ಚಿತ್ರ ಕೃಪೆ: ರೆಡ್ಡಿಫ್ ತಾಣ
ಕಾವೇರಿ ನದಿಯು ಹುಟ್ಟಿ ಸಮುದ್ರ ಸೇರುವವರೆಗಿನ ಅದರ ಒಟ್ಟು ಉದ್ದದ ರಾಜ್ಯವಾರು ಹಂಚಿಕೆಯು
ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨೦ ಕಿ.ಮೀ, ತಮಿಳುನಾಡಿನಲ್ಲಿ ೪೧೬ ಕಿ.ಮೀ ನಷ್ಟಿದ್ದು ಉಳಿದ ೬೪
ಕಿ.ಮೀ ಎರೆಡು ರಾಜ್ಯಗಳ ನಡುವೆ ಗಡಿಯನ್ನು ರೂಪಿಸುತ್ತದೆ. ಕಾವೇರಿಯ ಒಟ್ಟು ಜಲಾನಯನ ಪ್ರದೇಶ
೮೧,೧೫೫ ಚ.ಕಿ.ಮೀ ಗಳಾಗಿದ್ದು ವಿವಿಧ ರಾಜ್ಯಗಳ ಪಾಲು ಈ ರೀತಿ ಇದೆ:
ರಾಜ್ಯ
|
ಜಲಾನಯನ ಪ್ರದೇಶ ಚ.ಕಿ.ಮೀ ಗಳಲ್ಲಿ
|
ಕರ್ನಾಟಕ
|
೩೪,೨೭೩
|
ಕೇರಳ
|
೨,೮೬೬
|
ತಮಿಳುನಾಡು
|
೪೪,೦೧೬
|
1892 ಹಾಗೂ 1924 ರ ಮದ್ರಾಸ್ – ಮೈಸೂರು ಒಪ್ಪಂದಗಳು:
1982 ರ ಮದ್ರಾಸ್ – ಮೈಸೂರು ಒಪ್ಪಂದದ ಮುಖ್ಯ ಅಂಶವೆಂದರೆ ಅಂದಿನ ಮೈಸೂರು ರಾಜ್ಯ ಸರ್ಕಾರ
ಕಾವೇರಿ ನದಿ ಪಾತ್ರದಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಮೈಸೂರು ಸರ್ಕಾರವು ಈಗ
ಅಸ್ತಿತ್ವದಲ್ಲಿರುವ ಕಾಮಗಾರಿಗಳನ್ನು ಹೊರತು ಪಡಿಸಿ ಹೊಸ ನೀರಾವರಿ ಜಲಾಶಯಗಳನ್ನು
ನಿರ್ಮಿಸತಕ್ಕದ್ದಲ್ಲ. ಒಂದು ವೇಳೆ ನಿರ್ಮಿಸಬೇಕಾದ ಸಂಧರ್ಭದಲ್ಲಿ ಕಾಮಗಾರಿಯ ಪೂರ್ಣ
ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ಕಳುಹಿಸಬೇಕು. ಮದ್ರಾಸ್ ಸರ್ಕಾರ ಒಪ್ಪಿಗೆ ಪಡೆದು ಹೊಸ
ಜಲಾಶಯಗಳನ್ನು ಮೈಸೂರು ರಾಜ್ಯ ನಿರ್ಮಿಸಬೇಕು.
1910ರಲ್ಲಿ ಮೈಸೂರು
ಸರ್ಕಾರವು ಕನ್ನಂಬಾಡಿಯಲ್ಲಿ ಕಾವೇರಿ ನದಿ ಮೇಲೆ ಜಲಾಶಯವನ್ನು ನಿರ್ಮಿಸುವ ಪ್ರಸ್ತಾವವನ್ನು
ರೂಪಿಸಿ 1892ರ ಒಪ್ಪಂದದ ಅನ್ವಯ ಮದ್ರಾಸ್ ಸರ್ಕಾರದ ಒಪ್ಪಿಗೆಯನ್ನು
ಕೋರಿತು. ಆದರೆ ಈ ಯೋಜನೆಗೆ ಮದ್ರಾಸ್ ರಾಜ್ಯವು ಒಪ್ಪಿಗೆ ನೀಡಲಿಲ್ಲ. ಪಟ್ಟು ಬಿಡದ ಮೈಸೂರು
ರಾಜ್ಯ, ಆಣೆಕಟ್ಟಿನ ಅವಶ್ಯಕತೆಯನ್ನು ಮನವರಿಕೆ ಮಾಡಿದ ಮೇಲೆ, ನ್ಯಾಯಾಧಿಶರ ಮಧ್ಯಸ್ತಿಕೆಯಲ್ಲಿ
ಮೈಸೂರು ಹಾಗೂ ಮದ್ರಾಸ್ ಸರ್ಕಾರಗಳ ನಡುವೆ ಮತ್ತೊಂದು ಒಪ್ಪಂದಕ್ಕೆ ದಿನಾಂಕ 18ನೇ ಫೆಬ್ರವರಿ 1924 ರಂದು ಸಹಿ ಹಾಕಲಾಯಿತು. ಈ ಆದೇಶದ ಪ್ರಕಾರ ಮೈಸೂರು ಸರ್ಕಾರ
