ಶನಿವಾರ, ಮಾರ್ಚ್ 12, 2011
ನಾನು ಕಂಡಂತೆ ನಮ್ಮ ಬೆಳಗಾವಿ
ಉತ್ತರ ಕರ್ನಾಟಕದವನಾದ ನನಗೆ, ಬೆಳಗಾವಿ ನನ್ನ ಬೆಳವಣಿಗೆಯ ಒಂದು ಭಾಗವೇ ಅಂದರೆ ತಪ್ಪಲ್ಲ. ವರ್ಷಗಳು ಕಳೆದಂತೆ ನನ್ನ ಜೊತೆಯೇ ಬೆಳಗಾವಿಯ ಸ್ವರೂಪ ಬದಲಾಗುತ್ತಾ ಬಂತು. ಉತ್ತರ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಒಳ್ಳೆಯ ಓದು ಅಥವಾ ಉನ್ನತ ಶಿಕ್ಷಣ ಪಡೆಯಬೇಕೆಂದರೆ ನಾವು ಹುಬ್ಬಳ್ಳಿ, ಧಾರವಾಡ ಇಲ್ಲವೆಂದರೇ ಬೆಳಗಾವಿಗೆ ಹೋಗಿ ಓದಬೇಕು. ಪಿಯುಸಿ ಮುಗಿಸಿದ ಮೇಲೆ ಇಂಜಿನಿಯರಿಂಗ್ ಒದಲು ನನಗೆ ಸಿಕ್ಕಿದ್ದು ಬೆಳಗಾವಿಯ ಒಂದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಅದು 2003-04ರ ಸಮಯ, ಕಾಲೇಜಿಗೆ ಸೇರಿಕೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇದ್ದವು, ಆಗ ಒಂದು ಕಡೆ ಖುಷಿಯಾಗುತ್ತಿದ್ದರೆ ಮತ್ತೊಂದು ಕಡೆ ಭಯ ಕಾಡುತ್ತಿತ್ತು ಕಾರಣ ನಾನು ಹೋಗುತ್ತಿರುವುದು ಬೆಳಗಾವಿ ಅನ್ನೋ ಊರಿಗೆ. ಜೊತೆಗೆ ಹಿಂದೆ ನನ್ನ ತಂದೆ ಇಲ್ಲಿ ಓದುತ್ತಿದ್ದಾಗ ಅವರಿಗೆ ಆಗಿದ್ದ ಅನೇಕ ಕಹಿ ಘಟನೆಗಳು. ಹೆದರಿಕೆಗೆ ಕಾರಣವಿದ್ದದ್ದು ಬೆಳಗಾವಿಯಲ್ಲಿ ಮರಾಠಿಗರು ಹೆಚ್ಚು, ಅಲ್ಲಿ ಕನ್ನಡ ಮಾತನಾಡುವವರನ್ನು ಹೊಡೆಯುತ್ತಾರೆ ಅನ್ನೋ ಭಯ, ಕಾರಣ ನನ್ನ ತಂದೆ 70ರ ದಶಕದಲ್ಲಿ ಇಲ್ಲಿ ಓದುತ್ತಿದ್ದಾಗ ಕನ್ನಡ ಮಾತನಾಡಿದ್ದಕ್ಕಾಗಿ ಮರಾಠಿಗರು ನನ್ನ ತಂದೆ ಜೊತೆ ಜಗಳವಾಡಿ ಅವರನ್ನ ಹೊಡೆದಿದ್ದರು ಕೂಡ.
