ಗುರುವಾರ, ಡಿಸೆಂಬರ್ 9, 2010

ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮದಾಗಲಿ

ಘಟನೆ ೧:
ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಯಡ್ಯುರಪ್ಪನವರು, ತಮಿಳುನಾಡಿನ ತಿರುಚಂದೂರು ದೇವಸ್ಥಾನದ ಅಭಿವೃದ್ಧಿಗಾಗಿ ೧ ಕೋಟಿ ರುಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರು ನೀಡಿರುವುದು ತಮ್ಮ ಸ್ವಂತದ್ದಲ್ಲ ಎಂಬುದು ನಿಮ್ಮ ಗಮನಕ್ಕೆ, ಅವರು ನೀಡಿರುವುದು ರಾಜ್ಯದ ಬೊಕ್ಕಸದಿಂದ, ಅಂದರೆ ನಮ್ಮ ನಿಮ್ಮೆಲ್ಲರ ಶ್ರಮದ ತೆರಿಗೆಯ ಹಣದಿಂದ.

ಘಟನೆ ೨:
ನಿನ್ನೆ ಬೆಂಗಳೂರಿನಲ್ಲಿ ನಡೆದ "ಅಧಿಕೃತ ಭಾಷೆ ಅನುಷ್ಠಾನ" ಸಮಿತಿ ಸಭೆಯಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ. ರಂಗನಾಥ ಅವರು ಎಲ್ಲಾ ಸಾರ್ವಜನಿಕ ಉದ್ದಿಮೆಗಳಲ್ಲಿ ಹಿಂದಿ ಆಡಳಿತ ಭಾಷೆಯನ್ನಾಗಿ ಬಳಸುವುದನ್ನ ಕಡ್ಡಾಯ ಮಾಡಬೇಕು, ಹಿಂದಿ ಉಪಯೋಗಿಸುವುದರ ಲಾಭ-ನಷ್ಟಗಳ ಲೆಕ್ಕಾಚಾರ ನೋಡಬಾರದು, ಹಿಂದಿ ಭಾಷೆ ಅನುಷ್ಠಾನವೇ ಮುಖ್ಯ ಕರ್ತವ್ಯ ಎಂದು ಬುದ್ಧಿಮಾತು ಹೇಳಿದ್ದಾರೆ. ನಮ್ಮ ನಾಡಿನಲ್ಲಿ ಹಿಂದಿಯಲ್ಲಿನ ಆಡಳಿತ ಎಷ್ಟು ಪ್ರಸ್ತುತ ಅನ್ನುವುದು ಅವರೇ ಹೇಳಬೇಕು.

ಈ ಮೇಲಿನ ಎರೆಡು ಘಟನೆಗಳು ಸಾಂಕೇತಿಕ ಮಾತ್ರ. ಇಂತಹ ನೂರಾರು ಘಟನೆಗಳು ನಮ್ಮ ನಾಡಿನಲ್ಲಿ ನಡೆಯುತ್ತವೆ, ನಡೆಯುತ್ತಿರುತ್ತವೆ. ಜನರ ಕಲ್ಯಾಣ ಮುಖ್ಯವಾಗಬೇಕಾಗಿದ್ದ ಈ ಘಟನೆಗಳಲ್ಲಿ ಅದರ ತದ್ವಿರುದ್ಧ ಅಂಶಗಳು ಕಾಣಿಸುತ್ತಿವೆ. ಇಲ್ಲಿ ನಮಗೆ ಕಾಣುತ್ತಿರುವ ಮುಖ್ಯ ಅಂಶ ಪ್ರಜಾಪ್ರಭುತ್ವ ನಮ್ಮ ನಾಡಿನಲ್ಲಿ, ನಮ್ಮ ದೇಶದಲ್ಲಿ ಸರಿಯಾಗಿ ಅನುಷ್ಠಾನಕ್ಕೆ ಬಾರದಿರುವುದು. ಪ್ರಜಾಪ್ರಭುತ್ವದ ಅರ್ಥವನ್ನೇ ನಮ್ಮ ನಾಯಕರುಗಳು ತಿರುಚಿ ಬರೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅರಸನಾಗಬೇಕಾಗಿದ್ದ ಪ್ರಜೆ ಇವತ್ತು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಆಳಾಗಿದ್ದಾನೆ. ಇಂದಿನ ಪರಿಸ್ಥಿತಿಯಲ್ಲಿ ಪ್ರಜೆಗಳು ತಮ್ಮ ಧ್ವನಿಯನ್ನು ಸಹ ಎತ್ತದಿರುವ ಹಾಗೆ ಆಗಿಹೋಗಿದೆ.

