ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿರುವ ಬೆಳಗಾವಿಯ ಘಟನೆ. ಕರ್ನಾಟಕ ರಾಜ್ಯೋತ್ಸವದ ದಿನದಂದು ನಮ್ಮ ರಾಜ್ಯದ ಬೆಳಗಾವಿ ಜೆಲ್ಲೆಯ ಮಹಾಪೌರರಾಗಿರುವ ಶ್ರೀಮತಿ ಮಂದಾ ಬಾಳೆಕುಂದ್ರಿ ಅವರು ಎಂಇಎಸ್ ನಂತಹ ಪುಂಡ ಸಂಘಟನೆ ಜೊತೆ ಸೇರಿ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ನಂತರವೂ ಸಹ ಸರ್ಕಾರ ಇನ್ನು ತನಿಖೆ ನಡೆಸುತ್ತಲೇ ಇದೆ. ಆದರೆ ಇದನ್ನ ವಿರೋಧಿಸಿ ಕರವೇಯಂತಹ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಇಳಿದರೆ ತಕ್ಷಣವೇ ಬಂಧಿಸಿ ಹಲವಾರು ಆಪಾದನೆಗಳನ್ನು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತದೆ. ಇದು ನಮ್ಮ ಸರ್ಕಾರದ ಕನ್ನಡ ಪರ ನೀತಿ. ಕೇವಲ ಇದೊಂದೆ ಅಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರಲು ನಮ್ಮ ಬಿಜೆಪಿ ಪಕ್ಷ ಎಂಇಎಸ್ ನಂತಹ ಸಂಘಟನೆ ಜೊತೆ ಕೈಜೋಡಿಸಿ ಅಧಿಕಾರಕ್ಕೆ ಬರುತ್ತದೆ. ಒಂದು ಕಡೆಯಲ್ಲಿ ಎಂಇಎಸ್ ಅನ್ನು ವಿರೋಧಿಸುವ ನಾಟಕವಾಡುತ್ತ ಇನ್ನೊಂದು ಕಡೆ ಸಾಮರಸ್ಯದಿಂದ ಬದುಕುತ್ತಿರುವ ಕನ್ನಡ ಹಾಗೂ ಮರಾಠಿಗರ ನಡುವೆ ಹುಳಿ ಹಿಂಡುತ್ತಿರುವ ಎಂಇಎಸ್ ನಂತಹ ಸಂಘಟನೆಯೊಂದಿಗೆ ಜೊತೆ ಕೈಜೋಡಿಸುವ ಬಿಜೆಪಿ ಪಕ್ಷ ಯಾವ ನೈತಿಕತೆಯನ್ನು ಉಳಿಸಿಕೊಂಡಿದೆ? ಕೆಲವು ಸಾವಿರ ಮರಾಠಿ ಮೂಲಭೂತವಾಗಳ ಓಟಿಗಾಗಿ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಬೆಂಕಿ ಇಡುತ್ತಿರುವ ಬಿಜೆಪಿ ಪಕ್ಷಕ್ಕೆ ಕನ್ನಡಿಗರೆಂದರೆ ಅಸಡ್ಡೆಯೇ?
