ಸೋಮವಾರ, ಫೆಬ್ರವರಿ 28, 2011

2011-2012ರ ಕೇಂದ್ರ ರೈಲ್ವೆ ಬಜೆಟ್: ಒಂದು ವಿಶ್ಲೇಷಣೆ


25ನೇ ತಾರೀಖಿನಂದು 2011-2012ರ ಕೇಂದ್ರ ಸರ್ಕಾರದ ರೈಲ್ವೇ ಬಜೆಟ್ ಮಂಡಿಸಲಾಗಿದೆ. ನಮ್ಮ ರಾಜ್ಯಕ್ಕೆ ಬಹಳಷ್ಟು ಒಳ್ಳೆಯ ಯೋಜನೆಗಳನ್ನು ಈ ಬಾರಿ ಬಜೆಟ್ಟಿನಲ್ಲಿ ಘೋಷಿಸಲಾಗಿದೆ ಎಂದು ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷ ತನ್ನ ಬೆನ್ನು ತಟ್ಟಿಕೊಂಡಿದೆ. ಈ ಬಾರಿಯ ರೈಲ್ವೇ ಬಜೆಟ್ ನಮ್ಮ ರಾಜ್ಯಕ್ಕೆ ಐತಿಹಾಸಿಕ ಎಂದು ಹೇಳಿಕೆ ನೀಡಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ರಾತ್ರೋರಾತಿ ಜ್ಞಾನೋದಯವಾಗಿ ಮರುದಿನವೇ ರಾಜ್ಯಕ್ಕೆ ರೈಲ್ವೇ ಬಜೆಟ್ಟಿನಲ್ಲಿ ಅನ್ಯಾಯವಾಗಿದೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದರು.

ಈ ಬಜೆಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಏನೇನು ಸಿಕ್ಕಿದೆ ಅನ್ನೋದನ್ನ ನೋಡುವುದಕ್ಕಿಂತಲೂ, ನಿಜಕ್ಕೂ ನಮ್ಮ ನಾಡಿಗೆ ಎಂಥ ರೈಲ್ವೇ ವ್ಯವಸ್ಥೆ ಬೇಕು ಎನ್ನೋದನ್ನ ನೋಡೋಣ. ಇದರ ಜೊತೆಜೊತೆಗೆ ನಮ್ಮ ಈ ಸರ್ತಿಯ ಬಜೆಟ್ಟಿನಲ್ಲಿ ಏನು ಸಿಕ್ಕಿದೆ ಅನ್ನೋದನ್ನ ಸಹ ನೋಡೋಣ.

ನಾಡಿನ ಪ್ರಮುಖ ನಗರಗಳ ನಡುವೆ ಸಂಪರ್ಕ ಜಾಲ:
ಕರ್ನಾಟಕ ರಾಜ್ಯದ ಎಲ್ಲಾ ಪ್ರಮುಖ ಕೈಗಾರಿಕಾ ನಗರಗಳನ್ನು, ಬಂದರುಗಳನ್ನು, ಪ್ರವಾಸಿ ತಾಣಗಳನ್ನು, ಎಲ್ಲಾ ಜಿಲ್ಲಾಕೇಂದ್ರಗಳನ್ನು ಜೋಡಿಸುವಂತಹ ಯೋಜನೆಗಳು ನಮ್ಮ ನಾಡಿಗೆ ಬೇಕಾಗಿವೆ. ಮಂಗಳೂರು, ಪಡುಬಿದ್ರಿ, ಮಲ್ಪೆ, ಭಟ್ಕಳ, ಹೊನ್ನಾವರ ಮೊದಲಾದ ಬಂದರುಗಳಿಗೆ ರೈಲು ಸಂಚಾರ ಕಲ್ಪಿಸಬೇಕಾಗಿತ್ತು, ಆದರೆ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಗಮನ ಹರಿಸಿಲ್ಲ. ಹಾಗೆಯೇ ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಈ ಬಜೆಟ್ಟಿನಲ್ಲಿ ರೈಲು ಸಂಪರ್ಕ ಕಲ್ಪಿಸಲಾಗಿಲ್ಲ. ಈ ಬಜೆಟ್ಟಿನಲ್ಲಿ ಕೆಲವು ರೈಲ್ವೆ ಯೋಜನೆಗಳು ಮಂಜೂರಾಗಿದ್ದರು ಸಹ, ಕೆಲವು ರೈಲುಗಳ ಓಡಾಡುವ ದಾರಿ ತುಂಬಾ ಚಿಕ್ಕದು ಅಥವಾ ಈ ಮುಂಚೆಯೇ ಆ ನಗರಗಳಿಗೆ ಹಲವಾರು ರೈಲುಗಳು ಓಡಾಡುತ್ತಿವೆ. ಆದರೆ ಪ್ರಮುಖವಾಗಿ ಒಳನಾಡನ್ನು ಸಂಪರ್ಕಿಸಬೇಕಾಗಿದ್ದ ಹಲವು ಯೋಜನೆಗಳನ್ನು ಈ ಬಜೆಟ್ಟಿನಲ್ಲಿ ಪರಿಗಣಿಸಲಾಗಿಲ್ಲ. ಅಂತರ ರಾಜ್ಯ ರೈಲುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಇದರಿಂದ ವಲಸೆಗೆ ಉತ್ತೇಜನ ನೀಡಿದಂತಾಗಬಹುದು. ಹೊಸ ಮಾರ್ಗ, ಗೇಜ್ ಪರಿವರ್ತನೆ ಸೇರಿದಂತೆ ಮತ್ತಿತರ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಸಿಕ್ಕಿಲ್ಲ.

