ಸೋಮವಾರ, ಸೆಪ್ಟೆಂಬರ್ 26, 2011

ಮುಖ್ಯಮಂತ್ರಿಗಳೇ ಇದು ಸರಿಯೇ?

ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರು ನೆನ್ನೆ ಬೆಂಗಳೂರಿನಲ್ಲಿ ಮಲೆಯಾಳಿಗಳು ಏರ್ಪಡಿಸಿದ್ದ ಪೊನ್ನಂ ೨೦೧೧ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಷಯ ಇಷ್ಟೇ ಇದ್ದಿದ್ದರೆ ಸಮಸ್ಯೆ ಏನು ಇರುತ್ತಿರಲಿಲ್ಲ. ಆದರೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ತುಂಬ ಅವರು ಮಾತನಾಡಿದ್ದು ಮಲೆಯಾಳಿಯಲ್ಲಿಯೇ ಎಂದು ಪತ್ರಿಕಾ ವರದಿಯೊಂದು ಹೇಳಿತ್ತಿದೆ!!!!
ಹಲವಾರು ದಶಕಗಳಿಂದ ನಮ್ಮ ರಾಜ್ಯದಲ್ಲಿಯೇ ವಾಸಿಸುತ್ತಿರುವ ಮಲೆಯಾಳಿಗಳು, ಕನ್ನಡವನ್ನ ಕಲಿತು ಕನ್ನಡಿಗರ ಜೊತೆ ಸಾಮರಸ್ಯದಿಂದ ಬದುಕುತ್ತಿರುವ ಹಾಗೂ ಬದಲಾವಣೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನೀವು ಕನ್ನಡಿಗರಲ್ಲ ಎನ್ನೋ ಬಹುದೊಡ್ಡ ತಪ್ಪು ಸಂದೇಶವನ್ನು ನಮ್ಮ ಮುಖ್ಯಮಂತ್ರಿಗಳು ನೀಡುತ್ತಿರುವುದು ಸರಿಯೇ? ಭಾಷೆಯ ಮೂಲಕವೇ ಉತ್ತಮ ಸಮಾಜವನ್ನ ಕಟ್ಟಬೇಕಾಗಿರುವುದು ಇಂದಿನ ಅವಶ್ಯಕತೆ ಹಾಗೂ ಇದೇ ಸರಿಯಾದ ದಾರಿ ಕೂಡ. ಆದರೆ ಸದಾನಂದಗೌಡರ ನಡೆ ಪರಭಾಷಿಕರನ್ನು ಹೊರಗಿನವರಾಗಿಯೇ ಇಡುವ ಪ್ರಯತ್ನವಾಗಿ ಕಾಣುತ್ತಿದೆ. ತಮಗಿರುವ ಮಲೆಯಾಳಿ ಪಾಂಡಿತ್ಯವನ್ನು ಅವರು ಕೇರಳಕ್ಕೆ ಹೋದಾಗ ತೋರಿಸಿದರೆ ಅವರ ನಡೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದರೆ ನೆನ್ನೆಯ ಘಟನೆ ಭಾಷಾ ಅಲ್ಪಸಂಖ್ಯಾತರ ಓಲೈಕೆಯಂತೆಯೇ ಮೇಲ್ನೋಟಕ್ಕೆ ಕಾಣಿಸುತ್ತಿದೆ. ನಾಳೆ ಮತ್ಯಾವುದೋ ಭಾಷಿಕ ಸಮುದಾಯ ಅವರನ್ನ ಕಾರ್ಯಕ್ರಮಕ್ಕೆ ಅಹ್ವಾನಿಸಿದರೆ, ಅಲ್ಲೂ ಇದೇ ತರಹದ ಘಟನೆ ಪುನರಾವರ್ತನೆಯಾದರೆ? ಇಂತಹ ಹೆಜ್ಜೆಗಳು ನಾಡಿನ ಒಡಕಿಗೆ ಕಾರಣವಾಗುವದಿಲ್ಲವೇ?

ಈ ಹಿಂದೆಯು ಸಹ ಚುನಾವಣೆ ಸಮಯದಲ್ಲಿ ಬಿ.ಜೆ.ಪಿ ಪಕ್ಷ ಇಂತಹ ಭಾಷ ಅಲ್ಪಸಂಖ್ಯಾತರನ್ನು ಓಲೈಸಲು ನಡೆಸಿದ ಕಸರತ್ತುಗಳನ್ನು ಹಾಗೂ ಅದರ ವಿರುದ್ಧ ಕರವೇ ನಡೆಸಿದ್ದ ಪ್ರತಿಭಟನೆಗಳನ್ನು ನಾವುಗಳು ಕಂಡಿದ್ದೇವೆ. ಭಾಷಾ ಅಲ್ಪಸಂಖ್ಯಾತರನ್ನು ಓಟಿಗಾಗಿ ಓಲೈಸುವ ಭರದಲ್ಲಿ, ಇದರಿಂದ ನಾಡಿನ ಸಮಾಜದಲ್ಲಿ ಭಾಷೆಯ ಆಧಾರದ ಮೇಲೆ ಉಂಟಾಗುವ ಒಡಕಿನ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಖಂಡಿತವಾಗಿ ಗಮನ ಹರಿಸಲೇ ಬೇಕು. ಆಯಾ ನಾಡಿನಲ್ಲಿ ಅಲ್ಲಿಯ ಭಾಷೆಗೆ ಆದ್ಯತೆ ನೀಡಬೇಕು. ಹೊರಗಿನಿಂದ ಬಂದವರು ಇಲ್ಲಿನವರಾಗಿ ಬಾಳಲು ಅವಕಾಶ ಮಾಡಿಕೊಡಬೇಕು. ಏನಂತೀರಿ?

