ಶುಕ್ರವಾರ, ಜುಲೈ 22, 2011

ಕರ್ನಾಟಕದವರು ಬಿಟ್ಟಿ ಬಿದ್ದಿದ್ದಾರಾ?


ಬಹುಷಃ ಕರ್ನಾಟಕದವರ ಮೇಲೆ ಆಗುತ್ತಿರುವ ದೌರ್ಜನ್ಯದ ಸರಮಾಲೆಗೆ ಹೊಸದೊಂದು ನೋವುಂಟು ಮಾಡುವ ವಿಚಾರ ಸೇರಿಕೊಂಡಿದೆ. ನಿನ್ನೆಯಿಂದ ಪ್ರದರ್ಶನ ಕಾಣುತ್ತಿರುವ ತಮಿಳಿನ ರೀಮೇಕ್ ಚಿತ್ರವಾದ ಸಿಂಗಂ ಅನ್ನೋ ಹಿಂದಿ ಸಿನೇಮಾದಲ್ಲಿ ನಾಯಕ ಹಾಗೂ ಖಳನಾಯಕನ ಪಾತ್ರದ ನಡುವೆ ನಡೆಯುವ ಸಂಭಾಷಣೆಯಲ್ಲಿ ಖಳನಾಯಕ “ನಾನು ಕರ್ನಾಟಕದ ಗಡಿಯಿಂದ ೧೦೦೦ ಜನರನ್ನು ಕರೆತರುತ್ತೇನೆ ಎಂದು ಹೇಳಿದಾಗ ಅದಕ್ಕೆ ಪ್ರತಿಯಾಗಿ ನಾಯಕ ನಿನ್ನಂತ ೧೦೦೦ ನಾಯಿಗಳನ್ನು ಬೇಟೆಯಾಡಲು ನನ್ನಂತ ಒಂದು ಸಿಂಹ ಸಾಕು ಎಂದು ಹೇಳುತ್ತಾನೆ”, ಅಲ್ಲಿಗೆ ಚಿತ್ರದ ಪ್ರಕಾರ ಕರ್ನಾಟಕದ ಗಡಿ ಭಾಗಗಳಲ್ಲಿ ವಾಸಿಸುವ ಜನರು ನಾಯಿಗಳಂತೆ? ಇನ್ನೊಂದು ವಿಶೇಷ ಅಂದ್ರ ಈ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ಇಬ್ಬರೂ ಕರ್ನಾಟಕದವರೇ (?) ಆಗಿದ್ದರೂ ಒಂದು ರಾಜ್ಯದ ಜನರಿಗೆ ನೋವುಂಟು ಮಾಡುವಂತಹ ಸಂಭಾಷಣೆಯನ್ನ ಬಳಲಸೇಬಾರದಿತ್ತು ಅನ್ನೋ ಪರಿಜ್ಞಾನ ಕೂಡ ಅವರಲ್ಲಿ ಇರಲಿಲ್ವೇ?

ಆದರೆ ನಿಜಕ್ಕೂ ಗಡಿ ಭಾಗವಾದ ಬೆಳಗಾವಿಯಲ್ಲಿ ಕಷ್ಟ ಅನುಭವಿಸುತ್ತಿರುವುದು ಕನ್ನಡದ ಜನರೇ ಅನ್ನೋದು ನಮಗೆಲ್ಲಾ ಗೊತ್ತಿರುವುದೇ. ಎಂ.ಇ. ಎಸ್ ನಂತಹ ಒಂದು ಸಂಘಟನೆ ಹುಟ್ಟಿಕೊಂಡಾಗಿನಿಂದ ಕನ್ನಡಿಗರ ಪಾಡು ನೆಲಕಚ್ಚಿತ್ತು. ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಒಂದಾಗಿ ಬಾಳುತ್ತಿದ್ದ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಠಿಸಿದ ಜನರಿವರು. ಕನ್ನಡಿಗರ ವಿರುದ್ಧ ಎಂತಹ ಹೀನ ಕೆಲಸಕ್ಕಾದರೂ ತಯಾರಾಗಿರುವ ಜನರಿವರು. ಸುಮಾರು ೩೦-೪೦ ವರ್ಷಗಳಿಂದ ಇವರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರಿಗೆ ಕರವೇ ಯಂತಹ ಕನ್ನಡ ಪರ ಸಂಘಟನೆ ದುಡಿದ ಪರಿಣಾಮ ಇಂದು ಕನ್ನಡಿಗರು ಕೊಂಚ ಉಸಿರಾಡುವಂತಹ ಪರಿಸ್ಥಿತಿ ಇದೆ. ಆದರೆ ಇನ್ನೊಬ್ಬರ ನೋವಿನಲ್ಲೂ ಸುಖಪಡುವ ಎಂ.ಇ.ಎಸ್ ನಂತಹ ಸಂಘಟನೆಯ ಜನರ ತೆವಲಿಗಾಗಿ ಇಂತಹ ಸಂಭಾಷಣೆಗಳನ್ನು ಸೇರಿಸಿ ಕರ್ನಾಟಕದ ಜನರಿಗೆ ಅವಮಾನವೆಸಗುವುದೆ ಎಷ್ಟರ ಮಟ್ಟಿಗೆ ಸರಿ?