ಉದಾ: ಬೆಂಗಳೂರು - ಬೆಳಗಾವಿ, ಬೀದರ್ - ಬೆಂಗಳೂರು, ಮೈಸೂರು - ಬಿಜಾಪುರ, ಹೊಸಪೇಟೆ - ಬೆಂಗಳೂರು, ಹುಬ್ಬಳ್ಳಿ - ಗುಲ್ಬರ್ಗ, ಬೆಂಗಳೂರು - ಚಾಮರಾಜನಗರ, ಅರಸೀಕೆರೆ - ಬೆಂಗಳೂರು, ಬಂಗಾರಪೇಟೆ - ರಾಮನಗರ, ತುಮಕೂರು - ಚನ್ನಪಟ್ಟಣ, ಬೆಂಗಳೂರು - ದಾವಣಗೆರೆ - ಹುಬ್ಬಳ್ಳಿ - ಲೋಂಡಾ, ವಾಸ್ಕೋ - ಕಾರವಾರ - ಮಂಗಳೂರು - ಹಾಸನ ಮುಂತಾದ ಒಳನಾಡಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಜಾರಿಯಾಗಿಲ್ಲ.

ಇದರ ಜೊತೆಗೆ ಪ್ರಗತಿಯಲ್ಲಿರುವ ಮುನಿರಾಬಾದ್ - ಮೆಹಬೂಬನಗರ, ಕಡೂರು - ಚಿಕ್ಕಮಗಳೂರು - ಸಕಲೇಶಪುರ, ಬೀದರ್ - ಗುಲ್ಬರ್ಗ , ಚಿಕ್ಕಬಳ್ಳಾಪುರ - ಕೋಲಾರ, ನೆಲಮಂಗಲ - ಶ್ರವಣಬೆಳಗೊಳ, ಶ್ರೀನಿವಾಸಪುರ - ಮದನಪಲ್ಲಿ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ.

ಉತ್ತರ ಕರ್ನಾಟಕ, ಮಲೆನಾಡು, ಕೋಲಾರ ಜಿಲ್ಲೆ ಮತ್ತು ಕೊಂಕಣ ಭಾಗಕ್ಕೆ ಸಂಪರ್ಕ ಕಲ್ಪಿಸುವ 7 ಯೋಜನೆಗಳ ಬಗ್ಗೆ ಈ ಬಜೆಟ್ಟಿನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಹಣವನ್ನು ನೀಡುವುದಾಗಿ ಹೇಳಿತ್ತು. ಈ 7 ಯೋಜನೆಗಳು ಈ ರೀತಿ ಇವೆ: ಶಿವಮೊಗ್ಗ - ಹರಿಹರ, ವೈಟ್ ಫೀಲ್ಡ್ - ಕೋಲಾರ, ತುಮಕೂರು - ದಾವಣಗೆರೆ, ಗದಗ - ಹಾವೇರಿ, ಬಿಜಾಪುರ - ಶಹಾಬಾದ್, ಧಾರವಾಡ - ಬೆಳಗಾವಿ ಹಾಗೂ ತಾಳಗುಪ್ಪ - ಹೊನ್ನಾವರ.