ಆಣೆಕಟ್ಟು ನಿರ್ಮಿಸಲು ಮದ್ರಾಸ್ ಸರ್ಕಾರ ಒಪ್ಪಿತು ಹಾಗೂ ಈ ಆಣೆಕಟ್ಟಿನ ಮೂಲಕ ಜೂನ್ – ಜನವರಿ
ತಿಂಗಳವರೆಗೂ ಬಿಡುಗಡೆ ಮಾಡಬೇಕಾಗಿರುವ ನೀರಿನ ಮೊತ್ತವನ್ನು ಸೂಚಿಸಲಾಯಿತು.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮದ್ರಾಸ್ ಪ್ರಾಂತ್ಯವು ಬ್ರಿಟಿಷರ
ಆಳ್ವಿಕೆಯಲ್ಲಿದ್ದ ಕಾರಣ, ಅವರಿಗೆ ಅನುಕೂಲ ಆಗುವ ಹಾಗೆ ಯೋಜನೆಗಳು ಹಾಗೂ ನೀರಿನ ಹಂಚಿಕೆ
ಮಾಡಲಾಯಿತು. ಮೈಸೂರು ಸರ್ಕಾರವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಹಚ್ಚಿನ ವಿರೋಧ
ತೋರಿಸುವ ಶಕ್ತಿಯನ್ನು ಹೊಂದಿರಲಿಲ್ಲ.
1956ರಲ್ಲಿ ರಾಜ್ಯಗಳು
ಪುನರ್ ವಿಂಗಡಣೆಯಾದಾಗ ಕರ್ನಾಟಕ ಸರ್ಕಾರವು ಕಾವೇರಿ ನದಿಯ ಉಪನದಿಗಳಾದ ಕಬಿನಿ, ಹೇಮಾವತಿ,
ಹಾರಂಗಿ ಹಾಗೂ ಸುವರ್ಣಾವತಿ ಜಲಾಶಯ ಯೋಜನೆಗಳನ್ನು ಪ್ರಾರಂಭಿಸಿದಾಗ ತಮಿಳುನಾಡು ಸರ್ಕಾರ ವಿರೋಧ
ವ್ಯಕ್ತಪಡಿಸಿತು. ಸ್ವಾಂತಂತ್ರ್ಯ ಪೂರ್ವ ಮಾಡಿಕೊಂಡಿರುವ ಒಪ್ಪಂದಕ್ಕೆ ವಿರುದ್ಧವಾಗಿದೆ ಅನ್ನೋ
ಕಾರಣಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತು. ಸ್ವಾಂತಂತ್ರ್ಯದ
ನಂತರ ಮತ್ತೊಮ್ಮೆ ವೈಜ್ಞಾನಿಕವಾಗಿ ಎರಡು ರಾಜ್ಯಗಳಿಗೆ ಒಪ್ಪಿಗೆಯಾಗುವಂತೆ ನದಿ ನೀರು
ಹಂಚಿಕೆಯಾಗಬೇಕಾಗಿತ್ತು. ಆದ್ರೆ ಇದರ ಬಗ್ಗೆ ನಮ್ಮ ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳಲ್ಲಿಲ್ಲ.
ಗಮನಿಸಬೇಕಾದ ಅಂಶವೆಂದರೆ ಕಾವೇರಿ ನದಿಪಾತ್ರದಲ್ಲಿ ವಿವಿಧ ರಾಜ್ಯಗಳ ನದಿ ನೀರಿನ ಬಳಕೆಯನ್ನು
ತಿಳಿಯಲು ಕೇಂದ್ರ ಸರ್ಕಾರ 1972ರಲ್ಲಿ ಕಾವೇರಿ ಸತ್ಯಶೋಧನಾ ಸಮಿತಿಯನ್ನು ಸ್ಥಾಪಿಸಿತು.
ತನ್ನ ವರದಿಯನ್ನು ಸಲ್ಲಿಸಿದಾಗ ತಮಿಳುನಾಡಿನಲ್ಲಿ ನೀರಾವರಿಗೊಳಪಟ್ಟ ಪ್ರದೇಶ ಸುಮಾರು 1,440,000 ಎಕರೆಗಳಿಂದ 2,580,000 ಎಕರೆಗಳಿಗೆ ಹೆಚ್ಚಿಗೆಯಾಗಿತ್ತು. ಆದರೆ ಕರ್ನಾಟಕದಲ್ಲಿ
ನೀರಾವರಿಗೊಳಪಟ್ಟ ಪ್ರದೇಶ 6,80,000 ಎಕರೆಗಳಷ್ಟಿತ್ತು. ತಮಿಳುನಾಡು ಸರ್ಕಾರ ಅದರ ಇಚ್ಚೆಯಂತೆ
ಆಗಿದ್ದ ಸ್ವಾತಂತ್ರ್ಯಪೂರ್ವ ನಿಯಮಗಳನ್ನು ಮೀರಿತ್ತು.
ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಯಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ತಮಿಳುನಾಡಿನ
ರೈತರು ಅಂತರ್ ರಾಜ್ಯ ಜಲ ವಿವಾದ ಅಧಿನಿಯಮ, 1956 ರ ಪ್ರಕರ ನ್ಯಾಯ ಮಂಡಳಿ ರಚಿಸಬೇಕು ಎಂದು ಕೇಳಿ ಸುಪ್ರೀಂ ಕೋರ್ಟ್ ಮೊರೆಹೋದರು. ಇದರ
ಪ್ರಕರವಾಗಿ ಸುಪ್ರೀಂ ಕೋರ್ಟ್ 4ನೇ ಮೇ 1990
ರಂದು ಜಲವಿವಾದ ನ್ಯಾಯ
ನಿರ್ಣಯಕ್ಕಾಗಿ ಒಂದು ಸೂಕ್ತ ನ್ಯಾಯಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು.
ನ್ಯಾಯಮಂಡಳಿ ರಚನೆ ಹಾಗೂ ಕರ್ನಾಟಕದ ಪಾಲಿಗೆ ಶಾಪ:
ಚಿತ್ತತೋಷ್ ಮುಖರ್ಜಿ ಅವರ ನೇತ್ರತ್ವದಲ್ಲಿ ರಚನೆಯಾದ ನ್ಯಾಯಮಂಡಳಿ 2 ಜೂನ್ 1990 ರಂದು ತನ್ನ
ಕಾರ್ಯ ಆರಂಭಿಸಿತು. ನ್ಯಾಯಮಂಡಳಿಯ ಮುಂದೆ ಕೆಳಕಂಡ ರಾಜ್ಯಗಳು ಈ ರೀತಿ ಬೇಡಿಕೆ ಇಟ್ಟವು
- ಕರ್ನಾಟಕ ತನಗೆ 465 ಟಿಎಂಸಿ ನೀರು ಬೇಕು ಎಂದು ಹೇಳಿತು
- ಕೇರಳ ತನಗೆ 99.8 ಟಿಎಂಸಿ ನೀರು ಬೇಕು ಎಂದು ಹೇಳಿತು
- ಪಾಂಡಿಚೇರಿ ತನಗೆ 9.3 ಟಿಎಂಸಿ ಬೇಕು ಎಂದು ಹೇಳಿತು
- ಆದ್ರೆ ತಮಿಳುನಾಡು ಮಾತ್ರ ಈ ಹಿಂದಿನಂತೆ ಇದ್ದ ಒಪ್ಪಂದದಂತೆ ತನಗೆ ಹಾಗೂ ಪಾಂಡಿಚೇರಿಗೆ 566 ಟಿಎಂಸಿ, 177 ಟಿಎಂಸಿ ಕರ್ನಾಟಕಕ್ಕೆ ಹಾಗೂ 5 ಟಿಎಂಸಿ ಕೇರಳಕ್ಕೆ ನೀಡಬೇಕು ಎಂದು ಕೇಳಿತು
ಇದಾದ ನಂತರ ತಮಿಳುನಾಡು ಸರ್ಕಾರ ನ್ಯಾಯಮಂಡಳಿಯ ಮುಂದೆ ಈ ಕೂಡಲೇ ಮಧ್ಯಂತರವಾಗಿ ತನಗೆ ನೀರು
ಬಿಡಲು ಕಾರ್ಯಸೂಚಿ ರೂಪಿಸಬೇಕು ಎಂದು ನ್ಯಾಯಮಂಡಳಿಯ ಮುಂದೆ ಹೋಯಿತು. ಆಗ ಕಳೆದ ಹತ್ತು ವರ್ಷಗಳ
ಮಾಹಿತಿಯನ್ನು ಕಲೆಹಾಕಿದ ನ್ಯಾಯಮಂಡಳಿ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ನೀರು ಬಿಡಬೇಕು ಹಾಗೂ ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು 1,120,000 ಎಕರೆಗಿಂತ ಹೆಚ್ಚಿಗೆ ಮಾಡಿಕೊಳ್ಳಬಾರದು ಎಂದು ಆದೇಶ ನೀಡಿತು. ಇದರಿಂದ ಕೋಪಗೊಂಡ ಕರ್ನಾಟಕದ
ಇದಕ್ಕೆ ತಮಗೆ ಒಪ್ಪಿಗೆಯಿಲ್ಲ, ಅಂತಿಮ ತೀರ್ಪು ನೀಡಿ ಎಂದು ನ್ಯಾಯಮಂಡಳಿಯ ಮುಂದೆ ಹೇಳಿತು. ಆದರೆ
ತಮಿಳುನಾಡು ಸರ್ಕಾರ ರಾಷ್ಟ್ರಪತಿಗಳ ಮೂಲಕ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಹೇಳಿಸಿ,
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಈ ತೀರ್ಪನ್ನು ಒಪ್ಪಿಕೊಳ್ಳಬೇಕಾಯಿತು ಹಾಗೂ ಈ ಮಧ್ಯಂತರ
ಅದೇಶವನ್ನು ಕೇಂದ್ರ ಸರ್ಕಾರದ ಗೆಜೆಟ್ ನಲ್ಲಿ ದಾಖಲಾಗುವಂತೆ ತಮಿಳುನಾಡು ಸರ್ಕಾರ ನೋಡಿಕೊಂಡಿತು.
