ಸೋಮವಾರ, ಡಿಸೆಂಬರ್ 12, 2011

ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ

ಆತ್ಮೀಯ ಗೆಳೆಯರೇ,

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನೆರೆವೇರಿದೆ. ಅಲ್ಲಿ ಕಳೆದ ಮೂರು ದಿನಗಳಲ್ಲಿ ಅಲ್ಲಿಯ ಜನರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಯಿತು. ಇದ್ದಷ್ಟು ದಿನ ಅಲ್ಲಿನ ಜನರ ಜೊತೆ ಬೆರೆತು ಅಲ್ಲಿಯ ಸಾಮಾಜಿಕ ಒಳನೋಟ ಪಡೆಯಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದೆ. ಇದರ ಜೊತೆಗೆ ಈ ಮೊದಲೇ ತಿಳಿಸಿದಂತೆ “ಆಧುನಿಕ ಜಗತ್ತು ಮತ್ತು ಕನ್ನಡ” ಅನ್ನುವ ವಿಚಾರ ಗೋಷ್ಠಿಯಲ್ಲಿ “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡ ತಂತ್ರಜ್ಞಾನ” ಅನ್ನುವ ವಿಷಯದ ಕುರಿತು ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ, ಈ ವಿಷಯಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ನನ್ನ ಭಾಷಣದ ಸಾರಾಂಶವನ್ನು ನಿಮ್ಮ ಜೊತೆಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಾನು ಮಾತನಾಡಿದ್ದು ನನ್ನದೇ ಊರಿನ (ಉತ್ತರ ಕರ್ನಾಟಕ) ಶೈಲಿಯಲ್ಲಿದ್ದರೂ, ಬರಹವನ್ನು ಎಲ್ಲರ ಕನ್ನಡದಲ್ಲಿ ಬರೆದಿದ್ದೇನೆ. ಇದನ್ನ ಓದಿ, ಖಂಡಿತವಾಗಿಯೂ ನಿಮ್ಮ ಅಭಿಪ್ರಾಯವನ್ನು ತಿಳಿಸಿ...












ಆಡಳಿತ ಅಂದರೇನು?

ಒಬ್ಬ ಸಾಮಾನ್ಯ ಮನುಷ್ಯನಿಗೆ ಅವನ ದಿನ ನಿತ್ಯದ ಬದುಕಿನಲ್ಲಿ ಜೀವನದ ಬೇರೆ ಬೇರೆ ಅಗತ್ಯಗಳ ಈಡೇರಿಕೆಗಾಗಿ ಅವನು ಒಡನಾಡುವ ಸರ್ಕಾರಿ ವ್ಯವಸ್ಥೆಗಳು ಆತನ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವಂತಾಗುವುದನ್ನೇ  ಆಡಳಿತ ಎಂದು ಕರೆಯಬಹುದು. ಒಂದು ಚಿಕ್ಕ ಉದಾಹರಣೆಗೆ ಕೊಪ್ಪಳ ಪಕ್ಕದ ಹಳ್ಳಿಯೊಂದರ ಮಲ್ಕಪ್ಪ ಎಂಬ ಸಾಮಾನ್ಯ ರೈತ ಒಂದು ಸಾಮಾನ್ಯ ದಿನದಲ್ಲಿ ವ್ಯವಸ್ಥೆಯ ಜೊತೆ ಹೇಗೆಲ್ಲ ಒಡನಾಡಬಹುದು? ಆತ ಬೆಳಿಗ್ಗೆ ಎದ್ದು ಪಟ್ಟಣಕ್ಕೆ ಬರಲು ಬೇಕಿರುವ ಬಸ್ಸು, ಅಂಚೆ ಇಲ್ಲವೇ ಬ್ಯಾಂಕಿನಲ್ಲಿ ಅವನ ಬೆಳೆಗೆ ಬೇಕಿರುವ ಹಣಕಾಸಿನ ಸೌಲಭ್ಯ, ತಹಶಿಲ್ದಾರ ಕಚೇರಿಯಲ್ಲಿ ಅವನಿಗೆ ಬೇಕಿರುವ ತನ್ನ ಆಸ್ತಿಯ ಖಾತಾ, ಪಡಿತರ ಅಂಗಡಿಯಲ್ಲಿ ಸಿಗಬೇಕಿರುವ ಸೀಮೆ ಎಣ್ಣೆ, ಅಕ್ಕಿ, ಗೋಧಿ, ಕೃಷಿ ಮಾರುಕಟ್ಟೆಯಲ್ಲಿ ಬೆಳೆದ ಬೆಳೆ ಮಾರಲು ಬೇಕಿರುವ ಸಹಾಯ ಹೀಗೆ ಒಂದು ಸಾಮಾನ್ಯ ದಿನದ ಬೇಡಿಕೆಗಳೆಲ್ಲವನ್ನೂ ಅವನಿಗೆ ಸಮಾಧಾನ ತರುವಂತೆ ಪೂರೈಸುವಂತಹ ವ್ಯವಸ್ಥೆಯನ್ನು ಕಟ್ಟುವುದು ಮತ್ತು ಆ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವಂತೆ ನಿಗಾ ವಹಿಸುವುದನ್ನೇ ಆಡಳಿತ ಎಂದು ಕರೆಯಬಹುದು.

ಪರಿಣಾಮಕಾರಿ ಆಡಳಿತ ಎಂದರೇನು?