ರೈಲುಮಾರ್ಗಗಳ ವಿದ್ಯುದೀಕರಣ:
ಇಡೀ ಕರ್ನಾಟಕದ ಶೇಕಡಾ 5%ಕ್ಕಿಂತ ಕಡಿಮೆ ರೈಲುಮಾರ್ಗ ವಿದ್ಯುದೀಕರಣವಾಗಿದ್ದು ಅದೂ ಕೂಡಾ ಅಂತರರಾಜ್ಯ ರೈಲುಮಾರ್ಗಗಳು ಮಾತ್ರವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಮಾರ್ಗಗಳು ಭಾಗಷಃ ಇಲ್ಲವೆಂದೇ ಹೇಳಬೇಕಾಗಿದೆ. ಈ ಬಜೆಟ್ಟಿನಲ್ಲಿ ರೈಲು ವಿದ್ಯುದೀಕರಣಕ್ಕೆ ಒತ್ತು ನೀಡಲಾಗಿಲ್ಲ.

ಪೂರಕ ಉದ್ದಿಮೆಗಳು:
ಈ ಸರತಿಯ ಬಜೆಟ್ಟಿನಲ್ಲಿ ರಾಜ್ಯಕ್ಕೆ ಹೆಚ್ಚು ಉಪಯೋಗವಾಗುವಂತಹ ಅಥವಾ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವಂತಹ ಪೂರಕ ಯೋಜನೆಗಳನು ಜಾರಿ ಮಾಡಲಾಗಿಲ್ಲ. ವಿವಿಧೋದ್ದೇಶ ತರಬೇತಿ ಕೇಂದ್ರ ಧಾರವಾಡದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ, ಹುಬ್ಬಳ್ಳಿ-ಧಾರವಾಡದಲ್ಲಿ ಪಾಲಿಟೆಕ್ನಿಕ್ ಶುರು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ರೈಲ್ವೆ ಕೋಚ್ ಕಾರ್ಖಾನೆ, ರೈಲುಗಳಲ್ಲಿ ಮಾರಲಾಗುವ ಊಟ, ನೀರು ಮೊದಲಾದ ಪ್ಯಾಕೆಜಿಂಗ್ ಕಾರ್ಖಾನೆಗಳನ್ನು ಕರ್ನಾಟಕಕ್ಕೇ ನೀಡಲಾಗಿಲ್ಲ. ಕೇವಲ ಹುಬ್ಬಳ್ಳಿ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಶ್ರೀನಿವಾಸಪುರಗಳ ರೈಲ್ವೆ ನಿಲ್ದಾಣಗಳನ್ನು ಆದರ್ಶ ನಿಲ್ದಾಣಗಳನ್ನಾಗಿ ಮಾಡುವುದಾಗಿ ಘೋಷಿಸಲಾಗಿದೆ, ಆದರೆ ನಮ್ಮ ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣಗಳೇ ಮೂಕಭೂತ ಸೌಕರ್ಯದಿಂದ ವಂಚಿತವಾಗಿವೆ, ಇಂತಹ ನಿಲ್ದಾನಗಳತ್ತ ಗಮನ ಹರಿಸಲಾಗಿಲ್ಲ.

ಪ್ರತ್ಯೇಕ ವಿಭಾಗಗಳಿಗೆ ಬೇಡಿಕೆ:
ಕಳೆದ ಎರೆಡು ದಶಕಗಳಿಂದ ಗುಲ್ಬರ್ಗಾ ಮತ್ತು ಮಂಗಳೂರು ವಿಭಾಗಗಳ ವಿಚಾರ ನೆನೆಗುದಿಗೆ ಬಿದ್ದಿದೆ. ಈ ವಿಭಾಗಗಳಾದರೆ ಪ್ರಸ್ತಾವಿತ ಯೋಜನೆಗಳ ನಿರ್ವಹಣೆ, ರೈಲ್ವೆ ಸೇವೆಗಳ ಉಸ್ತುವಾರಿ ಹಾಗು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಕನ್ನಡಿಗರಿಗೆ ಗ್ರಾಹಕ ಸೇವೆಯ ಜೊತೆಗೆ ನಾಡಿನ ಅನೇಕ ಯುವಕರಿಗೆ ಉದ್ಯೋಗಾವಕಾಶ ದೊರಕಿದಂತಾಗುತ್ತದೆ.

