ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 22, 2012

ಒಂದೇ ನಾಡು... ಒಂದೇ ಕುಲವು...

ಇನ್ನೇನು ನವಂಬರ್ ೧ ಬಂದೇ ಬಿಟ್ಟಿತು, ಕನ್ನಡಿಗರ ಪಾಲಿಗೆ ಮನೆ ಹಬ್ಬದ ತರಹ ಇರುವ “ಕನ್ನಡ ರಾಜ್ಯೋತ್ಸವ” ಎಲ್ಲಡೆ ಆಚರಿಸಲ್ಪಡುತ್ತದೆ. ಸುಮಾರು ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳೆಲ್ಲ ಒಂದಾಗಿ “ಕನ್ನಡ ನಾಡು” ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನವಿದು. ನಮ್ಮ ಈ ರಾಜ್ಯೋತ್ಸವದ ಹಿಂದೆ ಹಲವು ದಶಕಗಳ ಕಡು ಹೋರಾಟದ ಕಥೆಯಿದೆ. ಈ ಏಕೀಕರಣದ ಹೋರಾಟದಲ್ಲಿ ಹಲವಾರು ಮಹನೀಯರು ತಮ್ಮ ಜೀವನವನ್ನೇ ಇದಕ್ಕಾಗಿ ಮುಡಿಪಾಗಿಟ್ಟಿದ್ದರು. ಹಾಗಿದ್ರೆ ಈ ಏಕೀಕರಣದ ಕಥೆ ಏನು ಅನ್ನೋದನ್ನ ನೋಡೋಣ..

ವಿಜಯನಗರ ಸಾಮ್ರಾಜ್ಯದ ಪತನವಾದ ನಂತರ, ಕನ್ನಡ ದೇಶವು ಹಲವು ಸಾಮಂತರ ಹಾಗೂ ರಾಜರುಗಳ ನಡುವೆ ಹಂಚಿಹೋಗಿತ್ತು. ಇದಾದ ನಂತರ ಭಾರತಕ್ಕೆ ಬಂದ ಬ್ರಿಟೀಷರ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ೨೦ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಇದರಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನ, ನಿಜಾಮನ ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಪ್ರಾಂತ್ಯಗಳು ಪ್ರಮುಖವಾಗಿದ್ದವು. ಗಮನಿಸಬೇಕಾದ ಅಂಶವೆಂದರೆ ೨/೩ ನೇ ಭಾಗದಷ್ಟು ಕನ್ನಡಿಗರು ಮೈಸೂರು ಪ್ರಾಂತ್ಯದಿಂದ ಹೊರಗಿದ್ದರು. ಬಾಂಬೆ ಪ್ರಾಂತ್ಯದಲ್ಲಿ ಮರಾಠಿ ಆಡಳಿತ ಭಾಷೆಯಾಗಿತ್ತು, ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಆಡಳಿತ ಭಾಷೆಯಾಗಿತ್ತು, ನಿಜಾಮರ ಆಡಳಿತದಲ್ಲಿ ಉರ್ದು ಭಾಷೆ. ಹೀಗಾಗಿ ಕನ್ನಡಿಗರಿಗೆ ತಾವು ಅನಾಥರಾಗಿದ್ದೇವೆ, ತಮ್ಮ ಮೇಲೆ ಹೇರಿಕೆಯಾಗುತ್ತಿದೆ ಅನ್ನೋ ಭಾವನೆ ಜಾಗೃತವಾಗ ತೊಡಗಿತು. ಬೇರೆಯವರ ಹಂಗಿನಲ್ಲಿ ಪರಕೀಯರಂತೆ ಬಾಳುತ್ತಿದ್ದೇವೆ ಅನ್ನೋ ಭಾವನೆ ಮನೆಮಾಡಿತು. ಕನ್ನಡಿಗರಿಗೆ ತಮ್ಮದೇ ಆದ ಒಂದು ರಾಜ್ಯವಿರಬೇಕು, ಅಲ್ಲಿ ಕನ್ನಡಿಗರಿಗೆ ಎಲ್ಲಾ ಹಕ್ಕುಗಳು ದೊರೆಯುವಂತಿರಬೇಕು ಅನ್ನೋ ಚರ್ಚೆಗಳು ನಡೆಯತೊಡಗಿದವು. ಇದುವೇ ಮುಂದೆ ಅಖಂಡ ಕರ್ನಾಟಕದ ಏಕೀಕರಣದ ಹೋರಾಟಕ್ಕೆ ನಾಂದಿಯಾಯಿತು. ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಹಾಗೂ ಅನೇಕ ಮಹನೀಯರು ಈ ಚಳುವಳಿಗೆ ಹೆಗಲುಕೊಟ್ಟರು.

(ಚಿತ್ರ ಕೃಪೆ: http://www.kamat.com/kalranga/kar/)

೧೮೫೬ರಲ್ಲಿ ಕರ್ನಾಟಕ ಏಕೀಕರಣದ ಮಾತುಗಳು ಕೇಳಿಬರಲು ಶುರುವಾದವು, ಆದರೆ ಇದಕ್ಕೆ ಬಲ ಬಂದಿದ್ದು ೧೮೯೦ ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದ ನಂತರ. ೧೯೦೩ ರಲ್ಲಿ ಸಂಘದಲ್ಲಿ ಭಾಷಣ ಮಾಡಿದ ಬೆನಗಲ್ ರಾಮರಾಯರು ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯದ ಹಾಗೂ ಮುಂಬೈ ಪ್ರಾಂತ್ಯದ ಕನ್ನಡ ಭಾಗಗಳನ್ನು ಕೂಡಿಸಿ ಅಖಂಡ ಕರ್ನಾಟಕವನ್ನು ಕಟ್ಟುವ ಯೋಚನೆಯನ್ನು ಸಂಘದ ಮುಂದಿಟ್ಟರು. ನಂತರ ಚಳುವಳಿಗೆ ಒಂದು ಮೂರ್ತ ರೂಪ ಕೊಟ್ಟಿದ್ದು ಕರ್ನಾಟಕದ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು. ಇದೇ ಸಮಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ನವರು ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇದಾದ ನಂತರ ಪರಿಷತ್ತಿನ ಆಶ್ರಯದಲ್ಲಿ ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ನಡೆಸಿ ಏಕೀಕರಣದ ಬೇಡಿಕೆಯನ್ನು ಒತ್ತಾಯಿಸಲಾಗುತ್ತಿತ್ತು. ಸಾಹಿತ್ಯ ಪರಿಷತ್ತಿನ ಸಭೆಗಳು ರಾಜಕಾರಣಿಗಳ ಗಮನ ಸೆಳೆಯುವಲ್ಲಿ ಸಫಲವಾಯಿತು. ೧೯೨೦ರಲ್ಲಿ ಧಾರವಾಡದಲ್ಲಿ ಪ್ರಥಮ ಕರ್ನಾಟಕ ರಾಜಕೀಯ ಪರಿಷತ್ತು ನಡೆಸಿ ದೇಶಮಟ್ಟದ ಗಮನ ಸೆಳೆಯಲಾಯಿತು. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ಕಾಲದಲ್ಲೇ ಸರ್. ಸಿದ್ದಪ್ಪಾ ಕಂಬಳಿಯವರ ಅಧ್ಯಕ್ಷತೆಯಲ್ಲಿ ಪ್ರಥಮ ಏಕೀಕರಣ ಸಮ್ಮೇಳನವನ್ನು ಸೇರಿತು. ಇದೇ ಸಮ್ಮೇಳನದಲ್ಲಿ ಹುಯಿಲುಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು” ಗೀತೆಯನ್ನು ಹಾಡಲಾಯಿತು. ಇದಾದ ನಂತರ ೧೯೪೬ ರ ವರೆಗೆ ಈ ಸಮ್ಮೇಳನಗಳನ್ನು ವಿವಿಧ ಗಣ್ಯರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ೧೯೨೬ರಲ್ಲಿ ಹಿಂದುಸ್ಥಾನೀ ಸೇವಾದಳವು ಸಹಿ ಸಂಗ್ರಹ ಚಳುವಳಿಯನ್ನು ಮಾಡಿ ಏಕೀಕರಣದ ಪರ ೩೬,೦೦೦ ಜನರ ಸಹಿ ಪಡೆಯಿತು. ಇದರ ಪರಿಣಾಮವಾಗಿ ಏಕೀಕರಣ ರಾಜಕೀಯ ವಿಷಯವಾಯಿತು. ೧೯೩೭ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಏಕೀಕರಣ ತನ್ನ ಗುರಿಯಂದು ಹೇಳಿತ್ತು. ಪ್ರಜಾ ಸಂಯುಕ್ತ ಪಕ್ಷವೂ ಸಹ ೧೯೩೭ರಲ್ಲಿ ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿತು. ೧೯೪೭ರಲ್ಲಿ ಮುಂಬೈ ಹಾಗೂ ಮದ್ರಾಸ್ ವಿಧಾನಸಭೆಗಳು ಏಕೀಕರಣವನ್ನು ಬೆಂಬಲಿಸಿ ಠರಾವು ಮಾಡಿದವು. ೧೯೪೭ರ ಡಿಸೆಂಬರ್ ನಲ್ಲಿ ಕಾಸರಗೋಡಿನಲ್ಲಿ ಡಾ| ದಿವಾಕರರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನವು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕರ್ನಾಟಕ ಏಕೀಕರಣವಾಗದ ಬಗ್ಗೆ ಅಸಮಾಧಾನ ಸೂಚಿಸಿತು. 


ಆದರೆ ಕೇಂದ್ರ ಸರ್ಕರಾ ನೇಮಿಸಿದ್ದ ಧಾರ್ ಆಯೋಗವು ಭಾಷಾವಾರು ಪ್ರಾಂತ್ಯದ ರಚನೆಯನ್ನು ವಿರೋಧಿಸಿತು. ಆಗ ಕಾಂಗ್ರೆಸ್ ಧಾರ್ ವರದಿಯ ಬಗ್ಗೆ ಪರಿಶೀಲನೆಗಾಗಿ ಜವಾಹರ್ ಲಾಲ್ ನೆಹರು, ವಲ್ಲಭಭಾಯಿ ಪಟೇಲ್ ಹಾಗೂ ಪಟ್ಟಾಭಿ ಅವರ ಸಮಿತಿಯೊಂದನ್ನು ರಚಿಸಿತು. ಆದರೆ ಈ ಸಮಿತಿಯು ಸಹ ಅಂಧ್ರಪ್ರದೇಶವನ್ನು ಹೊರತು ಪಡಿಸಿ ಬೇರೆ ಭಾಷಾವಾರು ಪ್ರಾಂತಗಳ ಬೇಡಿಕೆಯನ್ನು ಬೆಂಬಲಿಸಲಿಲ್ಲ. ಸ್ವಾಂತಂತ್ಯಕ್ಕಿಂತ ಮುಂಚೆ ೨೦ ಆಡಳಿತಕ್ಕೆ ಸೇರಿದ್ದ ಕರ್ನಾಟಕ ಸ್ವಾತಂತ್ರ್ಯದ ನಂತರ ೫ ಪ್ರಮುಖ ಆಡಳಿತಕ್ಕೆ ಬಂತು. ಆಗ ಮೈಸೂರು ಸಂಸ್ಥಾನದ ಜೊತೆ ಇತರೆ ಭಾಗಗಳನ್ನು ಸೇರಿಸಲು ಮೈಸೂರು ಹಾಗೂ ಕೊಡಗಿನ ಕೆಲವರು ಅಕ್ಷೇಪವೆತ್ತಿದರು. ಆಗ ಗೊರೂರು ರಾಮಸ್ವಾಮಯ್ಯಂಗಾರ್, ಕುವೆಂಪು, ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಮುಂತಾದ ನಾಯಕರುಗಳು ಜನಾಭಿಪ್ರಾಯದ ಪರಿವರ್ತನೆಗೆ ಕಾರಣರಾದರು.

೧೯೫೩ರಲ್ಲಿ ಏಕೀಕರಣಕ್ಕಾಗಿ ಸತ್ಯಾಗ್ರಹ ನಡೆಸಿ ೫೦೦೦ ಜನ ಬಂಧಿತರಾದರು. ಅದೇ ವರ್ಷ ಪೊಟ್ಟಿ ಶ್ರೀರಾಮುಲು ಉಪವಾಸ ನಡೆಸಿ ತೀರಿಕೊಂಡಾಗ ಆಂಧ್ರ ಪ್ರಾಂತ ರಚನೆಯಾಗಿ, ಬಳ್ಳಾರಿ ಜಿಲ್ಲೆಯ ಏಳು ತಾಲೂಕುಗಳು ಮೈಸೂರು ರಾಜ್ಯಕ್ಕೆ ಸೇರಿತು. ಇಷ್ಟಾದರೂ ಕರ್ನಾಟಕ ಒಂದಾಗುವ ಲಕ್ಷಣಗಳು ಕಾಣಿಸುತ್ತಿದ್ದಿಲ್ಲ, ಆಗ ಜನರ ಸಿಟ್ಟು ಎಷ್ಟರ ಮಟ್ಟಿಗೆ ಇತ್ತೆಂದರೆ ಧಾರವಾಡ ಹಾಗೂ ಹುಬ್ಬಳ್ಳಿಗಳಲ್ಲಿ ವಿಧಾನಸಭೆಗೆ ಉಪಚುನಾವಣೆಗಳಾದಾಗ ಕಾಂಗ್ರೆಸ್ ಸೋತು ಏಕೀಕರಣದ ಪರ ಅಭ್ಯರ್ಥಿಗಳು ಗೆದ್ದರು. ಇದೇ ಸಮಯದಲ್ಲಿ ಹುಬ್ಬಳ್ಳಿಯ ಬಳಿ ಅದರಗುಂಚಿಯಲ್ಲಿ ಶಂಕರಗೌಡ ಪಾಟೀಲರು ಅಖಂಡ ಕರ್ನಾಟಕಕ್ಕೆ ಆಗ್ರಹಿಸಿ ಆಮರಣ ಉಪವಾಸ ಕೈಗೊಂಡರು. ಅದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕೆ.ಪಿ.ಸಿ.ಸಿ ಸಭೆಯ ವೇಳೆ ಏಕೀಕರಣಕ್ಕೆ ಆಗ್ರಹಿಸಿ ಜನರು ಕಲ್ಲು ತೂರಿ ಪ್ರತಿಭಟಿಸಿದರು. ಇದಾದ ನಂತರ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರ ರಾಜ್ಯ ಪುನರ್ಘಟನಾ ಅಯೋಗವನ್ನು ನೇಮಿಸಿತು. ಈ ಆಯೋಗ ಸಲ್ಲಿಸಿದ ವರದಿಯ ಪ್ರಕಾರ ಏಕೀಕೃತ ಕರ್ನಾಟಕ ೧೯೫೬ರ ನವಂಬರ್ ೧ಕ್ಕೆ ಅಸ್ತಿತ್ವಕ್ಕೆ ಬಂತು. ಮೈಸೂರ ಎಂಬ ಹೆಸರಿದ್ದ ರಾಜ್ಯಕ್ಕೆ ೧೯೭೩ರ ನವೆಂಬರ್ ೧ರಂದು “ಕರ್ನಾಟಕ” ಎಂದು ಹೆಸರಿಡಲಾಯಿತು. ಈ ಸಂಧರ್ಭದಲ್ಲಿ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರಿಗೆ ನಮ್ಮೆಲ್ಲರ ನಮನ ಸಲ್ಲಲೇಬೇಕು. ಈ ಮಹನೀಯರು ನಮಗೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದುಕೊಂಡು ಹೋಗಬೇಕು ಹಾಗೂ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕಡೆಗೆ ನಮ್ಮ ನಡೆ ಇರಬೇಕು.

ಭಾನುವಾರ, ಮೇ 20, 2012

ಮುಖ್ಯಮಂತ್ರಿಗಳೇ, ಯಳ್ಳೂರು ಇರೋದು ಮಹಾರಾಷ್ಟ್ರದಲ್ಲಾ?


ಇಷ್ಟಕ್ಕೂ ಈಗ ನಾನು ಹೇಳಲು ಹೊರಟಿರುವ ಊರು ಹೆಚ್ಚು ಜನರಿಗೆ ಪರಿಚಿತವಿಲ್ಲದೇ ಇರಬಹುದು. ಯಳ್ಳೂರು ಅನ್ನೋ ಗ್ರಾಮ ಇರುವುದು ಬೆಳಗಾವಿ ನಗರದಿಂದ ಕೆಲವೇ ಕಿಲೋಮೀಟರ್ ಗಳ ದೂರದಲ್ಲಿ. ಯಳ್ಳೂರಿಗೆ ಬೆಳಗಾವಿಯಿಂದ ಹತ್ತಾರು ಬಸ್ಸುಗಳು ಬೆಳಗ್ಗೆಯಿಂದ ರಾತ್ರಿಯವರಿಗೂ ಓಡಾಡುತ್ತವೆ. ಯಳ್ಳೂರಿನಲ್ಲಿ ಒಂದು ಗ್ರಾಮ ಪಂಚಾಯಿತಿ ಸಹ ಇದೆ. ಯಳ್ಳೂರು ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಸರಿ ಇದರಲ್ಲೇನು ವಿಶೇಷ ಅಂತೀರ?? ಒಂದು ವಿಶೇಷ ಇದೆ ಅದೇನೆಂದರೆ ಯಳ್ಳೂರು ಮಹಾರಾಷ್ಟ್ರದಲ್ಲಿದೆ!!!! ಹೌದು ಸರಿಯಾಗಿ ಓದಿಕೊಳ್ಳಿ, ಯಳ್ಳೂರು ಇರುವುದು ಮಹಾರಾಷ್ಟ್ರದಲ್ಲಿ. ಹಾಗಂತ ನಾನು ಹೇಳುತ್ತಿಲ್ಲ ಬದಲಾಗಿ ಯಳ್ಳೂರಿನಲ್ಲಿರುವ ಬೋರ್ಡ್ ಹೇಳುತ್ತದೆ. ಹಾಗೂ ಈ ಬೋರ್ಡ್ ಹಾಕಿರುವುದು ಎಂ.ಇ.ಎಸ್ ನವರು.