ಒಬ್ಬ ಸಾಮಾನ್ಯ ನಾಗರೀಕನ ಬೇಕು ಬೇಡಗಳನ್ನು ಯಾವುದೇ ತಾರತಮ್ಯವಿಲ್ಲದೇ, ಗೊಂದಲಗಳಿಲ್ಲದೇ, ಸರಿಯಾದ ಸಮಯಕ್ಕೆ, ಒಳ್ಳೆಯ ಗುಣಮಟ್ಟ ಮತ್ತು ಹೊಣೆಗಾರಿಕೆಯೊಂದಿಗೆ ಪೂರೈಸುವುದನ್ನೇ ಪರಿಣಾಮಕಾರಿ ಆಡಳಿತ ಅನ್ನಬಹುದು. ಪರಿಣಾಮಕಾರಿ ಆಡಳಿತದಲ್ಲಿ ಜನರೇ ಕೇಂದ್ರ ಬಿಂದು, ಅವರ ಬೇಕು-ಬೇಡಗಳ ಸುತ್ತಲೇ ವ್ಯವಸ್ಥೆಯ ಎಲ್ಲ ಅಂಗಗಳು ರೂಪುಗೊಂಡಿರುತ್ತವೆ. ಆಡಳಿತ ವ್ಯವಸ್ಥೆಯು ನಾಗರೀಕರ ಅನುಕೂಲಕ್ಕಾಗಿ ತನ್ನ ಸೇವೆಗಳನ್ನು ಹಾಗೂ ಸೌಲಭ್ಯಗಳನ್ನು ರೂಪಿಸುವ, ಬದಲಾಯಿಸುವ ಹಾಗೂ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತದೆ. ಈ ಸಂಬಂಧದಲ್ಲಿ ಜನರ ಅಪೇಕ್ಷೆಗಳು ದೃಷ್ಟಿಕೋನಗಳಿಗೆ ಅತೀ ಹೆಚ್ಚಿನ ಮಾನ್ಯತೆಯಿರುತ್ತೆ.  ಸಂಕ್ಷಿಪ್ತವಾಗಿ ಹೇಳುವುದಾದರೆ ಪರಿಣಾಮಕಾರಿ ಆಡಳಿತದ ಮುಖ್ಯ ಗುಣಲಕ್ಷಣಗಳು:
  • ಜನರ ಅಪೇಕ್ಷೆಗಳಿಗೆ ಸ್ಪಂದಿಸುವಂತದ್ದು.
  • ಜನರೆಡೆಗೆ ಉತ್ತರದಾಯಿತ್ವ ಹೊಂದಿರುವಂತದ್ದು
  • ಅತ್ಯಂತ ಚುರುಕಾಗಿ, ಕಡಿಮೆ ಸಮಯಯಲ್ಲಿ ಯಾವುದೇ ಬೇಡಿಕೆಯನ್ನು ಈಡೇರಿಸುವಂತದ್ದು
  • ಎಲ್ಲ ಹಂತದಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಂಡಿರುವಂತದ್ದು
  • ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು, ಸಮ ನೆಲೆಯ ಸಂಬಂಧವನ್ನು ಉತ್ತೇಜಿಸುವಂತದ್ದು
  • ಭ್ರಷ್ಟಾಚಾರಕ್ಕೆ ಎಡೆಯಿರದ್ದು
ಮೇಲಿನ ಉದಾಹರಣೆಯಲ್ಲಿ ಹೇಳಿದ ರೈತ ಮಲ್ಕಪ್ಪನಿಗೆ ತನ್ನೆಲ್ಲ ಅಗತ್ಯಗಳನ್ನು ಕಡಿಮೆ ಸಮಯದಲ್ಲಿ, ಪಾರದರ್ಶಕವಾಗಿ, ಒಳ್ಳೆಯ ಗುಣಮಟ್ಟದಲ್ಲಿ ಪಡೆಯುವಂತಾದರೆ ಅಂತಹ ವ್ಯವಸ್ಥೆ ಪರಿಣಾಮಕಾರಿಯಾದ ಆಡಳಿತ ನೀಡುತ್ತಿದೆ ಅನ್ನಬಹುದು. ಯಾವ ವ್ಯವಸ್ಥೆಯ ಸೇವೆಗಳಿಂದ ಒಬ್ಬ ನಾಗರೀಕನಾಗಿ ಆತನಿಗೆ ತನ್ನೆಲ್ಲ ಬದುಕಿನ ಅಗತ್ಯಗಳನ್ನು ಅತ್ಯಂತ ಸುಲಭವಾಗಿ, ತಡೆಯಿಲ್ಲದೇ, ಗೊಂದಲವಿಲ್ಲದೇ ಪೂರೈಸಿಕೊಳ್ಳಲು ಆಗುತ್ತಿದೆಯೋ ಮತ್ತು ಅಂತಹ ವ್ಯವಸ್ಥೆ ಆತನಲ್ಲಿ ತಾನೂ ಕೂಡ ಈ ವ್ಯವಸ್ಥೆಯ ಭಾಗವೆಂಬ ಭಾವವನ್ನು ತುಂಬುತ್ತದೆಯೋ ಅಂತಹ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿಯಾದ ಆಡಳಿತ ನೀಡುತ್ತಿದೆ ಅನ್ನಬಹುದು.

ಪರಿಣಾಮಕಾರಿ ಆಡಳಿತಕ್ಕೆ ತಂತ್ರಜ್ಞಾನ ಹೇಗೆ ಸಹಾಯಕ?(-ಆಡಳಿತ)