ಅರ್ಧದಷ್ಟು ತಾಲೂಕುಗಳಿಗೆ ರೈಲೇ ಇಲ್ಲಾ:
ರಾಜ್ಯದ 176 ತಾಲೂಕುಗಳ ಪೈಕಿ ಅರ್ಧದಷ್ಟು ತಾಲೂಕುಗಳು ಅಂದರೆ 86 ತಾಲೂಕುಗಳಿಗೆ ರೈಲಿನ ಸಂಪರ್ಕವೇ ಇಲ್ಲ. ಜಿಲ್ಲಾ ಕೇಂದ್ರಗಳಾದ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸಹ ರೈಲಿನ ಸಂಪರ್ಕದಿಂದ ದೂರ ಉಳಿದಿವೆ. ಕೊಡಗು ಜಿಲ್ಲೆಯಲ್ಲಿರುವ ಮೂರು ತಾಲೂಕುಗಳಲ್ಲಿಯೂ ರೈಲು ಇಲ್ಲಾ.

ಬಹುಶಃ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಬೇಕಾದ ಅಗತ್ಯತೆ ಇದೆ. ಜೊತೆಜೊತೆಗೆ ನಮ್ಮ ರಾಜ್ಯ ಸರ್ಕಾರ ಕೂಡ ನಮ್ಮ ನಾಡಿಗೆ ಬೇಕಾಗಿರುವ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಲು ಕೆಲಸ ಮಾಡಬೇಕು ಹಾಗೂ ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು.

ಶುಕ್ರವಾರ, ಫೆಬ್ರವರಿ 18, 2011

ನಮ್ಮ ರಾಜ್ಯವನ್ನು ಪ್ರತಿನಿಧಿಸಲು ಜನರಿಲ್ಲವೇ???

ಇದು ಖಂಡಿತಾ ಕರ್ನಾಟಕದ ದೌರ್ಭಾಗ್ಯದ ಪರಮಾವಧಿ. ಹೈಕಮಾಂಡ್ ದಾಸ್ಯಕ್ಕೆ ಸಿಲುಕಿರುವ ಬಿಜೆಪಿ ಪಕ್ಷ ಮತ್ತೊಂದು ಎಡವಟ್ಟು ತೀರ್ಮಾನ ಕೈಗೊಂಡಿದೆ. ಹಿರಿಯ ರಾಜಕಾರಣಿ ಶ್ರೀ ರಾಜಶೇಖರ ರ್ಮೂರ್ತಿಯವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಹಿಂದಿ ಚಲನಚಿತ್ರ ನಟಿ ಶ್ರೀಮತಿ ಹೇಮಾ ಮಾಲಿನಿ ಅವರನ್ನ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ರಾಜ್ಯಸಭಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಭಾ ಸದಸ್ಯ ಮುಖ್ಯವಾಗಿ ಆಯಾ ರಾಜ್ಯದ ಪ್ರತಿನಿಧಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಭೆ ಅನ್ನುವುದು ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಕೇಂದ್ರದಲ್ಲಿ ಲೋಕಸಭೆಗಿರುವಷ್ಟೇ ಪ್ರಾಮುಖ್ಯತೆ ರಾಜ್ಯಸಭೆಗೂ ಇದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಆಯ್ಕೆ ಮಾಡುತ್ತಾರೆ.