(ಚಿತ್ರಕೃಪೆ: ಅಂತರ್ಜಾಲ)

ಬೋರ್ಡ್ ತಗೆಯೋದಿಲ್ಲ ಅಂದ ಸರ್ಕಾರ

ಹಲವು ಶತಮಾನಗಳಿಂದ ಇಲ್ಲಿ ಪರಸ್ಪರವಾಗಿ ಸಾಮರಸ್ಯದಿಂದ ಬದುಕುತ್ತಿರುವ ಜನರ ಮಧ್ಯ ಭಾಷಾ ವೈಷ್ಯಮ್ಯವನ್ನು ಬೆಳಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಎಂ.ಇ.ಎಸ್ ನಂತಹ ನಾಡದ್ರೋಹಿ ಸಂಘಟನೆಯೊಂದು ಹಲವು ದಶಕಗಳಿಂದ ಜನರ ನಡುವೆ ಭಾಷಾ ವೈಷಮ್ಯದ ಬೀಜವನ್ನು ಬಿತ್ತಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತ, ಕರಗಿ ಹೋಗುತ್ತಿರುವ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಆದರೆ ರಾಜ್ಯದ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿರುವ ಇಂತಹ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ನಮ್ಮ ಸರ್ಕಾರ ಕೈಕಟ್ಟಿಕೊಂಡು ಸುಮ್ಮನೇ ಕುಳಿತಿದೆ. ಇದಲ್ಲದೇ ಮಹಾ ಮೇಳಾವದ ಹೆಸರಿನಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳನ್ನು ಇಲ್ಲಿಗೆ ಕರೆಸಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವಂತಹ ಉದ್ಧಟತನದ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಸಹ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಲೇ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕನ್ನಡ ಪರ ಸಂಘಟನೆಗಳು, ಅದರಲ್ಲೂ ಪ್ರಮುಖವಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಬಾಹಿರವಾಗಿ ಹಾಕಲಾಗಿರುವ ಮಹಾರಾಷ್ಟ್ರ ಬೋರ್ಡನ್ನು ಹಾಗೂ ಜನರಲ್ಲಿ ವೈಮನಸ್ಯ ಬಿತ್ತುತ್ತಿರುವ ಎಂ.ಇ.ಎಸ್ ನಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹೋರಾಟ ಮಾಡಿದರೆ, ಅವರನ್ನು ಸರ್ಕಾರ ಜೈಲಿಗೆ ಅಟ್ಟುತ್ತದೆ ಹಾಗೂ ಇವರನ್ನು ಮಾಧ್ಯಮಗಳಲ್ಲಿ ಕಿಡಿಗೇಡಿಗಳು ಅನ್ನೋ ಹೆಸರಿನಲ್ಲಿ ಲೇವಡಿ ಮಾಡಲಾಗುತ್ತಿದೆ. ಬೋರ್ಡ್ ತೆಗೆದು ಹಾಕಿ ಎಂದು ಆಗ್ರಹಿಸಿದರೆ, ಇದು ಭಾಷಾ ಸೂಕ್ಷವಾಗಿರುವ ಪ್ರದೇಶ ಹಾಗಾಗಿ ಬೋರ್ಡ್ ತಗೆಯಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿನ ಅಧಿಕಾರಿಗಳು ಹಾಗೂ ಸರ್ಕಾರ ಅಸಾಹಾಯಕತೆ ತೋರಿಸುತ್ತಿದೆ.

ನಮ್ಮ ಹಿಂದಿನ ಯಾವುದೇ ಸರ್ಕಾರಗಳಾಗಲಿ, ಅಧಿಕಾರಸ್ಥ ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಗಟ್ಟಿಯಾಗಿ ನಿಂತು ಇಂತಹ ಕಿಡಿಗೇಡಿ ಜನರನ್ನು, ನಾಡಿನ ಸಾಮರಸ್ಯ ಕದಡುವಂತಹ ಕಾರ್ಯಕ್ರಮಗಳನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಅವರೇನಾದರು ಅವರ ಕೆಲಸಗಳನ್ನು ಸರಿಯಾಗಿ ಮಾಡಿದ್ದರೆ. ಯಾಕೆ ಕರವೇಯ ನೂರಾರು ಕಾರ್ಯಕರ್ತರು ಜೈಲಿನ ವಾಸ ಅನುಭವಿಸಬೇಕಾಗುತ್ತಿತ್ತು? ಅನ್ಯಾಯವನ್ನು ಪ್ರಶ್ನಿಸಿದರೆ ಅವರಿಗೆ ಕಿಡಿಗೇಡಿಗಳು ಅನ್ನೋ ಹಣೆಪಟ್ಟಿ ಬೇರೆ. ಈ ಕೂಡಲೇ ಸರ್ಕಾರ ಭಾಷಾ ಅಲ್ಪಸಂಖ್ಯತರನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣದ ಕೆಲಸ ಬಿಟ್ಟು, ನಾಡು, ನೆಲ. ಜಲಕ್ಕೆ ಬದ್ಧ ಎಂಬ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರಬೇಕು.

ಕೊನೆಯದಾಗಿ: ನಾಡು, ನುಡಿ, ನೆಲ ಹಾಗೂ ಜಲದ ವಿಷಯದಲ್ಲಿ ನಮ್ಮ ನಾಡಿಗೆ ಅನ್ಯಾಯವಾದರೆ ತಾವು ಜೀವ ಕೊಡಲು ಸಿದ್ಧ ಅನ್ನುವ ನಮ್ಮ ಚಿತ್ರರಂಗದ ಗಣ್ಯರು ಎಲ್ಲಿದ್ದಾರೆ? ಬೆಳಗ್ಗೆಯಿಂದ ಟಿವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದದ್ದನ್ನು ನೋಡಿದೆ, ಆದ್ರೆ ಯಾಕೋ ನಮ್ಮ ಚಿತ್ರರಂಗದವರು ಮಾತ್ರ ಯಾರೂ ಕಣ್ಣಿಗೆ ಕಾಣಲೇ ಇಲ್ಲಾ!!!

ಗುರುವಾರ, ಏಪ್ರಿಲ್ 5, 2012

ಕಾವೇರಿ ನದಿ ವಿವಾದ: ಒಂದು ನೋಟ

ದಕ್ಷಿಣ ಭಾರತದ ಬಹು ದೊಡ್ಡ ನದಿಯಾದ ಕಾವೇರಿಯು ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಸಮುದ್ರ ಮಟ್ಟದಿಂದ ಸುಮಾರು ೧೩೪೧ ಮೀ ಎತ್ತರದಲ್ಲಿ ಪಶ್ಚಿಮ ಘಟ್ಟದಲ್ಲಿ ಉಗಮಿಸಿ, ಪೂರ್ವಾಭಿಮುಖಿಯಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಕಾವೇರಿಗೆ ಸೇರಿಕೊಳ್ಳುವ ಪ್ರಮುಖ ಉಪನದಿಗಳು ಹೀಗಿವೆ: ಕಬಿನಿ, ಹಾರಂಗಿ, ಕಕ್ಕಬೆ, ಕದಮುರ್, ಕಮ್ಮನಹೊಳೆ, ಹೇಮಾವತಿ, ಲಕ್ಷ್ಮಣತೀರ್ಥ, ಸುವರ್ಣವತಿ, ಶಿಂಷಾ ಹಾಗು ಅರ್ಕಾವತಿ. ಕಾವೇರಿ ನದಿಯು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಸುಮಾರು ೬೪ ಕಿ.ಮೀ ಗಳಷ್ಟು ಉದ್ದ ಗಡಿಯಾಗಿ ರೂಪಗೊಳ್ಳುತ್ತದೆ. ಇದಾದ ನಂತರ ಹೊಗೇನಕಲ್ ಜಲಪಾತದಲ್ಲಿ ನದಿಯು ತನ್ನ ಪಾತ್ರವನ್ನು ದಕ್ಷಿಣಕ್ಕೆ ತಿರುಗಿಸಿ ತಮಿಳುನಾಡಿನ ಮೆಟ್ಟೂರು ಜಲಾಶಯವನ್ನು ಸೇರುತ್ತದೆ.

ಚಿತ್ರ ಕೃಪೆ: ರೆಡ್ಡಿಫ್ ತಾಣ

ಕಾವೇರಿ ನದಿಯು ಹುಟ್ಟಿ ಸಮುದ್ರ ಸೇರುವವರೆಗಿನ ಅದರ ಒಟ್ಟು ಉದ್ದದ ರಾಜ್ಯವಾರು ಹಂಚಿಕೆಯು ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨೦ ಕಿ.ಮೀ, ತಮಿಳುನಾಡಿನಲ್ಲಿ ೪೧೬ ಕಿ.ಮೀ ನಷ್ಟಿದ್ದು ಉಳಿದ ೬೪ ಕಿ.ಮೀ ಎರೆಡು ರಾಜ್ಯಗಳ ನಡುವೆ ಗಡಿಯನ್ನು ರೂಪಿಸುತ್ತದೆ. ಕಾವೇರಿಯ ಒಟ್ಟು ಜಲಾನಯನ ಪ್ರದೇಶ ೮೧,೧೫೫ ಚ.ಕಿ.ಮೀ ಗಳಾಗಿದ್ದು ವಿವಿಧ ರಾಜ್ಯಗಳ ಪಾಲು ಈ ರೀತಿ ಇದೆ:
ರಾಜ್ಯ
ಜಲಾನಯನ ಪ್ರದೇಶ ಚ.ಕಿ.ಮೀ ಗಳಲ್ಲಿ
ಕರ್ನಾಟಕ
೩೪,೨೭೩
ಕೇರಳ
೨,೮೬೬
ತಮಿಳುನಾಡು
೪೪,೦೧೬

1892 ಹಾಗೂ 1924 ಮದ್ರಾಸ್ – ಮೈಸೂರು ಒಪ್ಪಂದಗಳು:

1982 ರ ಮದ್ರಾಸ್ – ಮೈಸೂರು ಒಪ್ಪಂದದ ಮುಖ್ಯ ಅಂಶವೆಂದರೆ ಅಂದಿನ ಮೈಸೂರು ರಾಜ್ಯ ಸರ್ಕಾರ ಕಾವೇರಿ ನದಿ ಪಾತ್ರದಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಮೈಸೂರು ಸರ್ಕಾರವು ಈಗ ಅಸ್ತಿತ್ವದಲ್ಲಿರುವ ಕಾಮಗಾರಿಗಳನ್ನು ಹೊರತು ಪಡಿಸಿ ಹೊಸ ನೀರಾವರಿ ಜಲಾಶಯಗಳನ್ನು ನಿರ್ಮಿಸತಕ್ಕದ್ದಲ್ಲ. ಒಂದು ವೇಳೆ ನಿರ್ಮಿಸಬೇಕಾದ ಸಂಧರ್ಭದಲ್ಲಿ ಕಾಮಗಾರಿಯ ಪೂರ್ಣ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ಕಳುಹಿಸಬೇಕು. ಮದ್ರಾಸ್ ಸರ್ಕಾರ ಒಪ್ಪಿಗೆ ಪಡೆದು ಹೊಸ ಜಲಾಶಯಗಳನ್ನು ಮೈಸೂರು ರಾಜ್ಯ ನಿರ್ಮಿಸಬೇಕು.

1910ರಲ್ಲಿ ಮೈಸೂರು ಸರ್ಕಾರವು ಕನ್ನಂಬಾಡಿಯಲ್ಲಿ ಕಾವೇರಿ ನದಿ ಮೇಲೆ ಜಲಾಶಯವನ್ನು ನಿರ್ಮಿಸುವ ಪ್ರಸ್ತಾವವನ್ನು ರೂಪಿಸಿ 1892ರ ಒಪ್ಪಂದದ ಅನ್ವಯ ಮದ್ರಾಸ್ ಸರ್ಕಾರದ ಒಪ್ಪಿಗೆಯನ್ನು ಕೋರಿತು. ಆದರೆ ಈ ಯೋಜನೆಗೆ ಮದ್ರಾಸ್ ರಾಜ್ಯವು ಒಪ್ಪಿಗೆ ನೀಡಲಿಲ್ಲ. ಪಟ್ಟು ಬಿಡದ ಮೈಸೂರು ರಾಜ್ಯ, ಆಣೆಕಟ್ಟಿನ ಅವಶ್ಯಕತೆಯನ್ನು ಮನವರಿಕೆ ಮಾಡಿದ ಮೇಲೆ, ನ್ಯಾಯಾಧಿಶರ ಮಧ್ಯಸ್ತಿಕೆಯಲ್ಲಿ ಮೈಸೂರು ಹಾಗೂ ಮದ್ರಾಸ್ ಸರ್ಕಾರಗಳ ನಡುವೆ ಮತ್ತೊಂದು ಒಪ್ಪಂದಕ್ಕೆ ದಿನಾಂಕ 18ನೇ ಫೆಬ್ರವರಿ 1924 ರಂದು ಸಹಿ ಹಾಕಲಾಯಿತು. ಈ ಆದೇಶದ ಪ್ರಕಾರ ಮೈಸೂರು ಸರ್ಕಾರ ಆಣೆಕಟ್ಟು ನಿರ್ಮಿಸಲು ಮದ್ರಾಸ್ ಸರ್ಕಾರ ಒಪ್ಪಿತು ಹಾಗೂ ಈ ಆಣೆಕಟ್ಟಿನ ಮೂಲಕ ಜೂನ್ – ಜನವರಿ ತಿಂಗಳವರೆಗೂ ಬಿಡುಗಡೆ ಮಾಡಬೇಕಾಗಿರುವ ನೀರಿನ ಮೊತ್ತವನ್ನು ಸೂಚಿಸಲಾಯಿತು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮದ್ರಾಸ್ ಪ್ರಾಂತ್ಯವು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾರಣ, ಅವರಿಗೆ ಅನುಕೂಲ ಆಗುವ ಹಾಗೆ ಯೋಜನೆಗಳು ಹಾಗೂ ನೀರಿನ ಹಂಚಿಕೆ ಮಾಡಲಾಯಿತು. ಮೈಸೂರು ಸರ್ಕಾರವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಹಚ್ಚಿನ ವಿರೋಧ ತೋರಿಸುವ ಶಕ್ತಿಯನ್ನು ಹೊಂದಿರಲಿಲ್ಲ.

1956ರಲ್ಲಿ ರಾಜ್ಯಗಳು ಪುನರ್ ವಿಂಗಡಣೆಯಾದಾಗ ಕರ್ನಾಟಕ ಸರ್ಕಾರವು ಕಾವೇರಿ ನದಿಯ ಉಪನದಿಗಳಾದ ಕಬಿನಿ, ಹೇಮಾವತಿ, ಹಾರಂಗಿ ಹಾಗೂ ಸುವರ್ಣಾವತಿ ಜಲಾಶಯ ಯೋಜನೆಗಳನ್ನು ಪ್ರಾರಂಭಿಸಿದಾಗ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿತು. ಸ್ವಾಂತಂತ್ರ್ಯ ಪೂರ್ವ ಮಾಡಿಕೊಂಡಿರುವ ಒಪ್ಪಂದಕ್ಕೆ ವಿರುದ್ಧವಾಗಿದೆ ಅನ್ನೋ ಕಾರಣಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತು.  ಸ್ವಾಂತಂತ್ರ್ಯದ ನಂತರ ಮತ್ತೊಮ್ಮೆ ವೈಜ್ಞಾನಿಕವಾಗಿ ಎರಡು ರಾಜ್ಯಗಳಿಗೆ ಒಪ್ಪಿಗೆಯಾಗುವಂತೆ ನದಿ ನೀರು ಹಂಚಿಕೆಯಾಗಬೇಕಾಗಿತ್ತು. ಆದ್ರೆ ಇದರ ಬಗ್ಗೆ ನಮ್ಮ ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳಲ್ಲಿಲ್ಲ.

ಗಮನಿಸಬೇಕಾದ ಅಂಶವೆಂದರೆ ಕಾವೇರಿ ನದಿಪಾತ್ರದಲ್ಲಿ ವಿವಿಧ ರಾಜ್ಯಗಳ ನದಿ ನೀರಿನ ಬಳಕೆಯನ್ನು ತಿಳಿಯಲು ಕೇಂದ್ರ ಸರ್ಕಾರ 1972ರಲ್ಲಿ ಕಾವೇರಿ ಸತ್ಯಶೋಧನಾ ಸಮಿತಿಯನ್ನು ಸ್ಥಾಪಿಸಿತು. ತನ್ನ ವರದಿಯನ್ನು ಸಲ್ಲಿಸಿದಾಗ ತಮಿಳುನಾಡಿನಲ್ಲಿ ನೀರಾವರಿಗೊಳಪಟ್ಟ ಪ್ರದೇಶ ಸುಮಾರು 1,440,000 ಎಕರೆಗಳಿಂದ 2,580,000 ಎಕರೆಗಳಿಗೆ ಹೆಚ್ಚಿಗೆಯಾಗಿತ್ತು. ಆದರೆ ಕರ್ನಾಟಕದಲ್ಲಿ ನೀರಾವರಿಗೊಳಪಟ್ಟ ಪ್ರದೇಶ 6,80,000 ಎಕರೆಗಳಷ್ಟಿತ್ತು. ತಮಿಳುನಾಡು ಸರ್ಕಾರ ಅದರ ಇಚ್ಚೆಯಂತೆ ಆಗಿದ್ದ ಸ್ವಾತಂತ್ರ್ಯಪೂರ್ವ ನಿಯಮಗಳನ್ನು ಮೀರಿತ್ತು.

ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಯಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ತಮಿಳುನಾಡಿನ ರೈತರು  ಅಂತರ್ ರಾಜ್ಯ ಜಲ ವಿವಾದ ಅಧಿನಿಯಮ, 1956 ರ ಪ್ರಕರ ನ್ಯಾಯ ಮಂಡಳಿ ರಚಿಸಬೇಕು ಎಂದು ಕೇಳಿ ಸುಪ್ರೀಂ ಕೋರ್ಟ್ ಮೊರೆಹೋದರು. ಇದರ ಪ್ರಕರವಾಗಿ ಸುಪ್ರೀಂ ಕೋರ್ಟ್ 4ನೇ ಮೇ 1990 ರಂದು ಜಲವಿವಾದ ನ್ಯಾಯ ನಿರ್ಣಯಕ್ಕಾಗಿ ಒಂದು ಸೂಕ್ತ ನ್ಯಾಯಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು.

