ಕನ್ನಡದ ನನ್ನೆಲ್ಲ ಬಂಧುಗಳಿಗೆ ಐವತ್ತಾರನೇ ಕರ್ನಾಟಕ ರಾಜ್ಯೋತ್ಸವದ ಸವಿ ಹಾರೈಕೆಗಳು. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ನಡೆದುಕೊಳ್ಳಬೇಕಾಗಿರುವ ಸಂದರ್ಭ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವೆನ್ನಿಸುತ್ತದೆ. ೩ ಪ್ರಾಂತಗಳು ಹಾಗೂ ೧೬ ವಿವಿಧ ಸಂಸ್ಥಾನಗಳಲ್ಲಿ ಹಂಚಿ ಹೋಗಿತ್ತು ನಮ್ಮ ಕನ್ನಡ ನಾಡು, ನಮ್ಮ ನಾಡಿನ ಹಿರಿಯರ ಅವಿರತ ಶ್ರಮ, ತ್ಯಾಗ, ಬಲಿದಾನದ ಫಲವಾಗಿ ಏಕೀಕೃತ ಕರ್ನಾಟಕ ಸ್ಥಾಪಿತವಾಯಿತು. ನಮ್ಮ ಹಿರಿಯರು ಕಂಡ ಸುವರ್ಣ ಕರ್ನಾಟಕದ ಕನಸು ಇನ್ನೂ ನನಸಾಗಿದೆಯೇ? ಖಂಡಿತವಾಗಿಯೂ ಇಲ್ಲಾ. ಈ ಕನಸು ಈಡೇರಬೇಕಾದರೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕಾಗಿದೆ ಹಾಗೂ ಅದು ಅಗತ್ಯವೂ ಕೂಡ.
ಕಳೆದೆರೆಡು ದಶಕದಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ನಾಡಿಗೆ ಹಲವಾರು ಬೃಹತ್ ಉದ್ಯಮಗಳು ಬಂದವು, ಅದರ ಜೊತೆ ಜೊತೆಗೆ ಹೊರ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತಾ ಬಂತು ಹಾಗೂ ಇಂದು ಸಹ ಅದು ಅನಿಯಮಿತವಾಗಿ ನಡೆಯುತ್ತಲೇ ಇದೆ. ಇದರಿಂದಾಗಿ ನಮ್ಮ ನಾಡಿನ ಜನರಿಗೆ ಕೆಲಸಗಳು ದೊರಕದಂತಾಗಿವೆ. ಆದರೆ ಇಂತಹ ಒಂದು ಅನಿಯಮಿತ ವಲಸೆಯಿಂದಾಗಿ ಒಂದು ರಾಜ್ಯದ ಮೇಲೆ ಬೀರಬಹುದಾದ ಪರಿಣಾಮ ಮಾತ್ರ ಭಯಂಕರ. ಇದಕ್ಕೆ ಉದಾಹರಣೆಯಂದರೆ ವಾಣಿಜ್ಯ ನಗರಿ ಮುಂಬಯಿ. ಇಂದು ಅಲ್ಲಿ ವಲಸೆಯಿಂದಾಗಿ ತಮ್ಮ ತಾಯಿನುಡಿಯ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜನರಿಗೆ ಇಂದು ಇದರ ಪರಿಣಾಮ ಅರ್ಥವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಮಹಾರಾಷ್ಟ್ರದಲ್ಲಿ ಅಗಿರುವಂತಹ ಅನಾಹುತ ಆಗಿಲ್ಲ. ಆದರೆ ಸುಮ್ಮನೆ ಇದ್ದರೆ ಇಂತಹ ಅನಾಹುತ ಕಟ್ಟಿಟ್ಟ ಬುತ್ತಿ.
