ ಕಳೆದೆರೆಡು ವಾರಗಳಿಂದ ನಡೆಯುತ್ತಿರುವ ಈ ರಾಜಕೀಯ ದೊಂಬರಾಟ ದೇಶದ ಗಮನವನ್ನ ತನ್ನತ ಸೆಳೆದಿದೆ. ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತರು ನೀಡಿರುವ ವರದಿ ರಾಜಕೀಯ ಪಕ್ಷಗಳು ಹಾಗೂ ಅವರ ನಾಯಕರುಗಳಲ್ಲಿ ಆತಂಕ ಹುಟ್ಟಿಸಿದೆ. ಮುಂದೆ ಈ ರಾಜಕೀಯ ದೊಂಬರಾಟ ಹೇಗೆ ತಿರುವುಗಳನ್ನು ಪಡೆಯುತ್ತದೋ ಕಾದು ನೋಡೋಣ.

ಆದರೆ ಈ ಪ್ರಕರಣ ಹೊರಬಿದ್ದಾಗಿನಿಂದ ಹೈಕಮಾಂಡಿನ ಹೆಸರು ಎಂದಿಗಿಂತ ಹೆಚ್ಚು ಪದೇ ಪದೇ ಕಿವಿಯ ಮೇಲೆ ಬೀಳುತ್ತಲೇ ಇದೆ. ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳ ನಾಯಕರು ಎದ್ದರೂ ಹೈಕಮಾಂಡ್, ಬಿದ್ದರೂ ಹೈಕಮಾಂಡ್, ಕನಸಿನಲ್ಲೂ ಹೈಕಮಾಂಡ್ ಎಂದು ಕನವರಿಸುತ್ತಾ ಇರುತ್ತಾರೆ. ಕಾಂಗ್ರೆಸ್, ಬಿಜೆಪಿ ಎಂದು ಪಕ್ಷ ಭೇದ ಮರೆತು ನಮ್ಮ ರಾಜ್ಯದ ನಾಯಕರುಗಳು ಹೈಕಮಾಂಡಿನ ದಾಸ್ಯಕ್ಕೆ ಒಗ್ಗಿಹೋಗಿದ್ದಾರೆ ಎಂದೆನಿಸುತ್ತದೆ. ಹೈಕಮಾಂಡಿನ ಕರೆ ಬಂದ ಕೂಡಲೇ ಉಟ್ಟ ಬಟ್ಟೆಯಲ್ಲಿ ದೆಹಲಿಗೆ ಓಡಿ ಹೋಗುವ ಚಾಳಿ ನಮ್ಮ ರಾಜ್ಯದ ನಾಯಕರುಗಳಿಗೆ ಅಭ್ಯಾಸ ಆಗಿ ಹೋಗಿದೆ. ನಮ್ಮ ರಾಜ್ಯದ ಯಾವುದೇ ಪ್ರಮುಖ ವಿಷಯಗಳಲ್ಲಿ ತೀರ್ಮಾನವಾಗಬೇಕಾದರೂ ದೆಹಲಿಯಲ್ಲಿ ಗಂಟೆಗಟ್ಟಲೆ ಕೈಕಟ್ಟಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ನಮ್ಮ ಜನಪ್ರತಿನಿಧಿಗಳದು. ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಲು ಹಲವಾರೂ ದಿನಗಳು ಕಳೆದರೂ ಭೇಟಿ ಮಾಡಲು ಸಾಧ್ಯವಾಗದೆ ವಾಪಸ್ ಬಂದಿರುವ ಅನೇಕ ಸುದ್ದಿಗಳನ್ನು ಪತ್ರಿಕೆಗಳಲ್ಲಿ ನೋಡಿರುತ್ತೇವೆ... ತೀರಾ ಇತ್ತೀಚಿಗಿನ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಹೊಸ ಮುಖ್ಯಮಂತ್ರಿಗಳನ್ನೂ ಆರಿಸಲು ಸಹ ನಮ್ಮ ರಾಜ್ಯದ ಬಿಜೆಪಿ ನಾಯಕರು ಹೈಕಮಾಂಡಿನತ್ತ ಮುಖಮಾಡಿರುವುದು ನಮ್ಮ ರಾಜ್ಯದ ೬ ಕೋಟಿ ಜನರ ವಿಶ್ವಾಸಕ್ಕೆ ದ್ರೋಹ ಮಾಡಿತಂತಾಗಿದೆ? ರಾಜ್ಯದ ಹಿತಕ್ಕಾಗಿ ಸ್ವಂತ ನಿರ್ಧಾರಗಳನ್ನು ತಗೆದುಕೊಳ್ಳಲು ಸಾಧ್ಯವಿಲ್ಲವೆಂದಾದರೆ ಅವರುಗಳು ನಾಯಕರಾಗಿ ಮುಂದುವರೆಯುತ್ತಿರುವುದಾದರೂ ಏಕೆ?