ನ್ಯಾಯಮಂಡಳಿ ರಚನೆ ಹಾಗೂ ಕರ್ನಾಟಕದ ಪಾಲಿಗೆ ಶಾಪ:

ಚಿತ್ತತೋಷ್ ಮುಖರ್ಜಿ ಅವರ ನೇತ್ರತ್ವದಲ್ಲಿ ರಚನೆಯಾದ ನ್ಯಾಯಮಂಡಳಿ 2 ಜೂನ್ 1990  ರಂದು ತನ್ನ ಕಾರ್ಯ ಆರಂಭಿಸಿತು. ನ್ಯಾಯಮಂಡಳಿಯ ಮುಂದೆ ಕೆಳಕಂಡ ರಾಜ್ಯಗಳು ಈ ರೀತಿ ಬೇಡಿಕೆ ಇಟ್ಟವು
  • ಕರ್ನಾಟಕ ತನಗೆ 465 ಟಿಎಂಸಿ ನೀರು ಬೇಕು ಎಂದು ಹೇಳಿತು
  • ಕೇರಳ ತನಗೆ 99.8 ಟಿಎಂಸಿ ನೀರು ಬೇಕು ಎಂದು ಹೇಳಿತು
  • ಪಾಂಡಿಚೇರಿ ತನಗೆ 9.3 ಟಿಎಂಸಿ ಬೇಕು ಎಂದು ಹೇಳಿತು
  • ಆದ್ರೆ ತಮಿಳುನಾಡು ಮಾತ್ರ ಈ ಹಿಂದಿನಂತೆ ಇದ್ದ ಒಪ್ಪಂದದಂತೆ ತನಗೆ ಹಾಗೂ ಪಾಂಡಿಚೇರಿಗೆ 566 ಟಿಎಂಸಿ, 177 ಟಿಎಂಸಿ ಕರ್ನಾಟಕಕ್ಕೆ ಹಾಗೂ 5 ಟಿಎಂಸಿ ಕೇರಳಕ್ಕೆ ನೀಡಬೇಕು ಎಂದು ಕೇಳಿತು

ಇದಾದ ನಂತರ ತಮಿಳುನಾಡು ಸರ್ಕಾರ ನ್ಯಾಯಮಂಡಳಿಯ ಮುಂದೆ ಈ ಕೂಡಲೇ ಮಧ್ಯಂತರವಾಗಿ ತನಗೆ ನೀರು ಬಿಡಲು ಕಾರ್ಯಸೂಚಿ ರೂಪಿಸಬೇಕು ಎಂದು ನ್ಯಾಯಮಂಡಳಿಯ ಮುಂದೆ ಹೋಯಿತು. ಆಗ ಕಳೆದ ಹತ್ತು ವರ್ಷಗಳ ಮಾಹಿತಿಯನ್ನು ಕಲೆಹಾಕಿದ ನ್ಯಾಯಮಂಡಳಿ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ನೀರು ಬಿಡಬೇಕು ಹಾಗೂ ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು 1,120,000 ಎಕರೆಗಿಂತ ಹೆಚ್ಚಿಗೆ ಮಾಡಿಕೊಳ್ಳಬಾರದು ಎಂದು ಆದೇಶ ನೀಡಿತು. ಇದರಿಂದ ಕೋಪಗೊಂಡ ಕರ್ನಾಟಕದ ಇದಕ್ಕೆ ತಮಗೆ ಒಪ್ಪಿಗೆಯಿಲ್ಲ, ಅಂತಿಮ ತೀರ್ಪು ನೀಡಿ ಎಂದು ನ್ಯಾಯಮಂಡಳಿಯ ಮುಂದೆ ಹೇಳಿತು. ಆದರೆ ತಮಿಳುನಾಡು ಸರ್ಕಾರ ರಾಷ್ಟ್ರಪತಿಗಳ ಮೂಲಕ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಹೇಳಿಸಿ, ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಈ ತೀರ್ಪನ್ನು ಒಪ್ಪಿಕೊಳ್ಳಬೇಕಾಯಿತು ಹಾಗೂ ಈ ಮಧ್ಯಂತರ ಅದೇಶವನ್ನು ಕೇಂದ್ರ ಸರ್ಕಾರದ ಗೆಜೆಟ್ ನಲ್ಲಿ ದಾಖಲಾಗುವಂತೆ ತಮಿಳುನಾಡು ಸರ್ಕಾರ ನೋಡಿಕೊಂಡಿತು.
ಇದರಿಂದ ಸಿಟ್ಟಿಗೆದ್ದ ಕರ್ನಾಟಕದ ಜನತೆ ರಾಜ್ಯಾದ್ಯಂತ ತೀರ್ಪಿನ ವಿರುದ್ಧ ಹೋರಾಟಗಳನ್ನು ಶುರು ಮಾಡಿದರು. ಇದೇ ರೀತಿ ತಮಿಳುನಾಡಿನಲ್ಲೂ ದಂಗೆಗಳು ಶುರುವಾದವು. ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

1995-1996 ರಲ್ಲಿ ಕರ್ನಾಟಕದಲ್ಲಿ ಮಳೆಯ ಅಭಾವ ಕಾಣಿಸಿದ್ದರಿಂದ ತಮಿಳುನಾಡಿಗೆ ಮಧ್ಯಂತರ ಆದೇಶದಂತೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದು ಗೊತ್ತಿದ್ದರೂ ಸಹ ತಮಿಳುನಾಡು ಮಧ್ಯಂತರ ಆದೇಶದಂತೆ ಕರ್ನಾಟಕ ತನಗೆ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಮುಂದೆ ಹೋಯಿತು. ಆದರೆ ಇದನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ನ್ಯಾಯಮಂಡಳಿಗೆ ಈ ಕೇಸನ್ನು ವರ್ಗಾಯಿಸುತು. ಅಲ್ಲಿ ತನ್ನ ಪ್ರಭಾವ ಬೀರಿದ ತಮಿಳುನಾಡು 11 ಟಿಎಂಸಿ ನೀರನ್ನು ಬಿಡಲು ಆದೇಶ ನೀಡಿತು. ಆ ಕಾಲದಲ್ಲಿ ಅದು ಕರ್ನಾಟಕದ ಪಾಲಿಗೆ ಅಸಾಧ್ಯವಾಗಿತ್ತು. ನಂತರ ಪ್ರಧಾನ ಮಂತ್ರಿಗಳ ಮಧ್ಯಸ್ತಿಕೆಯಲ್ಲಿ 6 ಟಿಎಂಸಿ ನೀರನ್ನು ಪಡೆಯುವಲ್ಲಿ ತಮಿಳುನಾಡು ಸಫಲವಾಯಿತು.

ಸಿ.ಆರ್. ಎಂಬ ಒಕ್ಕೂಟ ವಿರೋಧಿ ಮಂಡಳಿ

1997 ರಲ್ಲಿ ಕೇಂದ್ರ ಸರ್ಕಾರವು ಮಧ್ಯಂತರ ಆದೇಶವನ್ನು ಸಮರ್ಪಕವಾಗಿ ಜಾರಿಗೆ ತರಲು ಸಿ.ಆರ್.ಎ ಎಂಬ ಮಂಡಳಿಯೊಂದನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಎರಡು ರಾಜ್ಯಗಳ ಮುಂದೆ ಇಟ್ಟಿತು. ಇದರ ಅನ್ವಯ ಈ ಮಂಡಳಿಗೆ ಮದ್ಯಂತರ ಆದೇಶವನ್ನು ಜಾರಿಗೆ ತರಲು ಆಣೆಕಟ್ಟುಗಳನ್ನು ತನ್ನ ವಶಕ್ಕೆ ತಗೆದುಕೊಳ್ಳುವ ಹಕ್ಕನ್ನು ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಇಂತಹ ಒಕ್ಕೂಟ ವಿರೋಧಿ ಮಂಡಳಿಯನ್ನು ಸಾರಸಗಟಾಗಿ ತಿರಸ್ಕರಿಸಿತು. ಇದಾದ ನಂತರ ಕೇಂದ್ರ ಇಂತಹ ಅವೈಜ್ಞಾನಿಕ ಹಕ್ಕುಗಳನ್ನು ತಗೆದು ಹಾಕಿ ಕೊನೆಗೆ ಕಾವೇರಿ ರಿವರ್ ಅಥಾರಿಟಿ ಹಾಗೂ ಕಾವೇರಿ ಮಾನಿಟರಿಂಗ್ ಕಮಿಟಿಯಂಬ ಎರೆಡು ಸಮಿತಿಗಳನ್ನು ಸ್ಥಾಪಿಸಿತು.

2002ರಲ್ಲಿ ಕಾವೇರಿದ ಕಾವೇರಿ ಹೋರಾಟ

2002ರಲ್ಲಿ ಹಿಂದೆ 1995ರಲ್ಲಿ ಕಾಣಿಸಿಕೊಂಡ ಬರಗಾಲದ ಪರಿಸ್ಥಿತಿ ಮತ್ತೊಮೆ ಎದುರಾಯಿತು. ರಾಜ್ಯದ ಯಾವುದೇ ಜಲಾಶಯದಲ್ಲೂ ತನ್ನ ಬಳಕೆಗೆ ಬೇಕಾಗುವಷ್ಟು ನೀರು ಸಹ ಇರಲಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ತನ್ನ ಜನರಿಗಾಗಿ ನೀರನ್ನು ಬಿಡುವಂತೆ ಆಗ್ರಹಿಸಿ ನ್ಯಾಯಮಂಡಳಿಯ ಮುಂದೆ ಹೋಯಿತು. ಆದರೆ ನ್ಯಾಯಮಂಡಳಿ ತನ್ನ ಮಧ್ಯಂತರ ತೀರ್ಪಿನಲ್ಲಿ ಬರಗಾಲದ ಪರಿಸ್ಥಿತಿಯಲ್ಲಿರಬೇಕಾದ ಹಂಚಿಕೆ ಸೂತ್ರವನ್ನು ಹೇಳಿರಲಿಲ್ಲ. ಹಾಗಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಈ ಸಾರಿ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಕಾವೇರಿ ರಿವರ್ ಅಥಾರಿಟಿ ಬದಲಾವಣೆ ಮಾಡುವ ತನಕ ಪ್ರತಿ ದಿನ 1.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಹೇಳಿತು. ಸರ್ಕಾರ ಇದೇ ಹೊತ್ತಿನಲ್ಲಿ ಸಿ.ಆರ್.ಎ ಮತ್ತೊಂದು ಸಭೆಯನ್ನು ಕರೆಯಬೇಕು ಎಂದು ಹೇಳಿತು. ಸಿ.ಆರ್.ಎ ಪ್ರಕಾರ ಕರ್ನಾಟಕ ಪ್ರತಿದಿನ ತಮಿಳುನಾಡಿಗೆ 0.8 ಟಿಎಂಸಿ ನೀರನ್ನು ಬಿಡಬೇಕು ಎಂದು ಹೇಳಿತು.

ಆದರೆ ಅದಾಗಲೇ ಕರ್ನಾಟಕದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ದೊಡ್ಡ ಹೋರಾಟ ಶುರುವಾಯಿತು. ಜನರ ಹೋರಾಟಕ್ಕೆ ಮಣಿದ ಸರ್ಕಾರ ತಮಿಳುನಾಡಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಿತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ನೀರು ಬಿಡಲು ಶುರುಮಾಡಿದಾಗ ಕರ್ನಾಟಕದ ರೈತರೊಬ್ಬರು ಸೆಪ್ಟಂಬರ್ 18ರಂದು ನದಿಗೆ ಹಾರಿ ಪ್ರಾಣ ಬಿಟ್ಟರು. ಇದರಿಂದಾಗಿ ಪರಿಸ್ಥಿತಿ ಇನ್ನೂ ಕೆಟ್ಟಿತು. ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆದರೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕ ಸರ್ಕಾರ ನೀರು ಬಿಡಲು ಒಪ್ಪಲಿಲ್ಲ. ಇದಕ್ಕೆ ಪ್ರತಿಯಾಗಿ ತಮಿಳುನಾಡು ಮತ್ತೆ ಕೋರ್ಟ್ ಮೆಟ್ಟಿಲೇರಿತು. ನಂತರ ಈ ಸಂಬಂಧ ಕರ್ನಾಟಕ ಸರ್ಕಾರ ಕೋರ್ಟ್ ಆದೇಶ ಪಾಲಿಸದಿರುವ ಸಲುವಾಗಿ ಕೋರ್ಟ್ ಮುಂದೆ ಬೇಷರತ್ ಕ್ಷಮೆ ಯಾಚಿಸಿತ್ತು.

2007ರಲ್ಲಿ ಬಂದ ನ್ಯಾಯಮಂಡಳಿಯ ಅನ್ಯಾಯದ ತೀರ್ಪು

ಫೆಬ್ರವರಿ 5 2007 ರಲ್ಲಿ ಕಾವೇರಿ ನ್ಯಾಯಮಂಡಳಿಯು ತನ್ನ ತೀರ್ಪನ್ನು ಪ್ರಕಟಿಸಿತು. ತೀರ್ಪಿನ ಪ್ರಕಾರ ತಮಿಳುನಾಡಿಗೆ 419 ಟಿಎಂಸಿ ನೀರು, ಕರ್ನಾಟಕಕ್ಕೆ 270ಟಿಎಂಸಿ ನೀರು, ಪ್ರತಿ ವರ್ಷ ಕರ್ನಾಟಕ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು. ಕೇರಳ ರಾಜ್ಯಕ್ಕೆ 30 ಟಿಎಂಸಿ ಹಾಗೂ ಪಾಂಡಿಚೇರಿ ಗೆ 7 ಟಿಎಂಸಿ ನೀರನ್ನು ನ್ಯಾಯ ಮಂಡಳಿ ತನ್ನ ತೀರ್ಪಿನಲ್ಲಿ ಹಂಚಿಕೆ ಮಾಡಿತ್ತು. ತೀರ್ಪನ್ನು ತಮಿಳುನಾಡು ಸ್ವಾಗತಿಸಿದರೆ ಕರ್ನಾಟಕ ಸರ್ಕಾರ ತೀರ್ಪನ್ನು ವಿರೋಧಿಸಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಿತು. ಈ ತೀರ್ಪನ್ನು ನೀಡುವಾಗ ತಮಿಳುನಾಡು ಸರ್ಕಾರ ತನ್ನ ಪ್ರಭಾವವನ್ನು ನ್ಯಾಯಮಂಡಳಿಯ ಮೇಲೆ ಬೀರುರುವ ಶಂಕೆ ಉಂಟಾಗುತ್ತದೆ. ಕಾರಣ:
  • ಮೊದಲಿನಿಂದಲೂ ಕರ್ನಾಟಕದಲ್ಲಿ ನೀರಾವರಿಗೆ ನೀರು ದೊರಕದಂತೆ ಮಾಡಿ ತನ್ನ ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಂಡ ತಮಿಳುನಾಡು ನಂತರ ಅದು ತನಗೆ ಹೆಚ್ಚಿನ ಪಾಲಿನ ನೀರು ಬರಬೇಕಿರುವುದು ತನ್ನ ಹಕ್ಕು ಎನ್ನುವಂತೆ ನ್ಯಾಯಧಿಕರಣದ ಮುಂದೆ ವಾದ ಮಾಡಿ ಹೆಚ್ಚಿನ ಪಾಲನ್ನು ಪಡೆಯಿತು.
  • ಕರ್ನಾಟಕ ಹಾಗೂ ತಮಿಳುನಾಡಿನ ನಡುವ ಹರಿದ ನೀರನ್ನು ಮಾಪನ ಮಾಡಲು ಮೆಟ್ಟೂರಿನಲ್ಲಿ ಅಳೆಯಲಾಗುತ್ತಿತ್ತು, ಆದರೆ ಈ ತೀರ್ಪಿನಲ್ಲಿ ಅದನ್ನು ಕರ್ನಾಟಕದ ಬಿಳಿಗುಂಡ್ಲುವಿನಲ್ಲಿ ಅಳೆಯಲು ತೀರ್ಪು ನೀಡಲಾಯಿತು. ಗಮನಿಸಬೇಕಾದ ಅಂಶವೆಂದರೆ ಬಿಳಿಗುಂಡ್ಲುವಿನಿಂದ ಮೆಟ್ಟೂರಿಗೆ ಸುಮಾರು 25 ಟಿಎಂಸಿ ನೀರು ಹರಿದು ಹೋಗುತ್ತದೆ, ಆದರೆ ಇದರ ಲೆಕ್ಕವನ್ನು ಕರ್ನಾಟಕ ಬಿಡುವ ನೀರಿಗೆ ಸೇರಿಸುವ ಹಾಗಿಲ್ಲ.
  • ಕೇರಳಕ್ಕೆ ಕರ್ನಾಟಕದಿಂದ 21 ಟಿಎಂಸಿ ಹಾಗೂ ತಮಿಳುನಾಡಿನಿಂದ 9 ಟಿಎಂಸಿ ನೀರು ಬಿಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ಈ ನೀರನ್ನು ಉಪಯೋಗಿಸದ ಕಾರಣ ತಮಿಳುನಾಡು ತನ್ನ 9 ಟಿಎಂಸಿ ನೀರನ್ನು ಉಪಯೋಗಿಸಲು ನ್ಯಾಯಾಧಿಕರಣ ಅವಕಾಶ ನೀಡಿತು. ಆದರೆ ಕರ್ನಾಟಕಕ್ಕೆ ಮಾತ್ರ 21 ಟಿಎಂಸಿ ನೀರನ್ನು ಬಳಕೆ ಮಾಡಲು ಅವಕಾಶ ಕೊಡದೆ ತಮಿಳುನಾಡಿಗೆ ಹರಿಸಲು ಆದೇಶ ನೀಡಿತು ಹಾಗೂ ಬೇಕಾದಲ್ಲಿ ತಮಿಳುನಾಡು ಈ ನೀರನ್ನು ಬಳಸಲು ಅವಕಾಶ ನೀಡಿತು.
  • ಪರಿಸರ ರಕ್ಷಣೆಗಾಗಿ ಕರ್ನಾಟಕ 10 ಟಿಎಂಸಿ ನೀರು ಬಿಡಬೇಕು, ಆದರೆ ತಮಿಳುನಾಡಿಗೆ ಯಾವುದೇ ನೀರು ಬಿಡಲು ಆದೇಶದಲ್ಲಿ ತಿಳಿಸಲಾಗಿಲ್ಲ. ಪರಿಸರ ರಕ್ಷಣೆ ಕೇವಲ ಕರ್ನಾಟಕದ ಜವಾಬ್ದಾರಿಯಾಗಿದೆಯೇ?
  • ನ್ಯಾಯಾಧಿಕರಣ ಕರ್ನಾಟಕಕ್ಕೆ ಕುಡಿಯುವ ನೀರಿನ ಸಲುವಾಗಿ ತಗೆದಿಟ್ಟಿರುವ ಪಾಲು ಕೇವಲ 2 ಟಿಎಂಸಿ. ಬೆಂಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳನೆಲ್ಲ ಒಟ್ಟಾಗಿ ಸೇರಿಸಿದರೆ ಬೇಕಾಗುವ ನೀರಿನ ಮೊತ್ತ 60 ಟಿಎಂಸಿ.
  • ನ್ಯಾಯಧಿಕರಣದ ತಜ್ಞರ ವರದಿಯ ಪ್ರಕಾರ ತಮಿಳುನಾಡಿಗೆ 395 ಟಿಎಂಸಿ ನೀರು ಅಗತ್ಯವಿತ್ತೆಂದು ಹೇಳಲಾಗಿತ್ತು, ಆದರೆ ನ್ಯಾಯಧಿಕರಣದಲ್ಲಿ ಅದಕ್ಕೆ ಬರೋಬ್ಬರಿ 458 ಟಿಎಂಸಿ ನೀರನ್ನು ನೀಡಲಾಗಿದೆ!!

ಕರ್ನಾಟಕದಲ್ಲಿ ನಡೆದ ಹೋರಾಟಗಳು

ಕರ್ನಾಟಕದ ಪಾಲಿಗೆ ಮರಣ ಮೃದಂಗದಂತಿದ್ದ ಈ ತೀರ್ಪನ್ನು ವಿರೋಧಿಸಿ ರಾಜ್ಯದ ಎಲ್ಲಾ ವರ್ಗಗಳು ಬೀದಿಗೆ ಇಳಿದವು, ರೈತ ಸಂಘ, ಸಾಹಿತಿ ವಲಯ, ರಾಜಕೀಯ ವಲಯ, ಕನ್ನಡಪರ ಸಂಘಟನೆಗಳೆಲ್ಲ ಒಂದಾಗಿ ಈ ತೀರ್ಪನ್ನು ವಿರೋಧಿಸಿದವು. ಕರ್ನಾಟಕ ರಕ್ಷಣಾ ವೇದಿಕೆ ಈ ತೀರ್ಪು ಹೊರಬಂದ ಕೆಲವೇ ನಿಮಿಷಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಹೋರಾಟಗಳನ್ನು ಶುರುಮಾಡಿತು. ಇದರ ಜೊತೆಗೆ ತಲಕಾವೇರಿಯಿಂದ ಬೆಂಗಳೂರಿನ ವರೆಗೂ ಪಾದಯಾತ್ರೆಯನ್ನು ಮಾಡಿ ತೀರ್ಪಿನ ವಿರುದ್ಧ ಜನರನ್ನು ಸಂಘಟಿಸುವ ಕೆಲಸ ಮಾಡಿತು. ರಾಜ್ಯದ ಇತಿಹಾಸದಲ್ಲೇ ಸುಮಾರು 25000 ಜನರನ್ನು ದೆಹಲಿಗೆ ಕರೆದುಕೊಂಡು ಹೋಗಿ ಜಂತರ್ ಮಂತರ್ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸರಿಯಾದ ಎಚ್ಚರಿಕೆಯನ್ನೇ ನೀಡಿತು. ಇದಾದ ನಂತರ ಎಚ್ಚೆತ್ತುಕೊಂಡ ನಮ್ಮ ಸರ್ಕಾರ ಹಾಗೂ ಪ್ರತಿಪಕ್ಷಗಳು ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. 