ಮಣ್ಣಿನ ಮಕ್ಕಳಿಗೆ ಹೆಚ್ಚಿನ ಒತ್ತು ಸಿಗಲಿ:
ವಲಸಿಯಿಂದ ಆಗಬಹುದಾದ ಪರಿಣಾಮಕ್ಕೆ ಇತ್ತೀಚಿನ ಉದಾಹರಣೆಯಾಗಿ “ನಮ್ಮ ಮೆಟ್ರೋ”ದಲ್ಲಿ ಆಗಿರುವ ಈ ಪ್ರಕರಣವೇ ಸಾಕ್ಷಿ. ಜನರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಈ ಮನುಷ್ಯ ಮಾತನಾಡುವ ಧಾಟಿ ನೋಡಿ.... “ಇದು ಹಿಂದುಸ್ಥಾನ, ಹಿಂದುಸ್ಥಾನದ ಭಾಷೆ ಹಿಂದಿಯಾಗಿದೆ, ಅದು ಗೊತ್ತಿದ್ದ ಮೇಲೆ ಕನ್ನಡ ಯಾಕೆ ಕಲಿಯಬೇಕು? ಕನ್ನಡ ಕಲಿಯಲು ನನಗೆ ಇಷ್ಟವಿಲ್ಲ ಯಾಕಂದರೆ ಕನ್ನಡ ಚೆನ್ನಾಗಿಲ್ಲ” ಅಂತ ಹಲ್ಲು ಕಿರಿಯುತ್ತಾ ಹೇಳುತ್ತಿದ್ದಾನೆ. ಇಂತವರಿಂದ ಸಾಮಾನ್ಯ ಜನರಿಗೆ ಯಾವ ತರಹದ ಮಾಹಿತಿ ಸಿಗಲು ಸಾಧ್ಯ? ಯಾವ ರೀತಿಯಿಂದ ಇವನು ಜನರನ್ನು ಸುರಕ್ಷಿತವಾಗಿರಿ ಅಂತ ಹೇಳುತ್ತಾನೆ? ವಲಸೆಯಿಂದ ಆಗಬಹುದಾದ ಪರಿಣಾಮದ ಮೊದಲನೆ ಹೆಜ್ಜೆ ಇದು. ಇದು ಕೇವಲ ಇವನೊಬ್ಬನ ಮಾತಲ್ಲ. ಕೂಲಿ ಮಾಡುವ ಕಾರ್ಮಿಕನಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಹೊರ ರಾಜ್ಯದ ಜನರ ಪ್ರತೀಕವಾಗಿ ಇವನು ಕಾಣುತ್ತಾನೆ.
ಬೆಂಗಳೂರಿನ ಹೆಮ್ಮೆಯಾಗಿರುವ ನಮ್ಮ ಮೆಟ್ರೋ ಸಲುವಾಗಿ ಎಷ್ಟೋ ಕುಟುಂಬಗಳು ಇಂದು ಬೀದಿ ಪಾಲಾಗಿವೆ? ದಶಕಗಳಿಂದ ಬಾಳುತ್ತಿದ್ದ ಜನರನ್ನ ಒಕ್ಕಲೆಬ್ಬಿಸಿ ಬೃಹತ್ ಕಟ್ಟಡಗಳನ್ನು ಕಟ್ಟಿರುವ ನಮ್ಮ ಮೆಟ್ರೋ ಸಂಸ್ಥೆಯವರು ಎಷ್ಟು ಕುಟುಂಬಗಳಿಗೆ ಉದ್ಯೋಗಗಳನ್ನು ನೀಡಿದ್ದಾರೆ? ಇಂತವರಿಗೆ ಕೆಲಸ ಕೊಡಬೇಕಾಗಿರುವುದು ಸಂಸ್ಥೆಯ ಕರ್ತವ್ಯವಲ್ಲವೇ? ಒಂದು ಗಾರ್ಡ್ ಕೆಲಸಕ್ಕೂ ಸಹ ನಮ್ಮ ಕನ್ನಡಿಗರು ಅರ್ಹರಲ್ಲವೇ? ನಮ್ಮ ಮೆಟ್ರೋನಲ್ಲಿರುವ ಸುಮಾರು ೮೪೦ ಕೆಲಸಗಳಲ್ಲಿ ಕೇವಲ ೩೨೦ ಹುದ್ದೆಗಳಿಗೆ ಮಾತ್ರ ಕನ್ನಡಿಗರನ್ನ ನೇಮಿಸಲಾಗಿದೆ, ಉಳಿದದ್ದೆಲ್ಲ ಪರಭಾಷಿಕರ ಪಾಲು. ಇದು ಯಾವ ಸೀಮೆಯ ನ್ಯಾಯ? ನಿಜಕ್ಕೂ ನಮ್ಮ ಸರ್ಕಾರಕ್ಕೆ ರಾಜ್ಯದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಗಮನ ಹರಿಸಲು ಸಮಯವಿದೆಯೋ ಇಲ್ಲವೇ ಗೊತ್ತಾಗುತಿಲ್ಲ. ತ್ರಿಭಾಷೆಯ ಮೂಲಕ ಭಾರತದ ಒಗ್ಗೂಡಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಮೆಟ್ರೋ ಸಂಸ್ಥೆ ನಿಜಕ್ಕೂ ನಮ್ಮದೇ ಅನ್ನುವ ಅನುಮಾನ ಕಾಡಲು ಶುರುವಾಗಿದೆ.