ಬೆಳಗಾವಿಯಲ್ಲಿ ನನ್ನ ಅನುಭವ:
ಮೊದಲಬಾರಿಗೆ ಬೆಳಗಾವಿಯಲ್ಲಿ ಬಂದಿಳಿದಾಗ ನನಗೆ ಕಂಡಿದ್ದು ಅಲ್ಲಿದ್ದ ಮರಾಠಿಮಯ ವಾತಾವರಣ. ದಿನಸಿ ಅಂಗಡಿ, ಹೊಟೇಲ್ (ಉಡುಪಿ ಹೊಟೇಲ್ ಗಳನ್ನು ಹೊರತುಪಡಿಸಿ), ಆಟೋ ಓಡಿಸುವವರು ಹೀಗೆ ಎಲ್ಲಾ ಕಡೆ ಮರಾಠಿಯ ಪ್ರಭಾವ ಢಾಳಾಗಿ ಕಾಣಸಿಗುತ್ತಿತ್ತು. ಅಲ್ಲಿಗೆ ಹೋದ ಹೊಸದರಲ್ಲಿ ಈ ವಾತಾವರಣ ಬಹಳ ಇಕ್ಕಟ್ಟು ಅನ್ನಿಸುತ್ತಿತ್ತು. ಅನೇಕರಿಗೆ ಅಲ್ಲಿ ಕನ್ನಡ ಬಂದರೂ ಮಾತನಾಡುವುದಿಲ್ಲ, ಅವರಿಗೆ ಕನ್ನಡವೆಂದರೆ ಅಸಡ್ಡೆ, ಇನ್ನೂ ಸ್ವಲ್ಪ ಜನ ಕನ್ನಡವನ್ನು ಕಲಿಯುವದಕ್ಕೇ ಹೋಗಿರಲಿಲ್ಲ, ಕೆಲವು ಕನ್ನಡಿಗರು ಮರಾಠಿ ಮಾತನಾಡುವ ಪರಿಸ್ಥಿತಿ ಇತ್ತು. ಎಲ್ಲಾದಕ್ಕಿಂತ ಘೋರವೆಂದರೇ ನಮ್ಮ ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿ ಎಂಇಎಸ್ ನಂತಹ ಸಂಘಟನೆ ಕರಾಳ ದಿನವನ್ನ ಆಚರಿಸುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿತ್ತು. ನನ್ನ ಮುಂದೆಯೇ ಅನೇಕ ಅಂಗಡಿಗಳ ಮಾಲೀಕರು ಎಂಇಎಸ್ ನವರನ್ನ ಬೈದದ್ದಿದೆ. ಬೆಳಗಾವಿಯಿಂದ ಆರಿಸಿ ಬಂದಿದ್ದ ಎಂಇಎಸ್ ಶಾಸಕರು ನಮ್ಮ ವಿಧಾನಸಭೆಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕೂಗಾಡುತ್ತಿದ್ದರು, ನಮ್ಮ ರಾಜ್ಯದ ಉಳಿದ ಪ್ರತಿನಿಧಿಗಳು ನೋಡಿಕೊಂಡು ಸುಮ್ಮನಿರುತ್ತಿದ್ದರು. ಎಂಇಎಸ್ ಪ್ರಾಬಲ್ಯದ ನಗರಸಭೆ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಸಭೆಗಳಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯಗಳನ್ನು ತಗೆದುಕೊಳ್ಳುತ್ತಿದ್ದುದ್ದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಯಾಕೆ ಸರ್ಕಾರ ಅಥವಾ ಬೆಳಗಾವಿ ಜಿಲ್ಲೆಯ ಇತರೆ ಪಕ್ಷದ ಜನಪ್ರತಿನಿಧಿಗಳು ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲಾ ಎಂದು ಸಿಟ್ಟು ಮಾಡಿಕೊಂಡಿದ್ದು ಇದೆ.....
