ಬುಧವಾರ, ನವೆಂಬರ್ 10, 2010

ಕರ್ನಾಟಕದ ಊರಿನ ಹೆಸರುಗಳ ಬದಲಾವಣೆ ಯಾವಾಗ?

ನಿನ್ನೆ ಅಂದರೆ ೦೯ನೇ ನವಂಬರ್ ಅಂದು ಒರಿಸ್ಸಾ ಅಂತ ಕರೆಯಲ್ಪಡುತ್ತಿದ್ದ ರಾಜ್ಯಕ್ಕೆ ಸಂತೋಷಪಡುವ ದಿನ ಒದಗಿ ಬಂದಿದೆ, ಕಾರಣ ಅವರು ಬ್ರಿಟೀಷರು ಇಟ್ಟಿದ್ದ ಒರಿಸ್ಸಾ ಅನ್ನುವ ಬದಲು ತಮ್ಮ ರಾಜ್ಯಕ್ಕೆ ಮೂಲ ಹೆಸರಾದ ಒಡಿಶಾ ಅನ್ನುವ ಹೆಸರನ್ನು ಪಡೆದುಕೊಂಡಿದ್ದಾರೆ. ಹಾಗಯೇ ತಮ್ಮ ನಾಡಿನ ಭಾಷೆಯಾದ ಒರಿಯಾ ಅಂತ ಕರೆಯಲ್ಪಡುತ್ತಿದ್ದ ಭಾಷೆಯನ್ನ ಇನ್ನು ಮುಂದೆ ಒಡಿಯಾ ಅಂತ ಕರೆದುಕೊಳ್ಳುತ್ತಾರೆ. ಇದು ಬಹುಷಃ ಸಾಧ್ಯವಾಗಿದ್ದಕ್ಕೆ ಕಾರಣ ಅಲ್ಲಿ ಈಗ ಆಳುತ್ತಿರುವುದು ಪ್ರಾದೇಶಿಕ ಪಕ್ಷವಾದ ಬಿಜು ಜನತಾದಳದಿಂದ.

ತಮ್ಮ ರಾಜ್ಯದ ಹಾಗೂ ಭಾಷೆಯ ಅಧಿಕೃತ ಹೆಸರಿನ ಬದಲಾವಣೆಗಾಗಿ ೨೦೦೮ರಲ್ಲಿ ಪ್ರಸ್ತಾವನೆಯನ್ನ ಸಲ್ಲಿಸಿದ್ದ ಒಡಿಯಾ ಸರಕಾರ, ಲೋಕಸಭೆ ಅಧಿವೇಶನ ಮೊದಲನೇ ದಿನವೇ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಲೋಕಸಭೆಯಲ್ಲಿ ಒಂದು ವಿಷಯ ಚರ್ಚೆಗೆ ಬರಬೇಕೆಂದರೆ, ಎಷ್ಟೋ ಮಜಲುಗಳನ್ನು, ಅಧಿಕಾರಿಗಳ ಕೈಗಳನ್ನು ದಾಟಿ ಬರಬೇಕು. ಇದನ್ನ ಸಾಧಿಸುವಲ್ಲಿ ಒಡಿಶಾ ರಾಜ್ಯದಿಂದ ಆರಿಸಿ ಬಂದಿರುವ ಸಂಸದರು ಮಹತ್ತರ ಪಾತ್ರವಹಿಸಿರುತ್ತಾರೆ. ತಮ್ಮ ಭಾಷೆಯ ಹಾಗೂ ನಾಡಿನ ಮೂಲ ಹೆಸರನ್ನು ಪಡೆದುಕೊಂಡಿರುವ ಒಡಿಶಾ ಜನರಿಗೆ ಅಭಿನಂದನೆಗಳು.