ಇದರಿಂದ ಸಿಟ್ಟಿಗೆದ್ದ ಕರ್ನಾಟಕದ ಜನತೆ ರಾಜ್ಯಾದ್ಯಂತ ತೀರ್ಪಿನ ವಿರುದ್ಧ ಹೋರಾಟಗಳನ್ನು
ಶುರು ಮಾಡಿದರು. ಇದೇ ರೀತಿ ತಮಿಳುನಾಡಿನಲ್ಲೂ ದಂಗೆಗಳು ಶುರುವಾದವು. ತಿಂಗಳುಗಳ ಕಾಲ
ಬೆಂಗಳೂರಿನಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
1995-1996 ರಲ್ಲಿ ಕರ್ನಾಟಕದಲ್ಲಿ ಮಳೆಯ ಅಭಾವ ಕಾಣಿಸಿದ್ದರಿಂದ ತಮಿಳುನಾಡಿಗೆ ಮಧ್ಯಂತರ ಆದೇಶದಂತೆ
ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದು ಗೊತ್ತಿದ್ದರೂ ಸಹ ತಮಿಳುನಾಡು ಮಧ್ಯಂತರ ಆದೇಶದಂತೆ
ಕರ್ನಾಟಕ ತನಗೆ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಮುಂದೆ ಹೋಯಿತು. ಆದರೆ ಇದನ್ನು
ತಳ್ಳಿಹಾಕಿದ ಸುಪ್ರೀಂ ಕೋರ್ಟ್ ನ್ಯಾಯಮಂಡಳಿಗೆ ಈ ಕೇಸನ್ನು ವರ್ಗಾಯಿಸುತು. ಅಲ್ಲಿ ತನ್ನ ಪ್ರಭಾವ
ಬೀರಿದ ತಮಿಳುನಾಡು 11 ಟಿಎಂಸಿ ನೀರನ್ನು ಬಿಡಲು ಆದೇಶ ನೀಡಿತು. ಆ ಕಾಲದಲ್ಲಿ ಅದು
ಕರ್ನಾಟಕದ ಪಾಲಿಗೆ ಅಸಾಧ್ಯವಾಗಿತ್ತು. ನಂತರ ಪ್ರಧಾನ ಮಂತ್ರಿಗಳ ಮಧ್ಯಸ್ತಿಕೆಯಲ್ಲಿ 6 ಟಿಎಂಸಿ ನೀರನ್ನು ಪಡೆಯುವಲ್ಲಿ ತಮಿಳುನಾಡು ಸಫಲವಾಯಿತು.
ಸಿ.ಆರ್.ಎ ಎಂಬ ಒಕ್ಕೂಟ ವಿರೋಧಿ ಮಂಡಳಿ
1997 ರಲ್ಲಿ ಕೇಂದ್ರ
ಸರ್ಕಾರವು ಮಧ್ಯಂತರ ಆದೇಶವನ್ನು ಸಮರ್ಪಕವಾಗಿ ಜಾರಿಗೆ ತರಲು ಸಿ.ಆರ್.ಎ ಎಂಬ ಮಂಡಳಿಯೊಂದನ್ನು
ಸ್ಥಾಪಿಸುವ ಪ್ರಸ್ತಾವನೆಯನ್ನು ಎರಡು ರಾಜ್ಯಗಳ ಮುಂದೆ ಇಟ್ಟಿತು. ಇದರ ಅನ್ವಯ ಈ ಮಂಡಳಿಗೆ
ಮದ್ಯಂತರ ಆದೇಶವನ್ನು ಜಾರಿಗೆ ತರಲು ಆಣೆಕಟ್ಟುಗಳನ್ನು ತನ್ನ ವಶಕ್ಕೆ ತಗೆದುಕೊಳ್ಳುವ ಹಕ್ಕನ್ನು
ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಇಂತಹ ಒಕ್ಕೂಟ ವಿರೋಧಿ ಮಂಡಳಿಯನ್ನು ಸಾರಸಗಟಾಗಿ
ತಿರಸ್ಕರಿಸಿತು. ಇದಾದ ನಂತರ ಕೇಂದ್ರ ಇಂತಹ ಅವೈಜ್ಞಾನಿಕ ಹಕ್ಕುಗಳನ್ನು ತಗೆದು ಹಾಕಿ ಕೊನೆಗೆ
ಕಾವೇರಿ ರಿವರ್ ಅಥಾರಿಟಿ ಹಾಗೂ ಕಾವೇರಿ ಮಾನಿಟರಿಂಗ್ ಕಮಿಟಿಯಂಬ ಎರೆಡು ಸಮಿತಿಗಳನ್ನು
ಸ್ಥಾಪಿಸಿತು.