ನಮ್ಮ ರಾಜ್ಯದ ಒಳಿತನ್ನು ನಿರ್ಧರಿಸಲು ಹೈಕಮಾಂಡ್ ಬೇಕೆ?
ನಾಯಕತ್ವ ಬದಲಾವಣೆಯ ಈ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿಯಾರಗಬೇಕು ಎನ್ನುವ ತೀರ್ಮಾನವನ್ನು ಹೈಕಮಾಂಡ್ ತಗೆದುಕೊಳ್ಳಲು ಹೊರಟಿದೆ ಎನ್ನುವು ಸುದ್ದಿ ಬರುತ್ತಿದೆ. ಇಷ್ಟಕ್ಕೂ ನಮ್ಮ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾರಾಗಬೇಕು ಎನ್ನುವ ನಿರ್ಧಾರವನ್ನು ತೀರ್ಮಾನ ಮಾಡಲು ಹೈಕಮಾಂಡ್ ಬೇಕೆ? ಅಸಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮುಖ್ಯಮಂತ್ರಿ ಯಾರಾಗಿರಬೇಕು ಎನ್ನುವ ನಿರ್ಧಾರವನ್ನು ಮಾಡಬೇಕಾಗಿರುವವರು ನಮ್ಮ ಪ್ರತಿನಿಧಿಗಳಾದ ಶಾಸಕರು ಅಲ್ಲವೇ? ಇದನ್ನೆಲ್ಲ ಮೀರಿ ನಾಯಕತ್ವ ತೀರ್ಮಾನಿಸೋಕೆ ಹೈಕಮಾಂಡ್ ಗೆ ಇಲ್ಲಿನ ಯಾವ ಪರಿಸ್ಥಿತಿಯ ಅರಿವಿರುತ್ತದೆ? ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಮಾರಕಾವಾಗಿರುವ ಈ ಹೈಕಮಾಂಡ್ ದಾಸ್ಯದಿಂದ ನಮ್ಮ ರಾಷ್ಟ್ರೀಯ ರಾಜಕೀಯ ಪಕ್ಷಗಳು ಎಂದು ಹೊರಗೆ ಬರುತ್ತವೆ? ಒಂದು ರಾಷ್ಟ್ರೀಯ ಪಕ್ಷ ಎಂದಾಕ್ಷಣ ಎಲ್ಲಾ ನಿರ್ಧಾರಗಳು ಮೇಲಿಂದಲೇ ಬರಬೇಕೆಂದೇನಿಲ್ಲ ಅಲ್ಲವೇ?. ಆದಷ್ಟು ಬೇಗ ಈ ಪರಿಸ್ಥಿತಿಯಿಂದ ನಮ್ಮ ರಾಜಕೀಯ ಪಕ್ಷಗಳು ಹೊರಬರಲಿ, ಹೈಕಮಾಂಡ್ ದಾಸ್ಯದಿಂದ ಮುಕ್ತವಾಗಲಿ ಎಂದು ಆಶಿಸೋಣ. ಕನ್ನಡಿಗರಲ್ಲಿ ಈ ಕುರಿತು ಜಾಗೃತಿಯಾಗಬೇಕು, ನಮ್ಮ ನಿರ್ಧಾರಗಳನ್ನು ನಾವೇ ತಗೆದುಕೊಳ್ಳುವಂತಾಗಬೇಕು.

1 ಕಾಮೆಂಟ್‌:

  1. ಆಂಧ್ರದ ವೆಂಕಯ್ಯ ನಾಯ್ಡು,ಯು.ಪಿ.ಯ ರಾಜನಾಥ್ ಸಿಂಗ್,ದೆಲ್ಹಿಯ ಅರುಣ್ ಜೈಟ್ಲಿ ಸೇರಿ ನಮ್ಮ ಕರ್ನಾಟಕದ ಮುಖ್ಯಮಂತ್ರಿಯಾರು ಅಂತ ನಿರ್ಧಾರ ಮಾಡ್ತಾರಂತೆ ಕಣ್ರಪ್ಪೋ!! ಹುಮ್ನಾಬಾದ ನಿಂದ ಹುಣಸೂರು ವರೆಗೂ ೬ ಕೋಟಿ ಕನ್ನಡದ ಜನತೆಯಿಂದ ಆರಿಸಿ ಬಂದ ನಮ್ಮ ಶಾಸಕರುಗಳಿಗೆ ಏನಪ್ಪಾ ಕೆಲಸ? ಹಾಯ್ ಕಮಾಂಡ್ ದಾಸ್ಯದಿಂದ ಯಾರಾದ್ರೂ ಕಾಪಡ್ರಪ್ಪ!

    ಆಂಧ್ರ,ಯು.ಪಿ. ಅಥವಾ ಇನ್ನಾವುದೇ ರಾಜ್ಯದವರಿಗೆ ನಮ್ಮ ರಾಜ್ಯದ ಏಳಿಗೆ ಬಗ್ಗೆ ಏನು ಯೋಚನೆ? ಪರಸ್ಪರ ಅಂತರರಾಜ್ಯ ಗಡಿ,ನದಿ ಕಲಹಗಳ ವಿಶಯ ಬಂದಾಗ ಈ ಹೈ ಕಮಾಂಡ್ ನಾಯಕರು ಬಾಲ ಸುತ್ತ ಬೆಕ್ಕಿನಂತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಪರರಾಜ್ಯದ ಪರವಾಗಿ ನಿಲ್ಲುವುದೇಕೆ? ಇದೆ ನಿತಿನ್ ಗಾದ್ಕರಿ ಇತ್ತೀಚಿಗೆ ಬೆಳಗಾವಿ ಭೇಟಿ ನೀಡಿದಾಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬಂತೆ ಮಾತನಾಡಿದರು.ಬೆಳಗಾವಿಯ ಬಿಜೆಪಿ ಸಂಸದ ಸುರೇಶ ಅಂಗಡಿ ಕೂಡ ಮರಾಠಿಗರ ಪರ ನಿಂತಿದ್ದು ಸದ್ಯ ಇತಿಹಾಸ.

    ಪ್ರತ್ಯುತ್ತರಅಳಿಸಿ