ನಮ್ಮ ರಾಜ್ಯ ಸರ್ಕಾರಗಳ ನಿಷ್ಕ್ರಿಯತೆ ಹಾಗೂ ಪ್ರಾದೇಶಿಕ ಪಕ್ಷದ ಅವಶ್ಯಕತೆ

ಕಾವೇರಿಯ ನದಿ ನೀರು ಹಂಚೆಕೆಯ ವಿವಾದವು ಉಲ್ಬಣಿಸಿದಾಗಲೆಲ್ಲ, ನಮ್ಮ ಸರ್ಕಾರಗಳಿಗಿಂತ ಮೊದಲು ಪ್ರತಿಭಟನೆ ಹಾಗೂ ಜಾಗೃತಿಗೆ ಮುಂದಾಗಿರುವುದು ರೈತ ಸಂಘ, ಕನ್ನಡ ಪರ ಸಂಘಟನೆಗಳು. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಅನ್ನೋ ಹಾಗೆ ನಮ್ಮ ರಾಜ್ಯ ಸರ್ಕಾರ ಹಾಗೂ ರಾಜಕಾರಣಿಗಳು ಎಚ್ಚೆತ್ತುಕೊಂಡಿದ್ದಾರೆ.

ಇತ್ತೀಚಿಗೆ ಮತ್ತೆ ಈ ವಿಷಯವಾಗಿ ತಮಿಳುನಾಡು ಸರ್ಕಾರ ಮತ್ತೆ ತನ್ನ ಹೆಳೆ ವರಸೆಯನ್ನು ಶುರುಮಾಡಿದೆ. ಕರ್ನಾಟಕ ಸರ್ಕಾರ ಮೇಕೆದಾಟುವಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ರಾಜ್ಯದ ಜನರ ಹಾಗೂ ರೈತರ ಒಳಿತಿಗಾಗಿ ನೀರನ್ನು ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ ಇದಕ್ಕೆ ಕ್ಯಾತೆ ತಗೆದಿರುವ ಜಯಲಲಿತಾ ಅವರ ಸರ್ಕಾರ ಯಾವುದೇ ಕಾರಣಕ್ಕೂ ಕರ್ನಾಟಕ ಆಣೆಕಟ್ಟು ಕಟ್ಟಬಾರದು ಹಾಗೂ ಅದು ಸಂಗ್ರಹಿಸುವ ನೀರನ್ನು ಬೇಸಿಗೆಯ ಬೆಳೆಗೆ ಉಪಯೋಗಿಸಬಾರದು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಮ್ಮ ರಾಜ್ಯಕ್ಕೆ ತನ್ನ ಪಾಲಿಗೆ ನ್ಯಾಯವಾಗಿ ದಕ್ಕಬೇಕಾಗಿದ್ದ ನೀರನ್ನು ಬಳಸಿಕೊಳ್ಳಲು ಹಕ್ಕಿಲ್ಲವೇ? ಯಾವುದೋ ಓಬಿರಾಯನ ಕಾಲದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ ನಿಯಮಗಳನ್ನು ಇನ್ನೂ ಮುಂದುವರೆಸಿಕೊಂಡು ಹೋಗಬೇಕೆ? ಕಾವೇರಿ ನದಿಯ ನೀರು ಕೇವಲ ತನ್ನ ಸ್ವತ್ತು ಅನ್ನುವ ಹಾಗೆ ವರ್ತಿಸುತ್ತಿರುವ ತಮಿಳುನಾಡಿನ ದರ್ಪವನ್ನು ಸಹಿಸಿಕೊಂಡು ಸುಮ್ಮನಿರಬೇಕೆ?

ಇಲ್ಲಿ ನಮ್ಮ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಎದ್ದು ಕಾಣಿಸುತ್ತದೆ. ಇದಕ್ಕೆ ಈ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಗುಲಾಮಗಿರಿ ಕಾರಣ. ಪ್ರತಿಯೊಂದಕ್ಕು ದೆಹಲಿಯತ್ತ ಮುಖಮಾಡುವ ನಮ್ಮ ನಾಯಕರಿಂದ ಹೆಚ್ಚಿನದೇನು ನಿರೀಕ್ಷಿಸಲು ಸಾಧ್ಯ? ಕೇಂದ್ರದಲ್ಲಿ ಒಂದಲ್ಲಾ ಒಂದು ಸರ್ಕಾರದ ಜೊತೆ ಮೈತ್ರಿ ಹೊಂದಿರುವ ತಮಿಳುನಾಡಿನ ರಾಜಕೀಯ ಪಕ್ಷಗಳು ತಮಗೆ ಅನುಕೂಲವಾಗುವಂತೆ ಹಿಂದಿನಿಂದಲು ನಡೆದುಕೊಂಡು ಬಂದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ. ಬಹುಷ: ನಮಗೂ ತಮಿಳುನಾಡಿನಲ್ಲಿರುವಂತೆ ಕರ್ನಾಟಕದ ನೆಲ, ಜಲ ಹಾಗೂ ಜನರ ಹಿತವನ್ನು ಕಾಪಾಡುವ ಒಂದು ರಾಜಕೀಯ ಪಕ್ಷದ ಅವಶ್ಯಕತೆ ಪದೇ ಪದೇ ಎದ್ದು ಕಾಣುತ್ತಿದೆ. 

ಬುಧವಾರ, ಮಾರ್ಚ್ 14, 2012

ತಮಿಳುನಾಡು ಜನರ ಒಗ್ಗಟ್ಟು ನೋಡಿ


ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ಅದೇನೆಂದರೆ ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ತಮಿಳುನಾಡಿನ ಎಲ್ಲಾ ಪಕ್ಷದ ನಾಯಕರುಗಳು ನಿನ್ನೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿ, ಭಾರತ ಸರ್ಕಾರ ಈ ಕ್ರಮವನ್ನು ಖಂಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಮುಂದೆ ನಡೆಯಲಿರುವ ಯು.ಎನ್ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ತಮಿಳುನಾಡಿನ ನಾಯಕರು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ಈ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದುದಾಗಿ ಭರವಸೆ ನೀಡಿದೆ.

ಕನ್ನಡಿಗರು ಕಲಿಯಬೇಕಿರುವ ಪಾಠ:
ಮೊದಲಿನಿಂದಲೂ ತಮಿಳುನಾಡಿನ ಸರ್ಕಾರ ತಮ್ಮ ಜನರು ಯಾವುದೇ ರಾಜ್ಯ, ದೇಶದಲ್ಲಿರಲಿ ಅವರ ಯೋಗ ಕ್ಷೇಮದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದೆ. ಅದು ಶ್ರೀಲಂಕಾದಲ್ಲಿರುವ ತಮಿಳರ ಬಗ್ಗೆ ಇರಬಹುದು ಅಥವಾ ಬೇರಿನ್ನಾವುದೇ ಪ್ರದೇಶದಲ್ಲಿರಬಹುದು. ತಮ್ಮ ಜನರಿಗೆ ಒಳಿತಾಗಬೇಕೆಂದರೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಭಿನಾಭಿಪ್ರಾಯವನ್ನು ಮರೆತು ಅವರ ಒಳಿತಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಆದರೆ ಇದೇ ಪರಿಸ್ಥಿತಿ ನಮ್ಮ ರಾಜ್ಯದ ನಾಯಕರುಗಳಿಂದ ನಿರೀಕ್ಷಿಸಲು ಸಾಧ್ಯವೇ? ಇವತ್ತಿನ ಮಟ್ಟಿಗೆ ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮದೇ ರಾಜ್ಯದ ನೆಲದಲ್ಲಿ ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುತ್ತದೆ ನಮ್ಮ ಸರ್ಕಾರ, ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಿ ಎಲ್ಲಾ ಮುಗಿದ ಮೇಲೆ ತೇಪೆ ಸಾರಿಸುವ ಕೆಲಸಕ್ಕೆ ಬರುತ್ತದೆ, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ತೀರಿಸಲು ಇರುವ ಕಳಸಾ-ಭಂಡೂರ ನಾಲಾ ಯೋಜನೆಯನ್ನು ಇನ್ನೂ ದಶಕಗಳಿಂದ ಜಾರಿಗೆ ತರದೇ ಹಾಗೆ ಮುಂದೆ ತಳ್ಳುತ್ತಿದೆ, ಇದರ ಅನುಷ್ಠಾನಕ್ಕೆ ಇರುವ ತೊಡರನ್ನು ಬಗೆಹರಿಸಲು ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಒಟ್ಟಾಗಿ ಎಂದು ಕೆಲಸ ಮಾಡಲೇ ಇಲ್ಲ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಲು ಸಿದ್ಧ ಮಾಡಲಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರದೇ ೩ ದಶಕಗಳು ಕಳೆದು ಹೋಗಿವೆ... ಹೀಗೆ ಈ ಪಟ್ಟಿ ಹನುಮಪ್ಪನ ಬಾಲದಂತೆ ದೊಡ್ಡದಿದೆ.

ಇದಕೆಲ್ಲ ಮೂಲ ಹುಡುಕ ಹೊರಟರೆ ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ, ಆ ಪಕ್ಷದಲ್ಲಿರುವ ನಾಯಕರುಗಳ ಹೈಕಮಾಂಡ್ ಗುಲಾಮಗಿರಿ, ತಮ್ಮ ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಶಿಸ್ತಿನ ಪಕ್ಷಗಳು!!! ಇವುಗಳು ಎಂದಿಗೂ ನಮ್ಮ ಪಕ್ಷಗಳು ಅನ್ನಿಸಿಯೇ ಇಲ್ಲ! ಇದರ ಜೊತೆಜೊತೆಗೆ ನಮ್ಮ ಕನ್ನಡಿಗರಲ್ಲಿ ಜಾಗೃತಿಯ ಕೊರತೆ... ಇವುಗಳನ್ನೆಲ್ಲ ಒಟ್ಟಾಗಿ ಎದುರಿಸೋಕೆ ನಮ್ಮ ರಾಜ್ಯದಲ್ಲಿ ನಮ್ಮದೇ ಒಂದು ಪ್ರಾದೇಶಿಕ ಪಕ್ಷ ಬೇಕಾಗಿದೆ.

ಮಂಗಳವಾರ, ಮಾರ್ಚ್ 6, 2012

ಅನಿಯಂತ್ರಿತ ವಲಸೆ ಕಡಿವಾಣಕ್ಕೆ ಬೇಕು ಕಾನೂನು


ತಮಿಳುನಾಡು ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಪಾತಕ ಕೃತ್ಯಗಳ ಕಡಿವಾಣಕ್ಕಾಗಿ ಅಲ್ಲಿನ ಸರ್ಕಾರ ಹೊರ ರಾಜ್ಯದಿಂದ ತಮಿಳುನಾಡಿಗೆ ವಲಸೆ ಬಂದಿರುವ ಜನರ ಮಾಹಿತಿಯನ್ನು ಕಲೆ ಹಾಕಲು ತೀರ್ಮಾನಿಸಿದೆ ಹಾಗೂ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಮಾಹಿತಿ ಕಲೆ ಹಾಕುವಲ್ಲಿ ಮುಖ್ಯವಾಗಿ ಕಟ್ಟಡ ಕಾಮಗಾರಿ, ಗಾರ್ಮೆಂಟ್ಸ್ ಹಾಗೂ ಹೋಟೆಲ್ ಉದ್ಯಮದಂಥಹ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಮಾಹಿತಿ ಕಲೆ ಹಾಕುವಿಕೆಯ ಮುಖ್ಯ ಉದ್ದೇಶ ಕೆಲಸ ಅರಸಿ ಬಂದಿರುವ ವಲಸಿಗರನ್ನು ಪಾತಕಿಗಳಿಂದ ಬೇರ್ಪಡಿಸಿ ನೋಡುವುದಕ್ಕೆ ಸುಲಭವಾಗುತ್ತದೆ ಅನ್ನುವ ಕಾರಣಕ್ಕೆ.

ನಮ್ಮ ರಾಜ್ಯದಲ್ಲೂ ಯೋಜನೆ ಜಾರಿಗೆ ಬರಲಿ:

ಈ ಯೋಜನೆ ಕಾನೂನು ವ್ಯವಸ್ಥೆಯನ್ನು ಕಾಪಡುವಲ್ಲಿ ನಿಜಕ್ಕೂ ಒಳ್ಳೆಯ ಹೆಜ್ಜೆಯಾಗಿದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯದಿಂದ ಹೆಚ್ಚಾಗಿ ವಲಸೆಯಾಗುತ್ತಿರುವ ನಮ್ಮ ನಗರಗಳಲ್ಲಿ ಈ ಯೋಜನೆ ಜಾರಿಯಾಗಬೇಕಾಗಿರುವುದು ಅವಶ್ಯಕವಾಗಿದೆ. ನಮ್ಮ ಊರುಗಳಿಗೆ ಯಾರು ಬರುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೂ ಅವರ ಪೂರ್ವಾಪರವೇನು ಅನ್ನೋ ಮಾಹಿತಿಗಳು ನಮಗೆ ಗೊತ್ತಿದ್ದರೆ ಒಳ್ಳೆಯದಲ್ಲವೇ? ಬೆಂಗಳೂರಿನಲ್ಲಿ ನಡೆದಿರುವ ಹಲವಾರುಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದ ಪಾತಕಿಗಳು ಭಾಗಿಯಾಗಿರುವುದು ಕಂಡುಬಂದಿದೆ. ವಲಸೆ ಬಂದಿರುವ ಜನರ ಅಂಕೆ ಸಂಖ್ಯೆಗಳನ್ನು ಹೊಂದಿರುವುದು ಸರ್ಕಾರಕ್ಕೆ ಮುಖ್ಯವಾಗುತ್ತದೆ. ಅನಿಯಂತ್ರಿತ ವಲಸೆಯಿಂದಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿ ಘರ್ಷಣೆಗೆ ಕಾರಣವಾಗಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಮುಂಬೈ ನಗರ.

ಅನಿಯಂತ್ರಿತ ವಲಸೆಯಿಂದಾಗಿ ಒಂದು ರಾಜ್ಯದ Demography ಯೇ ಬದಲಾಗಿ ಹೋಗುವ ಅಪಾಯಕಾರಿ ಪರಿಣಾಮಗಳನ್ನು ಹಲವಾರು ರಾಜ್ಯಗಳು ಇಂದು ಅನುಭವಿಸುತ್ತಿವೆ. ಬೇರೆಲ್ಲೋ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಜನರು ತಲೆತಪ್ಪಿಸಿಕೊಂಡು ನಮ್ಮ ರಾಜ್ಯಗಳಿಗೆ ಬಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳು ಆಗಬಹುದು. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಅನ್ನೋ ಕಾರಣಕ್ಕೆ ಹಿಂದಿನ ಪೂರ್ವಾಪರ ತಿಳಿಯದೇ ಕರೆದುಕೊಂಡು ಬರಲಾಗುವ ಇಂತಹ ಜನರನ್ನು ಒಂದೆಡೆ ಮಧ್ಯವರ್ತಿಗಳು ಶೋಷಿಸಿದರೆ, ಇನ್ನೊಂದೆಡೆ ಇಲ್ಲಿಗೆ ವಲಸೆ ಬರುವ ಜನರು ನಮ್ಮ ಸಮಾಜದ ಜೊತೆ ಬೆರೆಯದೇ ತಮ್ಮದೇ ಒಂದು ದ್ವೀಪ ಕಟ್ಟಿಕೊಂಡು ಸಮಾಜದಲ್ಲಿ ಒಡಕು ತರುವ ಕೆಲಸಗಳಿಗೂ ಕಾರಣವಾಗಬಹುದು. ಕಡಿಮೆ ಸಂಬಳದ ನೆಪವೊಡ್ಡಿ ನಮ್ಮ ಕನ್ನಡಿಗರಿಗೆ ಕೆಲಸಗಳು ದೊರಕದಂತಹ ಪರಿಸ್ಥಿತಿ ನಿರ್ಮಾಣವಾದರೆ, ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಕಾಣುತ್ತಿದೆಯಾದರೆ. ನಮ್ಮ ಜನರಿಗೆ ಸರಿಯಾದ ವ್ಯವಸ್ಥೆಯಿಲ್ಲದ, ನಮ್ಮ ಜನರಿಗೆ ಕೆಲಸ ಸಿಗದ ಇಂತಹ ಅಭಿವೃದ್ಧಿ ನಮಗೆ ಬೇಕೆ ಎನ್ನೋ ಪ್ರಶ್ನೆಯನ್ನ ನಾವುಗಳು ಕೇಳಿಕೊಳ್ಳಬೇಕಾಗಿದೆ?

ವಲಸೆಗೆ ಕಾನೂನು ಜಾರಿಯಾಗಬೇಕು:

ಇಂದು ವಲಸೆ ಕೇವಲ ಸಣ್ಣ ಪ್ರಮಾಣದಲ್ಲಿ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಇದರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವಲಸೆಯ ಕಾರಣದಿಂದಾಗಿ ನಮ್ಮ ಜನರೂ ಸಹ ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದೊದಗಿದ್ದಾರೆ, ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲೂ ಸಹ ಪೋಲಿಸ್ ಇಲಾಖೆಗೆ ತೊಂದರೆಯಾಗುತ್ತಿದೆ. ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಕಂದಕ ಏರ್ಪಡುತ್ತಿದೆ. ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನೀತಿಯನ್ನ ರೂಪಿಸಲು ನಮ್ಮ ರಾಜ್ಯಕ್ಕೆ ಹಕ್ಕಿರಬೇಕು. ಬಿಹಾರದಿಂದ, ಪಶ್ಚಿಮ ಬಂಗಾಳದಿಂದ ನಮ್ಮ ರಾಜ್ಯಕ್ಕೆ ಎಷ್ಟು ಜನರು ವಲಸೆ ಬರಬೇಕು ಅನ್ನೋ ನಿರ್ಧಾರ ನಮ್ಮ ರಾಜ್ಯಕ್ಕಿದ್ದರೆ, ನಮ್ಮ ರಾಜ್ಯದಿಂದ ಅಥವಾ ಬೇರೆ ರಾಜ್ಯದಿಂದ ಬಿಹಾರಕ್ಕೆ ಎಷ್ಟು ಜನರು ವಲಸೆ ಹೋಗಬೇಕು ಅನ್ನೋ ನಿರ್ಧಾರವನ್ನು ಬಿಹಾರ ಸರಕಾರಕ್ಕೆ ಬಿಡಬೇಕು, ಇದು ಸರಿಯಾದ ದಾರಿ ಕೂಡ.