2002ರಲ್ಲಿ ಕಾವೇರಿದ ಕಾವೇರಿ ಹೋರಾಟ
2002ರಲ್ಲಿ ಹಿಂದೆ 1995ರಲ್ಲಿ ಕಾಣಿಸಿಕೊಂಡ ಬರಗಾಲದ ಪರಿಸ್ಥಿತಿ ಮತ್ತೊಮೆ ಎದುರಾಯಿತು. ರಾಜ್ಯದ ಯಾವುದೇ ಜಲಾಶಯದಲ್ಲೂ
ತನ್ನ ಬಳಕೆಗೆ ಬೇಕಾಗುವಷ್ಟು ನೀರು ಸಹ ಇರಲಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ತನ್ನ
ಜನರಿಗಾಗಿ ನೀರನ್ನು ಬಿಡುವಂತೆ ಆಗ್ರಹಿಸಿ ನ್ಯಾಯಮಂಡಳಿಯ ಮುಂದೆ ಹೋಯಿತು. ಆದರೆ ನ್ಯಾಯಮಂಡಳಿ ತನ್ನ ಮಧ್ಯಂತರ ತೀರ್ಪಿನಲ್ಲಿ ಬರಗಾಲದ ಪರಿಸ್ಥಿತಿಯಲ್ಲಿರಬೇಕಾದ ಹಂಚಿಕೆ
ಸೂತ್ರವನ್ನು ಹೇಳಿರಲಿಲ್ಲ. ಹಾಗಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್
ಮೊರೆ ಹೋಯಿತು. ಈ ಸಾರಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಕಾವೇರಿ
ರಿವರ್ ಅಥಾರಿಟಿ ಬದಲಾವಣೆ ಮಾಡುವ ತನಕ ಪ್ರತಿ ದಿನ 1.25 ಟಿಎಂಸಿ
ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಹೇಳಿತು. ಸರ್ಕಾರ ಇದೇ ಹೊತ್ತಿನಲ್ಲಿ ಸಿ.ಆರ್.ಎ
ಮತ್ತೊಂದು ಸಭೆಯನ್ನು ಕರೆಯಬೇಕು ಎಂದು ಹೇಳಿತು. ಸಿ.ಆರ್.ಎ ಪ್ರಕಾರ ಕರ್ನಾಟಕ ಪ್ರತಿದಿನ
ತಮಿಳುನಾಡಿಗೆ 0.8 ಟಿಎಂಸಿ ನೀರನ್ನು ಬಿಡಬೇಕು ಎಂದು ಹೇಳಿತು.
ಆದರೆ ಅದಾಗಲೇ ಕರ್ನಾಟಕದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು
ವಿರೋಧಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ದೊಡ್ಡ ಹೋರಾಟ ಶುರುವಾಯಿತು. ಜನರ ಹೋರಾಟಕ್ಕೆ ಮಣಿದ
ಸರ್ಕಾರ ತಮಿಳುನಾಡಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಿತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ
ನೀರು ಬಿಡಲು ಶುರುಮಾಡಿದಾಗ ಕರ್ನಾಟಕದ ರೈತರೊಬ್ಬರು ಸೆಪ್ಟಂಬರ್ 18ರಂದು ನದಿಗೆ ಹಾರಿ
ಪ್ರಾಣ ಬಿಟ್ಟರು. ಇದರಿಂದಾಗಿ ಪರಿಸ್ಥಿತಿ ಇನ್ನೂ ಕೆಟ್ಟಿತು. ಕಾವೇರಿ ನದಿ ಪಾತ್ರದ
ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆದರೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ
ಕರ್ನಾಟಕ ಸರ್ಕಾರ ನೀರು ಬಿಡಲು ಒಪ್ಪಲಿಲ್ಲ. ಇದಕ್ಕೆ ಪ್ರತಿಯಾಗಿ ತಮಿಳುನಾಡು ಮತ್ತೆ ಕೋರ್ಟ್
ಮೆಟ್ಟಿಲೇರಿತು. ನಂತರ ಈ ಸಂಬಂಧ ಕರ್ನಾಟಕ ಸರ್ಕಾರ ಕೋರ್ಟ್ ಆದೇಶ ಪಾಲಿಸದಿರುವ ಸಲುವಾಗಿ ಕೋರ್ಟ್
ಮುಂದೆ ಬೇಷರತ್ ಕ್ಷಮೆ ಯಾಚಿಸಿತ್ತು.