ಮೇಲೆ ತಿಳಿಸಿದ ಹಲ ಮಾನದಂಡಗಳ ಅನುಸಾರ ಆಡಳಿತ ನಡೆಸುವಂತಾಗಲು ತಂತ್ರಜ್ಞಾನದಲ್ಲಾಗಿರುವ ಬದಲಾವಣೆಗಳನ್ನು ಅತ್ಯಂತ ಸಮರ್ಥವಾಗಿ ಜಗತ್ತಿನ ಹಲವಾರು ದೇಶಗಳು ಬಳಸಿಕೊಳ್ಳುತ್ತಿವೆ. ನಮ್ಮ ನಾಡಿನ ಉದಾಹರಣೆಯನ್ನೇ ತೆಗೆದುಕೊಂಡರೆ ಸುಮಾರು ೧೦-೧೫ ವರ್ಷಗಳ ಹಿಂದಿನ ಆಡಳಿತ ಯಂತ್ರದೊಡನೆ ಜನರ ಒಡನಾಟದ ಅನುಭವಕ್ಕೂ ತಂತ್ರಜ್ಞಾನದ ಬಳಕೆಯ ಇವತ್ತಿನ ದಿನದ ಅನುಭವಕ್ಕೂ ಗೋಚರಿಸುವಂತಹ ಬದಲಾವಣೆಗಳಿವೆ. ಹಿಂದೆ ಒಂದು ಚಿಕ್ಕ ಕೆಲಸವಾಗಬೇಕಾದರೂ ವಾರಗಟ್ಟಲೆ ಕಾಯುವ ಪ್ರಸಂಗವಿತ್ತು. ಕಳಪೆ ಸೇವೆ, ಭ್ರಷ್ಟಾಚಾರ, ಹೀಗೆ ಸಾಲು ಸಾಲು ಸಮಸ್ಯೆಗಳ ಮಧ್ಯೆ ಆಡಳಿತ ಅನ್ನುವುದು ಜನರನ್ನು ಬಿಟ್ಟು ಕಟ್ಟಿಕೊಂಡ ಕೋಟೆ ಎಂಬಂತಿತ್ತು. ಇದು ಸಂಪೂರ್ಣವಾಗಿ ಬದಲಾಗದಿದ್ದರೂ ೧೦-೧೫ ವರ್ಷಗಳ ಹಿಂದಿಗಿಂತ ಸಾಕಷ್ಟು ಸಹನೀಯವಾಗಿದೆ ಮತ್ತು ಇಂತಹದೊಂದು ಬದಲಾವಣೆಯಲ್ಲಿ ತಂತ್ರಜ್ಞಾನದ ಪಾತ್ರ ಹಿರಿದಿದೆ. ಒಂದಿಷ್ಟು ಉದಾಹರಣೆಯೊಂದಿಗೆ ಇದನ್ನು ನೋಡೊಣ.
  • ಸರ್ಕಾರಿ ಕಚೇರಿಯಿಂದ ರೈತನೊಬ್ಬ ತನ್ನ ಭೂಮಿಗೆ ಸಂಬಂಧಿಸಿದ ಪಹಣಿ ಪತ್ರ ಪಡೆಯಲು ಕಾಯಬೇಕಾದ ಸ್ಥಿತಿ ಇತ್ತು. ಸರ್ಕಾರದ ಭೂಮಿ ಯೋಜನೆಯಿಂದ ಪಹಣಿ ಪತ್ರ ಪಡೆಯುವ ವ್ಯವಸ್ಥೆಯನ್ನು ಗಣಕೀಕರಣ ಮಾಡುವುದರೊಂದಿಗೆ ಎಲ್ಲೆಡೆ ನಿಮಿಷಗಳಲ್ಲೇ ರೈತ ಪಹಣಿ ಪತ್ರ ಪಡೆಯುವಂತಾಗಿದೆ. 
  • ರೇಶನ್ ಕಾರ್ಡ್, ಪಾಸ್-ಪೋರ್ಟ್ ಮುಂತಾದ ಗುರುತಿನ ಪತ್ರಕ್ಕೆ ಅರ್ಜಿ ಸಲ್ಲಿಸಲು ಕಛೇರಿಗಳಿಗೆ ಅಲೆಯಬೇಕಾಗಿದ್ದ ದಿನಗಳಿಂದ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಅನುಕೂಲ ಸಾಧ್ಯವಾಗಿದೆ. 
  • ರೈತ ತನ್ನ ಬೆಳೆಗೆ ಸರಿಯಾದ ಬೆಲೆ ಕಲ್ಪಿಸಿಕೊಳ್ಳಲು ದಲ್ಲಾಳಿಗಳ, ಮಧ್ಯವರ್ತಿಗಳ ಮೊರೆ ಹೋಗಬೇಕಾದ ದಿನಗಳಿಂದ ಕೂತಲ್ಲಿಯೇ ಮೊಬೈಲ್ ಮೂಲಕ ತನ್ನ ಬೆಳೆಗಳಿಗೆ ವಿವಿಧ ಮಾರುಕಟ್ಟೆಯಲ್ಲಿರುವ ಬೆಲೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತಹ ಬದಲಾವಣೆಯತ್ತ ಸಾಗಿದ್ದೇವೆ.
  • ಈ ಹಿಂದೆ ಬ್ಯಾಂಕೊಂದರಿಂದ ಹಣ ಪಡೆಯಲು, ಹಣ ಹೂಡಲು, ಅಥವಾ ಯಾವುದೇ ಹಣಕಾಸಿಗೆ ಸಂಬಂಧಿಸಿದ ವ್ಯವಹಾರ ಮಾಡಲು ಬ್ಯಾಂಕಿನಲ್ಲಿ ಸಾಲಿನಲ್ಲಿ ನಿಲ್ಲದೇ ವಿಧಿಯಿಲ್ಲ ಅನ್ನುವಂತಿತ್ತು. ಆನ್ ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಎಟಿಎಮ್, ಫೋನ್ ಬ್ಯಾಂಕಿಂಗ್ ನಂತಹ ಸೌಲಭ್ಯಗಳು ಬಂದ ಮೇಲೆ ಯಾವುದೇ ಹೊತ್ತಿನಲ್ಲಿ, ಯಾವುದೇ ತಡೆಯಿಲ್ಲದೇ, ಕಿರಿಕಿರಿಯಿಲ್ಲದೇ ಹಣಕಾಸಿನ ವ್ಯವಹಾರಗಳನ್ನು ಮಾಡುವಂತಾಗಿದೆ. 
  • ಎಸ್.ಎಸ್.ಎಲ್.ಸಿ, ಪಿ.ಯು.ಸಿ  ಮುಂತಾದ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ದೂರದ ಹಳ್ಳಿಯ ವಿಧ್ಯಾರ್ಥಿಗಳು, ಪಾಲಕರು ಫಲಿತಾಂಶಕ್ಕಾಗಿ ಮರುದಿನದವರೆಗೂ ಕಾತರದಿಂದ ಕಾಯುವಂತಹ ದಿನಗಳಿದ್ದವು. ಇವತ್ತು ಮೊಬೈಲಿನಲ್ಲಿ ಒಂದು ಸಂದೇಶದ ಮೂಲಕ ಇಲ್ಲವೇ ಅಂತರ್ಜಾಲ ತಾಣದ ಮೂಲಕ ಫಲಿತಾಂಶ ಪ್ರಕಟಗೊಂಡ ಕೆಲವೇ ನಿಮಿಷಗಳಲ್ಲಿ ತಿಳಿಯುವಂತಹ ಬದಲಾವಣೆ ಸಾಧ್ಯವಾಗಿದೆ.