ನಮ್ಮ ರಾಜ್ಯವನ್ನೂ ಪ್ರತಿನಿಧಿಸಲು ಅರ್ಹ ಜನಪ್ರತಿನಿಧಿಗಳು ಇಲ್ಲವೇ?
ಇಷ್ಟಕ್ಕೂ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಮಾಲಿನಿಯವರನ್ನು ಕಣಕ್ಕಿಳಿಸಲು ಇರುವ ಅರ್ಹತೆಯಾದರೂ ಏನು? ಮೊದಲನೆಯದಾಗಿ ಹೇಮಾ ಮಾಲಿನಿ ನಮ್ಮ ನಾಡಿನವರಲ್ಲ, ಹೋಗಲಿ ಆ ಕಾರಣವನ್ನು ಬದಿಗಿಟ್ಟು ನೋಡೋಣವೆಂದರೆ ಅವರಿಂದ ನಮ್ಮ ರಾಜ್ಯಕ್ಕೆ ಆಗಿರುವ ಉಪಯೋಗವಾದರೂ ಏನು? ನಮ್ಮ ನಾಡಿನ ಯಾವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ರಾಜ್ಯ ಮಟ್ಟದಲ್ಲಾಗಲಿ ಅಥವಾ ಕೇಂದ್ರ ಮಟ್ಟದಲ್ಲಾಗಲಿ ಪ್ರಯತ್ನಿಸಿದ್ದಾರೆ? ನಮ್ಮ ನೆಲ, ಜಲ, ಭಾಷೆ, ಉದ್ಯೋಗ, ಉದ್ದಿಮೆ ಹೀಗೆ ಯಾವ ಕಾರಣಕ್ಕಾಗಿ ನಮ್ಮ ನಾಡಿಗಾಗಿ ಕೆಲಸ ಮಾಡಿದ್ದಾರೆ? ಯಾವುದೇ ದೃಷ್ಠಿಯಿಂದ ನೋಡಿದರೂ ಸಹ ಹೇಮಾ ಮಾಲಿನಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶಿಸಲು ಅರ್ಹರಲ್ಲ. ಇಂತಹುದೇ ತಪ್ಪನ್ನು ಹಿಂದೆ ಬಿಜೆಪಿ ಹೈಕಮಾಂಡ್ ವೆಂಕಯ್ಯ ನಾಯ್ಡು ಅವರನ್ನ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿವಾಗ ಮಾಡಿತ್ತು. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ಸಹಿತ ಇಂತಹುದೇ ತಪ್ಪನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಗಮನಿಸಬೇಕಾದ ಅಂಶವೆಂದರೆ ನಮ್ಮ ನಾಡಿನಲ್ಲಿ ರಾಜ್ಯಸಭೆಗೆ ಅರ್ಹರಾಗಿರುವ ಯಾವುದೇ ನಾಯಕರು ಬಿಜೆಪಿ ಹೈಕಮಾಂಡಿಗೆ ಕಾಣಸಿಗಲಿಲ್ಲವೇ? ನಮ್ಮ ನಾಡನ್ನ ಉದ್ಧಾರ ಮಾಡೋದಕ್ಕೆ ಬೇರೆ ರಾಜ್ಯದ ಜನರನ್ನ ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆಯೇ? ನಮ್ಮ ನಾಡಿನ ರಾಜಕೀಯ ನಾಯಕರು ಆಗುತ್ತಿರುವ ತಪ್ಪನ್ನು ನೋಡಿಕೊಂಡು ಸುಮ್ಮನಿದ್ದಾರೆಯೇ? ಸುಮಾರು ಮೂರ್ನಾಲ್ಕು ದಶಕಗಳಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ದುಡಿದಿರುವಂತಹ ಬಿಜೆಪಿಯ ಕಾರ್ಯಕರ್ತರೆಲ್ಲಾ ಹೈಕಮಾಂಡ್ ಕಣ್ಣಿಗೆ ಕಾಣಿಸುತ್ತಿಲ್ಲವೇ? ಈ ಸರ್ತಿಯಾದರು ಬಿಜೆಪಿ ಪಕ್ಷ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾ? ಕಾದು ನೋಡಬೇಕು.........

ಮಂಗಳವಾರ, ಫೆಬ್ರವರಿ 15, 2011

ಜನರ ಹಿತವನ್ನೇ ಮರೆತಿರುವ ಜನಪ್ರತಿನಿಧಿಗಳು


ನಮ್ಮ ರಾಜ್ಯದ ಸದ್ಯದ ಭವಿಷ್ಯವನ್ನು ನೆನೆಸಿಕೊಂಡರೆ ಭಯವಾಗಿ ಹೋಗುತ್ತದೆ. ಕಳೆದ ವರ್ಷದ ಅಂತ್ಯದಲ್ಲಿ ಬಂದ ಎರಡನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಅನ್ನುವುದನ್ನ ನಿಮಗೆ ಈಗಾಗಲೇ ತಿಳಿಸಲಾಗಿದೆ. ಹಾಗೆಯೇ ಈ ತೀರ್ಪು ಐತಿಹಾಸಿಕ ಅಂತ ಬಣ್ಣಿಸಿ ನಮ್ಮ ರಾಜ್ಯಸರ್ಕಾರ ಹಾಗು ಇತರೇ ರಾಜಕೀಯ ಪಕ್ಷಗಳು ಸುಮ್ಮನಾಗಿ ಹೋಗಿದ್ದವು. ತೀರ್ಪಿನ ವಿರುದ್ಧವಾಗಿ ಧ್ವನಿ ಎತ್ತಿದವರು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ತೀರ್ಪನ್ನು ವಿಮರ್ಶಿಸುವುದಾಗಿ ಹೇಳಿಕೆ ನೀಡಿತು. ರಾಜ್ಯ ಸರ್ಕಾರದ ಈ ನಿಲುವು ಸ್ವಾಗತಾರ್ಹವೇ.