2007ರಲ್ಲಿ ಬಂದ ನ್ಯಾಯಮಂಡಳಿಯ ಅನ್ಯಾಯದ ತೀರ್ಪು
ಫೆಬ್ರವರಿ 5 2007 ರಲ್ಲಿ ಕಾವೇರಿ ನ್ಯಾಯಮಂಡಳಿಯು ತನ್ನ ತೀರ್ಪನ್ನು
ಪ್ರಕಟಿಸಿತು. ತೀರ್ಪಿನ ಪ್ರಕಾರ ತಮಿಳುನಾಡಿಗೆ 419 ಟಿಎಂಸಿ ನೀರು, ಕರ್ನಾಟಕಕ್ಕೆ
270ಟಿಎಂಸಿ ನೀರು, ಪ್ರತಿ ವರ್ಷ ಕರ್ನಾಟಕ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು. ಕೇರಳ ರಾಜ್ಯಕ್ಕೆ 30 ಟಿಎಂಸಿ ಹಾಗೂ ಪಾಂಡಿಚೇರಿ ಗೆ 7 ಟಿಎಂಸಿ ನೀರನ್ನು ನ್ಯಾಯ ಮಂಡಳಿ ತನ್ನ ತೀರ್ಪಿನಲ್ಲಿ
ಹಂಚಿಕೆ ಮಾಡಿತ್ತು. ತೀರ್ಪನ್ನು ತಮಿಳುನಾಡು ಸ್ವಾಗತಿಸಿದರೆ ಕರ್ನಾಟಕ ಸರ್ಕಾರ ತೀರ್ಪನ್ನು
ವಿರೋಧಿಸಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಿತು. ಈ ತೀರ್ಪನ್ನು ನೀಡುವಾಗ ತಮಿಳುನಾಡು ಸರ್ಕಾರ ತನ್ನ ಪ್ರಭಾವವನ್ನು ನ್ಯಾಯಮಂಡಳಿಯ ಮೇಲೆ
ಬೀರುರುವ ಶಂಕೆ ಉಂಟಾಗುತ್ತದೆ. ಕಾರಣ:
- ಮೊದಲಿನಿಂದಲೂ ಕರ್ನಾಟಕದಲ್ಲಿ ನೀರಾವರಿಗೆ ನೀರು
ದೊರಕದಂತೆ ಮಾಡಿ ತನ್ನ ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಂಡ ತಮಿಳುನಾಡು ನಂತರ ಅದು
ತನಗೆ ಹೆಚ್ಚಿನ ಪಾಲಿನ ನೀರು ಬರಬೇಕಿರುವುದು ತನ್ನ ಹಕ್ಕು ಎನ್ನುವಂತೆ ನ್ಯಾಯಧಿಕರಣದ
ಮುಂದೆ ವಾದ ಮಾಡಿ ಹೆಚ್ಚಿನ ಪಾಲನ್ನು ಪಡೆಯಿತು.
- ಕರ್ನಾಟಕ ಹಾಗೂ ತಮಿಳುನಾಡಿನ ನಡುವ ಹರಿದ ನೀರನ್ನು
ಮಾಪನ ಮಾಡಲು ಮೆಟ್ಟೂರಿನಲ್ಲಿ ಅಳೆಯಲಾಗುತ್ತಿತ್ತು, ಆದರೆ ಈ ತೀರ್ಪಿನಲ್ಲಿ ಅದನ್ನು
ಕರ್ನಾಟಕದ ಬಿಳಿಗುಂಡ್ಲುವಿನಲ್ಲಿ ಅಳೆಯಲು ತೀರ್ಪು ನೀಡಲಾಯಿತು. ಗಮನಿಸಬೇಕಾದ ಅಂಶವೆಂದರೆ
ಬಿಳಿಗುಂಡ್ಲುವಿನಿಂದ ಮೆಟ್ಟೂರಿಗೆ ಸುಮಾರು 25 ಟಿಎಂಸಿ ನೀರು
ಹರಿದು ಹೋಗುತ್ತದೆ, ಆದರೆ ಇದರ ಲೆಕ್ಕವನ್ನು ಕರ್ನಾಟಕ ಬಿಡುವ ನೀರಿಗೆ ಸೇರಿಸುವ ಹಾಗಿಲ್ಲ.
- ಕೇರಳಕ್ಕೆ ಕರ್ನಾಟಕದಿಂದ 21 ಟಿಎಂಸಿ ಹಾಗೂ ತಮಿಳುನಾಡಿನಿಂದ 9 ಟಿಎಂಸಿ ನೀರು ಬಿಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ಈ
ನೀರನ್ನು ಉಪಯೋಗಿಸದ ಕಾರಣ ತಮಿಳುನಾಡು ತನ್ನ 9 ಟಿಎಂಸಿ ನೀರನ್ನು
ಉಪಯೋಗಿಸಲು ನ್ಯಾಯಾಧಿಕರಣ ಅವಕಾಶ ನೀಡಿತು. ಆದರೆ ಕರ್ನಾಟಕಕ್ಕೆ ಮಾತ್ರ 21 ಟಿಎಂಸಿ ನೀರನ್ನು ಬಳಕೆ ಮಾಡಲು ಅವಕಾಶ ಕೊಡದೆ ತಮಿಳುನಾಡಿಗೆ
ಹರಿಸಲು ಆದೇಶ ನೀಡಿತು ಹಾಗೂ ಬೇಕಾದಲ್ಲಿ ತಮಿಳುನಾಡು ಈ ನೀರನ್ನು ಬಳಸಲು ಅವಕಾಶ ನೀಡಿತು.