ಸುಮಾರು ದಶಕಗಳಿಂದ ಜಾರಿಗೆ ಬರದೆ ಧೂಳು ಹಿಡಿದು ಕೂತಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತನ್ನಿ ಎಂದು ಪ್ರತಿ ಬಾರಿಯೂ ಬೀದಿಗಿಳಿಯುವ ಕನ್ನಡ ಪರ ಸಂಘಟನೆಗಳ ಆಗ್ರಹಕ್ಕೆ ಸರ್ಕಾರ ಕೊಡುತ್ತಿರುವ ಕಿಮ್ಮತಾದರೂ ಏನು? ಒಂದು ಬಾಗಿಲು ಕಾಯುವ ಕೆಲಸಕ್ಕೂ ಹೊರಗಿನವರನ್ನು ತಂದು ತುಂಬಿದರೆ ಇಲ್ಲಿನ ಮಕ್ಕಳಿಗೆ ಇಲ್ಲಿ ಕೆಲಸ ಸಿಗದೇ ಬೇರೆಲ್ಲಿ ಸಾಧ್ಯ? ಇದಕೆಲ್ಲ ಪರಿಹಾರವೆಂದರೆ ಮೊದಲನೆಯದಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು. ಮಣ್ಣಿನ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಈಗಾಗಲೇ ಇಂತಹ ವ್ಯವಸ್ಥೆಯನ್ನು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಒರಿಸ್ಸಾ ಹಾಗೂ ಗುರಜಾತ ದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದರ ಜೊತೆಜೊತೆಗೆ ಉದ್ಯಮಗಳಿಗೆ ತಮ್ಮ ಹೊಲ-ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳಿಗೆ ಸರಿಯಾದ ಪರಿಹಾರದ ಜೊತೆಗೆ ಸ್ಥಾಪಿಸಲಾಗುವ ಉದ್ಯಮದಲ್ಲಿ ಅವರ ವಿಧ್ಯಾರ್ಹತೆಗೆ ತಕ್ಕಂತೆ ಕೆಲಸಗಳನ್ನು ನೀಡಬೇಕು. ರಾಜ್ಯದಲ್ಲಿ ಹೊಸದಾಗಿ ಶುರುವಾಗುವ ಯಾವುದೇ ಉದ್ಯಮವಿದ್ದರೂ ಮೊದಲಿಗ ಇಲ್ಲಿಯ ಜನರಿಗೆ ಕೆಲಸಗಳನ್ನು ನೀಡಬೇಕು ಎಂದು ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಅನಿಯಮಿತವಾಗಿ ಆಗುತ್ತಿರುವ ವಲಸೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
ಇದೆಲ್ಲಾ ಆಗಬೇಕೆಂದರೆ ನಮ್ಮ ರಾಜಕೀಯ ಪಕ್ಷಗಳಿಗೆ ನಾಡಿಗೆ ಒಳಿತನ್ನು ಮಾಡುವ ಇಚ್ಛಾಶಕ್ತಿ ಇರಬೇಕು. ಆದರೆ ನಿಜಕ್ಕೂ ಈ ಕಾಳಜಿ ಇಂದು ಅಸ್ತಿತ್ವದಲ್ಲಿರುವ ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಖಂಡಿತಾ ಇಲ್ಲ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕಗಳ ಬಗ್ಗೆ ಕಾಳಜಿ ಇರುವ ಒಂದು ನಿಜವಾದ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಬೇಕು. ಕನ್ನಡಿಗರ ಏಳಿಗೆಯನ್ನೇ ಮೂಲಮಂತ್ರವನ್ನಾಗಿ ಇಟ್ಟುಕೊಂಡು ಕೆಲಸ ಮಾಡುವ ಪಕ್ಷ ನಮಗೆ ಬೇಕು. ಆಗ ಮಾತ್ರ ನಮ್ಮ ಹಿರಿಯರು ನಮಗಾಗಿ ಮಾಡಿರುವ ತ್ಯಾಗ, ಬಲಿದಾನ ಹೋರಾಟ ಸಾರ್ಥಕವಾದಂತೆ. ಏನಂತೀರಿ ಗೆಳೆಯರೇ?
Yavano halka nan maga kannada chennagilla antha ironu.......
ಪ್ರತ್ಯುತ್ತರಅಳಿಸಿYavano halka nan maga kannada chennagilla antha ironu.......
ಪ್ರತ್ಯುತ್ತರಅಳಿಸಿ