ಇಂದು ಸಂವಿಧಾನದಲ್ಲಿ ಈ ತರಹದ ಕಾನೂನಿಗೆ ಅವಕಾಶವಿಲ್ಲವಾದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಸಲಹೆ ಪಡೆದು ವಲಸೆ ನಿಯಂತ್ರಣದ ಬಗ್ಗೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಿದೆ. ವಲಸೆಗೆ ಬರುವ ಜನರಿಗೆ ರಾಜ್ಯ ಸರ್ಕಾರದಿಂದ ಪರ್ಮಿಟ್ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರ ಮೂಲಕ ವಲಸಿಗರ ಸ್ಥಿತಿಗತಿ, ಅಂಕೆ ಸಂಖ್ಯೆ, ಹಾಗೂ ಇತರೇ ವಿಷಯದಲ್ಲಿ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಸುಲಭವಾಗುತ್ತದೆ. ವಲಸೆಯನ್ನು ನಿಯಂತ್ರಿಸುವ ಸಲುವಾಗಿ ಆಯಾ ರಾಜ್ಯದಲ್ಲಿ ಹೆಚ್ಚಿನ  ಉದ್ಯೋಗಗಳನ್ನು ಸೃಷ್ಠಿ ಮಾಡಬೇಕಾದ ಅನಿವಾರ್ಯತೆ ಇಂದು ಎಲ್ಲಾ ರಾಜ್ಯಗಳ ಮೇಲಿದೆ. ನಮ್ಮ ರಾಜ್ಯದಲ್ಲೂ ಕೂಡ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಗುರುವಾರ, ಜನವರಿ 12, 2012

“ಮೊಬೈಲ್ ಆಡಳಿತ” ಜನರನ್ನ ತಲುಪುತ್ತಾ???


(ಚಿತ್ರ ಕೃಪೆ: ಅಂತರ್ಜಾಲ)
ನಿನ್ನೆಯ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ “ಮೊಬೈಲ್ ಆಡಳಿತ” ವನ್ನು ಜಾರಿಗೆ ತರುವುದರ ಬಗ್ಗೆ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಎಂ. ಎನ್. ವಿದ್ಯಾಶಂಕರ್ ಅವರು ಮಾತನಾಡಿದ್ದಾರೆ. “ಇ-ಆಡಳಿತ ಎನ್ನುವುದು ಈಗ ೧೦ ವರ್ಷಗಳಷ್ಟು ಹಳೆಯದಾಗಿದ್ದು, ಈಗ ಮೊಬೈಲ್ ಸೇವೆ ಮೂಲಕ ಆಡಳಿತವನ್ನು ಇನ್ನಷ್ಟು ವೇಗಗೊಳಿಸಲು ಪ್ರಯತ್ನಿಸಲಾಗುತ್ತಿದೆ...” ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಹಿಂದಿನಿಂದಲೂ ತಂತ್ರಜ್ಞಾನವನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿದೆ ಹಾಗೂ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಸಹ ಪಡೆದಿದೆ. ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸಿಕೊಂಡು ಆಡಳಿತವನ್ನು ಜನರ ಬಳಿಗೆ ಒಯ್ಯುವ ಸರ್ಕಾರದ ಈ ಕ್ರಮವನ್ನು ನಾವೆಲ್ಲ ತುಂಬು ಹೃದಯದಿಂದ ಸ್ವಾಗತಿಸೋಣ, ಜನರ ಮನೆಗೆ ಆಡಳಿತ ಮುಟ್ಟಬೇಕಾಗಿರುವುದು ಸರಿಯಾದ ದಾರಿಯು ಹೌದು.

ಆದರೆ ಯಾವುದೇ ಯೋಜನೆಯನ್ನು ಜಾರಿಗೆ ತರುವುದಕ್ಕಿಂತ ಮುಂಚೆ ಆ ಯೋಜನೆಯನ್ನ ಜನರಿಗೆ ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ಬೇಕಾಗಿರುವ ಸಿದ್ಧತೆಗಳ್ಳನ್ನು ಮಾಡಿಕೊಳ್ಳಲಾಗಿದೆಯೇ ಎನ್ನುವುದನ್ನು ಅಧಿಕಾರಿಗಳು ಮೊದಲು ಪರೀಕ್ಷಿಸಬೇಕು. ಅಲ್ಲವೇ? ಹಾಗಿದ್ರೆ ನಮ್ಮ ರಾಜ್ಯ ಮೊಬೈಲ್ ಆಡಳಿತಕ್ಕೆ ಸಜ್ಜಾಗಿದೆಯೇ?

ಪರಿಣಾಮಕಾರಿ ಆಡಳಿತಕ್ಕೆ ಬೇಕು ಕನ್ನಡ ತಂತ್ರಜ್ಞಾನ
ಅಡಳಿತದಲ್ಲಿ ಜನರ ಭಾಷೆ ನೆಲೆಗೊಳ್ಳದೇ ಹೋದಲ್ಲಿ ಎಂತಹುದೇ ತಂತ್ರಜ್ಞಾನದ ಏಳಿಗೆ ಆಡಳಿತವನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ಕೊಂಡೊಯ್ಯಲಾರದು ಅನ್ನುವುದು ನಮ್ಮ ಸಮಾಜವನ್ನು ಕಂಡರೆ ಅತ್ಯಂತ ಸ್ಪಷ್ಟವಾಗುವುದು. ಆಡಳಿತಕ್ಕೆ ಚುರುಕು ತರಲೆಂದು ಅಳವಡಿಸಿಕೊಂಡ ಹೆಚ್ಚಿನ ತಂತ್ರಜ್ಞಾನದ ಪರಿಕರಗಳು ಇಂಗ್ಲಿಷಿನಲ್ಲಿದ್ದು, ಜನ ಸಾಮಾನ್ಯರ ನುಡಿಯಾದ ಕನ್ನಡದಿಂದ ದೂರವೇ ಉಳಿದಿವೆ. ಇಂಗ್ಲಿಷ್ ಅನ್ನುವ ತಡೆಗೋಡೆ ತಂತ್ರಜ್ಞಾನದ ಪೂರ್ತಿ ಪ್ರಯೋಜನವನ್ನು ಜನರಿಗೆ ತಲುಪಲಾರದಂತೆ ಮಾಡಿದೆ. ರಾಜ್ಯದ ೬ ಕೋಟಿ ಜನರಲ್ಲಿ ಒಂದು ೭-೮% ಜನರಿಗಷ್ಟೇ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಳಸುವ, ಅದರ ಲಾಭ ಪಡೆದುಕೊಳ್ಳಲು ಆಗುತ್ತಿದೆಯೇ ಹೊರತು ಉಳಿದ ೯೨% ಜನರು ಈ ಹೊಸ ವ್ಯವಸ್ಥೆಯ ಕಲ್ಪನೆಯಿಂದ ಆಚೆಯೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಆಡಳಿತ ವ್ಯವಸ್ಥೆಯು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದೇ ಆಗಿದೆ.

ಮೊಬೈಲ್ ಆಡಳಿತ ಜನರನ್ನ ತಲುಪುತ್ತಾ???
ಇತ್ತೀಚಿನ ಒಂದು ಉದಾಹರಣೆಯ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ. ಟ್ರಾಫಿಕ್ ಪೋಲಿಸರು ಉಪಯೋಗಿಸುವ ಬ್ಲ್ಯಾಕ್ ಬೆರ್ರಿ ಮೊಬೈಲ್ . ಸಂಚಾರ ನಿಯಮ ಉಲ್ಲಂಘನೆ ಅಥವಾ ಇನ್ನಿತರ ತಪ್ಪುಗಳನ್ನು ಮಾಡಿದಾಗ ಪೋಲಿಸರು ನೀಡುವ ರಸೀತಿಗಳು ಇಂಗ್ಲಿಷಿನಲ್ಲಿ ಇರುತ್ತವೆ. ಇದರ ಬಗ್ಗೆ ನನ್ನ ಗೆಳೆಯನೊಬ್ಬ ಹಿರಿಯ ಅಧಿಕಾರಿಗಳ ಗಮನ ಸೆಳೆದಾಗ ಅವರು  ನೀಡಿದ ಉತ್ತರ “ ಸೇವೆ ನೀಡುತ್ತಿರುವ ಖಾಸಗಿ ಸಂಸ್ಥೆ ಪೂರೈಸುವ ಉಪಕರಣ ಹಾಗೂ ತಂತ್ರಾಂಶಗಳು ಕನ್ನಡವನ್ನು ಬೆಂಬಲಿಸುವುದಿಲ್ಲ ಹಾಗಾಗಿ ಕನ್ನಡದಲ್ಲಿ ರಸೀತಿ ನೀಡಲು ಸಾಧ್ಯವಾಗುತ್ತಿಲ್ಲ”.

ಜನರ ಒಳಿತಿಗಾಗಿ ಸರ್ಕಾರ ಮಾಡಿತ್ತಿರುವ ಯೋಜನೆಗಳಿಗೆ ಖರ್ಚಾಗುವುದು ಸಹ ನಮ್ಮ ತರಿಗೆ ಹಣ, ಆದರೂ ಸಹ ನಮ್ಮ ಸರ್ಕಾರಕ್ಕೆ ತನಗೆ ಯಾವ ಭಾಷೆಯಲ್ಲಿ ತಂತ್ರಾಂಶ ಅಥವಾ ಉಪಕರಣಗಳು ಬೇಕು ಎಂದು ಕೇಳಿ ಪಡೆಯುವ ಹೊಣೆಗಾರಿಕೆಯನ್ನು ತೋರಿಸದೇ ಇರುವುದು ಶೋಚನೀಯ. ಮೇಲಿನದು ಕೇವಲ ಒಂದು ಉದಾಹರಣೆ ಯಷ್ಟೇ, ಕೆ. ಎಸ್. ಆರ್. ಟಿ. ಸಿ ಸಂಸ್ಥೆಯಲ್ಲಿ ನೀವು ಟಿಕೆಟ್ ಕಾಯ್ದಿರಿಸದರೆ ನಿಮ್ಮ ಮೊಬೈಲಿಗೆ ಇಂಗ್ಲೀಷಿನಲ್ಲಿ ಮಾಹಿತಿ ಸಿಗುತ್ತದೆ, ರೈಲ್ವೆ ಇಲಾಖೆಯದೂ ಇದೇ ಕತೆ... ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ಮೇಲೆ ಹೇಳಿದಂತೆ ಪರಿಣಾಮಕಾರಿ ಆಡಳಿತಕ್ಕಾಗಿ ನಾವು ಯಾವುದೇ ತಂತ್ರಜ್ಞಾನ ಅಳವಡಿಸಿಕೊಂಡರೂ ಸಹ ಜನರ ಭಾಷೆಯಲ್ಲಿ ಸೇವೆ ದೊರೆಯದ ಹೊರತು ಆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಇಂದಿನ ಬಹುತೇಕ ಮೊಬೈಲುಗಳಲ್ಲಿ ಕನ್ನಡ ಭಾಷೆಯನ್ನ ಓದಲು ಹಾಗೂ ಬರೆಯಲು ಬೇಕಾಗಿರುವ ತಂತ್ರಾಂಶಗಳಾಗಲಿ, ಕೀಲಿಮಣೆಗಳಾಗಲಿ ದೊರಕುವುದಿಲ್ಲ. ಇದರ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗಿದ್ದ ಸರ್ಕಾರವೂ ಸಹ ಇಂಗ್ಲೀಷಿಗೆ ಮಣೆ ಹಾಕಿ ಕುಳಿತಿದೆ, ಸಾಮಾನ್ಯ ನಾಗರೀಕರ ಉಪಯೋಗಕ್ಕಾಗಿ ಆಡಳಿತದಲ್ಲಿ ಕನ್ನಡ ಬಳಸಬೇಕೆಂಬ ಕನಿಷ್ಠ ಪ್ರಜ್ಞೆಯನ್ನ ಸಹ ಮರೆತಿದೆ. ನಮ್ಮ ಭಾಷೆಯಲ್ಲಿ ನಮಗೆ ಸೇವೆ ಸಿಗದ ಹೊರತು ಆಡಳಿತ ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲ.

ಸೋಮವಾರ, ಅಕ್ಟೋಬರ್ 10, 2011

ಅನಿಯಂತ್ರಿತ ವಲಸೆ ಮತ್ತು ಅದರ ದುಷ್ಪರಿಣಾಮಗಳು

ಕಳೆದ ವಾರ ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಮತ್ತು ಕಳೆದ ತಿಂಗಳಷ್ಟೇ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಕೇವಲ 50 ಪೈಸೆಗೆ ನಡೆದ ಶೂಟ್ ಔಟ್ ನಂತಹ ಪ್ರಕರಣಗಳು ಒಂದು ನಾಡಿನಲ್ಲಿ ಅನಿಯಂತ್ರಿತ ವಲಸೆಯಿಂದ ಆಗಬಹುದಾದ ದುಷ್ಪರಿಣಾಮಗಳ ಚಿತ್ರಣವನ್ನು ಬಯಲುಮಾಡಿದಂತಿವೆ. ಜೊತೆಗೇ, ಕರ್ನಾಟಕದಲ್ಲಿ ಎಡೆಯಿರದೆ ನಡೆಯುತ್ತಿರುವ ಅನಿಯಂತ್ರಿತ ವಲಸೆಯಿಂದ ಕನ್ನಡಿಗರ ಉದ್ಯೋಗಕ್ಕೆ ಬಂದಿರುವ ಕುತ್ತು, ಕನ್ನಡಿಗರ ಮೇಲೆ ಆಗುತ್ತಿರುವ ದಾಳಿ ಸಾಮಾಜಿಕ ಭದ್ರತೆಯ ಬುನಾದಿಯನ್ನೇ ಅಲುಗಾಡಿಸಿದಂತಾಗಿದೆ. ಅಷ್ಟೇ ಅಲ್ಲದೆ, ಕಮ್ಮಿ ಕೂಲಿಗೆ ಸಿಗುತ್ತಾರೆಂಬ ನೆಪವೊಡ್ಡಿ ವಲಸಿಗರನ್ನು ಶೋಷಿಸುವ ಸೆಕ್ಯುರಿಟಿ ಏಜೆನ್ಸಿಗಳ ಒಂದು ವರ್ಗವೇ ಸೃಷ್ಟಿ ಆಗುತ್ತಿದ್ದು, ಕನ್ನಡಿಗರು ಮತ್ತು ಪರಭಾಷಿಕರ ಮಧ್ಯೆ ಸಾಮಾಜಿಕ ಘರ್ಷಣೆ, ತಿಕ್ಕಾಟಕ್ಕೂ ಇದು ಕಾರಣವಾಗುತ್ತಿದೆ.

ಇಷ್ಟೆಲ್ಲಾ ಗಂಭೀರ ಬೆಳವಣಿಗೆಗಳಾಗುತ್ತಿದ್ದರೂ, ನಮ್ಮ ಘನ ಸರ್ಕಾರ ಮಾತ್ರ, ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕುವ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಅದರ ಬಗ್ಗೆ ಯೋಚಿಸುತ್ತಲೂ ಇಲ್ಲ. ಅದಕ್ಕೆ ವಿರುದ್ಧವಾಗಿ, ಕಡಿವಾಣವೇ ಇಲ್ಲದ ಸೆಕ್ಯುರಿಟಿ ಏಜೆನ್ಸಿಗಳನ್ನು ಬೆಳೆಯಲು ಬಿಟ್ಟು, ಅಲ್ಲಿ ನೇಮಕವಾಗುವ ಸೆಕ್ಯುರಿಟಿ ಗಾರ್ಡ್ ಗಳನ್ನಾಗಲೀ, ಅವರೊಡನೆಯೇ ಬರುವವರನ್ನಾಗಲೀ ಗೊತ್ತು ಗುರಿಯಿಲ್ಲದೆ ನಮ್ಮ ನಾಡಿನಲ್ಲಿ ಬೀಡು ಬಿಡಲು ಅನುಕೂಲ ಮಾಡಿಕೊಡುವ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಕಂತೆಗೆ ತಕ್ಕ ಬೊಂತೆ ಎಂಬಂತೆ, ಸೆಕ್ಯುರಿಟಿ ಏಜೆನ್ಸಿಗಳೂ ಕೂಡ, ಕಮ್ಮಿ ಕೂಲಿಗೆ ಸಿಕ್ಕರೆಂಬ ಭರದಲ್ಲಿ ಇದಾವುದನ್ನೂ ಗಂಭೀರವಾಗಿ ಪರಿಗಣಿಸದೆ, ತಮ್ಮ ಲಾಭಕ್ಕೋಸ್ಕರ ವಲಸಿಗರನ್ನೂ ಶೋಷಣೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಜೊತೆಗೆ, ತಾವು ನೇಮಿಸಿಕೊಂಡ ವಲಸಿಗರು ಯಾರು, ಅವರ ಮೂಲ, ಇಲ್ಲಿಗೆ ಬಂದಿರುವ ಉದ್ದೇಶ, ಅವರ ವ್ಯಕ್ತಿಗತ ಹಿನ್ನೆಲೆ - ಇದಾವುದನ್ನೂ ಕಲೆ ಹಾಕುತ್ತಿಲ್ಲ ಮತ್ತು ಹೆಚ್ಚು ವಿದ್ಯಾರ್ಹತೆ ಬೇಕಿಲ್ಲದ ಇಂತಹ ಕೆಲಸಗಳಿಗೂ ಸ್ಥಳೀಯರಾದ ಕನ್ನಡಿಗರನ್ನೇ ನೇಮಿಸುವ ಕೆಲಸ ಮಾಡುತ್ತಿಲ್ಲ. ಕೆಲವೊಮ್ಮೆ ಬೇಕೆಂದೇ ಪರಭಾಷಿಕರನ್ನು ಈ ಕೆಲಸಗಳಿಗೆ ನೇಮಿಸಿಕೊಂಡು, ಕನ್ನಡಿಗರ ಉದ್ಯೋಗಕ್ಕೆ ಕಲ್ಲು ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಈ ಕೂಡಲೆ ಇದರ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅತಿಬೇಗ ಈ ಸಮಸ್ಯೆಗಳು ದೊಡ್ಡ ಸಾಮಾಜಿಕ ಪಿಡುಗುಗಳಾಗಿ ಮಾರ್ಪಾಡಾಗುವ ದಿನಗಳು ದೂರವಿಲ್ಲ. ಅನಿಯಂತ್ರಿತ ವಲಸೆಯ ಕಡಿವಾಣವೇ ಇವೆಲ್ಲಕ್ಕೂ ಸೂಕ್ತ ಪರಿಹಾರವೆನಿಸುತ್ತದೆ.

ಸೋಮವಾರ, ಸೆಪ್ಟೆಂಬರ್ 26, 2011

ಮುಖ್ಯಮಂತ್ರಿಗಳೇ ಇದು ಸರಿಯೇ?

ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರು ನೆನ್ನೆ ಬೆಂಗಳೂರಿನಲ್ಲಿ ಮಲೆಯಾಳಿಗಳು ಏರ್ಪಡಿಸಿದ್ದ ಪೊನ್ನಂ ೨೦೧೧ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಷಯ ಇಷ್ಟೇ ಇದ್ದಿದ್ದರೆ ಸಮಸ್ಯೆ ಏನು ಇರುತ್ತಿರಲಿಲ್ಲ. ಆದರೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ತುಂಬ ಅವರು ಮಾತನಾಡಿದ್ದು ಮಲೆಯಾಳಿಯಲ್ಲಿಯೇ ಎಂದು ಪತ್ರಿಕಾ ವರದಿಯೊಂದು ಹೇಳಿತ್ತಿದೆ!!!!
ಹಲವಾರು ದಶಕಗಳಿಂದ ನಮ್ಮ ರಾಜ್ಯದಲ್ಲಿಯೇ ವಾಸಿಸುತ್ತಿರುವ ಮಲೆಯಾಳಿಗಳು, ಕನ್ನಡವನ್ನ ಕಲಿತು ಕನ್ನಡಿಗರ ಜೊತೆ ಸಾಮರಸ್ಯದಿಂದ ಬದುಕುತ್ತಿರುವ ಹಾಗೂ ಬದಲಾವಣೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನೀವು ಕನ್ನಡಿಗರಲ್ಲ ಎನ್ನೋ ಬಹುದೊಡ್ಡ ತಪ್ಪು ಸಂದೇಶವನ್ನು ನಮ್ಮ ಮುಖ್ಯಮಂತ್ರಿಗಳು ನೀಡುತ್ತಿರುವುದು ಸರಿಯೇ? ಭಾಷೆಯ ಮೂಲಕವೇ ಉತ್ತಮ ಸಮಾಜವನ್ನ ಕಟ್ಟಬೇಕಾಗಿರುವುದು ಇಂದಿನ ಅವಶ್ಯಕತೆ ಹಾಗೂ ಇದೇ ಸರಿಯಾದ ದಾರಿ ಕೂಡ. ಆದರೆ ಸದಾನಂದಗೌಡರ ನಡೆ ಪರಭಾಷಿಕರನ್ನು ಹೊರಗಿನವರಾಗಿಯೇ ಇಡುವ ಪ್ರಯತ್ನವಾಗಿ ಕಾಣುತ್ತಿದೆ. ತಮಗಿರುವ ಮಲೆಯಾಳಿ ಪಾಂಡಿತ್ಯವನ್ನು ಅವರು ಕೇರಳಕ್ಕೆ ಹೋದಾಗ ತೋರಿಸಿದರೆ ಅವರ ನಡೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದರೆ ನೆನ್ನೆಯ ಘಟನೆ ಭಾಷಾ ಅಲ್ಪಸಂಖ್ಯಾತರ ಓಲೈಕೆಯಂತೆಯೇ ಮೇಲ್ನೋಟಕ್ಕೆ ಕಾಣಿಸುತ್ತಿದೆ. ನಾಳೆ ಮತ್ಯಾವುದೋ ಭಾಷಿಕ ಸಮುದಾಯ ಅವರನ್ನ ಕಾರ್ಯಕ್ರಮಕ್ಕೆ ಅಹ್ವಾನಿಸಿದರೆ, ಅಲ್ಲೂ ಇದೇ ತರಹದ ಘಟನೆ ಪುನರಾವರ್ತನೆಯಾದರೆ? ಇಂತಹ ಹೆಜ್ಜೆಗಳು ನಾಡಿನ ಒಡಕಿಗೆ ಕಾರಣವಾಗುವದಿಲ್ಲವೇ?

ಈ ಹಿಂದೆಯು ಸಹ ಚುನಾವಣೆ ಸಮಯದಲ್ಲಿ ಬಿ.ಜೆ.ಪಿ ಪಕ್ಷ ಇಂತಹ ಭಾಷ ಅಲ್ಪಸಂಖ್ಯಾತರನ್ನು ಓಲೈಸಲು ನಡೆಸಿದ ಕಸರತ್ತುಗಳನ್ನು ಹಾಗೂ ಅದರ ವಿರುದ್ಧ ಕರವೇ ನಡೆಸಿದ್ದ ಪ್ರತಿಭಟನೆಗಳನ್ನು ನಾವುಗಳು ಕಂಡಿದ್ದೇವೆ. ಭಾಷಾ ಅಲ್ಪಸಂಖ್ಯಾತರನ್ನು ಓಟಿಗಾಗಿ ಓಲೈಸುವ ಭರದಲ್ಲಿ, ಇದರಿಂದ ನಾಡಿನ ಸಮಾಜದಲ್ಲಿ ಭಾಷೆಯ ಆಧಾರದ ಮೇಲೆ ಉಂಟಾಗುವ ಒಡಕಿನ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಖಂಡಿತವಾಗಿ ಗಮನ ಹರಿಸಲೇ ಬೇಕು. ಆಯಾ ನಾಡಿನಲ್ಲಿ ಅಲ್ಲಿಯ ಭಾಷೆಗೆ ಆದ್ಯತೆ ನೀಡಬೇಕು. ಹೊರಗಿನಿಂದ ಬಂದವರು ಇಲ್ಲಿನವರಾಗಿ ಬಾಳಲು ಅವಕಾಶ ಮಾಡಿಕೊಡಬೇಕು. ಏನಂತೀರಿ?

ಸೋಮವಾರ, ಫೆಬ್ರವರಿ 28, 2011

2011-2012ರ ಕೇಂದ್ರ ರೈಲ್ವೆ ಬಜೆಟ್: ಒಂದು ವಿಶ್ಲೇಷಣೆ


25ನೇ ತಾರೀಖಿನಂದು 2011-2012ರ ಕೇಂದ್ರ ಸರ್ಕಾರದ ರೈಲ್ವೇ ಬಜೆಟ್ ಮಂಡಿಸಲಾಗಿದೆ. ನಮ್ಮ ರಾಜ್ಯಕ್ಕೆ ಬಹಳಷ್ಟು ಒಳ್ಳೆಯ ಯೋಜನೆಗಳನ್ನು ಈ ಬಾರಿ ಬಜೆಟ್ಟಿನಲ್ಲಿ ಘೋಷಿಸಲಾಗಿದೆ ಎಂದು ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷ ತನ್ನ ಬೆನ್ನು ತಟ್ಟಿಕೊಂಡಿದೆ. ಈ ಬಾರಿಯ ರೈಲ್ವೇ ಬಜೆಟ್ ನಮ್ಮ ರಾಜ್ಯಕ್ಕೆ ಐತಿಹಾಸಿಕ ಎಂದು ಹೇಳಿಕೆ ನೀಡಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ರಾತ್ರೋರಾತಿ ಜ್ಞಾನೋದಯವಾಗಿ ಮರುದಿನವೇ ರಾಜ್ಯಕ್ಕೆ ರೈಲ್ವೇ ಬಜೆಟ್ಟಿನಲ್ಲಿ ಅನ್ಯಾಯವಾಗಿದೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದರು.

ಈ ಬಜೆಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಏನೇನು ಸಿಕ್ಕಿದೆ ಅನ್ನೋದನ್ನ ನೋಡುವುದಕ್ಕಿಂತಲೂ, ನಿಜಕ್ಕೂ ನಮ್ಮ ನಾಡಿಗೆ ಎಂಥ ರೈಲ್ವೇ ವ್ಯವಸ್ಥೆ ಬೇಕು ಎನ್ನೋದನ್ನ ನೋಡೋಣ. ಇದರ ಜೊತೆಜೊತೆಗೆ ನಮ್ಮ ಈ ಸರ್ತಿಯ ಬಜೆಟ್ಟಿನಲ್ಲಿ ಏನು ಸಿಕ್ಕಿದೆ ಅನ್ನೋದನ್ನ ಸಹ ನೋಡೋಣ.

ನಾಡಿನ ಪ್ರಮುಖ ನಗರಗಳ ನಡುವೆ ಸಂಪರ್ಕ ಜಾಲ:
ಕರ್ನಾಟಕ ರಾಜ್ಯದ ಎಲ್ಲಾ ಪ್ರಮುಖ ಕೈಗಾರಿಕಾ ನಗರಗಳನ್ನು, ಬಂದರುಗಳನ್ನು, ಪ್ರವಾಸಿ ತಾಣಗಳನ್ನು, ಎಲ್ಲಾ ಜಿಲ್ಲಾಕೇಂದ್ರಗಳನ್ನು ಜೋಡಿಸುವಂತಹ ಯೋಜನೆಗಳು ನಮ್ಮ ನಾಡಿಗೆ ಬೇಕಾಗಿವೆ. ಮಂಗಳೂರು, ಪಡುಬಿದ್ರಿ, ಮಲ್ಪೆ, ಭಟ್ಕಳ, ಹೊನ್ನಾವರ ಮೊದಲಾದ ಬಂದರುಗಳಿಗೆ ರೈಲು ಸಂಚಾರ ಕಲ್ಪಿಸಬೇಕಾಗಿತ್ತು, ಆದರೆ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಗಮನ ಹರಿಸಿಲ್ಲ. ಹಾಗೆಯೇ ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಈ ಬಜೆಟ್ಟಿನಲ್ಲಿ ರೈಲು ಸಂಪರ್ಕ ಕಲ್ಪಿಸಲಾಗಿಲ್ಲ. ಈ ಬಜೆಟ್ಟಿನಲ್ಲಿ ಕೆಲವು ರೈಲ್ವೆ ಯೋಜನೆಗಳು ಮಂಜೂರಾಗಿದ್ದರು ಸಹ, ಕೆಲವು ರೈಲುಗಳ ಓಡಾಡುವ ದಾರಿ ತುಂಬಾ ಚಿಕ್ಕದು ಅಥವಾ ಈ ಮುಂಚೆಯೇ ಆ ನಗರಗಳಿಗೆ ಹಲವಾರು ರೈಲುಗಳು ಓಡಾಡುತ್ತಿವೆ. ಆದರೆ ಪ್ರಮುಖವಾಗಿ ಒಳನಾಡನ್ನು ಸಂಪರ್ಕಿಸಬೇಕಾಗಿದ್ದ ಹಲವು ಯೋಜನೆಗಳನ್ನು ಈ ಬಜೆಟ್ಟಿನಲ್ಲಿ ಪರಿಗಣಿಸಲಾಗಿಲ್ಲ. ಅಂತರ ರಾಜ್ಯ ರೈಲುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಇದರಿಂದ ವಲಸೆಗೆ ಉತ್ತೇಜನ ನೀಡಿದಂತಾಗಬಹುದು. ಹೊಸ ಮಾರ್ಗ, ಗೇಜ್ ಪರಿವರ್ತನೆ ಸೇರಿದಂತೆ ಮತ್ತಿತರ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಸಿಕ್ಕಿಲ್ಲ.

ಉದಾ: ಬೆಂಗಳೂರು - ಬೆಳಗಾವಿ, ಬೀದರ್ - ಬೆಂಗಳೂರು, ಮೈಸೂರು - ಬಿಜಾಪುರ, ಹೊಸಪೇಟೆ - ಬೆಂಗಳೂರು, ಹುಬ್ಬಳ್ಳಿ - ಗುಲ್ಬರ್ಗ, ಬೆಂಗಳೂರು - ಚಾಮರಾಜನಗರ, ಅರಸೀಕೆರೆ - ಬೆಂಗಳೂರು, ಬಂಗಾರಪೇಟೆ - ರಾಮನಗರ, ತುಮಕೂರು - ಚನ್ನಪಟ್ಟಣ, ಬೆಂಗಳೂರು - ದಾವಣಗೆರೆ - ಹುಬ್ಬಳ್ಳಿ - ಲೋಂಡಾ, ವಾಸ್ಕೋ - ಕಾರವಾರ - ಮಂಗಳೂರು - ಹಾಸನ ಮುಂತಾದ ಒಳನಾಡಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಜಾರಿಯಾಗಿಲ್ಲ.

ಇದರ ಜೊತೆಗೆ ಪ್ರಗತಿಯಲ್ಲಿರುವ ಮುನಿರಾಬಾದ್ - ಮೆಹಬೂಬನಗರ, ಕಡೂರು - ಚಿಕ್ಕಮಗಳೂರು - ಸಕಲೇಶಪುರ, ಬೀದರ್ - ಗುಲ್ಬರ್ಗ , ಚಿಕ್ಕಬಳ್ಳಾಪುರ - ಕೋಲಾರ, ನೆಲಮಂಗಲ - ಶ್ರವಣಬೆಳಗೊಳ, ಶ್ರೀನಿವಾಸಪುರ - ಮದನಪಲ್ಲಿ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ.

ಉತ್ತರ ಕರ್ನಾಟಕ, ಮಲೆನಾಡು, ಕೋಲಾರ ಜಿಲ್ಲೆ ಮತ್ತು ಕೊಂಕಣ ಭಾಗಕ್ಕೆ ಸಂಪರ್ಕ ಕಲ್ಪಿಸುವ 7 ಯೋಜನೆಗಳ ಬಗ್ಗೆ ಈ ಬಜೆಟ್ಟಿನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಹಣವನ್ನು ನೀಡುವುದಾಗಿ ಹೇಳಿತ್ತು. ಈ 7 ಯೋಜನೆಗಳು ಈ ರೀತಿ ಇವೆ: ಶಿವಮೊಗ್ಗ - ಹರಿಹರ, ವೈಟ್ ಫೀಲ್ಡ್ - ಕೋಲಾರ, ತುಮಕೂರು - ದಾವಣಗೆರೆ, ಗದಗ - ಹಾವೇರಿ, ಬಿಜಾಪುರ - ಶಹಾಬಾದ್, ಧಾರವಾಡ - ಬೆಳಗಾವಿ ಹಾಗೂ ತಾಳಗುಪ್ಪ - ಹೊನ್ನಾವರ.

ರೈಲುಮಾರ್ಗಗಳ ವಿದ್ಯುದೀಕರಣ:
ಇಡೀ ಕರ್ನಾಟಕದ ಶೇಕಡಾ 5%ಕ್ಕಿಂತ ಕಡಿಮೆ ರೈಲುಮಾರ್ಗ ವಿದ್ಯುದೀಕರಣವಾಗಿದ್ದು ಅದೂ ಕೂಡಾ ಅಂತರರಾಜ್ಯ ರೈಲುಮಾರ್ಗಗಳು ಮಾತ್ರವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಮಾರ್ಗಗಳು ಭಾಗಷಃ ಇಲ್ಲವೆಂದೇ ಹೇಳಬೇಕಾಗಿದೆ. ಈ ಬಜೆಟ್ಟಿನಲ್ಲಿ ರೈಲು ವಿದ್ಯುದೀಕರಣಕ್ಕೆ ಒತ್ತು ನೀಡಲಾಗಿಲ್ಲ.

ಪೂರಕ ಉದ್ದಿಮೆಗಳು:
ಈ ಸರತಿಯ ಬಜೆಟ್ಟಿನಲ್ಲಿ ರಾಜ್ಯಕ್ಕೆ ಹೆಚ್ಚು ಉಪಯೋಗವಾಗುವಂತಹ ಅಥವಾ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವಂತಹ ಪೂರಕ ಯೋಜನೆಗಳನು ಜಾರಿ ಮಾಡಲಾಗಿಲ್ಲ. ವಿವಿಧೋದ್ದೇಶ ತರಬೇತಿ ಕೇಂದ್ರ ಧಾರವಾಡದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ, ಹುಬ್ಬಳ್ಳಿ-ಧಾರವಾಡದಲ್ಲಿ ಪಾಲಿಟೆಕ್ನಿಕ್ ಶುರು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ರೈಲ್ವೆ ಕೋಚ್ ಕಾರ್ಖಾನೆ, ರೈಲುಗಳಲ್ಲಿ ಮಾರಲಾಗುವ ಊಟ, ನೀರು ಮೊದಲಾದ ಪ್ಯಾಕೆಜಿಂಗ್ ಕಾರ್ಖಾನೆಗಳನ್ನು ಕರ್ನಾಟಕಕ್ಕೇ ನೀಡಲಾಗಿಲ್ಲ. ಕೇವಲ ಹುಬ್ಬಳ್ಳಿ, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಶ್ರೀನಿವಾಸಪುರಗಳ ರೈಲ್ವೆ ನಿಲ್ದಾಣಗಳನ್ನು ಆದರ್ಶ ನಿಲ್ದಾಣಗಳನ್ನಾಗಿ ಮಾಡುವುದಾಗಿ ಘೋಷಿಸಲಾಗಿದೆ, ಆದರೆ ನಮ್ಮ ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣಗಳೇ ಮೂಕಭೂತ ಸೌಕರ್ಯದಿಂದ ವಂಚಿತವಾಗಿವೆ, ಇಂತಹ ನಿಲ್ದಾನಗಳತ್ತ ಗಮನ ಹರಿಸಲಾಗಿಲ್ಲ.

ಪ್ರತ್ಯೇಕ ವಿಭಾಗಗಳಿಗೆ ಬೇಡಿಕೆ:
ಕಳೆದ ಎರೆಡು ದಶಕಗಳಿಂದ ಗುಲ್ಬರ್ಗಾ ಮತ್ತು ಮಂಗಳೂರು ವಿಭಾಗಗಳ ವಿಚಾರ ನೆನೆಗುದಿಗೆ ಬಿದ್ದಿದೆ. ಈ ವಿಭಾಗಗಳಾದರೆ ಪ್ರಸ್ತಾವಿತ ಯೋಜನೆಗಳ ನಿರ್ವಹಣೆ, ರೈಲ್ವೆ ಸೇವೆಗಳ ಉಸ್ತುವಾರಿ ಹಾಗು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಕನ್ನಡಿಗರಿಗೆ ಗ್ರಾಹಕ ಸೇವೆಯ ಜೊತೆಗೆ ನಾಡಿನ ಅನೇಕ ಯುವಕರಿಗೆ ಉದ್ಯೋಗಾವಕಾಶ ದೊರಕಿದಂತಾಗುತ್ತದೆ.

ಅರ್ಧದಷ್ಟು ತಾಲೂಕುಗಳಿಗೆ ರೈಲೇ ಇಲ್ಲಾ:
ರಾಜ್ಯದ 176 ತಾಲೂಕುಗಳ ಪೈಕಿ ಅರ್ಧದಷ್ಟು ತಾಲೂಕುಗಳು ಅಂದರೆ 86 ತಾಲೂಕುಗಳಿಗೆ ರೈಲಿನ ಸಂಪರ್ಕವೇ ಇಲ್ಲ. ಜಿಲ್ಲಾ ಕೇಂದ್ರಗಳಾದ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸಹ ರೈಲಿನ ಸಂಪರ್ಕದಿಂದ ದೂರ ಉಳಿದಿವೆ. ಕೊಡಗು ಜಿಲ್ಲೆಯಲ್ಲಿರುವ ಮೂರು ತಾಲೂಕುಗಳಲ್ಲಿಯೂ ರೈಲು ಇಲ್ಲಾ.

ಬಹುಶಃ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಬೇಕಾದ ಅಗತ್ಯತೆ ಇದೆ. ಜೊತೆಜೊತೆಗೆ ನಮ್ಮ ರಾಜ್ಯ ಸರ್ಕಾರ ಕೂಡ ನಮ್ಮ ನಾಡಿಗೆ ಬೇಕಾಗಿರುವ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಲು ಕೆಲಸ ಮಾಡಬೇಕು ಹಾಗೂ ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು.