- ಪರಿಸರ ರಕ್ಷಣೆಗಾಗಿ ಕರ್ನಾಟಕ 10 ಟಿಎಂಸಿ ನೀರು ಬಿಡಬೇಕು, ಆದರೆ ತಮಿಳುನಾಡಿಗೆ ಯಾವುದೇ ನೀರು
ಬಿಡಲು ಆದೇಶದಲ್ಲಿ ತಿಳಿಸಲಾಗಿಲ್ಲ. ಪರಿಸರ ರಕ್ಷಣೆ ಕೇವಲ ಕರ್ನಾಟಕದ
ಜವಾಬ್ದಾರಿಯಾಗಿದೆಯೇ?
- ನ್ಯಾಯಾಧಿಕರಣ ಕರ್ನಾಟಕಕ್ಕೆ ಕುಡಿಯುವ ನೀರಿನ
ಸಲುವಾಗಿ ತಗೆದಿಟ್ಟಿರುವ ಪಾಲು ಕೇವಲ 2
ಟಿಎಂಸಿ. ಬೆಂಗಳೂರು,
ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳನೆಲ್ಲ ಒಟ್ಟಾಗಿ ಸೇರಿಸಿದರೆ ಬೇಕಾಗುವ
ನೀರಿನ ಮೊತ್ತ 60 ಟಿಎಂಸಿ.
- ನ್ಯಾಯಧಿಕರಣದ ತಜ್ಞರ ವರದಿಯ ಪ್ರಕಾರ ತಮಿಳುನಾಡಿಗೆ 395 ಟಿಎಂಸಿ ನೀರು ಅಗತ್ಯವಿತ್ತೆಂದು ಹೇಳಲಾಗಿತ್ತು, ಆದರೆ
ನ್ಯಾಯಧಿಕರಣದಲ್ಲಿ ಅದಕ್ಕೆ ಬರೋಬ್ಬರಿ 458 ಟಿಎಂಸಿ ನೀರನ್ನು
ನೀಡಲಾಗಿದೆ!!
ಕರ್ನಾಟಕದಲ್ಲಿ ನಡೆದ ಹೋರಾಟಗಳು
ಕರ್ನಾಟಕದ ಪಾಲಿಗೆ ಮರಣ ಮೃದಂಗದಂತಿದ್ದ ಈ ತೀರ್ಪನ್ನು ವಿರೋಧಿಸಿ ರಾಜ್ಯದ ಎಲ್ಲಾ ವರ್ಗಗಳು
ಬೀದಿಗೆ ಇಳಿದವು, ರೈತ ಸಂಘ, ಸಾಹಿತಿ ವಲಯ, ರಾಜಕೀಯ ವಲಯ, ಕನ್ನಡಪರ ಸಂಘಟನೆಗಳೆಲ್ಲ ಒಂದಾಗಿ ಈ
ತೀರ್ಪನ್ನು ವಿರೋಧಿಸಿದವು. ಕರ್ನಾಟಕ ರಕ್ಷಣಾ ವೇದಿಕೆ ಈ ತೀರ್ಪು ಹೊರಬಂದ ಕೆಲವೇ ನಿಮಿಷಗಳಲ್ಲಿ
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಹೋರಾಟಗಳನ್ನು ಶುರುಮಾಡಿತು. ಇದರ ಜೊತೆಗೆ ತಲಕಾವೇರಿಯಿಂದ
ಬೆಂಗಳೂರಿನ ವರೆಗೂ ಪಾದಯಾತ್ರೆಯನ್ನು ಮಾಡಿ ತೀರ್ಪಿನ ವಿರುದ್ಧ ಜನರನ್ನು ಸಂಘಟಿಸುವ ಕೆಲಸ
ಮಾಡಿತು. ರಾಜ್ಯದ ಇತಿಹಾಸದಲ್ಲೇ ಸುಮಾರು 25000
ಜನರನ್ನು ದೆಹಲಿಗೆ ಕರೆದುಕೊಂಡು
ಹೋಗಿ ಜಂತರ್ ಮಂತರ್ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸರಿಯಾದ ಎಚ್ಚರಿಕೆಯನ್ನೇ
ನೀಡಿತು. ಇದಾದ ನಂತರ ಎಚ್ಚೆತ್ತುಕೊಂಡ ನಮ್ಮ ಸರ್ಕಾರ ಹಾಗೂ ಪ್ರತಿಪಕ್ಷಗಳು ಪ್ರಧಾನಮಂತ್ರಿಗಳ
ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು.