ಬದಲಾದ ಬೆಳಗಾವಿಯ ವಾತಾವರಣ:
ಇವತ್ತು ನಾವುಗಳು ಬೆಳಗಾವಿಯಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಿರುವುದನ್ನು ಕಾಣುತ್ತಿದ್ದರೆ, ಅದಕ್ಕೆ ಮುಖ್ಯ ಕಾರಣ ಸರ್ಕಾರಕ್ಕಿಂತ ಹೆಚ್ಚಾಗಿ ದುಡಿದ್ದದ್ದು ಕನ್ನಡ ಪರ ಸಂಘಟನೆಗಳು, ಅದರಲ್ಲೂ ಮುಖ್ಯವಾಗಿ ಹೆಸರಿಸಬೇಕಾಗಿರುವಂತಹುದು ಕರ್ನಾಟಕ ರಕ್ಷಣಾ ವೇದಿಕೆ. ಸುಮಾರು 2005 ರಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಲು, ನಮ್ಮನ್ನು ಕಡೆಗಣಿಸಲಾಗಿದೆ ಅನ್ನೋ ಕೊರಗು ಇಟ್ಟುಕೊಂಡಿದ್ದಂತಹ ಕನ್ನಡಿಗರಿಗೆ ಮನಸ್ಥೈರ್ಯ ತುಂಬಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಕೆಲಸಗಳಿಂದಾಗಿ. ಬೆಳಗಾವಿಯ ಮಹಾಪೌರರಾಗಿದ್ದ ವಿಜಯ್ ಮೋರೆ ಅವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಗೊತ್ತುವಳಿ ಮಂಡಿಸಿ ದೊಡ್ಡ ಗಲಾಟೆಗೆ ಕಾರಣವಾಗಿದ್ದರು. ಇದೇ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಜಯ್ ಮೋರೆ ಬೆಂಗಳೂರಿಗೆ ಬಂದಿದ್ದಾಗ ಅವರ ಮುಖಕ್ಕೆ ಮಸಿ ಬಳಿದು ಎಂಇಎಸ್ ನ ನಾಡವಿರೋಧಿ ನಿಲುವಿಗೆ ಪ್ರತಿಭಟನೆ ಸೂಚಿಸಿದ್ದರು. ಇದೇ ವಿಷಯ ಮುಂದೆ ಬೆಳಗಾವಿಯಲ್ಲಿ ಅನೇಕ ಬದಲಾವಣೆಗಳಿಗೆ ನಾಂದಿ ಹಾಡಿತು. ವಿಜಯ್ ಮೋರೆ ಪ್ರಕರಣದಲ್ಲಿ ಧರಂಸಿಂಗ್ ಸರ್ಕಾರದ ಮೇಲೆ ಒತ್ತಡ ತಂದ ಕರವೇ ಹೋರಾಟ ನಡೆಸಿ ಮಹಾನಗರ ಪಾಲಿಕೆ ವಿಸರ್ಜನೆಗೊಳ್ಳುವಂತೆ ಮಾಡಿತು. ಇದಾದ ನಂತರ ಬೆಳಗಾವಿಯಲ್ಲಿ ದಿವಂಗತ ಶ್ರೀ ಸಿ. ಅಶ್ವಥ್ ಅವರ ಸಾರಥ್ಯದಲ್ಲಿ ನಡೆದ "ಕನ್ನಡವೇ ಸತ್ಯ" ಕಾರ್ಯಕ್ರಮ ಕನ್ನಡಿಗರಲ್ಲಿ ಹೊಸ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಇದೇ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡುವಂತೆ ಆಗ್ರಹಿಸಿ ಎರಡು ಬಾರಿ ಬೆಳಗಾವಿಯಿಂದ ಬೆಂಗಳೂರಿನ ತನಕ ಸಾವಿರಾರು ಕಾರ್ಯಕರ್ತರನ್ನು ಕರೆದುಕೊಂಡು ಹೋದ ಕರವೇ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಒತ್ತಡ ಹೇರಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ನಿರಂತರ ಕೆಲಸದಿಂದಾಗಿ ಬೆಳಗಾವಿ ರಾಜಕೀಯ ವಿಷಯವಾಗಿ ಹಾಗೂ ರಾಜ್ಯದ ಎಲ್ಲಾ ಜನರ ಗಮನಕ್ಕೆ ಬರತೊಡಗಿದಾಗ, 50 ವರ್ಷಗಳಿಂದ ನಿದ್ದೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಎಚ್ಚಿತ್ತು ಬೆಳಗಾವಿಯಲ್ಲಿ ೨೦೦ ಕೋಟಿ ರೂ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ಚಾಲನೆ ನೀಡಿತು ಇದರ ಜೊತೆಗೆ 2 ಬಾರಿ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಿತು. ಸರ್ಕಾರ ತಗೆದುಕೊಂಡ ಈ ನಿರ್ಧಾರಗಳಿಗೆ ಕರವೇಯ ಹೋರಾಟಗಳೇ ಕಾರಣವೆಂದರೆ ತಪ್ಪಲ್ಲ. ಇದಲ್ಲದೇ ಎಂಇಎಸ್ ಸಂಘಟನೆಯ ಬಲ ಮುರಿಯಲು ಪಣ ತೊಟ್ಟು ಕೆಲಸ ಮಾಡಿದ ಕರವೇ 17 ವರ್ಷಗಳ ನಂತರ ಕನ್ನಡದ ಮಹಿಳೆಯೊಬ್ಬರು ಬೆಳಗಾವಿಯ ಮಹಾಪೌರರಾಗಿ ಆಯ್ಕೆಯಾಗಲು ಕಾರಣವಾಯಿತು. ಇವತ್ತು ಎಂಇಎಸ್ ಬೆಳಗಾವಿಯ ಭಾಗದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.