  • ರೈಲು, ಬಸ್ಸಿನಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸಲು ನಿಲ್ದಾಣಕ್ಕೆ ಹೋಗಿ, ಸಾಲಿನಲ್ಲಿ ನಿಂತು ಟಿಕೇಟ್ ಕೊಳ್ಳಬೇಕಾದ ದಿನಗಳಿಂದ ಮೊಬೈಲ್, ಕಂಪ್ಯೂಟರ್, ಇಲ್ಲವೇ ಮನೆಯ ಹತ್ತಿರದ ಕಾಯ್ದಿರಿಸುವ ಅಂಗಡಿಯೊಂದರಿಂದ ಟಿಕೇಟ್ ಕೊಳ್ಳುವ ಆರಾಮದಾಯಕ ಅನುಭವದತ್ತ ಸಾಗಿದ್ದೇವೆ.
  • ಇಂದಿನ ಚುನಾವಣೆಗಳಲ್ಲಿ ಮತಯಂತ್ರಗಳು ಬಳಕೆಗೆ ಬಂದ ನಂತರ ಚುನಾವಣೆಯಲ್ಲಿ ಸುಧಾರಣೆಗಳನ್ನು ಕಾಣಲು ಸಾಧ್ಯವಾಗಿದೆ. ಹಿಂದಿನಂತೆ ಮತದಾನದಲ್ಲಿ ಆಗುತ್ತಿದ್ದ ಮೋಸವನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ, ಎಣಿಕೆ ಕಾರ್ಯ ಸುಲಭವಾಗಿದೆ, ಫಲಿತಾಂಶವನ್ನು ಬೇಗನೆ ಜನರಿಗೆ ನೀಡಲು ಸಾಧ್ಯವಾಗಿದೆ.
ತಂತ್ರಜ್ಞಾನದ ಬಳಕೆಯೆನ್ನುವುದು ಮೇಲಿನ ಎಲ್ಲ ಉದಾಹರಣೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಡಳಿತ ಯಂತ್ರವನ್ನು ಜನರ ಮನೆ, ಮನದತ್ತ ಕೊಂಡೊಯ್ಯುವಲ್ಲಿ ಸಾಕಷ್ಟು ಯಶಸ್ವಿಯಾಗಿವೆ. ಈ ಪ್ರಕ್ರಿಯೆಯಲ್ಲಿ ಸೋರಿಕೆ ಕಡಿಮೆಯಾಗಿದೆ, ಜನರ ಬೇಡಿಕೆಗಳು ಸಾಕಷ್ಟು ವೇಗವಾಗಿ ಪೂರೈಕೆಯಾಗುತ್ತಿವೆ, ಆಡಳಿತ ಅನ್ನುವುದು ಜನರಿಂದ ಬೇರ್ಪಟ್ಟ ವ್ಯವಸ್ಥೆ ಅಂತಾಗದೇ ಜನರ ಸುತ್ತಲೇ, ಜನರಿಗಾಗಿಯೇ ಕಟ್ಟಿಕೊಳ್ಳಬೇಕಾದ ವ್ಯವಸ್ಥೆ ಮತ್ತು ತಂತ್ರಜ್ಞಾನದ ಸರಿಯಾದ ಬಳಕೆಯ ಮೂಲಕ ಆ ಗುರಿಯನ್ನು ಸಾಧಿಸಲುಬಹುದು ಅನ್ನುವುದು ಇತ್ತಿಚಿನ ದಿನಗಳಲ್ಲಿ ತಕ್ಕ ಮಟ್ಟಿಗೆ ಸಾಬೀತಾಗಿದೆ ಒಟ್ಟಾರೆಯಾಗಿ, ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ಪಟ್ಟಿ ಮಾಡುವುದಾದರೆ, ಮುಖ್ಯವಾದವು ಇಂತಿವೆ.
  • ದಿನದ ೨೪ ಗಂಟೆಗಳು ಸಹ ಜನರಿಗೆ ತಮಗೆ ಬೇಕಾಗಿರುವ ಮಾಹಿತಿ ಹಾಗೂ ಸೇವೆಗಳು ಬೆರಳ ತುದಿಯಲ್ಲಿ ಲಭ್ಯ
  • ಆಡಳಿತದಲ್ಲಿ ಚುರುಕುತನ
  • ಗುಣಮಟ್ಟದ ಸೇವೆ
  • ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವ
ತಂತ್ರಜ್ಞಾನವನ್ನು ಆಡಳಿತದಲ್ಲಿ ಸರಿಯಾಗಿ ತಂದಾಗ ಮೇಲಿನ ಉದಾಹರಣೆಯ ನಮ್ಮ ರೈತ ಮಲ್ಕಪ್ಪ ತನಗೆ ಬೇಕಾಗಿರುವ ಹಲವಾರು ಸೇವೆಗಳನ್ನು ಪಾರದರ್ಶಕವಾಗಿ, ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಉದಾ: ತನ್ನ ಹೊಲದ ಪಹಣಿಯನ್ನು ನಿಮಿಷಗಳಲ್ಲೇ ಪಡೆಯಬಲ್ಲ, ತನ್ನ ಬ್ಯಾಂಕಿನ ವ್ಯವಹಾರವನ್ನ ನಿಮಿಷಗಳಲ್ಲೇ ಮುಗಿಸಿಕೊಳ್ಳಬಲ್ಲ, ವಿದೇಶದಿಂದ ಅವನ ಮಗ ಕಳಿಸುವ ಹಣವನ್ನ ನಿಮಷಗಳಲ್ಲೇ ಪಡೆಯಬಲ್ಲ. ತನ್ನ ಬೆಳೆಗಳನ್ನು ಮಾರಲು ಇರುವ ಒಳ್ಳೆಯ ಬೆಲೆಯ ಬಗ್ಗೆ ಇದ್ದಲೇ ಮಾಹಿತಿ ಪಡೆಯಬಲ್ಲ. ಹೀಗೆ ತಂತ್ರಜ್ಞಾನ ಅವನ ಬದುಕನ್ನು ಸುಲಭವಾಗಿಸಬಲ್ಲದು.