ನಮ್ಮ ರಾಜ್ಯ ಸರ್ಕಾರಗಳ ನಿಷ್ಕ್ರಿಯತೆ ಹಾಗೂ ಪ್ರಾದೇಶಿಕ ಪಕ್ಷದ ಅವಶ್ಯಕತೆ
ಕಾವೇರಿಯ ನದಿ ನೀರು ಹಂಚೆಕೆಯ ವಿವಾದವು ಉಲ್ಬಣಿಸಿದಾಗಲೆಲ್ಲ, ನಮ್ಮ ಸರ್ಕಾರಗಳಿಗಿಂತ ಮೊದಲು
ಪ್ರತಿಭಟನೆ ಹಾಗೂ ಜಾಗೃತಿಗೆ ಮುಂದಾಗಿರುವುದು ರೈತ ಸಂಘ, ಕನ್ನಡ ಪರ ಸಂಘಟನೆಗಳು. ಕೊಳ್ಳೆ ಹೊಡೆದ
ಮೇಲೆ ದಿಡ್ಡಿ ಬಾಗಿಲು ಹಾಕಿದರು ಅನ್ನೋ ಹಾಗೆ ನಮ್ಮ ರಾಜ್ಯ ಸರ್ಕಾರ ಹಾಗೂ ರಾಜಕಾರಣಿಗಳು
ಎಚ್ಚೆತ್ತುಕೊಂಡಿದ್ದಾರೆ.
ಇತ್ತೀಚಿಗೆ ಮತ್ತೆ ಈ ವಿಷಯವಾಗಿ ತಮಿಳುನಾಡು ಸರ್ಕಾರ ಮತ್ತೆ ತನ್ನ ಹೆಳೆ ವರಸೆಯನ್ನು ಶುರುಮಾಡಿದೆ. ಕರ್ನಾಟಕ ಸರ್ಕಾರ ಮೇಕೆದಾಟುವಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ರಾಜ್ಯದ ಜನರ ಹಾಗೂ ರೈತರ ಒಳಿತಿಗಾಗಿ ನೀರನ್ನು ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ ಇದಕ್ಕೆ ಕ್ಯಾತೆ ತಗೆದಿರುವ ಜಯಲಲಿತಾ ಅವರ ಸರ್ಕಾರ ಯಾವುದೇ ಕಾರಣಕ್ಕೂ ಕರ್ನಾಟಕ ಆಣೆಕಟ್ಟು ಕಟ್ಟಬಾರದು ಹಾಗೂ ಅದು ಸಂಗ್ರಹಿಸುವ ನೀರನ್ನು ಬೇಸಿಗೆಯ ಬೆಳೆಗೆ ಉಪಯೋಗಿಸಬಾರದು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಮ್ಮ ರಾಜ್ಯಕ್ಕೆ ತನ್ನ ಪಾಲಿಗೆ ನ್ಯಾಯವಾಗಿ ದಕ್ಕಬೇಕಾಗಿದ್ದ ನೀರನ್ನು ಬಳಸಿಕೊಳ್ಳಲು ಹಕ್ಕಿಲ್ಲವೇ? ಯಾವುದೋ ಓಬಿರಾಯನ ಕಾಲದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ ನಿಯಮಗಳನ್ನು ಇನ್ನೂ ಮುಂದುವರೆಸಿಕೊಂಡು ಹೋಗಬೇಕೆ? ಕಾವೇರಿ ನದಿಯ ನೀರು ಕೇವಲ ತನ್ನ ಸ್ವತ್ತು ಅನ್ನುವ ಹಾಗೆ ವರ್ತಿಸುತ್ತಿರುವ ತಮಿಳುನಾಡಿನ ದರ್ಪವನ್ನು ಸಹಿಸಿಕೊಂಡು ಸುಮ್ಮನಿರಬೇಕೆ?
ಇಲ್ಲಿ ನಮ್ಮ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಎದ್ದು ಕಾಣಿಸುತ್ತದೆ. ಇದಕ್ಕೆ ಈ ರಾಷ್ಟ್ರೀಯ
ಪಕ್ಷಗಳ ಹೈಕಮಾಂಡ್ ಗುಲಾಮಗಿರಿ ಕಾರಣ. ಪ್ರತಿಯೊಂದಕ್ಕು ದೆಹಲಿಯತ್ತ ಮುಖಮಾಡುವ ನಮ್ಮ ನಾಯಕರಿಂದ
ಹೆಚ್ಚಿನದೇನು ನಿರೀಕ್ಷಿಸಲು ಸಾಧ್ಯ? ಕೇಂದ್ರದಲ್ಲಿ ಒಂದಲ್ಲಾ ಒಂದು ಸರ್ಕಾರದ ಜೊತೆ ಮೈತ್ರಿ
ಹೊಂದಿರುವ ತಮಿಳುನಾಡಿನ ರಾಜಕೀಯ ಪಕ್ಷಗಳು ತಮಗೆ ಅನುಕೂಲವಾಗುವಂತೆ ಹಿಂದಿನಿಂದಲು ನಡೆದುಕೊಂಡು
ಬಂದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ. ಬಹುಷ: ನಮಗೂ
ತಮಿಳುನಾಡಿನಲ್ಲಿರುವಂತೆ ಕರ್ನಾಟಕದ ನೆಲ, ಜಲ ಹಾಗೂ ಜನರ ಹಿತವನ್ನು ಕಾಪಾಡುವ ಒಂದು ರಾಜಕೀಯ ಪಕ್ಷದ
ಅವಶ್ಯಕತೆ ಪದೇ ಪದೇ ಎದ್ದು ಕಾಣುತ್ತಿದೆ.