ಮಾಡಿದವರನ್ನೇ ಮರೆತಿರುವ ರಾಜ್ಯ ಸರ್ಕಾರ:
ಬೇಸರದ ಸಂಗತಿಯೆಂದರೆ, ಕಳೆದ 50 ವರ್ಷಗಳಿಂದ ರಾಜ್ಯ ಸರ್ಕಾರದ ಕಡಗಣನೆಗೆ ಒಳಗಾಗಿದ್ದ, ಇನ್ನೇನು ಬೆಳಗಾವಿ ನಮ್ಮ ಕೈ ತಪ್ಪಿ ಹೋಯಿತು ಅನ್ನೋ ಮಟ್ಟಕ್ಕೆ ಹೋಗಿದ್ದಾಗ, ಗಡಿಭಾಗದ ನಾಯಕರು ಸೇರಿದಂತೆ, ಕನ್ನಡಿಗರಲ್ಲಿ ಧ್ಯೈರ್ಯ ತುಂಬುವ ಕೆಲಸ ಮಾಡಿದ್ದು ಕನ್ನಡಪರ ಸಂಘಟನೆಗಳೇ. ಆದರೆ ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾಡಿನ ಯಾವುದೆ ಕನ್ನಡ ಪರ ಸಂಘಟನೆಗಳಿಗೆ ಆಹ್ವಾನವನ್ನೂ ನೀಡಿಲ್ಲ, ಅದು ಬಿಡಿ ಸರ್ಕಾರದ ಒಂದು ಭಾಗವಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಹ್ವಾನ ನೀಡಲಾಗಿಲ್ಲ. ದೌರ್ಭಾಗ್ಯವೆಂದರೇ ಐಶ್ವರ್ಯ ರೈ ನಂಥ ಹಿಂದಿ ಚಿತ್ರನಟಿಯನ್ನ ಆಹ್ವಾನಿಸುವಲ್ಲಿ ಕಾಳಜಿ ಹೊಂದಿರುವ ಸರ್ಕಾರ, ಶಿಲ್ಪಾ ಶೆಟ್ಟಿಯನ್ನು ಕರೆಸಬೇಕೋ ಅಥವಾ ಬೇಡವೋ ಎಂದು ನಿರ್ಧರಿಸಲು ಸಭೆ ಸೇರುವ ಸರ್ಕಾರ, ಪ್ರತಿ ದಿನ ನಾಡಿಗೆ, ಭಾಷೆಗೆ, ನಾಡಿಗರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವ ಕನ್ನಡ ಪರ ಸಂಘಟೆನೆಗಳಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಿಲ್ಲ. ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದ ಮಾಧ್ಯಮಗಳು ಸಹ ಯಾಕೋ ಈ ವಿಷಯದ ಬಗ್ಗೆ ಗಮನಹರಿಸಿಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)