ಪ್ರಜಾಪ್ರಭುತ್ವದ ನಿಜವಾದ ಅರ್ಥವೇನು?
ಭಾರತ ದೇಶ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಅನ್ನುವ ಹೆಗ್ಗಳಿಕೆ ಹೊಂದಿದೆ. ಆದರೆ ಅದು ಎಷ್ಟರಮಟ್ಟಿಗೆ ಅನುಷ್ಠಾನದಲ್ಲಿದೆ ಅನ್ನುವುದೇ ಯಕ್ಷ ಪ್ರಶ್ನೆ? ಜನರಿಂದ, ಜನರಿಗಾಗಿ, ಜನರಿಗೋಸ್ಕರ ಅನ್ನುವ ಪ್ರಜಾಪ್ರಭುತ್ವದ ಮೂಲ ಮಂತ್ರವನ್ನ ಎಷ್ಟರಮಟ್ಟಿಗೆ ಆಡಳಿತದಲ್ಲಿ ನಾವುಗಳು ಇಂದು ಕಾಣೋಕೆ ಸಾಧ್ಯ?

ಇಂದಿನ ರಾಜಕೀಯ ವ್ಯವಸ್ಥೆಯನ್ನು ನಾವುಗಳು ನಿಜವಾದ ಪ್ರಜಾಪ್ರಭುತ್ವ ಎಂದು ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೂಲ/ಬುನಾದಿಯೇ ಪ್ರಜೆಗಳು ಅಂದರೆ ನಾವುಗಳು. ನಾವುಗಳು ತಗೆದುಕೊಳ್ಳುವ ನಿರ್ಧಾರವೇ ಅಂತಿಮ. ನಿಜವಾದ ಪ್ರಜಾಪ್ರಭುತ್ವದಲ್ಲಿ ಸರಕಾರದ ಪಾತ್ರ ನಿಜಕ್ಕೂ ಕಡಿಮೆಯಾಗಿರುತ್ತದೆ. ಅಂದರೆ ಸರ್ಕಾರ ಕೇವಲ ಜನರು ಕೈಗೊಳ್ಳುವ ನಿರ್ಧಾರಗಳನ್ನು ಶಿರಸಾವಹಿಸಿ ಪಾಲಿಸುವ ಒಬ್ಬ ನೌಕರನಿದ್ದಂತೆ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕಾದ ಸೌಕರ್ಯವನ್ನು ಒದಗಿಸುವುದೇ ಸರ್ಕಾರದ ಕೆಲಸ. ಸರ್ಕಾರದ ಯಾವುದೇ ನಿರ್ಧಾರಗಳು ಜನರ ಒಪ್ಪಿಗೆ ಇಲ್ಲದೆ ಜಾರಿಗೆ ಬರುವಂತಿಲ್ಲ.