ನಮ್ಮ ನಾಡಿನ ಊರುಗಳ ಹೆಸರುಗಳು ಯಾವಾಗ ಬದಲಾಗೋದು?
ಒಡಿಶಾನಂತಹ ರಾಜ್ಯದ ಸರಕಾರ ಹಾಗೂ ಅಲ್ಲಿನ ಜನಪ್ರತಿನಿಧಿಗಳು ಒಟ್ಟಾಗಿ ತಮ್ಮ ಕೆಲಸವನ್ನ ಮಾಡಿಸಿಕೊಂಡಿದ್ದಾರೆ. ಅಲ್ಲಿನ ವಿಧಾನಸಭಾ ಸೀಟುಗಳ ಸಂಖ್ಯೆ ೧೪೭ ಹಾಗೂ ಲೋಕಸಭಾ ಸೀಟುಗಳ ಸಂಖ್ಯೆ ೨೧. ಆದರೆ ಇದಕ್ಕಿಂತ ದೊಡ್ಡದಾಗಿರುವ ನಮ್ಮ ರಾಜ್ಯದಲ್ಲಿ ಒಟ್ಟು ೨೨೪ ವಿಧಾನಸಭೆ ಸೀಟುಗಳು ಹಾಗೂ ೨೮ ಲೋಕಸಭಾ ಸೀಟುಗಳಿವೆ, ಒಡಿಶಾ ರಾಜ್ಯಕ್ಕಿಂತ ಬಲಶಾಲಿ ರಾಜ್ಯ ನಮ್ಮದು. ಆದರೂ ೨೦೦೬ರಲ್ಲಿ ಹಲವು ಊರುಗಳ ಹೆಸರುಗಳ ಬದಲಾವಣೆಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನ ಕೇಂದ್ರ ಸರಕಾರ ಇನ್ನೂ ಅನುಮೋದಿಸಿಲ್ಲಾ. ಬಹುಷಃ ಇದರ ಬಗ್ಗೆ ಚಕಾರ ಎತ್ತಬೇಕಾಗಿದ್ದ ನಮ್ಮ ಸಂಸದರು ಈ ವಿಷಯವನ್ನೇ ಮರೆತಂತಿದೆ. ರಾಜ್ಯ ಸರಕಾರಕ್ಕೂ ಕೂಡ ಇದರ ಬಗ್ಗೆ ಕಾಳಜಿಯಿಲ್ಲದಿರುವುದು ತಿಳಿಯುತ್ತದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ನಮ್ಮನ್ನು ಆಳುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ನಾಡಿನ ಬಗ್ಗೆ ಕಾಳಜಿ ಇಲ್ಲಾ, ಕಾಳಜಿ ಇದ್ದ ನಾಯಕರಿದ್ದರೂ ಹೈಕಮಾಂಡ್ ಮುಂದೆ ಕೈಯುಡ್ದಿ ನಿಲ್ಲುವ ಪರಿಸ್ಥಿತಿ ಇದೆ. ಇಲ್ಲಿಂದ ಆರಿಸಿ ಹೋಗುವ ಸಂಸದರು ಸದನದಲ್ಲಿ ನಾಡಿನ ಬಗ್ಗೆ ದನಿ ಎತ್ತಿರುವುದು ವಿರಳ, ಇತ್ತೀಚಿನ ವರ್ಷಗಳಲ್ಲಿ ಇಲ್ಲ ಎನ್ನಬಹುದು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ನಾಡಿಗೆ ದೊರಕಬೇಕಾಗಿರುವ ಸೌಲಭ್ಯಗಳನ್ನು ಒದಗಿಸಿಕೊಡುವಷ್ಟು ಇಚ್ಚಾಶಕ್ತಿ ನಮ್ಮ ನಾಯಕರುಗಳಿಗೆ ಇಲ್ಲಾ.

ನಮ್ಮ ರಾಜ್ಯಕ್ಕೂ ಒಂದು ಪ್ರಾದೇಶಿಕ ರಾಜಕೀಯ ಪಕ್ಷ ಬೇಕು:
ನಮ್ಮ ನಾಡು-ನುಡಿ-ನಾಡಿಗರಿಗಾಗಿ ಪ್ರಾಮಾಣಿಕವಾಗಿ ದುಡಿಯುವಂತಹ ಒಂದು ರಾಜಕೀಯ ಪಕ್ಷ ನಮಗೆ ಬೇಕು, ಕಳೆದ ೬ ದಶಕಗಳಿಂದ ಇಲ್ಲಿರುವ ರಾಜಕೀಯ ಪಕ್ಷಗಳು ಇದರಲ್ಲಿ ವೈಫಲ್ಯ ಕಂಡಿವೆ, ಇದಕ್ಕೆ ಪರಿಹಾರ ನಮ್ಮ ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು. ಪ್ರದೇಶಿಕ ಪಕ್ಷಗಳು ದೇಶದ ಅನೇಕ ರಾಜ್ಯಗಳಲ್ಲಿ ಆಡಳಿತ ಮಾಡುತ್ತಿದ್ದು, ತಮ್ಮ ರಾಜ್ಯಗಳ ಏಳಿಗೆಗೆ ದುಡಿಯುತ್ತಿವೆ, ಅಂತಹುದೆ ಒಂದು ರಾಜಕೀಯ ಪಕ್ಷ ಕರ್ನಾಟಕಕ್ಕೆ ಅವಶ್ಯಕತೆ ಇದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಾವುಗಳು ಪ್ರಾದೇಶಿಕತೆಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