ಬಹುಷಃ ಕಳೆದ ಕೆಲವು ತಿಂಗಳಿಂದ ದೇಶದ ಪ್ರತಿಯೊಬ್ಬ ಪ್ರಜೆಯು ಮಾತನಾಡುತ್ತಿರುವುದು ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ. ಈ ಭ್ರಷ್ಟಾಚಾರ ಅನ್ನೋ ಮಹಾಮಾರಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಕರಾಳ ಬಾಹುವನ್ನು ಚಾಚಿದೆ. ಭ್ರಷ್ಟಾಚಾರ ಸಮಾಜದ ನೈತಿಕತೆಯ ಜೊತೆಗೆ , ಇಡೀ ನಾಡನ್ನೇ ಅಧೋಗತಿಯತ್ತ ಕೊಂಡ್ಯೊಯುತ್ತದೆ. ಇಂದು ಭ್ರಷ್ಟಾಚಾರ ಅನ್ನುವುದು ಜಾತಿ, ಮತ, ಧರ್ಮ, ಭಾಷೆ ಹೀಗೆ ಎಲ್ಲವನ್ನು ಮೀರಿ ಬೆಳೆದು ನಿಂತು ನಮ್ಮ ನಾಡಿನ ಏಳಿಗೆಗೆ ಮಾರಕವಾಗಿ ಪರಿಣಮಿಸಿದೆ. ಕೇಂದ್ರ ಹಾಗೂ ರಾಜ್ಯ ಅನ್ನೋ ಭೇದವಿಲ್ಲದೇ ಭ್ರಷ್ಟಾಚಾರ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ನೆಲೆಗೊಂಡಿದೆ. ಭ್ರಷ್ಟಾಚಾರ ಅಳಿಯದ ಹೊರತು ನಮ್ಮ ರಾಜ್ಯ ಏಳಿಗೆ ಕಾಣುವುದಕ್ಕೆ ಸಾಧ್ಯವೇ ಇಲ್ಲಾ. ಈ ಭ್ರಷ್ಟಾಚಾರ ಎಂಬ ರಕ್ಷಸವನ್ನು ನಾವೆಲ್ಲಾ ಸೇರಿ ಹೊಡೆದು ಹಾಕಲೇ ಬೇಕು.
ಕಳೆದ ಕೆಲವು ತಿಂಗಳುಗಳಿಂದ ಅಣ್ಣಾ ಹಜಾರೆ ಅವರ ನೇತ್ರತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಅಸ್ತ್ರವಾಗಿ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕು ಎಂದು ದೇಶಾದ್ಯಂತ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಸಿದ್ಧ ಪಡಿಸಿದ್ದ ಲೋಕಪಾಲ್ ಮಸೂದೆ ಭ್ರಷ್ಟರನ್ನು ಶಿಕ್ಷಿಸುವ ಶಕ್ತಿಯನ್ನು ಹೊಂದಿರದ ಕಾನೂನು ಎಂದು ಆರೋಪಿಸುತ್ತಾ ಬಂದಿರುವ ಅಣ್ಣಾ ಹಜಾರೆ ಮತ್ತು ಅವರ ತಂಡ, ಜನರನ್ನು ಒಳಗೊಂಡ ಒಂದು ಲೋಕಪಾಲ್ ಸಂಸ್ಥೆ ಬರಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾರೆ. ಮುಖ್ಯವಾದ ಅಂಶವೆಂದರೆ ಭ್ರಷ್ಟಾಚಾರ ನಿಗ್ರಹಕ್ಕೆ ಹಲವು ಆಯಾಮಗಳಿವೆ. ವಿವಿಧ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಭ್ರಷ್ಟಾಚಾರವನ್ನು ಹತ್ತಿಕ್ಕಲು ವಿವಿಧ ಮಾರ್ಗಗಳು ಕಾಣಸಿಗುತ್ತವೆ. ಹಲವು ಸೈದ್ಧಾಂತಿಕ ಹಿನ್ನೆಲೆಯಲ್ಲಿ ಜನಲೋಕಪಾಲ್ ಕರಡನ್ನು ನೋಡುವುದಾದರೆ ಸಂಪೂರ್ಣವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಮಸೂದೆ ಎಷ್ಟು ಸಹಕಾರಿ? ಈ ಮಸೂದೆಯೇ ಅಂತಿಮವೇ ಅನ್ನೋ ತೀರ್ಮಾನಕ್ಕೆ ಜನರು ಇನ್ನೂ ಬರಬೇಕಿದೆ. ಜನರಲ್ಲಿ ಜಾಗೃತಿ ಮೂಡದ ಹೊರತು ಯಾವುದೇ ಕಾನೂನುಗಳು ಸಮಾಜದ ಸ್ವಾಸ್ಥ್ಯವನ್ನು ಸರಿಪಡಿಸಲಾರವು ಎನ್ನುವುದು ನನ್ನ ನಂಬಿಕೆ.