ಪರಿಣಾಮಕಾರಿ ಆಡಳಿತ ನೀಡುವಲ್ಲಿ ಕನ್ನಡ ತಂತ್ರಜ್ಞಾನ ಹೇಗೆ ಸಹಾಯಕ:

ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ತಂತ್ರಜ್ಞಾನ ಹೇಗೆ ಮಹತ್ತರ ಪಾತ್ರವಹಿಸುತ್ತದೆ ಎನ್ನುವುದನ್ನು ತಕ್ಕ ಮಟ್ಟಿಗೆ ಅರಿತುಕೊಂಡ ಮೇಲೆ ಹುಟ್ಟುವ ಪ್ರಶ್ನೆ ಏನೆಂದರೆ “ ಇಷ್ಟೆಲ್ಲ ಅನುಕೂಲಗಳು ತಂತ್ರಜ್ಞಾನದಿಂದ ದೊರಕುತ್ತಿದ್ದರೂ ಯಾಕೆ ಆಡಳಿತ ಯಂತ್ರ ಅಂದುಕೊಂಡ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ, ಯಾಕೆ ಜನರು ತಂತ್ರಜ್ಞಾನ ಕೊಡಮಾಡಿರುವ ಅನುಕೂಲಗಳನ್ನು ವ್ಯಾಪಕವಾಗಿ ಬಳಸುತ್ತಿಲ್ಲ” ಅನ್ನುವುದು. ಇದಕ್ಕೆ ಉತ್ತರ ಅತ್ಯಂತ ಸುಲಭವಾಗಿದೆ. ಅದೇನೆಂದರೆ “ತಂತ್ರಜ್ಞಾನದ ಈ ಬದಲಾವಣೆಗಳು ಆಡಳಿತದಲ್ಲಿ ಜನರ ನುಡಿಯ ಪಾತ್ರವೇನು ಅನ್ನುವುದನ್ನು ಕಡೆಗಣಿಸಿರುವುದು” ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ಭಾರತದ ಜನಸಂಖ್ಯೆಯಲ್ಲಿ ಇಂಗ್ಲಿಷ್ ಬಲ್ಲವರ ಸಂಖ್ಯೆ ಸುಮಾರು ೧೦ ಕೋಟಿ ಅನ್ನುತ್ತವೆ ಅಂಕಿಅಂಶಗಳು. ಅದರಲ್ಲಿ ಕರ್ನಾಟಕದ ಪಾಲು ೫% ಅಂದರೆ ಸುಮಾರು ೫೦ ಲಕ್ಷ ಅನ್ನಬಹುದು. ಇದರಲ್ಲೂ ಇಂಗ್ಲಿಷ್ ಅನ್ನು ಚೆನ್ನಾಗಿ ತಿಳಿದು, ಇಂಗ್ಲಿಷಿನಲ್ಲಿ ಬರುವ ಎಲ್ಲ ತಂತ್ರಜ್ಞಾನದ ಅನುಕೂಲಗಳನ್ನು ಚೆನ್ನಾಗಿ ಬಳಸಬಲ್ಲಂತವರು ಎಲ್ಲೋ ಕೆಲವರು ಮಾತ್ರ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ನನ್ನ ಗೆಳಯನೊಬ್ಬ ಕೊರಿಯಾ ದೇಶಕ್ಕೆ ಕೆಲಸದ ಮೇಲೆ ಹೋಗಿದ್ದ. ಒಂದು ದಿನ ಅವನು ಯಾವುದೋ ಜಾಗಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಸರಿಯಾದ ಮಾಹಿತಿ ಇರದ ಕಾರಣ ದಾರಿ ತಪ್ಪಿಸಿಕೊಂಡು ಬಿಟ್ಟಿದ್ದ, ಆಗ ದಾರಿಯಲ್ಲಿ ಸಿಕ್ಕ ಅಲ್ಲಿನ ಸ್ಥಳೀಯರೊಬ್ಬರಿಗೆ ತಾನು ಹೋಗಬೇಕಾಗಿರುವ ಜಾಗಕ್ಕೆ ದಾರಿ ಹೇಳಿ ಎಂದು ಕೇಳಿಕೊಂಡಾಗ, ಅವರು ತಮ್ಮಲ್ಲಿದ್ದ ಮೊಬೈಲ್ ನಲ್ಲಿ ಅಂತರ್ಜಾಲ ಬಳಸಿ ಅವನು ಹೋಗಬೇಕಾಗಿದ್ದ ದಾರಿಯನ್ನು ಹುಡುಕಿ, ಹೇಗೆ ಹೋಗಬೇಕೆಂಬ ನಕಾಶೆಯನ್ನು ತೋರಿಸಿದರು. ನನ್ನ ಸ್ನೇಹಿತ ಅವರಿಗೆ ಧನ್ಯವಾದ ಹೇಳಿ ಹೊರಟ, ಅವನು ಗಮನಿಸಿದ ಮುಖ್ಯ ಸಂಗತಿ ಅಲ್ಲಿಯ ಜನರು ಯಾರ ಸಹಾಯವಿಲ್ಲದೇ ತಂತ್ರಜ್ಞಾನದ ಬಳಕೆಯನ್ನು ಸುಲಭವಾಗಿ ಉಪಯೋಗಿಸಲು ಶಕ್ತವಾಗಿದ್ದರು, ಇದಕ್ಕೆ ಕಾರಣ ಆ ತಂತ್ರಜ್ಞಾನವು ಅವರ ನುಡಿಯಾದ ಕೋರಿಯನ್ ಭಾಷೆಯಲ್ಲಿತ್ತು ಎಂಬುದು. ನಮ್ಮ ನಾಡಿನಲ್ಲಿ ಇಂತಹದೊಂದು ಸಾಧ್ಯತೆಯನ್ನು ನಿರೀಕ್ಷಿಸಲೂ ಸಾಧ್ಯವೇ?

ಅದಕ್ಕೆ ಹೋಲುವಂತೆ ನನ್ನ ಮನೆಯಲ್ಲಾದ ಒಂದು ಉದಾಹರಣೆಯನ್ನು ನಿಮ್ಮ ಮುಂದಿಡುತ್ತೇನೆ. ನನ್ನ ಹತ್ತಿರದ ಸಂಬಂಧಿಯೊಬ್ಬರು ತಮ್ಮ ಮೊಬೈಲ್ ಫೋನಿನಲ್ಲಿ ಹಾಕುತ್ತಿದ್ದ ಕರೆನ್ಸಿ ಕರೆ ಮಾಡದಿದ್ದರೂ ಅದು ಹೇಗೊ ಖಾಲಿಯಾಗುತ್ತಿದೆ , ಸ್ವಲ್ಪ ನೋಡು ಎಂದು ನನ್ನ ಕೈಗಿತ್ತರು. ಅದನ್ನು ನೋಡಿದಾಗ ಕಾಣಿಸಿದ್ದು ಅಂದರೆ ಕಾಲರ್ ಟ್ಯೂನ್, ಜೋಕ್ಸ್ ಅದು ಇದು ಅಂತ ಇವರಿಗೆ ಕಳಿಸಿದ್ದ ಸಂದೇಶವಕ್ಕೆಲ್ಲ ಇವರು ತಿಳಿಯದೇ ಏನೋ ಒಂದು ಒತ್ತಿ ಅದಕ್ಕೆಲ್ಲ ಒಪ್ಪಿ ತಮ್ಮ ಹಣ ಕಳೆದುಕೊಳ್ಳುತ್ತಾ ಇದ್ದರು. ಇದನ್ನು ಸರಿ ಪಡಿಸಿಕೊಳ್ಳಲು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ ಅಲ್ಲಿ ಕನ್ನಡವಿಲ್ಲ. ಈ ರಗಳೆ ಬೇಡವೆಂದು ಮೊಬೈಲ್ ಬಳಕೆಯನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು. ದೇವರು ಕೊಟ್ಟರೂ ಪೂಜಾರಿ ಕೊಡ ಅನ್ನುವಂತೆ ತಂತ್ರಜ್ಞಾನ ಅನುಕೂಲಗಳನ್ನು ತಂದರೂ ಇಂಗ್ಲಿಷ್ ಅನ್ನುವ ಭಾಷೆಯ ತಡೆಗೋಡೆ ಈ ಲಾಭ ಜನರಿಗೆ ದೊರಕದಂತೆ ಮಾಡಿದೆ ಅನ್ನಬಹುದು.
    