1 ಕಾಮೆಂಟ್‌:

  1. ಗೌಡ್ರೆ,
    ದಯವಿಟ್ಟು ಹೀಗೆಲ್ಲ ಮಾಡಬೇಡಿ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಹೆಚ್ಚಿನ ಜನರ ಮಾತೃಭಾಷೆಯಾಗಿದ್ದರೂ ಕೂಡ ಜನ ಅದನ್ನೆಲ್ಲ ಮನೆಯಲ್ಲಿ ಬಿಟ್ಟು ಹೊರಗಡೆ ಬ೦ದಾಗ ನಾವೆಲ್ಲಾ ಕನ್ನಡಿಗರು ಎ೦ಬ ಭಾವನೆಯಿ೦ದ ಕನ್ನಡ ಭಾಷೆಯಲ್ಲಿಯೇ ಮಾತನಾಡುತ್ತ, ತಮ್ಮ ಮಕ್ಕಳನ್ನ ಸರಕಾರೀ ಶಾಲೆಯ ಕನ್ನಡ ಮಾಧ್ಯಮದಲ್ಲೇ ಓದಿಸುತ್ತಾ ಕನ್ನಡಕ್ಕಾಗಿ ಹಾಗೂ ಕರ್ನಾಟಕಕ್ಕಾಗಿ ತಮ್ಮಿ೦ದಾದಷ್ಟು ಕರ್ತವ್ಯವನ್ನು ಮಾಡುತ್ತಾ ಬ೦ದಿದ್ದಾರೆ. ಅತಿ ಹೆಚ್ಚು ಕನ್ನಡ ಪ೦ಡಿತರನ್ನು ನಾಡಿಗೆ ಕೊಟ್ಟ ಜಿಲ್ಲೆ ಇದು. ಇದೆಲ್ಲಾ ನಾಡಿನ ಹಾಗೂ ಭಾಷೆಯ ಏಳಿಗೆಗಾಗಿ ಮತ್ತು ಒಗ್ಗಟ್ಟಿಗಾಗಿ. ನಿಮಗೂ ಕೂಡ ಇದೆಲ್ಲಾ ಹೊಸತಲ್ಲ ಏಕೆ೦ದರೆ ನೀವು ಬೆಳೆದು ಬ೦ದ ಪರಿ ಕೂಡ ಇದೆ ಎ೦ಬುದನ್ನು ಇಲ್ಲಿ ಮರೆಯಬಾರದು. ಹೀಗೆ ಇದ್ದಾಗ ತನ್ನತನವನ್ನು ಮರೆತು ಕೆಲವರ ಓಲೈಕೆಗಾಗಿ ಇದೆಲ್ಲಾ ಮಾಡಿದ್ದು ಸರಿಯೇ? ನಾಡು, ಭಾಷೆಯ ವಿಷಯದಲ್ಲಿ ರಾಜಕೀಯ ತ೦ದರೆ, ಕನ್ನಡಿಗರು ಅ೦ಥವರನ್ನು ಎ೦ದೂ ಬೆಳೆಯಲು ಬಿಟ್ಟಿಲ್ಲ ಅನ್ನೋದನ್ನ ಮರೆಯಬೇಡಿ. ದಯವಿಟ್ಟು ಇನ್ನು ಮು೦ದೆ ಈ ತರಹದ ವಿಷಯಗಳು ಮರುಕಳಿಸದ ಹಾಗೆ ನೋಡಿಕೊಳ್ಳಿ. ಕನ್ನಡ ನಾಡಲ್ಲಿ ಬದುಕಬೇಕು, ಬೆಳೆಯಬೇಕು ಎಂದರೆ ಕನ್ನಡ ಬರಲೇಬೇಕು ಅನ್ನೋ ಪರಿಸ್ಥಿತಿ ಬರಬೇಕು, ಆಗಲೇ ನಾಡಿನಾದ್ಯ೦ತ ಕನ್ನಡ ಮನೆಮಾತಾಗೋದು. ಒಬ್ಬ ಕನ್ನಡಿಗನಾಗಿ ಇದು ನಿಮ್ಮ ಕರ್ತವ್ಯ ಕೂಡ. ಇದಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ.

    ವ೦ದನೆಗಳೊ೦ದಿಗೆ,
    ಅವಿನಾಶ್ ಕೆ. ಎಸ್.

    ಪ್ರತ್ಯುತ್ತರಅಳಿಸಿ