ಮೊನ್ನೆ 28 ನೇ ತಾರೀಕು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕೇವಲ ನಗರದ ಸುಶಿಕ್ಷಿತ ಜನರನ್ನ ದೃಷ್ಠಿಯಲ್ಲಿ ಇಟ್ಟುಕೊಂಡು ನಡೆಸಿದ ಕಾರ್ಯಕ್ರಮವಾಗಿತ್ತು ಅನ್ನೋದು ನನ್ನ ಅಭಿಪ್ರಾಯ. ಬೆಂಗಳೂರಿನ ಹಿರಿಯರು, ವಿಧ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊರತುಪಡಿಸಿದರೆ ಸಾಮಾನ್ಯ ಜನರು ಕೆಲವೇ ಕೆಲವು ಸಂಖ್ಯೆಯಲ್ಲಿ ಕಂಡುಬಂದರು. ಈ ಮಾತು ಯಾಕೆ ಮುಖ್ಯವೆಂದರೆ ಇಂದು ಭ್ರಷ್ಟಾಚಾರದ ಕರಾಳ ಹಿಡಿತಕ್ಕೆ ಸಿಕ್ಕಿ ನರಳುತ್ತಿರುವವರು ಬಡವರ್ಗದ ಜನರೇ. ಭ್ರಷ್ಟಾಚಾರದ ಕಾರಣದಿಂದಾಗಿ ತಮಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು ಸಹ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವುಗಳು ಸಾಮಾನ್ಯ ಜನರನ್ನು ಕಡೆಗಣಿಸಿ ಈ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲಾ. ನಿಜಕ್ಕೂ ಈ ಕಾರ್ಯಕ್ರಮದ ವಿವರಗಳು ಸಾಮಾನ್ಯ ಜನರನ್ನು ತಲುಪಿತೇ ಅನ್ನುವುದು ನನ್ನ ಪ್ರಶ್ನೆ?
28 ನೇ ತಾರೀಕು ನಡೆದ ಕಾರ್ಯಕ್ರಮದಲ್ಲಿ ಎದ್ದು ಕಂಡ ಕೊರತೆಯೆಂದರೆ ಕನ್ನಡವನ್ನು ಕಡೆಗಣಿಸಿದ್ದು. ಎಲ್ಲೋ ಕೆಲವು ಬೆರೆಳೆಣಿಕೆಯಷ್ಟು ಕನ್ನಡದ ಗೆಳೆಯರನ್ನು ಬಿಟ್ಟರೆ ಮಿಕ್ಕಿದ್ದೆಲ್ಲಾ ಆಂಗ್ಲ ಹಾಗೂ ಹಿಂದಿಮಯವಾಗಿತ್ತು. ಆಯೋಜಕರು ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಮರೆತು ಹೋದ ಒಂದು ಪ್ರಮುಖ ವಿಷಯವೆಂದರೆ ಆಯಾ ಪ್ರದೇಶದ ಭಾಷೆಯನ್ನ ಕಡೆಗಣಿಸಿ ಹೋರಾಟ ಅಥವಾ ಆಂದೋಲನವನ್ನ ಯಶಸ್ವಿಗೊಳಿಸಲು ಸಾಧ್ಯವಿಲ್ಲಾ. ಭಾರತದಂತಹ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶದಲ್ಲಿ ಭಾಷೆ ತುಂಬ ಪ್ರಮುಖ ಹಾಗೂ ಪರಿಣಾಮಕಾರಿ ಸಾಧನವಾಗಿದೆ. ಆದರೆ ಯಾಕೋ ನಮ್ಮ ಆಯೋಜಕರು ಇದನ್ನ ಮರೆತಂತಿದ್ದರು. ಕಾರಣ ಬಂದಿದ್ದ ಅನೇಕ ಜನರಿಗೆ ಕಾರ್ಯಕ್ರಮದ ಗಣ್ಯರು ಮಾಡಿದ ಹಿಂದಿ ಭಾಷಣಗಳು ಅರ್ಥವಾಗಲೇ ಇಲ್ಲಾ. ಶಾಲೆಯಲ್ಲಿ ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಲಿತಿರುವ ನನಗೇ ಗಣ್ಯರ ಎಲ್ಲಾ ಮಾತುಗಳನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ, ಅಂತಹುದರಲ್ಲಿ ಅನೇಕರಿಗೆ ಭಾಷಣಕಾರರ ಭಾಷಣಗಳು ಅರ್ಥವೇ ಆಗಲಿಲ್ಲ ಅನ್ನೋದು ನೋವಿನ ಸಂಗತಿ. ಕಡೇ ಪಕ್ಷ ಆಯೋಜಕರು ವೇದಿಕೆಯ ಮೇಲೆ ಮಾತನಾಡಿದ ಗಣ್ಯರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿ ಕರಪತ್ರಗಳನ್ನು ಹಂಚಿದ್ದರೆ ಒಳ್ಳೆಯದಿತ್ತೇನೊ ಎಂದು ಅನ್ನಿಸಿತು. ಒಟ್ಟಿನಲ್ಲಿ ನಡೆದ ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇದ್ದರು ಅದರ ಸಫಲತೆ ಇರುವುದು ಅದನ್ನು ಜನರಿಗೆ ತಲುಪಿಸುವ ಬಗೆಯಲ್ಲಿ. ಈ ನಿಟ್ಟಿನಲ್ಲಿ ಮುಂದೆ ನಡೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನ ಸಾಮಾನ್ಯರನ್ನು ತಲುಪುವಂತಾಗಲಿ ಅನ್ನುವುದು ನನ್ನ ಆಶಯ.