ಶುಕ್ರವಾರ, ಫೆಬ್ರವರಿ 18, 2011

ನಮ್ಮ ರಾಜ್ಯವನ್ನು ಪ್ರತಿನಿಧಿಸಲು ಜನರಿಲ್ಲವೇ???

ಇದು ಖಂಡಿತಾ ಕರ್ನಾಟಕದ ದೌರ್ಭಾಗ್ಯದ ಪರಮಾವಧಿ. ಹೈಕಮಾಂಡ್ ದಾಸ್ಯಕ್ಕೆ ಸಿಲುಕಿರುವ ಬಿಜೆಪಿ ಪಕ್ಷ ಮತ್ತೊಂದು ಎಡವಟ್ಟು ತೀರ್ಮಾನ ಕೈಗೊಂಡಿದೆ. ಹಿರಿಯ ರಾಜಕಾರಣಿ ಶ್ರೀ ರಾಜಶೇಖರ ರ್ಮೂರ್ತಿಯವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಹಿಂದಿ ಚಲನಚಿತ್ರ ನಟಿ ಶ್ರೀಮತಿ ಹೇಮಾ ಮಾಲಿನಿ ಅವರನ್ನ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ರಾಜ್ಯಸಭಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಭಾ ಸದಸ್ಯ ಮುಖ್ಯವಾಗಿ ಆಯಾ ರಾಜ್ಯದ ಪ್ರತಿನಿಧಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಭೆ ಅನ್ನುವುದು ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಕೇಂದ್ರದಲ್ಲಿ ಲೋಕಸಭೆಗಿರುವಷ್ಟೇ ಪ್ರಾಮುಖ್ಯತೆ ರಾಜ್ಯಸಭೆಗೂ ಇದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಆಯ್ಕೆ ಮಾಡುತ್ತಾರೆ.

ನಮ್ಮ ರಾಜ್ಯವನ್ನೂ ಪ್ರತಿನಿಧಿಸಲು ಅರ್ಹ ಜನಪ್ರತಿನಿಧಿಗಳು ಇಲ್ಲವೇ?
ಇಷ್ಟಕ್ಕೂ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಮಾಲಿನಿಯವರನ್ನು ಕಣಕ್ಕಿಳಿಸಲು ಇರುವ ಅರ್ಹತೆಯಾದರೂ ಏನು? ಮೊದಲನೆಯದಾಗಿ ಹೇಮಾ ಮಾಲಿನಿ ನಮ್ಮ ನಾಡಿನವರಲ್ಲ, ಹೋಗಲಿ ಆ ಕಾರಣವನ್ನು ಬದಿಗಿಟ್ಟು ನೋಡೋಣವೆಂದರೆ ಅವರಿಂದ ನಮ್ಮ ರಾಜ್ಯಕ್ಕೆ ಆಗಿರುವ ಉಪಯೋಗವಾದರೂ ಏನು? ನಮ್ಮ ನಾಡಿನ ಯಾವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ರಾಜ್ಯ ಮಟ್ಟದಲ್ಲಾಗಲಿ ಅಥವಾ ಕೇಂದ್ರ ಮಟ್ಟದಲ್ಲಾಗಲಿ ಪ್ರಯತ್ನಿಸಿದ್ದಾರೆ? ನಮ್ಮ ನೆಲ, ಜಲ, ಭಾಷೆ, ಉದ್ಯೋಗ, ಉದ್ದಿಮೆ ಹೀಗೆ ಯಾವ ಕಾರಣಕ್ಕಾಗಿ ನಮ್ಮ ನಾಡಿಗಾಗಿ ಕೆಲಸ ಮಾಡಿದ್ದಾರೆ? ಯಾವುದೇ ದೃಷ್ಠಿಯಿಂದ ನೋಡಿದರೂ ಸಹ ಹೇಮಾ ಮಾಲಿನಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶಿಸಲು ಅರ್ಹರಲ್ಲ. ಇಂತಹುದೇ ತಪ್ಪನ್ನು ಹಿಂದೆ ಬಿಜೆಪಿ ಹೈಕಮಾಂಡ್ ವೆಂಕಯ್ಯ ನಾಯ್ಡು ಅವರನ್ನ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿವಾಗ ಮಾಡಿತ್ತು. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ಸಹಿತ ಇಂತಹುದೇ ತಪ್ಪನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಗಮನಿಸಬೇಕಾದ ಅಂಶವೆಂದರೆ ನಮ್ಮ ನಾಡಿನಲ್ಲಿ ರಾಜ್ಯಸಭೆಗೆ ಅರ್ಹರಾಗಿರುವ ಯಾವುದೇ ನಾಯಕರು ಬಿಜೆಪಿ ಹೈಕಮಾಂಡಿಗೆ ಕಾಣಸಿಗಲಿಲ್ಲವೇ? ನಮ್ಮ ನಾಡನ್ನ ಉದ್ಧಾರ ಮಾಡೋದಕ್ಕೆ ಬೇರೆ ರಾಜ್ಯದ ಜನರನ್ನ ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆಯೇ? ನಮ್ಮ ನಾಡಿನ ರಾಜಕೀಯ ನಾಯಕರು ಆಗುತ್ತಿರುವ ತಪ್ಪನ್ನು ನೋಡಿಕೊಂಡು ಸುಮ್ಮನಿದ್ದಾರೆಯೇ? ಸುಮಾರು ಮೂರ್ನಾಲ್ಕು ದಶಕಗಳಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ದುಡಿದಿರುವಂತಹ ಬಿಜೆಪಿಯ ಕಾರ್ಯಕರ್ತರೆಲ್ಲಾ ಹೈಕಮಾಂಡ್ ಕಣ್ಣಿಗೆ ಕಾಣಿಸುತ್ತಿಲ್ಲವೇ? ಈ ಸರ್ತಿಯಾದರು ಬಿಜೆಪಿ ಪಕ್ಷ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾ? ಕಾದು ನೋಡಬೇಕು.........

ಮಂಗಳವಾರ, ಫೆಬ್ರವರಿ 15, 2011

ಜನರ ಹಿತವನ್ನೇ ಮರೆತಿರುವ ಜನಪ್ರತಿನಿಧಿಗಳು


ನಮ್ಮ ರಾಜ್ಯದ ಸದ್ಯದ ಭವಿಷ್ಯವನ್ನು ನೆನೆಸಿಕೊಂಡರೆ ಭಯವಾಗಿ ಹೋಗುತ್ತದೆ. ಕಳೆದ ವರ್ಷದ ಅಂತ್ಯದಲ್ಲಿ ಬಂದ ಎರಡನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಅನ್ನುವುದನ್ನ ನಿಮಗೆ ಈಗಾಗಲೇ ತಿಳಿಸಲಾಗಿದೆ. ಹಾಗೆಯೇ ಈ ತೀರ್ಪು ಐತಿಹಾಸಿಕ ಅಂತ ಬಣ್ಣಿಸಿ ನಮ್ಮ ರಾಜ್ಯಸರ್ಕಾರ ಹಾಗು ಇತರೇ ರಾಜಕೀಯ ಪಕ್ಷಗಳು ಸುಮ್ಮನಾಗಿ ಹೋಗಿದ್ದವು. ತೀರ್ಪಿನ ವಿರುದ್ಧವಾಗಿ ಧ್ವನಿ ಎತ್ತಿದವರು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ತೀರ್ಪನ್ನು ವಿಮರ್ಶಿಸುವುದಾಗಿ ಹೇಳಿಕೆ ನೀಡಿತು. ರಾಜ್ಯ ಸರ್ಕಾರದ ಈ ನಿಲುವು ಸ್ವಾಗತಾರ್ಹವೇ.

ಜನಪ್ರತಿನಿಧಿಗಳ ಸಭೆಯನ್ನು ಕರೆದ ಸರ್ಕಾರ:
ಕೃಷ್ಣಾ ನ್ಯಾಯಾಧಿಕರಣ ಆಲಮಟ್ಟಿ ಜಲಾಶಯದ ಎತ್ತರ, ರಾಜ್ಯಕ್ಕೆ ಹಂಚಿರುವ ನೀರಿನ ಪಾಲು, ಇದರ ಬಳಕೆಗೆ ಅನುಸರಿಸಬೇಕಾದ ವಿಧಾನಗಳ ಕುರಿತು ಕೃಷ್ಣಾ ಕಣಿವೆಯ 17 ಜಿಲ್ಲೆಗಳ ಜನಪ್ರತಿನಿಧಗಳ ಅಭಿಪ್ರಾಯ ಸಂಗ್ರಹಿಸಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಫೆಬ್ರವರಿ 14ರಂದು ಜನಪ್ರತಿನಿಧಗಳ ಸಭೆ ಕರೆದಿದ್ದರು. ಈ ಸಭೆಯ ಮತ್ತೊಂದು ಮುಖ್ಯವಾದ ಅಂಶವೇನೆಂದರೆ, ಇದರಲ್ಲಿ ಜನಪ್ರತಿನಿಧಿಗಳು ಕೇವಲ ಹಾಜರಿರದೆ ಚರ್ಚೆಯಲ್ಲಿ ಪಾಲ್ಗೊಂಡು ಜನರ ನಿಲುವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಸಭೆಗೆ ಬಾರದ ಜನಪ್ರತಿನಿಧಿಗಳು:
ರಾಜ್ಯದ ಬಹುಪಾಲು ಜಿಲ್ಲೆಗಳನ್ನು ಹಸನುಗೊಳಿಸುವ ಶಕ್ತಿ ಇರುವ ಕೃಷ್ಣಾ ನದಿಯ ತೀರ್ಪಿನಲ್ಲಿ ಸುಮಾರು 100 ಟಿಎಂಸಿ ಅಡಿ ನೀರು ಕಡಿಮೆ ಸಿಕ್ಕಿದ್ದರೂ ಈ ಭಾಗದ ಜನಪ್ರತಿನಿಧಿಗಳು ತೀರ್ಪಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ರಾಜ್ಯದ ರೈತರ, ಕೃಷಿಯ ಹಾಗೂ ಜನರ ಭವಿಷ್ಯವನ್ನ ನಿರ್ಧರಿಸುವ ಇಂತಹ ಜವಾಬ್ದಾರಿಯುತ ಸಭೆಗಳಿಗೆ ಜನಪ್ರತಿನಿಧಿಗಳು ಹಾಜರಾಗದೆ ಇರುವಂತೆ ಇವರುಗಳು ಮಾಡುವ ಘನಂದಾರಿ ಕೆಲಸಗಳಾದರು ಏನು? ಇದರಲ್ಲಿ ನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸೇರಿದ್ದಾರೆ. ಕೆಲವೇ ಶಾಸಕರನ್ನ ಬಿಟ್ಟರೆ ಉಳಿದ ಶಾಸಕರು, ಸಚಿವರುಗಳು ಹಾಗು ಸಂಸದರು ಈ ಸಭೆ ಹಾಜರಾಗಲೇ ಇಲ್ಲ. ಆಯಾ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ಆಯಾ ಪ್ರದೇಶದ ಶಾಸಕರ, ಸಂಸದರ ಹಾಗೂ ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ, ಅದೊಂದನ್ನು ಬಿಟ್ಟು ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲಕ ಕರ್ನಾಟಕದ ಅಭಿವೃದ್ಧಿ ಕಾಣಬಹುದು, ಕರ್ನಾಟಕದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಆದರೆ ಕೊಟ್ಟ ಮಾತಿನಂತೆ ನಮ್ಮ ಜನಪ್ರತಿನಿಧಿಗಳು ನಡೆದು ಕೊಳ್ಳುತ್ತಿದ್ದಾರೆಯೇ? ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆಯೇ?

ಬುಧವಾರ, ಜನವರಿ 19, 2011

ಕೃಷ್ಣಾ ನದಿ ನೀರು ಹಂಚಿಕೆ: ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ನೀರಿನ ಬಗ್ಗೆ ಧ್ವನಿ ಎತ್ತೋಣ

2ನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಬಂದಾಗಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆಯೇ ಅಥವಾ ನ್ಯಾಯ ಸಿಕ್ಕಿದೆಯೇ ಅನ್ನುವ ವಾದಗಳು ಎಲ್ಲಾ ಕಡೆ ನಡೆಯುತ್ತಲಿವೆ. ಇದೇ ವಿಷಯವಾಗಿ ಜನವರಿ 14 ರಂದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿರುವ ಶ್ರೀ ಮತ್ತೀಹಳ್ಳಿ ಮದನ ಮೋಹನ ಅವರು ಕೃಷ್ಣಾ ತೀರ್ಪಿನ ಬಗ್ಗೆ “ರಾಜ್ಯದ ಹಿತ ಕಾಪಾಡಿದ ಕೃಷ್ಣಾ ತೀರ್ಪು” ಎಂಬ ಲೇಖನದಲ್ಲಿ ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಹಾಗೆಯೇ ಜನವರಿ 19 ರಂದು ವಿಜಯ ಕರ್ನಾಟಕದಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು “ಕೃಷ್ಣಾ ಐತೀರ್ಪು: ಕರ್ನಾಟಕಕ್ಕೆ ಲಾಭವಾಗಿದೆಯೇ?” ಎಂಬ ತಮ್ಮ ಲೇಖನದಲ್ಲಿ ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಕುರಿತು ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಇವರಿಬ್ಬರ ಲೇಖನದ ಸಾರಾಂಶವೆಂದರೆ ರಾಜ್ಯಕ್ಕೆ ಕೃಷ್ಣಾ ತೀರ್ಪಿನಲ್ಲಿ ಅನ್ಯಾಯ ಆಗಿಲ್ಲ ಹಾಗೂ ರಾಜ್ಯಕ್ಕೆ ಸಿಗದಿರುವ ನೀರಿನ ಬಗ್ಗೆ ಮರಗುವುದನ್ನು ಬಿಟ್ಟು, ಸಿಕ್ಕಿರುವ ನೀರನ್ನ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಇಬ್ಬರು ಲೇಖಕರು ತೀರ್ಪು ರಾಜ್ಯದ ಪರವಾಗಿದೆ ಅನ್ನುವ ವಾದದಲ್ಲಿ ಕೆಲವು ವಿಷಯಗಳಲ್ಲಿ ಜಾಣ ಮೌನ ಪ್ರದರ್ಶಿಸಿದ್ದಾರೆ. ಈ ಎರೆಡೂ ಲೇಖನಗಳಲ್ಲಿ ಮಾಜಿ ನೀರಾವರಿ ಸಚಿವ ಶ್ರೀ ಎಚ್. ಕೆ. ಪಾಟೀಲ್ ಅವರನ್ನ ಗುರಿಯಾಗಿಸಿ ಉತ್ತರ ನೀಡಿರುವುದು, ರಾಜಕೀಯ ಪ್ರೇರಿತ ಬರಹಗಳಾಗಿ ಕಾಣಿಸಿಕೊಳ್ಳುವ ಅನುಮಾನ ಮೂಡುತ್ತದೆ.

ಈ ಇಬ್ಬರು ಅಂಕಣಕಾರರು ಹೇಳುವುದೇನೆಂದರೆ ಹಿಂದೆ ಬಚಾವತ್ ಆಯೋಗ ನೀಡಿದ್ದ ತೀರ್ಪಿನಲ್ಲಿ ರಾಜ್ಯಕ್ಕೆ ಸಿಕ್ಕಿದ್ದ 734 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ, ಹಾಗಾಗಿ ಈಗ ನಮಗೆ ನ್ಯಾಯವಾಗಿ ಸಿಗಬೇಕಾಗಿದ್ದ 101 ಟಿಎಂಸಿ ನೀರು ಕಡಿಮೆ ಕೊಟ್ಟರೂ ಇದರ ಬಗ್ಗೆ ತಕರಾರು ಎತ್ತಬೇಕಾಗಿಲ್ಲ!!. ಈ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲಾಗದಿದ್ದದ್ದು, ನಮ್ಮ ರಾಜ್ಯವನ್ನು ಆಳಿರುವ ಎಲ್ಲಾ ರಾಜಕೀಯ ಪಕ್ಷದ ಸರ್ಕಾರಗಳ ವೈಫಲ್ಯ, ಅದಕ್ಕಾಗಿ ನಮಗೆ ನ್ಯಾಯವಾಗಿ ಸಿಗಬೇಕಾಗಿರುವ ನೀರು ಬಿಟ್ಟುಕೊಡುವುದು ಎಷ್ಟು ಸರಿ? ಇಲ್ಲಿ ರಾಜ್ಯ ಸರ್ಕಾರದ ಯೋಜನಾ ಅನುಷ್ಠಾನ ವೈಫಲ್ಯ ಒಂದು ಕಡೆಯಾದರೆ, ನದಿ ನೀರು ಹಂಚಿಕೆಯಲ್ಲಿ ನಮಗೆ ಸಿಗಬೇಕಾಗಿದ್ದಕ್ಕಿಂತ ಕಡಿಮೆ ನೀರು ಸಿಕ್ಕಿರುವುದು ಇನ್ನೊಂದು ಕಡೆ. ಈ ಇಬ್ಬರು ಅಂಕಣಕಾರರು ಹೇಳಿರುವಂತೆ ನಮ್ಮ ರಾಜ್ಯ ಸರ್ಕಾರ ಈ ಕೂಡಲೇ ಆದ್ಯತೆಯ ಮೇರೆಗೆ ಕೃಷ್ಣಾ ನದಿ ಯೋಜನೆಗಳನ್ನು ತ್ವರಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಅನುಷ್ಠಾನಕ್ಕೆ ತರಬೇಕು. ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲವೆಂದ ಮಾತ್ರಕ್ಕೆ, ನಮ್ಮ ಪಾಲಿನ ನೀರನ್ನು ಬೇರೆಯವರಿಗೆ ಬಿಟ್ಟಿಕೊಡುವುದು ನಮಗೆ ನಾವೇ ಮಾಡಿಕೊಂಡ ದ್ರೋಹವಾಗುತ್ತದೆ. ಮುಂದುವರೆಯುತ್ತಾ 2ನೇ ನ್ಯಾಯಾಧಿಕರಣ ಕರ್ನಾಟಕ ತನ್ನ ಪಾಲಿಗೆ ದೊರಕಿದ್ದ 734 ಟಿಎಂಸಿ ನೀರಿನಲ್ಲಿ ರಾಜ್ಯ ಬಳಸದೇ ಉಳಿಸಿದ್ದ 230 ಟಿಎಂಸಿ ನೀರನ್ನು ಪರಿಗಣಿಸದೇ ಇದದ್ದು ರಾಜ್ಯದ ಪುಣ್ಯ, ಇಲ್ಲದಿದ್ದರೆ ರಾಜ್ಯಕ್ಕೆ ಹೆಚ್ಚುವರಿ ನೀರಿನಲ್ಲಿ ಯಾವುದೇ ಪಾಲು ಸಿಗದೇ ನಮ್ಮದೇ ನೀರು ಹೋಗುತಿತ್ತು ಎಂದು ಗುಮ್ಮ ತೋರಿಸುವ ಪ್ರಯತ್ನ ಮಾಡಿದ್ದಾರೆ. ಬಚಾವತ್ ಆಯೋಗ ಮಾಡಿದ್ದ ನದಿ ನೀರು ಹಂಚಿಕೆ ಸಮಂಜಸವಾಗಿ ಕಂಡಿದ್ದರಿಂದ ಹಾಗೂ ರಾಜ್ಯಕ್ಕೆ ನ್ಯಾಯಯುತವಾಗಿ ಆ ನೀರು ಸಿಗಬೇಕಾಗಿದ್ದರಿಂದ, 2ನೇ ನ್ಯಾಯಧಿಕರಣ ಉಳಿದ ನೀರನ್ನ ಹೆಚ್ಚುವರಿ ನೀರಿಗೆ ಸೇರಿಸಿಲ್ಲ.