ಮೇಲಿನ ಎರಡು ಉದಾಹರಣೆಗಳು ಪರಿಣಾಮಕಾರಿ ಆಡಳಿತಕ್ಕೆ ಬಳಸುವ ತಂತ್ರಜ್ಞಾನದಲ್ಲಿ ಭಾಷೆಯ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಸುತ್ತವೆ. ಇಂತಹ ಸಾವಿರಾರು ಪ್ರಕರಣಗಳು ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಪರಿಹಾರವೆಂದರೆ ಜನಸಾಮಾನ್ಯರಿಗೆ ಎಲ್ಲಾ ಸೇವೆ/ಸೌಲಭ್ಯಗಳು ಕನ್ನಡದಲ್ಲಿ ದೊರೆಯಬೇಕು. ಇದಕ್ಕಾಗಿ ತಂತ್ರಜ್ಞಾನವನ್ನು ಕನ್ನಡದಲ್ಲಿ ತರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಹಾಗಿದ್ದರೆ ಇವತ್ತಿನ ಸ್ಥಿತಿಗತಿಯೇನು ಅನ್ನುವುದನ್ನು ಕೊಂಚ ನೋಡಬೇಕಿದೆ.

ನಮ್ಮ ಸರ್ಕಾರ ಆಡಳಿತವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತಂತ್ರಜ್ಞಾನದ ಸಹಾಯದಿಂದ ಕೆಲವು ಯೋಜನೆಗಳನ್ನು ಹೊರತಂದಿದೆ. ಇದರಲ್ಲಿ ಪ್ರಮುಖವಾಗಿ ಭೂಮಿ, ನೆಮ್ಮದಿ, ಈ-ಪ್ರಕ್ಯೂರ್ಮೆಂಟ್, ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್, ಬ್ಯಾಂಗಲೋರ್-ಒನ್, ಕರ್ನಾಟಕ-ಒನ್ ಯೋಜನೆಗಳನ್ನು ಇ-ಆಡಳಿತಕ್ಕೆ ತಂದಿವೆ. ಆದರೆ ಇದರಿಂದ ನಮ್ಮ ರಾಜ್ಯದ ಎಷ್ಟು ಜನರಿಗೆ ಉಪಯೋಗವಾಗುತ್ತಿದೆ?
ಈ ಯೋಜನೆಗಳ ಪಟ್ಟಿಯಲ್ಲಿ ಭೂಮಿಯಂತಹ ಕೆಲವು ಯೋಜನೆಗಳು ಜನರಿಗೆ ಸೇವೆಯನ್ನು ಕನ್ನಡದಲ್ಲಿ ಒದಗಿಸುತ್ತಿವೆ. ಆದರೆ ಮೇಲೆ ಹೇಳಿರುವ ಹೆಚ್ಚಿನ ಯೋಜನೆಗಳ ಅಂತರ್ಜಾಲ ತಾಣಗಳಲ್ಲಿ ಅಥವಾ ಅದರ ತಂತ್ರಾಂಶಗಳಲ್ಲಿ ಕನ್ನಡದ ಬಳಕೆ  ಕಾಣಸಿಗುವುದಿಲ್ಲ.

ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಜನರಿಗೆ ತಲುಪಿಸಲೆಂದೇ ಇರುವ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಕಣ್ಣಾಡಿಸಿದರೆ ಕನ್ನಡದಲ್ಲಿ ತೆರೆದುಕೊಳ್ಳಬೇಕಾಗಿದ್ದ ತಾಣ ಮೊದಲಿಗೆ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಲ್ಲಿ ಕಣ್ಣೊರೆಸಲು ಎಂಬಂತೆ ಕನ್ನಡದಲ್ಲೂ ಚೂರು ಪಾರು ಮಾಹಿತಿ ಇದ್ದರೂ ಆ ಕನ್ನಡ ಪುಟಗಳಿಗೆ ಹೋಗುವುದು ಹೇಗೆ ಎಂದು ತಿಳಿಯಲು ಕೂಡ ನಿಮಗೆ ಇಂಗ್ಲಿಶ್ ಗೊತ್ತಿರಬೇಕು, ಪಡಿತರ ಚೀಟಿ ವಿತರಣೆ ಯೋಜನೆ, ಮುಖ್ಯಮಂತ್ರಿಗಳ ದಿನವಹಿ ಆಡಳಿತವನ್ನು ಜನರಿಗೆ ತೋರಿಸುವ ಯೋಜನೆ, ಶಿಕ್ಷಣ ಕ್ಷೇತ್ರದ ವಿವಿಧ ಇಲಾಖೆಗಳ ತಾಣಗಳು, ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ಯೋಗ ಹಾಗೂ ತರಬೇತಿ ಕೇಂದ್ರದ ತಾಣ, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಂತರ್ಜಾಲ ತಾಣ, ಪೋಲಿಸ್ ಇಲಾಖೆಯ ತಾಣ, ಕೇಂದ್ರ ಸರ್ಕಾರ ಅಧೀನದಲ್ಲಿರುವ ಅಂಚೆ ಕಛೇರಿ, ವಿಮೆ, ತೆರಿಗೆ ಪಾವತಿ, ರೈಲ್ವೆ ಇಲಾಖೆಯ ತಾಣ ಹೀಗೆ ಜನಸಾಮಾನ್ಯ ದಿನ ನಿತ್ಯ ಒಡನಾಡುವ ಎಲ್ಲ ಸರ್ಕಾರಿ ವ್ಯವಸ್ಥೆಗಳಲ್ಲೂ ಕನ್ನಡ ಸಲ್ಲದಿರುವ ನುಡಿಯಾಗಿದೆ. ಜನಸಾಮಾನ್ಯರು ಪ್ರತಿದಿನ ನೇರವಾಗಿ ಮುಖಾಮುಖಿಯಾಗುವ ಫೋನ್ ಬಿಲ್, ವಿಮೆ, ಅಂಚೆ, ಬ್ಯಾಂಕ್ ಅರ್ಜಿ, ಫಾರ್ಮ್, ಚೆಕ್ಕುಗಳು ಕನ್ನಡದಲ್ಲಿ ಸಿಗುತ್ತಿಲ್ಲ, ಗ್ರಾಹಕ ಸೇವಾ ಕೇಂದ್ರಗಳಲ್ಲಿ ಕನ್ನಡದ ಆಯ್ಕೆಗಳು ಸಿಗುವುದಿಲ್ಲ, ವಿವಿಧ ಬ್ಯಾಂಕ್ ಗಳ ಎಟಿಎಂಗಳಲ್ಲಿ ಕನ್ನಡದ ಆಯ್ಕೆ ಸಮರ್ಪಕವಾಗಿ ಇಲ್ಲ, ಹಾಗೆಯೇ ಸರ್ಕಾರಿ ಕಚೇರಿಯ ಒಳಗಡೆ ಬಳಕೆ ಮಾಡುವಂತಹ ಹೆಚ್ಚಿನ ತಂತ್ರಾಂಶಗಳೆಲ್ಲದರ ಇಂಟರ್ ಫೇಸ್ (ಉಪಯೋಗಿಸುವ ಪರದೆ) ಮತ್ತು ಅದರಿಂದ ಹೊರ ಬರುವ ಔಟ್ ಪುಟ್ (ಕಾರ್ಡು, ಅರ್ಜಿ, ಫಾರಂ) ಹೀಗೆ ಹೆಚ್ಚಿನೆಡೆ ಇಂಗ್ಲಿಷಿಗೆ ಮಣೆ. ಹೀಗಿರುವಾಗ ೯೨% ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಜನರಿಗೆ ಪರಿಣಾಮಕಾರಿ ಆಡಳಿತದ ಅನುಭವ ಸಿಗುವುದಾದರೂ ಹೇಗೆ?

ಇನ್ನೂ ಖಾಸಗಿ ವ್ಯವಸ್ಥೆಯನ್ನು ಗಮನಿಸಿದರೆ, ಗ್ರಾಹಕ ಸೇವೆಯಲ್ಲಿ ಭಾಷೆಯ ಮಹತ್ವವನ್ನೇ ಅರಿಯದೇ ಮಾಡಿಕೊಳ್ಳುತ್ತಿರುವ ತಪ್ಪುಗಳಿಂದ ಖಾಸಗಿ ವ್ಯವಸ್ಥೆಯಿಂದ ಪಡೆಯುವ ಸೇವೆಗಳ ವಿಷಯದಲ್ಲೂ ಜನಸಾಮಾನ್ಯರ ಅನುಭವ ಸರ್ಕಾರಿ ವ್ಯವಸ್ಥೆಗಿಂತ ಹೆಚ್ಚೇನು ಬೇರೆಯಾಗಿಲ್ಲ. ಜನರ ನುಡಿಯಲ್ಲಿ ತಮ್ಮೆಲ್ಲ ಸೇವೆಗಳನ್ನು ಕೊಡಿ ಎಂದು ಇವರಿಗೆ ಹೇಳಬೇಕಿದ್ದ ಸರ್ಕಾರವೂ ಈ ಬಗ್ಗೆ ಹೆಚ್ಚು ಗಮನ ಹರಿಸದೇ ಇರುವುದರಿಂದ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಭಾಷೆಯ ತಡೆಗೋಡೆ ದಾಟಿ ಸಾಮಾನ್ಯ ಮನುಷ್ಯನನ್ನು ತಲುಪುವುದು ಮರಿಚೀಕೆಯೇ ಸರಿ ಅಂಬಂತಾಗಿದೆ. ಆದರೆ ಪಕ್ಕದ ತಮಿಳುನಾಡು, ಮಹಾರಾಷ್ಟ್ರದಂತಹ ರಾಜ್ಯಗಳು ಈ ನಿಟ್ಟಿನಲ್ಲಿ ನಮಗಿಂತ ಮುಂದಿದ್ದಾರೆ. ಜಪಾನ್, ಜರ್ಮನಿ, ಕೊರಿಯಾ, ಫ್ರಾನ್ಸ್ ನಂತಹ ಮುಂದುವರಿದ ದೇಶಗಳು ಈ ನಿಟ್ಟಿನಲ್ಲಿ ನಮಗೆ ಆದರ್ಶಪ್ರಾಯರಾಗುವಂತಿವೆ.

ತಂತ್ರಜ್ಞಾನದ ಫಲ ನಮ್ಮ ಭಾಷೆಯಲ್ಲೇ ನಮ್ಮ ಜನರಿಗೆ ದೊರಕದಿದ್ದರೆ ಇವುಗಳಿಂದ ಆಗುವ ಪ್ರಯೋಜನ ಶೂನ್ಯ. ಹಾಗಾಗಿ ಸರ್ಕಾರ ತನ್ನ ಕಾರ್ಯಯೋಜನೆಯಲ್ಲಿ ಸಮಗ್ರವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಜನರಿಗೆ ನಾವು ಉಪಕಾರ ಮಾಡುತ್ತಿದ್ದೇವೆ ಅನ್ನೋ ಮನೋಭಾವ ಹೋಗಿ ಜನರ ಉಪಯೋಗಕ್ಕಾಗಿ ನಮ್ಮನ್ನು ಇಲ್ಲಿ ಕೂರಿಸಲಾಗಿದೆ ಅನ್ನುವ ಭಾವನೆ ನಮ್ಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ.

ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಆಡಳಿತವನ್ನು ಜನರಿಗೆ ಮುಟ್ಟಿಸಲು ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ತಂತ್ರಾಂಶಗಳನ್ನು ಬಳಸುವುದರ ಮೂಲಕ ಗಣಕೀಕರಣಗೊಳಿಸಿ ಕನ್ನಡಿಗರಿಗೆ ಕೊಡುವ ಎಲ್ಲಾ ಸೇವೆಗಳನ್ನು ಕನ್ನಡದಲ್ಲಿ ಸಿಗುವಂತೆ ಮಾಡಬೇಕು. ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಎಲ್ಲ ಅಂತರ್ಜಾಲ ತಾಣಗಳು ಕನ್ನಡದಲ್ಲಿ ದೊರಕುವಂತೆ ಮಾಡಬೇಕು. ಇದಲ್ಲದೇ ಇಂತಹುದೇ ಹತ್ತಾರು ಸೇವೆಗಳನ್ನು ಕೊಡುತ್ತಿರುವ ಖಾಸಗಿ ಸಂಸ್ಥೆಗಳು ಸಹ ಇಂತಹ ತಂತ್ರಜ್ಞಾನದ ಅನುಕೂಲಗಳನ್ನು ಜನರಿಗೆ ಕಲ್ಪಿಸುವಂತೆ ನೀತಿ ನಿಯಮಗಳನ್ನು ಸರ್ಕಾರ ರೂಪಿಸಬೇಕು ಹಾಗೂ ಕನ್ನಡದಲ್ಲಿ ಸೇವೆ ನೀಡದಿರುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆಯಂತಹ ಕಾನೂನು ಜಾರಿಗೆ ತರಬೇಕು. ಆಡಳಿತದ ಪ್ರತಿಯೊಂದು ಹಂತದಲ್ಲೂ, ಜನರ ಜೊತೆ ವ್ಯವಹರಿಸುವಾಗ, ಪತ್ರ ವ್ಯವಹಾರ ನಡೆಸುವಾಗ, ತಂತ್ರಾಂಶಗಳು ಹಾಗೂ ಅಂತರ್ಜಾಲದಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಒಂದು ಭಾಷಾನೀತಿಯನ್ನು ಜಾರಿಗೆ ತರಬೇಕು. ಜನರಿಗೆ ಈ ತಂತ್ರಜ್ಞಾನದ ಉಪಯೋಗವನ್ನು ತಿಳಿಸಲು ಕೈಪಿಡಿಗಳನ್ನು, ಸಹಾಯ ಸಾಮಾಗ್ರಿಗಳನ್ನು, ಪ್ರತಿ ಹಳ್ಳಿಗೊಂದರಂತೆ ಕಂಪ್ಯೂಟರ್ ಕೇಂದ್ರ ತೆರೆದು ಶಿಕ್ಷಣ ನೀಡಬೇಕು ಹಾಗೂ ಸಹಾಯಕರನ್ನು ನೇಮಿಸಬೇಕು. ಇವುಗಳ ಜೊತೆಗೆ ನಮ್ಮ ಜನರೂ ಸಹ ತಾವು ಉಪಯೋಗಿಸುವ ಎಲ್ಲಾ ಸೇವೆಗಳನ್ನು ಕನ್ನಡದಲ್ಲೇ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಬೇಕು.

ಈ ನಾಡಿನ ಆಡಳಿತ ಭಾಷೆಯಾಗಿರುವ ಕನ್ನಡವನ್ನ ಸಂಪೂರ್ಣವಾಗಿ ಆಡಳಿತದಲ್ಲಿ ಹಾಗೂ ತಂತ್ರಜ್ಞಾನದಲ್ಲಿ ಜಾರಿಗೆ ತರದೇ ಹೋದರೆ ಪರಿಣಾಮಕಾರಿಯಾದ ಆಡಳಿತವನ್ನು ಸರ್ಕರಕ್ಕೆ ನೀಡಲು ಸಾಧ್ಯವಿಲ್ಲ ಅನ್ನೋ ಮಾತನ್ನ ಮತ್ತೊಮ್ಮೆ ನೆನಪಿಸಲು ಇಚ್ಚಿಸುತ್ತೇನೆ.

ಮಂಗಳವಾರ, ಡಿಸೆಂಬರ್ 6, 2011

ಸಮ್ಮೇಳನದಲ್ಲಿ ಭೇಟಿಯಾಗೋಣ...

ಗೆಳೆಯರೇ, ಇದೇ ಡಿಸೆಂಬರ್ ೯, ೧೦ ಹಾಗೂ ೧೧ನೇ ತಾರೀಖಿನಂದು ಗಂಗಾವತಿಯಲ್ಲಿ ನಡೆಯುತ್ತಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದಿನ ಅವಶ್ಯಕತೆಯಾಗಿರುವ ತಂತ್ರಜ್ಞಾನ ಹಾಗೂ ಅದರಲ್ಲಿ ಕನ್ನಡದ ಇಂದಿನ ಸ್ಥಿತಿ, ಬಳಕೆ ಹಾಗೂ ಮುಂದಿರುವ ದಾರಿಯ ಬಗ್ಗೆ “ಆಧುನಿಕ ಜಗತ್ತು ಮತ್ತು ಕನ್ನಡ” ಎನ್ನುವ ವಿಚಾರ ಘೋಷ್ಠಿಯೊಂದನ್ನು ೧೦ನೇ ಡಿಸೆಂಬರ್ ಸಂಜೆ ೪.೩೦ ಕ್ಕೆ ಏರ್ಪಡಿಸಲಾಗಿದೆ.

ಈ ಗೋಷ್ಠಿಯಲ್ಲಿ ನಾನು “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ” ಅನ್ನುವ ವಿಷಯದ ಕುರಿತು ಮಾತನಾಡುತ್ತಿದ್ದೇನೆ. ಇದರಲ್ಲಿ ಮುಖ್ಯವಾಗಿ ಆಡಳಿತದ ಅಂದರೆ ಏನು? ಪರಿಣಾಮಕಾರಿ ಆಡಳಿತ ಗುಣ ಲಕ್ಷಣಗಳೇನು? ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ತಂತ್ರಜ್ಞಾನ ಪಾತ್ರವೇನು? ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಇದರಿಂದ ನಮ್ಮ ಸಮಾಜದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ನನ್ನ ಜೊತೆಗೆ ಗೆಳೆಯರಾದ ಓಂಶಿವಪ್ರಕಾಶ್ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಇಂದು - ಮುಂದು ಅನ್ನೋ ವಿಷಯದ ಕುರಿತು ಮಾತನಾಡಲಿದ್ದಾರೆ, ಶ್ರೀನಿಧಿ ಟಿ.ಜಿ ಅವರು ಆಧುನಿಕ ಜಗತ್ತಿನ ಬೇಡಿಕೆಗಳು ಮತ್ತು ಕನ್ನಡ ತಂತ್ರಜ್ಞಾನ ಅನ್ನೋ ವಿಷಯದ ಕುರಿತು ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ನೀವು ಅಲ್ಲಿಗೆ ಬಂದಿದ್ದರೆ ಖಂಡಿತವಾಗಿ ಈ ಗೋಷ್ಠಿಯಲ್ಲಿ ಭಾಗವಹಿಸಿ ಹಾಗು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.