ಕನ್ನಡಿಗರ ವಿಶ್ವಮಾನವತೆ!!
ಇಂದು ಬೆಳಗ್ಗೆ ಸುವರ್ಣ ವಾಹಿನಿಯಲ್ಲಿ ಕರವೇ ಅಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ಸಂದರ್ಶನದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಕರ್ನಾಟಕದ ಪ್ರಜೆಗಳೊಬ್ಬರು ಚಿತ್ರದ ಸಂಭಾಷಣೆಯಲ್ಲಿ ಯಾವುದೇ ತಪ್ಪಿಲ್ಲ, ಅದು ಕನ್ನಡಿಗರ ಪರವಾಗಿದೆ ಹಾಗಾಗಿ ಅದಕ್ಕೆ ಅಡ್ಡಿಪಡೆಸಬೇಡಿ ಅಂತ ಸಲಹೇ ನೀಡಿದರು. ಬಹುಷಃ ಅವರು ನಿಜಕ್ಕೂ ವಿಶ್ವಮಾನವರೇ ಇರಬೇಕು. ಹೀಗೆ ಕನ್ನಡಿಗರು ತಮ್ಮತನವನ್ನ ಮರೆತು ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಸಹಿಸಿಕೊಂಡು ಬದುಕಬೇಕಾದ ಹೀನ ಪರಿಸ್ಥಿತಿಗೆ ಇಂಥವರೆ ಕಾರಣ. ನಮ್ಮ ಹೇಡಿತನಕ್ಕೆ, ನಮ್ಮ ಅಭಿಮಾನ ಶ್ಯೂನ್ಯತೆಗೆ ನಾವು ಕೊಟ್ಟಿರುವ ಹೆಸರು ವಿಶ್ವಮಾನವತೆಯೇ? ಕರ್ನಾಟಕದವರನ್ನು ಅವಹೇಳಿಸಿ ಮಾತನಾಡಿರುವುದು ಇದೇ ಮೊದಲ್ಲಲ, ಹಾಗೆಯೇ ಇದೇ ಕೊನೆಯಾಗುತ್ತದೆಂಬ ನಂಬಿಕೆ ಕೂಡ ಇಲ್ಲಾ. ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಬದುಕುತ್ತಿರುವ ವಿವಿಧ ರಾಜ್ಯಗಳ ಜನರ ನಡುವೆ ಒಡಕು ತರಬಹುದಾದಂತಹ ಇಂತಹ ಕೆಲಸಗಳನ್ನ ತಡೆಯುವುದಕ್ಕೆ ಅಲ್ಲಿಯ ಜನರಿಂದ ಮಾತ್ರ ಸಾಧ್ಯ, ಜನ ಎಚ್ಚೆತುಕೊಳ್ಳಬೇಕು, ನಾವು, ನಮ್ಮತನ ಅನ್ನೋ ಜಾಗೃತಿ ಅವರಲ್ಲಾಗಬೇಕು. ಯಾವುದೇ ಭಾಗದ ಜನರನ್ನ ಕೀಳಾಗಿ ಕಾಣುವ ಇಂತಹ ಹೀನ ಚಾಳಿಗೆ ವಿರುದ್ಧವಾಗಿ ಧ್ವನಿ ಎತ್ತಿ ನಿಲ್ಲಬೇಕು.
ಚಿತ್ರ ಕೃಪೆ: Pics4news

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