ತನ್ನ ಹಕ್ಕುಗಳನ್ನು ಮರೆತಿರುವ ಪ್ರಜೆ
ಮೇಲೆ ಹೇಳಿದಂತೆ ಇಂದಿನ (ಅ)ವ್ಯವಸ್ಥೆಗೆ ಕೇವಲ ರಾಜಕೀಯ ಪಕ್ಷಗಳು ಅಥವಾ ಜನಪ್ರತಿನಿಧಿಗಳು ಮಾತ್ರ ಕಾರಣವಲ್ಲ, ಬದಲಾಗಿ ಒಂದು ನಾಡಿನ ಸರ್ಕಾರವನ್ನೇ ಆರಿಸುವ ಶಕ್ತಿಯನ್ನ ಹೊಂದಿರುವಂತಹ ಪ್ರಜೆಗಳ ನಿರ್ಲಕ್ಷತನ, ಅಸಡ್ಡೆ, ಬೇಜವಾಬ್ದಾರಿತನವೇ ಕಾರಣ. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದೇ ಮುಕ್ತ ಚುನಾವಣೆಗಳಲ್ಲಿ. ತನ್ನ ನಾಡಿಗೆ, ತನ್ನ ಕ್ಷೇತ್ರಕ್ಕೆ ಒಳ್ಳೆಯದನ್ನು ಮಾಡಬಹುದಾದ ಪಕ್ಷ ಅಥವಾ ಜನಪ್ರತಿನಿಧಿಯನ್ನ ಆರಿಸುವ ಹೊಣೆ ನಾಗರಿಕನ ಮೇಲಿದೆ.
ಶಿಕ್ಷಣದ ಕೊರತೆಯಿಂದ ಬಳಲುತ್ತಿರುವ ಒಂದು ವರ್ಗದ ಜನರು ಹಣ, ಹೆಂಡಕ್ಕೆ ಮಾರುಹೋಗಿ ತಮ್ಮ ನಿಜವಾದ ಶಕ್ತಿಯನ್ನ ಕಳೆದುಕೊಳ್ಳುತ್ತಿದ್ದಾರೆ, ಇನ್ನೊಂದೆಡೆ ಸುಶಿಕ್ಷಿತರು ಅಂತ ಕರೆಸಿಕೊಳುವ ಸಮುದಾಯ ಸಮಾಜವನ್ನು ತಿರಸ್ಕಾರ ನೋಟದಿಂದ ನೋಡುತ್ತಾ ತಮ್ಮ ನಿಜವಾದ ಕರ್ತವ್ಯವನ್ನೇ ಮರೆತು ಈ ದೇಶದ ಗತಿ ಇಷ್ಟೇ ಅಂತ ಹಲುಬುತ್ತ ಕುಳಿತಿದ್ದಾರೆ.
ಇವೆಲ್ಲರ ಮಧ್ಯೆ ಜನ ಸೇವಕನಾಗಿ ಕೆಲಸ ಮಾಡಬೇಕಾಗಿದ್ದ ಜನಪ್ರತಿನಿಧಿ ಇಂದು ಜನರ ಮೇಲೆ ಸವಾರಿ ಮಾಡುವ ಹಂತ ಬಂದು ತಲುಪಿದ್ದಾನೆ. ಸರ್ಕಾರ ತಾನು ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ಜನರ ಮುಂದೆ ಕಾರಣ ಹೇಳಬೇಕು. ಆದರೆ ಇಂದು ನಾವುಗಳು ಸರ್ಕಾರಗಳಿಗೆ ಕಟ್ಟುವ ತೆರಿಗೆ ಹಣ ನಾಡಿನ ಹೊರಗಿರುವ ದೇವಸ್ಥಾನಗಳಿಗೆ ಕೋಟ್ಯಾಂತರ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಹೋಗುತ್ತಿದೆ, ದೇಶದ ಏಕತೆಯಂಬ ಹುಸಿ ನಂಬಿಕೆಯಲ್ಲಿ ನಾಡಿನ ಭಾಷೆಯಾಗಿರದ ಹಿಂದಿಯನ್ನು ಬಲವಂತವಾಗಿ ನಮ್ಮ ಮೇಲೆ ಹಾಗು ಶಿಕ್ಷಣದ ಮೂಲಕ ನಮ್ಮ ಮಕ್ಕಳ ಮೇಲೆ ಹೇರಲಾಗುತ್ತಿದೆ. ಈ ಹೇರಿಕೆಗೆ ಖರ್ಚು ಮಾಡಲಾಗುತ್ತಿರುವ ಕೋಟ್ಯಾಂತರ ರೂಪಾಯಿಗಳು ಸಹ ನಮ್ಮ ತೆರಿಗೆಯ ಹಣವೇ. ಅಭಿವೃದ್ಧಿಗೆ ಮೀಸಲಿರಬೇಕಾಗಿದ್ದ ನಮ್ಮ ತೆರಿಗೆ ಹಣ ಇನ್ನು ಹಲವಾರು ರೀತಿಯಲ್ಲಿ ಪೋಲಾಗಿ ಹೋಗುತ್ತಿದೆ. ಇವಕ್ಕೆಲ್ಲ ಪರಿಹಾರ ಒಂದೇ ನಾವುಗಳೆಲ್ಲ ಜಾಗೃತರಾಗುವುದು. ನಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದು. ಆಗಲೇ ನಿಜವಾದ ಪ್ರಜಾಪ್ರಭುತ್ವ ನಮ್ಮದಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