ಮಹಾರಾಷ್ಟ್ರದಲ್ಲಿ “ಕರ್ನಾಟಕ ರಾಜ್ಯ” ಫಲಕ ಹಾಕಿ:
ಹೀಗೆ ಹೇಳಿದವರು ಬೇರಾರು ಅಲ್ಲ ಸ್ವತ: ಬೆಳಗಾವಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಬಿಜೆಪಿ ಪಕ್ಷದ ಸಂಸದ ಶ್ರೀ ಸುರೇಶ್ ಅಂಗಡಿಯವರು. ಇಂದಿನ ಕನ್ನಡ ಪ್ರಭದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕನ್ನಡ ಪರ ಸಂಘಟನೆಯೊಂದು ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿರು ಮಹಾರಾಷ್ಟ್ರ ರಾಜ್ಯ ಅನ್ನುವ ಫಲಕವನ್ನು ತಗೆಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಕೊಡಲು ಹೋದಾಗ ಅಲ್ಲಿದ್ದ ನಮ್ಮ ಸಂಸದರಿಂದ ಬಂದ ಉತ್ತರ
ನಿಮಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ “ಕರ್ನಾಟಕ ರಾಜ್ಯ” ಎಂಬ ನಾಮ ಫಲಕ ಹಾಕಿರಿ. ಕನ್ನಡಿಗರು ಇಲ್ಲಿ ಗಲಾಟೆ ಮಾಡಿದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡಿದರೆ ಅವರು ಕೋರ್ಟ್ ಗೆ ಹೋಗುತ್ತಾರೆ
ಹಾಗಾದರೆ ನಮ್ಮ ಮಾನ್ಯ ಸಂಸದರಿಗೆ ಎಂಇಎಸ್ ಮಾಡಿದ್ದು ತಪ್ಪಾಗಿ ಕಂಡಿಲ್ಲವೇ? “ಕರ್ನಾಟಕ ರಾಜ್ಯ” ಅನ್ನೋ ನಾಮ ಫಲಕ ಕರ್ನಾಟಕದಲ್ಲಿ ಬಿಟ್ಟು ಮಹಾರಾಷ್ಟ್ರದಲ್ಲಿ ಹಾಕಿದರೆ ಆಗುವ ಉಪಯೋಗವೇನು? ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯದ ಹೆಸರಿನ ನಾಮ ಫಲಕಗಳಿದ್ದರೆ ಅದನ್ನು ತಗೆಯದೇ ಬಿಡಬೇಕೆ? ಅವರು ಕೋರ್ಟ್ ಗೆ ಹೋಗುತ್ತಾರೆ ಅನ್ನೋ ಕಾರಣಕ್ಕೆ ನಾವು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದೇ? ಈ ರೀತಿಯ ಉದ್ಧಟತನದ ಕೆಲಸಗಳು ಪದೇ ಪದೇ ಬೆಳಗಾವಿಯಲ್ಲಿ ಆಗುತ್ತಿದ್ದರು ಸಹ ನಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ? ನಮ್ಮ ಕನ್ನಡ ಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ತೋರಿಸುವ ತರಾತುರಿಯನ್ನು ಸರ್ಕಾರ ಈ ನಾಡವಿರೋಧಿಗಳ ಮೇಲೆ ಕ್ರಮಕೈಗೊಳ್ಳಲು ಯಾಕೆ ಮುಂದಾಗುತ್ತಿಲ್ಲ?
ಹುಸಿ ರಾಷ್ಟ್ರೀಯತೆಯ ಸೋಗಿನಲ್ಲಿ ಜನರನ್ನು ಭಾಷೆಯ ಹೆಸರಿನಲ್ಲಿ ಒಡೆದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಈ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗಾಗುತ್ತಿರುವ ಅವಮಾನ, ನಮ್ಮ ಜನರಿಗೆ ಆಗುತ್ತಿರುವ ನೋವು, ಹಿಂಸೆಗೆ ಕಡಿವಾಣ ಬೀಳಬೇಕಾದಲ್ಲಿ ನಮ್ಮ ನಾಡು-ನುಡಿ-ನಾಡಿಗರನ್ನು ರಕ್ಷಿಸುವಂತಹ ಒಂದು ಪ್ರಾದೇಶಿಕ ಪಕ್ಷ ನಿಜವಾಗಲೂ ಬೇಕು ಅನ್ನುವ ನಮ್ಮ ಆಸೆ ಇಂತಹ ಘಟನೆಗಳಿಂದ ಗಟ್ಟಿಯಾಗುತ್ತಲೇ ಹೋಗುತ್ತಿದೆ.