ಜನಪ್ರತಿನಿಧಿಗಳ ಸಭೆಯನ್ನು ಕರೆದ ಸರ್ಕಾರ:
ಕೃಷ್ಣಾ ನ್ಯಾಯಾಧಿಕರಣ ಆಲಮಟ್ಟಿ ಜಲಾಶಯದ ಎತ್ತರ, ರಾಜ್ಯಕ್ಕೆ ಹಂಚಿರುವ ನೀರಿನ ಪಾಲು, ಇದರ ಬಳಕೆಗೆ ಅನುಸರಿಸಬೇಕಾದ ವಿಧಾನಗಳ ಕುರಿತು ಕೃಷ್ಣಾ ಕಣಿವೆಯ 17 ಜಿಲ್ಲೆಗಳ ಜನಪ್ರತಿನಿಧಗಳ ಅಭಿಪ್ರಾಯ ಸಂಗ್ರಹಿಸಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಫೆಬ್ರವರಿ 14ರಂದು ಜನಪ್ರತಿನಿಧಗಳ ಸಭೆ ಕರೆದಿದ್ದರು. ಈ ಸಭೆಯ ಮತ್ತೊಂದು ಮುಖ್ಯವಾದ ಅಂಶವೇನೆಂದರೆ, ಇದರಲ್ಲಿ ಜನಪ್ರತಿನಿಧಿಗಳು ಕೇವಲ ಹಾಜರಿರದೆ ಚರ್ಚೆಯಲ್ಲಿ ಪಾಲ್ಗೊಂಡು ಜನರ ನಿಲುವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಸಭೆಗೆ ಬಾರದ ಜನಪ್ರತಿನಿಧಿಗಳು:
ರಾಜ್ಯದ ಬಹುಪಾಲು ಜಿಲ್ಲೆಗಳನ್ನು ಹಸನುಗೊಳಿಸುವ ಶಕ್ತಿ ಇರುವ ಕೃಷ್ಣಾ ನದಿಯ ತೀರ್ಪಿನಲ್ಲಿ ಸುಮಾರು 100 ಟಿಎಂಸಿ ಅಡಿ ನೀರು ಕಡಿಮೆ ಸಿಕ್ಕಿದ್ದರೂ ಈ ಭಾಗದ ಜನಪ್ರತಿನಿಧಿಗಳು ತೀರ್ಪಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ರಾಜ್ಯದ ರೈತರ, ಕೃಷಿಯ ಹಾಗೂ ಜನರ ಭವಿಷ್ಯವನ್ನ ನಿರ್ಧರಿಸುವ ಇಂತಹ ಜವಾಬ್ದಾರಿಯುತ ಸಭೆಗಳಿಗೆ ಜನಪ್ರತಿನಿಧಿಗಳು ಹಾಜರಾಗದೆ ಇರುವಂತೆ ಇವರುಗಳು ಮಾಡುವ ಘನಂದಾರಿ ಕೆಲಸಗಳಾದರು ಏನು? ಇದರಲ್ಲಿ ನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸೇರಿದ್ದಾರೆ. ಕೆಲವೇ ಶಾಸಕರನ್ನ ಬಿಟ್ಟರೆ ಉಳಿದ ಶಾಸಕರು, ಸಚಿವರುಗಳು ಹಾಗು ಸಂಸದರು ಈ ಸಭೆ ಹಾಜರಾಗಲೇ ಇಲ್ಲ. ಆಯಾ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಆಯಾ ಪ್ರದೇಶದ ಶಾಸಕರ, ಸಂಸದರ ಹಾಗೂ ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ, ಅದೊಂದನ್ನು ಬಿಟ್ಟು ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲಕ ಕರ್ನಾಟಕದ ಅಭಿವೃದ್ಧಿ ಕಾಣಬಹುದು, ಕರ್ನಾಟಕದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಆದರೆ ಕೊಟ್ಟ ಮಾತಿನಂತೆ ನಮ್ಮ ಜನಪ್ರತಿನಿಧಿಗಳು ನಡೆದು ಕೊಳ್ಳುತ್ತಿದ್ದಾರೆಯೇ? ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆಯೇ?