ಭಾನುವಾರ, ಮೇ 20, 2012

ಮುಖ್ಯಮಂತ್ರಿಗಳೇ, ಯಳ್ಳೂರು ಇರೋದು ಮಹಾರಾಷ್ಟ್ರದಲ್ಲಾ?


ಇಷ್ಟಕ್ಕೂ ಈಗ ನಾನು ಹೇಳಲು ಹೊರಟಿರುವ ಊರು ಹೆಚ್ಚು ಜನರಿಗೆ ಪರಿಚಿತವಿಲ್ಲದೇ ಇರಬಹುದು. ಯಳ್ಳೂರು ಅನ್ನೋ ಗ್ರಾಮ ಇರುವುದು ಬೆಳಗಾವಿ ನಗರದಿಂದ ಕೆಲವೇ ಕಿಲೋಮೀಟರ್ ಗಳ ದೂರದಲ್ಲಿ. ಯಳ್ಳೂರಿಗೆ ಬೆಳಗಾವಿಯಿಂದ ಹತ್ತಾರು ಬಸ್ಸುಗಳು ಬೆಳಗ್ಗೆಯಿಂದ ರಾತ್ರಿಯವರಿಗೂ ಓಡಾಡುತ್ತವೆ. ಯಳ್ಳೂರಿನಲ್ಲಿ ಒಂದು ಗ್ರಾಮ ಪಂಚಾಯಿತಿ ಸಹ ಇದೆ. ಯಳ್ಳೂರು ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಸರಿ ಇದರಲ್ಲೇನು ವಿಶೇಷ ಅಂತೀರ?? ಒಂದು ವಿಶೇಷ ಇದೆ ಅದೇನೆಂದರೆ ಯಳ್ಳೂರು ಮಹಾರಾಷ್ಟ್ರದಲ್ಲಿದೆ!!!! ಹೌದು ಸರಿಯಾಗಿ ಓದಿಕೊಳ್ಳಿ, ಯಳ್ಳೂರು ಇರುವುದು ಮಹಾರಾಷ್ಟ್ರದಲ್ಲಿ. ಹಾಗಂತ ನಾನು ಹೇಳುತ್ತಿಲ್ಲ ಬದಲಾಗಿ ಯಳ್ಳೂರಿನಲ್ಲಿರುವ ಬೋರ್ಡ್ ಹೇಳುತ್ತದೆ. ಹಾಗೂ ಈ ಬೋರ್ಡ್ ಹಾಕಿರುವುದು ಎಂ.ಇ.ಎಸ್ ನವರು.

(ಚಿತ್ರಕೃಪೆ: ಅಂತರ್ಜಾಲ)

ಬೋರ್ಡ್ ತಗೆಯೋದಿಲ್ಲ ಅಂದ ಸರ್ಕಾರ

ಹಲವು ಶತಮಾನಗಳಿಂದ ಇಲ್ಲಿ ಪರಸ್ಪರವಾಗಿ ಸಾಮರಸ್ಯದಿಂದ ಬದುಕುತ್ತಿರುವ ಜನರ ಮಧ್ಯ ಭಾಷಾ ವೈಷ್ಯಮ್ಯವನ್ನು ಬೆಳಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಎಂ.ಇ.ಎಸ್ ನಂತಹ ನಾಡದ್ರೋಹಿ ಸಂಘಟನೆಯೊಂದು ಹಲವು ದಶಕಗಳಿಂದ ಜನರ ನಡುವೆ ಭಾಷಾ ವೈಷಮ್ಯದ ಬೀಜವನ್ನು ಬಿತ್ತಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತ, ಕರಗಿ ಹೋಗುತ್ತಿರುವ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಆದರೆ ರಾಜ್ಯದ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿರುವ ಇಂತಹ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ನಮ್ಮ ಸರ್ಕಾರ ಕೈಕಟ್ಟಿಕೊಂಡು ಸುಮ್ಮನೇ ಕುಳಿತಿದೆ. ಇದಲ್ಲದೇ ಮಹಾ ಮೇಳಾವದ ಹೆಸರಿನಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳನ್ನು ಇಲ್ಲಿಗೆ ಕರೆಸಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವಂತಹ ಉದ್ಧಟತನದ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಸಹ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಲೇ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕನ್ನಡ ಪರ ಸಂಘಟನೆಗಳು, ಅದರಲ್ಲೂ ಪ್ರಮುಖವಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಬಾಹಿರವಾಗಿ ಹಾಕಲಾಗಿರುವ ಮಹಾರಾಷ್ಟ್ರ ಬೋರ್ಡನ್ನು ಹಾಗೂ ಜನರಲ್ಲಿ ವೈಮನಸ್ಯ ಬಿತ್ತುತ್ತಿರುವ ಎಂ.ಇ.ಎಸ್ ನಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹೋರಾಟ ಮಾಡಿದರೆ, ಅವರನ್ನು ಸರ್ಕಾರ ಜೈಲಿಗೆ ಅಟ್ಟುತ್ತದೆ ಹಾಗೂ ಇವರನ್ನು ಮಾಧ್ಯಮಗಳಲ್ಲಿ ಕಿಡಿಗೇಡಿಗಳು ಅನ್ನೋ ಹೆಸರಿನಲ್ಲಿ ಲೇವಡಿ ಮಾಡಲಾಗುತ್ತಿದೆ. ಬೋರ್ಡ್ ತೆಗೆದು ಹಾಕಿ ಎಂದು ಆಗ್ರಹಿಸಿದರೆ, ಇದು ಭಾಷಾ ಸೂಕ್ಷವಾಗಿರುವ ಪ್ರದೇಶ ಹಾಗಾಗಿ ಬೋರ್ಡ್ ತಗೆಯಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿನ ಅಧಿಕಾರಿಗಳು ಹಾಗೂ ಸರ್ಕಾರ ಅಸಾಹಾಯಕತೆ ತೋರಿಸುತ್ತಿದೆ.

ನಮ್ಮ ಹಿಂದಿನ ಯಾವುದೇ ಸರ್ಕಾರಗಳಾಗಲಿ, ಅಧಿಕಾರಸ್ಥ ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಗಟ್ಟಿಯಾಗಿ ನಿಂತು ಇಂತಹ ಕಿಡಿಗೇಡಿ ಜನರನ್ನು, ನಾಡಿನ ಸಾಮರಸ್ಯ ಕದಡುವಂತಹ ಕಾರ್ಯಕ್ರಮಗಳನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಅವರೇನಾದರು ಅವರ ಕೆಲಸಗಳನ್ನು ಸರಿಯಾಗಿ ಮಾಡಿದ್ದರೆ. ಯಾಕೆ ಕರವೇಯ ನೂರಾರು ಕಾರ್ಯಕರ್ತರು ಜೈಲಿನ ವಾಸ ಅನುಭವಿಸಬೇಕಾಗುತ್ತಿತ್ತು? ಅನ್ಯಾಯವನ್ನು ಪ್ರಶ್ನಿಸಿದರೆ ಅವರಿಗೆ ಕಿಡಿಗೇಡಿಗಳು ಅನ್ನೋ ಹಣೆಪಟ್ಟಿ ಬೇರೆ. ಈ ಕೂಡಲೇ ಸರ್ಕಾರ ಭಾಷಾ ಅಲ್ಪಸಂಖ್ಯತರನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣದ ಕೆಲಸ ಬಿಟ್ಟು, ನಾಡು, ನೆಲ. ಜಲಕ್ಕೆ ಬದ್ಧ ಎಂಬ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರಬೇಕು.

ಕೊನೆಯದಾಗಿ: ನಾಡು, ನುಡಿ, ನೆಲ ಹಾಗೂ ಜಲದ ವಿಷಯದಲ್ಲಿ ನಮ್ಮ ನಾಡಿಗೆ ಅನ್ಯಾಯವಾದರೆ ತಾವು ಜೀವ ಕೊಡಲು ಸಿದ್ಧ ಅನ್ನುವ ನಮ್ಮ ಚಿತ್ರರಂಗದ ಗಣ್ಯರು ಎಲ್ಲಿದ್ದಾರೆ? ಬೆಳಗ್ಗೆಯಿಂದ ಟಿವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದದ್ದನ್ನು ನೋಡಿದೆ, ಆದ್ರೆ ಯಾಕೋ ನಮ್ಮ ಚಿತ್ರರಂಗದವರು ಮಾತ್ರ ಯಾರೂ ಕಣ್ಣಿಗೆ ಕಾಣಲೇ ಇಲ್ಲಾ!!!

ಮಂಗಳವಾರ, ಮೇ 1, 2012

ಕನ್ನಡ ಚಿತ್ರರಂಗ ಹಾಗೂ ಟಿವಿ ಮಾಧ್ಯಮಗಳ ತಾಲೀಬಾನಿಕರಣ

ಇತ್ತೀಚಿಗೆ ಡಬ್ಬಿಂಗ್ ವಿರುದ್ಧ ಹಾಗೂ ಅದರಿಂದ ಕನ್ನಡದ ಮೇಲೆ ಆಗುವ ಪರಿಣಾಮಗಳ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಈ ಸಂಧರ್ಭದಲ್ಲಿ ಗೆಳಯ ವಸಂತ್ ಶೆಟ್ಟಿ ಅವರು ಬರಿದ್ದಿದ್ದ ಈ ಲೇಖನ ಚುರುಮುರಿ ಬ್ಲಾಗ್ ನಲ್ಲಿ ಪ್ರಕಟವಾಗಿತ್ತು. ಈ ಲೇಖನವನ್ನು ಅವರ ಅನುಮತಿಯೊಂದಿಗೆ ಕನ್ನಡಕ್ಕೆ ಅನುವಾದಿಸಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.






ಹಿಂದಿ ನಟ ಅಮೀರ್ ಖಾನ್ "ಸತ್ಯ ಮೇವ ಜಯತೇ" ಅನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಅಡಿಯಿಡುವುದನ್ನು ಪ್ರಕಟಿಸಿದರು. ಈ ಕಾರ್ಯಕ್ರಮವನ್ನು ಸ್ಟಾರ್ ಸಮೂಹದ ಚಾನೆಲ್ ಗಳ ಮೂಲಕ ಭಾರತದ ವಿವಿಧ ಭಾಷೆಗಳಲ್ಲಿ ಪ್ರಸಾರ ಮಾಡಲು ಯೋಜಿಸಲಾಗಿತ್ತು. ಕನ್ನಡದಲ್ಲಿ, ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಮೇ ೬ ರಿಂದ ಕನ್ನಡದಲ್ಲಿ ಪ್ರಸಾರವಾಗಬೇಕಿತ್ತು. ಆದ್ರೆ ಈಗ ಕನ್ನಡ ಸಂಸ್ಕೃತಿ, ಭಾಷೆಯ ರಕ್ಷಣೆಯ ನೆಪದಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಹೇರಿರುವ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಈ ಕಾರ್ಯಕ್ರಮ ಕನ್ನಡದಲ್ಲಿ ಪ್ರಸಾರವಾಗುತ್ತಿಲ್ಲ.

ಕಳೆದ ವರ್ಷ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬಗೆಗಿನ ಕಾರ್ಯಕ್ರಮವೊಂದನ್ನು ಡಬ್ ಮಾಡಿ ಪ್ರಸಾರ ಮಾಡಲು ಮುಂದಾದ ಜೀ ಕನ್ನಡ ವಾಹಿನಿಯ ಮೇಲೆ ದಾಳಿ ನಡೆಸಿದ ಗುಂಪುಗಳೇ ಈ ಬಾರಿಯೂ ಇಂತಹ ಕೆಲಸಕ್ಕೆ ಮುಂದಾಗಿವೆ ಅನ್ನಲಾಗಿದೆ. ಪುಣ್ಯಕ್ಕೆ, ಈ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ಮೊದಲೇ ಸುವರ್ಣ ವಾಹಿನಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಘಟನೆಗಳು ನಮ್ಮ ಮುಂದೆ ಒಂದು ದೊಡ್ಡ ಪ್ರಶ್ನೆಯನ್ನು ಎತ್ತುತ್ತವೆ: ಒಂದು ಸಂವಿಧಾನಿಕ ಪ್ರಜಾತಂತ್ರದಲ್ಲಿ ಬ್ಯಾನ್ ಮಾಡುವ ಅಧಿಕಾರವನ್ನು ಈ ಸಂಸ್ಥೆಗಳಿಗೆ ನೀಡಿದ್ದು ಯಾರು?

ಯಾವುದೇ ನಾಗರೀಕ ಪ್ರಜಾಪ್ರಭುತ್ವ ಅನುಸರಿಸುವ ಸಮಾಜದಲ್ಲಿ, ಸರ್ಕಾರವೇ ವಿಧಿಸಿದ ಬ್ಯಾನ್ ಆದರೂ ಸಹ ಅಂತವುಗಳಿಗೆ ಯಾವುದೇ ಜಾಗವಿಲ್ಲ. ಪ್ರಜಾಪ್ರಭುತ್ವದಲ್ಲಿ, ಎಲ್ಲಿಯವರೆಗೆ ನನ್ನ ಬೇಡಿಕೆಗಳು ಕಾನೂನು ಬದ್ಧವಾಗಿದೆಯೋ ಅಲ್ಲಿಯವರೆಗೂ ನಾನೊಬ್ಬ ಗ್ರಾಹಕನಾಗಿ ನನಗೆ ಬೇಕಿರುವ ಎಲ್ಲ ಮಾಹಿತಿ, ಜ್ಞಾನ ಮತ್ತು ಮನರಂಜನೆಯ ಅಗತ್ಯಗಳನ್ನು ನನ್ನ ಇಷ್ಟದ ಭಾಷೆಯಲ್ಲಿ ಪಡೆಯುವ ಎಲ್ಲ ಹಕ್ಕು ನನಗಿದೆ.

ನನ್ನಂತೆಯೇ ಲಕ್ಷಾಂತರ ಕನ್ನಡಿಗರಿಗೂ ಮಕ್ಕಳ ಮನತಣಿಸುವ ಡಿಸ್ನಿಯ ಯಾವುದೋ ಒಂದು ಪಾತ್ರ ಕನ್ನಡದಲ್ಲಿ ಮಾತನಾಡುವುದನ್ನು ನೋಡುವ ಆಸೆಯಿರಬಹುದು, ಇಲ್ಲವೇ,ಡಿಸ್ಕವರಿ, ಅನಿಮಲ್ ಪ್ಲಾನೆಟಿನಲ್ಲಿ ಬರುವ ಅಮೇಜಾನ್ ಕಾಡಿನ ಬಗೆಗಿನ ಕಾರ್ಯಕ್ರಮವನ್ನು ಕನ್ನಡದಲ್ಲೇ ನೋಡುವ ಬಯಕೆಯಿರಬಹುದು, ಅಥವಾ ಅವತಾರ್ ೩ಡಿ ತರಹದ ಸಿನೆಮಾವನ್ನು ಕನ್ನಡದಲ್ಲೇ ನೋಡಿ ಆನಂದಿಸುವ ಮನಸ್ಸಿರಬಹುದು. ನನ್ನ ನುಡಿಯಲ್ಲೇ ಇದೆಲ್ಲವನ್ನು ನೋಡಬೇಕು ಅನ್ನುವ ನನ್ನ ನ್ಯಾಯಯುತ ಬೇಡಿಕೆಯನ್ನು ಯಾಕೆ ನಿರಾಕರಿಸಲಾಗುತ್ತಿದೆ?
  • ಪ್ರಜಾಪ್ರಭುತ್ವವಿರುವ ರಾಜ್ಯವಾಗಿ ಕರ್ನಾಟಕ ಉಳಿದಿಲ್ಲವೇ? 
  • ಪ್ರಜೆಗಳಿಂದ ಆಯ್ಕೆಯಾಗದ ಕೆಲವೇ ಕೆಲವು ದಬ್ಬಾಳಿಕೆಯ ಜನರ ಆಳ್ವಿಕೆ ನಡೆಯುತ್ತಿರುವ ಡಮ್ಮಿ ಪ್ರಜಾಪ್ರಭುತ್ವವಾಗಿ ಕರ್ನಾಟಕ ಬದಲಾಗಿದೆಯೇ? 
  • ಇಂತಹ ನಡೆಯನ್ನು ನೀವು ಬೇರಾವುದಾದರೂ ಚಿತ್ರೋದ್ಯಮದಲ್ಲಿ ಕಂಡಿದ್ದೀರಾ? 
ಬೇರೆ ಯಾವುದೇ ವ್ಯಾಪಾರದಂತೆ ಸಿನೆಮಾ ಉದ್ಯಮ ಕೂಡಾ ಬೇಡಿಕೆ ಮತ್ತು ಪೂರೈಕೆ ಮೇಲೆಯೇ ನಡೆಯುತ್ತೆ. ಯಾವ ವಸ್ತು ಇಲ್ಲವೇ ಸೇವೆಗೆ ಬೇಡಿಕೆ ಇದೆಯೋ ಅದನ್ನು ಲಾಭದ ಜೊತೆ ಪೂರೈಸುವ ಪೂರೈಕೆದಾರರಿರುತ್ತಾರೆ. ಸರಿ ತಾನೇ?

ದುಃಖದ ವಿಚಾರ ಅಂದರೆ ಕನ್ನಡ ಚಿತ್ರೋದ್ಯಮ ಮತ್ತು ಟಿವಿ ಉದ್ಯಮಕ್ಕೆ ಈ ಸೂತ್ರ ಅನ್ವಯಿಸಲ್ಲ.

ಮಾರುಕಟ್ಟೆಯಲ್ಲಿ ಡಬ್ ಆದ ಕಂಟೆಂಟ್ ನ ಸಾಧಕ/ಬಾಧಕಗಳೇನು ಅನ್ನುವುದರ ಆಧಾರದ ಮೇಲೆ ನಡೆಯದೇ ಕನ್ನಡ ಉದ್ಯಮ ಏನಿದ್ದರೂ ತಾಲಿಬಾನ್ ಮಾದರಿಯಲ್ಲಿ ಟಿವಿ ವಾಹಿನಿಗಳಿಗೆ ಡಬ್ ಆದ ಕಾರ್ಯಕ್ರಮ ಪ್ರಸಾರ ಮಾಡದಂತೆ ಫತ್ವಾ ಹೊರಡಿಸುವುದರ ಮೇಲೆ ನಡೆಯುತ್ತೆ. ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಿ ಗೆಲ್ಲುವ ಛಲದ ಮೇಲೆ ನಡೆಯದೇ ಏನಿದ್ದರೂ ಸಬ್ಸಿಡಿ ರೂಪದಲ್ಲಿ ೬೦% ಗೂ ಹೆಚ್ಚು ಚಿತ್ರಗಳಿಗೆ ಜನರ ತೆರಿಗೆ ಹಣವನ್ನು ಹೀರುವುದರ ಬಲದ ಮೇಲೆ ನಡೆಯುತ್ತೆ. ತನ್ನ ವೈಫಲ್ಯಕ್ಕೆ ಹಗಲು ರಾತ್ರಿ ಸರ್ಕಾರವನ್ನು,ಗ್ರಾಹಕರನ್ನು ಹೊಣೆಯಾಗಿಸುವುದರ ಮೇಲೆ ನಡೆಯುತ್ತೆ.


ಕನ್ನಡ ಚಿತ್ರ ಮತ್ತು ಟಿವಿ ಉದ್ಯಮ ಖಾಸಗಿ ವ್ಯಕ್ತಿಗಳಿಂದ ಲಾಭಕ್ಕಾಗಿ ನಡೆಯುವ ಉದ್ಯಮವೇ ಹೊರತು ಸರ್ಕಾರಿ ಪ್ರಾಯೋಜಿತ ಸಾರ್ವಜನಿಕರ ಸೇವೆಗಾಗಿ ಮುಡಿಪಿಟ್ಟ ಉದ್ಯಮವಲ್ಲ ಅನ್ನುವುದೇ ಅವರಿಗೆ ಮರೆತು ಹೋದ ಹಾಗಿದೆ.

ಕನ್ನಡ ಚಿತ್ರೋದ್ಯಮ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಒಂದು ಲಿಂಗ್ವಿಸ್ಟಿಕ್ ರೆಜಿಸ್ಟರ್ ಆಗಿ ಅದರ ಸಾಮಾಜಿಕ ಪರಿಣಾಮ ದೊಡ್ಡದಿದೆ. ಯುವ ಕನ್ನಡಿಗರ ನಾಲಿಗೆಯ ಮೇಲೆ ಕನ್ನಡ ಉಳಿಸುವಲ್ಲಿ ಅದರ ಪಾತ್ರ ನಿರ್ಣಾಯಕವೂ ಹೌದು. ಜಾಗತೀಕರಣದ ಈ ದಿನಗಳಲ್ಲಿ ಪ್ರಜಾಸತ್ತಾತ್ಮಕವಲ್ಲದ ಮತ್ತು ಸಂವಿಧಾನ ಬಾಹಿರವಾದ ಈ ಬ್ಯಾನ್ ನಿಂದಾಗಿ ಕನ್ನಡದಲ್ಲೇ ಜ್ಞಾನ ಮತ್ತು ಮನರಂಜನೆ ಪಡೆಯುವ ವಿಷಯದಲ್ಲಿ ಕನ್ನಡಿಗರು ಹೆಚ್ಚಿನ ಆಯ್ಕೆಗಳೇ ಇಲ್ಲದ ಸ್ಥಿತಿ ತಲುಪಿದ್ದಾರೆ. ಅದೇ ಕುಯ್ಯುವ ಧಾರಾವಾಹಿಗಳು, ಕಿತ್ತಾಡುವ ಸುದ್ದಿವಾಹಿನಿಗಳು ಮತ್ತು ಮಚ್ಚು-ಕೊಚ್ಚು ಚಿತ್ರಗಳನ್ನು ಬಿಟ್ಟರೆ ನನ್ನ ಬುದ್ದಿ ಶಕ್ತಿಗೆ ಚುರುಕು ಮುಟ್ಟಿಸುವ ಯಾವ ಅಂಶವೂ ಕನ್ನಡದಲ್ಲಿ ನನಗೆ ಸಿಗುತ್ತಿಲ್ಲ.

ಇಂತಹ ಯಾವುದೇ ಬ್ಯಾನ್ ಇಲ್ಲದ ತೆಲುಗು, ತಮಿಳು ಮತ್ತು ಹಿಂದಿ ಉದ್ಯಮಗಳು ಟಿವಿ ಮತ್ತು ಸಿನೆಮಾ ಎರಡರಲ್ಲೂ ನಮಗಿಂತಲೂ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವುದು ಇಂತಹ ಅಸಂವಿಧಾನಿಕ ಬ್ಯಾನ್ ಗಳನ್ನು ಆದಷ್ಟು ಬೇಗ ಆಚೆ ಸರಿಸಬೇಕು ಅನ್ನುವ ಸ್ಪಷ್ಟ ಸಂದೇಶವನ್ನು ನಮಗೆ ಕೊಡುತ್ತಿವೆ.

ಈ ನಿಟ್ಟಿನಲ್ಲಿ ಕರ್ನಾಟಕದ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಡಬ್ಬಿಂಗ್ ನಿಷೇಧ ಹೇಗೆ ಕನ್ನಡದ ಭವಿಷ್ಯಕ್ಕೆ ಹೊಡೆತ ಕೊಡುತ್ತಿದೆ ಅನ್ನುವ ಅಂಶವನ್ನು ಜನಸಮುದಾಯಕ್ಕೆ,ಸರ್ಕಾರಕ್ಕೆ ತಲುಪಿಸುವ ಕೆಲಸಕ್ಕೆ ಮಾಧ್ಯಮಗಳು ಮುಂದಾಗಬೇಕಿವೆ. ಈ ಬಗ್ಗೆ ಹೆಚ್ಚೆಚ್ಚು ಚರ್ಚೆ, ಮಾತುಕತೆಗಳನ್ನು ನಡೆಸುವಂತೆ ಮಾಧ್ಯಮಗಳು ಈ ವಿಷಯವನ್ನು ಎತ್ತಿ ಹಿಡಿಯಬೇಕಿದೆ ಮತ್ತು ಈ ಎಲ್ಲ ಚರ್ಚೆಗಳಲ್ಲಿ ಎಲ್ಲರಿಗಿಂತ ಪ್ರಮುಖವಾಗಿ ಈ ಉದ್ಯಮಗಳ ಅಸ್ತಿತ್ವಕ್ಕೆ ಬೆನ್ನೆಲುಬಾಗಿರುವ ಗ್ರಾಹಕನಿಗೆ ತನ್ನ ಧ್ವನಿ ತಿಳಿಸಲು ಅವಕಾಶ ಮಾಡಿಕೊಡಬೇಕಾಗಿದೆ. ಗ್ರಾಹಕನಿಂದಲೇ ನಡೆಯುವ ಈ ಉದ್ಯಮಗಳು ಗ್ರಾಹಕನ ಬೇಕು,ಬೇಡಗಳೇನು ಅನ್ನುವುದನ್ನು ಗಮನಿಸುವ ಒತ್ತಡ ಈ ಚರ್ಚೆಗಳಿಂದಾಗಬೇಕಿದೆ.