ಇನ್ನೂ ಆಂಧ್ರ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿಕೊಂಡಿರುವುದರಿಂದ ಹೆಚ್ಚಿನ ನೀರನ್ನ ಕೊಟ್ಟಿರುವುದು ನ್ಯಾಯವಾಗಿದೇ ಅನ್ನುವುದು ಎರೆಡೂ ಲೇಖನಗಳಲ್ಲಿ ವ್ಯಕ್ತವಾಗಿದೆ. ಆದರೆ ಆಂಧ್ರಪ್ರದೇಶ ಕೇಂದ್ರ ಸರ್ಕಾರದ ಅಥವಾ ನ್ಯಾಯಧಿಕರಣದ ಒಪ್ಪಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ 11 ಯೋಜನೆಗಳ ಬಗ್ಗೆ ಎಲ್ಲೂ ಅಪಸ್ವರ ಎತ್ತಿಲ್ಲ. ಆದರೆ ಇದೇ ಆಂಧ್ರಪ್ರದೇಶ ರಾಜ್ಯ ಸರ್ಕಾರ ನಿರ್ಮಿಸುತ್ತಿದ್ದ ಚಿಕ್ಕ ಪ್ರಮಾಣದ, ಕೇವಲ 1.3 ಟಿಎಂಸಿ ನೀರಿನ ದಂಡಾವತಿಯ ಯೋಜನೆಗೆ ಅಡ್ಡಗಾಲು ಹಾಕಿತ್ತು ಹಾಗೂ ಆಣೆಕಟ್ಟಿನ ಎತ್ತರವನ್ನು 524.26 ಮೀಟರ್ ಎತ್ತರಕ್ಕೆ ಏರಿಸುವುದನ್ನು ವಿರೋಧಿಸಿತ್ತು ಆನೋದನ್ನ ಅಂಕಣಕಾರರು ಮರೆತಿರುವಂತಿದೆ.

ಕೊನೆಯದಾಗಿ ರಾಜ್ಯಕ್ಕೆ ಸುಮಾರು 101 ಟಿಎಂಸಿ ನೀರು ಕಡಿಮೆ ಸಿಕ್ಕಿದೆ ಅನ್ನುವುದನ್ನ ಇಬ್ಬರೂ ಅಂಕಣಕಾರರು ಒಪ್ಪುತ್ತಾರೆ, ಆದರೆ ಕಳೆದುಕೊಂಡಿರುವ ನೀರಿನ ಬಗ್ಗೆ ಯೋಚಿಸದೆ ಸಿಕ್ಕಿರುವ ನೀರನ್ನು ಉಪಯೋಗಿಸಬೇಕು ಎಂದು ಹೇಳಿದ್ದಾರೆ. ಇದೇ ಅಲ್ಪತೃಪ್ತಿಯ ಆಧಾರದ ಮೇಲೆ ನಾವು 101 ಟಿಎಂಸಿ ಅಡಿಗಳಷ್ಟು ನೀರನ್ನ ಬಿಟ್ಟುಕೊಟ್ಟರೆ ತೊಂದರೆಗೊಳಗಾಗುವವರು ನಮ್ಮ ರಾಜ್ಯದ ಜನರೇ ಅಲ್ಲವೇ? ಮೂಲ ಯೋಜನೆಯ ಪ್ರಕಾರ ಕೃಷ್ಣಾ ನದಿ ನೀರಿನಿಂದ ಫಲಾನುಭವಿಗಳಾಗಲಿರುವ ಜಿಲ್ಲೆಗಳ ಸಂಖ್ಯೆ 16. ಇಷ್ಟು ಬೃಹತ್ ಪ್ರಮಾಣದ ನೀರನ್ನ ಬಿಟ್ಟುಕೊಟ್ಟರೆ ನಷ್ಟ ಅನುಭವಿಸುವವರು ನಮ್ಮ ನೆಲದ ಜನರೇ ಅನ್ನುವುದನ್ನ ಈ ಇಬ್ಬರು ಹಿರಿಯರು ಮರೆತಿದ್ದಾದರೂ ಹೇಗೆ?? ನಾಡು, ನುಡಿ ಹಾಗೂ ನಾಡಿಗರಿಗೆ ಅನ್ಯಾಯವಾದಗ, ನಮ್ಮ ನಾಡಿನ ಪ್ರಜ್ಞಾವಂತರು ನ್ಯಾಯ ದೊರಕಿಸಿಕೊಡುವವರೆಗೂ ನಾಡಿನ ಪರ ಧ್ವನಿ ಎತ್ತಬೇಕಾಗಿರುವುದು ಇಂದಿನ ಅವಶ್ಯಕತೆ ಆಗಿದೆ ಅನ್ನುವುದನ್ನ ನಾವುಗಳು ಮರೆಯಬಾರದು.

ಕೃಷ್ಣಾ ನ್ಯಾಯಾಧಿಕರಣದ ತೀರ್ಪುನ ಕುರಿತು ನನ್ನ ಅನಿಸಿಕೆಗಳನ್ನು ಇಲ್ಲಿ ನೋಡಿ

ಗುರುವಾರ, ಡಿಸೆಂಬರ್ 30, 2010

ಕೃಷ್ಣಾ ನ್ಯಾಯಾಧಿಕರಣದ ತೀರ್ಪು :: ನನ್ನ ಅನಿಸಿಕೆ


ನಾಲ್ಕು ದಶಕಗಳ ಸುಧೀರ್ಘ ಹೋರಾಟದ ನಂತರ ಕೃಷ್ಣ ನದಿ ನೀರು ಹಂಚಿಕೆಯ ತೀರ್ಪು ಹೊರಬಿದ್ದಿದೆ. ಮೇಲ್ನೋಟಕ್ಕೆ ನಮಗೆ ಸಂಪೂರ್ಣ ನ್ಯಾಯ ದಕ್ಕಿದೆ ಅಂತ ಅನ್ನಿಸಿದರೂ ಸಹ ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲವೇನೋ ಅನ್ನಿಸುತ್ತದೆ. ಇದುವರೆಗೂ ಮಾಧ್ಯಮಗಳು ಹಾಗೂ ಅಂತರ್ಜಾಲದಲ್ಲಿ ದೊರಕಿರುವ ಮಾಹಿತಿಯ ಪ್ರಕಾರ,ಸ್ಕೀಮ್ ಬಿಯಲ್ಲಿ ಒಟ್ಟು ಲಭ್ಯವಿರುವ 448 ಟಿ.ಎಂ.ಸಿ ನೀರಿನ ಹಂಚಿಕೆಯ ವಿವರಗಳು ಇಂತಿದೆ: ಮಹಾರಾಷ್ಟ್ರಕ್ಕೆ 81 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ, ಕರ್ನಾಟಕಕ್ಕೆ 177 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ ಹಾಗೂ ಆಂಧ್ರ ಪ್ರದೇಶಕ್ಕೆ 190 ಟಿ.ಎಂ.ಸಿ ಯಷ್ಟು ನೀರನ್ನು ಹಂಚಲಾಗಿದೆ.
ಇದರ ಜೊತೆಗೆ ರಾಜ್ಯದ ದಶಕಗಳ ಬೇಡಿಕೆಯಾಗಿದ್ದ ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 519 ಮೀಟರ್ ನಿಂದ 524.26 ಮೀಟರ್ ವರೆಗೆ ಏರಿಸಲು ಇದ್ದ ಅಡಚಣೆಯನ್ನು ನಿವಾರಿಸಿ ನ್ಯಾಯಾಧಿಕರಣ ಅವಕಾಶ ನೀಡಿದೆ. ಕೃಷ್ಣ ನದಿಯ ಒಟ್ಟು ನೀರು ಹಂಚಿಕೆಯಲ್ಲಿ ಕರ್ನಾಟಕದ ಪಾಲಿಗೆ 911 ಟಿ.ಎಂ.ಸಿ ನೀರು ಸಿಕ್ಕಿದೆ, ಮಹಾರಾಷ್ಟ್ರದ ಪಾಲಿಗೆ 666 ಟಿ.ಎಂ.ಸಿ ಹಾಗೂ ಆಂಧ್ರ ಪ್ರದೇಶಕ್ಕೆ 1001 ಟಿ.ಎಂ.ಸಿ ನೀರು ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕ ಪ್ರತಿ ವರ್ಷ ಜೂನ್-ಜುಲೈ ತಿಂಗಳಿನಲ್ಲಿ 8-10 ಟಿ.ಎಂ.ಸಿ ನೀರು ಆಂಧ್ರಕ್ಕೆ ಬಿಡಬೇಕು ಎಂದು ತೀರ್ಪು ನೀಡಿದೆ. ಹಾಗದರೆ ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ???

ರಾಜ್ಯಕ್ಕೆ ಅನ್ಯಾಯವಾಗಿರುವುದೆಲ್ಲಿ?
ಮೊದಲನೆಯದಾಗಿ ಬಚಾವತ್ ಆಯೋಗ ತನ್ನ ತೀರ್ಪಿನಲ್ಲಿ ಕೃಷ್ಣಾ ನದಿಯ ಕೊಳ್ಳದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ಕ್ರಮವಾಗಿ 50%, 25% ಹಾಗೂ 25% ಹಂಚಬೇಕು ಎಂದು ತೀರ್ಪು ನೀಡಿತ್ತು. ಆದರೆ ಬಂದಿರುವ ತೀರ್ಪಿನಲ್ಲಿ ಕರ್ನಾಟಕಕ್ಕೆ ಬರಬೇಕಾಗಿದ್ದ 50% ನೀರಿನ ಬದಲು ಸಿಕ್ಕಿರುವುದು ಕೇವಲ 39.5% ನಷ್ಟು ಮಾತ್ರ. ಆಂಧ್ರಕ್ಕೆ ಸಿಗಬೇಕಾಗಿದ್ದ 25% ಬದಲು ಇಂದು ಸಿಕ್ಕಿರುವುದು 42.41% ಹಾಗೂ ಮಹಾರಾಷ್ಟ್ರಕ್ಕೆ ಸಿಗಬೇಕಾಗಿದ್ದ 25% ನಲ್ಲಿ ಸಿಕ್ಕಿರುವುದು ಕೇವಲ 18.08% ಮಾತ್ರ. ಕರ್ನಾಟಕ ತನ್ನ ಪಾಲಿಗೆ ಬರಬೇಕಾಗಿದ್ದ ಸುಮಾರು 100 ಟಿ.ಎಂ.ಸಿ ಯಷ್ಟು ನೀರನ್ನು ಕಳೆದುಕೊಂಡಿದೆ. ಆದರೆ ಇದರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ಸರ್ಕಾರ ಹಾಗೂ ನಮ್ಮ ರಾಜಕೀಯ ಪಕ್ಷಗಳು, ನಮ್ಮ ರಾಜ್ಯಕ್ಕೆ ನ್ಯಾಯಾಧಿಕರಣ ವರ ಕೊಟ್ಟಿರುವಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿವೆ. ನಮ್ಮ ರಾಜಕೀಯ ನಾಯಕರು 100 ಟಿ.ಎಂ.ಸಿ ನೀರು ಬಿಟ್ಟುಕೊಟ್ಟು ಧಾರಾಳತೆ ಮೆರೆಯುತ್ತಿದ್ದಾರಾ? ಹಾಗೆ ಸುಮ್ಮನೆ ಬಿಟ್ಟು ಬಿಡುವುದಕ್ಕೆ ಅದೇನು 100 ಬಕೆಟ್ ನೀರಲ್ಲ. 100 ಟಿ.ಎಂ.ಸಿ ನೀರಿನ ಅಗಾಧತೆ ಅರಿಯಲು ಅದನ್ನ ಸರಳೀಕರಿಸಿ ನೋಡೋಣ. 23000 ಎಕರೆ ವಿಸ್ತಾರದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿ.ಎಂ.ಸಿ ಅಡಿಗೆ ಸಮ, ಹಾಗಾಗಿ 100 ಟಿ.ಎಂ.ಸಿ ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಅಂದರೆ ನಮ್ಮ ಕೈತಪ್ಪಿ ಹೋಗಿರುವ ನೀರಿನ ಅಗಾಧತೆಯನ್ನು ಗಮನಿಸಿ. ಈ 100 ಟಿ.ಎಂ.ಸಿ ನೀರನ್ನ ಸುಮಾರು 3 ಜಿಲ್ಲೆಗಳಿಗೆ ವರ್ಷಪೂರ್ತಿ ನೀರನ್ನು ಒದಗಿಸಬಹುದು. ಈ ಅನ್ಯಾಯವನ್ನು ಎತ್ತಿ ತೋರಿಸಬೇಕಾಗಿದ್ದ ನಮ್ಮ ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ತಮಗೆ ಯಾವುದೋ ನಿಧಿ ಸಿಕ್ಕಂತೆ ಖುಷಿ ಪಡುತ್ತಿವೆ.
ಆಂಧ್ರಪ್ರದೇಶ ಅಕ್ರಮವಾಗಿ ನಿರ್ಮಾಣ ಮಾಡಿರುವ ಯೋಜನೆಗಳ ಬಗ್ಗೆ ತೀರ್ಪಿನಲ್ಲಿ ಯಾವುದೇ ಪ್ರಸ್ತಾಪ ಇರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

ನಮ್ಮ ಪಾಲಿನ ನೀರನ್ನು ಆಂಧ್ರಕ್ಕೆ ಯಾಕೆ ಕೊಡಬೇಕು?
ಬಂದಿರುವ ತೀರ್ಪಿನಲ್ಲಿ ಇನ್ನೊಂದು ಮಾರಕವಾದ ಅಂಶವೆಂದರೆ ಪ್ರತಿ ವರ್ಷ ಕರ್ನಾಟಕ ಬೇಸಿಗೆಯ ಸಮಯದಲ್ಲಿ ಆಂಧ್ರಪ್ರದೇಶಕ್ಕೆ 8-10 ಟಿ.ಎಂ.ಸಿ ಯಷ್ಟು ನೀರು ಹರಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹರಿಸಬೇಕಾಗಿರುವ ನೀರಿನ ಪ್ರಮಾಣವೇನು ಕಡಿಮೆಯದ್ದಲ್ಲ. ಬೇಸಿಗೆಯ ಸಮಯದಲ್ಲಿ ಎಲ್ಲಾ ರಾಜ್ಯಗಳು ತಮ್ಮ ಆಣೆಕಟ್ಟಿನಲ್ಲಿ ತಳಮಟ್ಟದಲ್ಲಿ ಸ್ವಲ್ಪ ನೀರನ್ನು ಮೂಲಭೂತ ಅವಶ್ಯಕತೆಗಳಿಗಾಗಿ ಶೇಖರಿಸಿಕೊಂಡಿರುತ್ತವೆ, ಇರೋ ನೀರನೆಲ್ಲಾ ಅಂಧ್ರಕ್ಕೆ ಹರಿಸಿದರೆ ನಮ್ಮ ರಾಜ್ಯದ ಜನರಿಗೆ ಕುಡಿಯಲು ನೀರು, ರೈತರಿಗೆ ತಮ್ಮ ಬೆಳಗಳಿಗೆ ನೀರು ಒದಗಿಸುವವರಾರು?

ನ್ಯಾಯಾಧಿಕರಣದ ಪ್ರಕ್ರಿಯೆ ಬಲು ನಿಧಾನ!!
ಹೌದು, ಇಂದಿನ ನ್ಯಾಯಾಧಿಕರಣಗಳ ಪ್ರಕ್ರಿಯೆಯ ವೇಗ ಅಮೆನಡಿಗೆಯಂತಿದೆ. ನ್ಯಾಯಾಧಿಕರಣದ ಈ ನಿಧಾನ ಪ್ರಕ್ರಿಯೆಯಿಂದಾಗಿ ರಾಜ್ಯಗಳು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ದಶಕಗಳವರೆಗೆ ತೀರ್ಪಿಗಾಗಿ ಕಾಯುತ್ತಾ ಕುಳಿತಿರಬೇಕು, ಇದರಿಂದಾಗಿ ಯೋಜನೆಯ ಸಮಯ ಹಾಗೂ ಅದಕ್ಕೆ ಬೇಕಾಗಿರುವ ಸಂಪನ್ಮೂಲ ಶುರುವಾಗಿದ್ದಕ್ಕಿಂತ ನೂರು ಮಡಿ ಹೆಚ್ಚಾಗಿರುತ್ತದೆ. ಇದರ ಫಲಾನುಭವಿಗಳಾಬೇಕಾದ್ದ ಜನರು ಸಂಕಷ್ಟದಲ್ಲೇ ಇರಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕಳಸಾ-ಬಂಡೂರ ಕುಡಿಯುವ ನೀರಿನ ಯೋಜನೆ, ನಮ್ಮ ಪಾಲಿಗೆ ಬರಬೇಕಾಗಿರುವ ನೀರಿನಲ್ಲಿ ಕೇವಲ 7 ಟಿ.ಎಂ.ಸಿ ಯಷ್ಟು ನೀರನ್ನು ಬಳಸಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಈಗ ಅಡ್ಡಗಾಲು ಹಾಕಿರುವ ಗೋವಾ ಸರ್ಕಾರ ಸಮಸ್ಯೆಯಲ್ಲದ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಧಿಕರಣಕ್ಕೆ ಆಗ್ರಹಿಸಿದೆ, ಈ ಹುಚ್ಚುತನಕ್ಕೆ ಕೇಂದ್ರ ಸಹ ಒಪ್ಪಿಗೆ ಸೂಚಿಸಿದೆ. ಇದರಿಂದ ತೊಂದರೆಗೊಳಪಡುವ ಉತ್ತರ ಕರ್ನಾಟಕದ ಜನತೆ ಇನ್ನೂ ದಶಕಗಳವರೆಗೂ ನೀರಿಗಾಗಿ ಬಾಯಿಬಿಡುತ್ತಾ ಕುಳಿತುಕೊಳ್ಳಬೇಕು. ಪ್ರತಿಯೊಂದು ಅಂತರ್ ರಾಜ್ಯ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಧಿಕರಣಗಳನ್ನು ರಚಿಸುವ ಬದಲು ದೇಶಕ್ಕೆ ಅನ್ವಯವಾಗುವಂತಹ ಒಂದು ಶಾಶ್ವತ ಜಲ ನೀತಿ ಅವಶ್ಯಕ. ಇಂಥ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಒಂದು ನಿರ್ದಿಷ್ಟ ಮಾರ್ಗಸೂಚಿ (ರಾಷ್ಟ್ರೀಯ ಜಲನೀತಿ) ಇರಬೇಕಾಗಿರುವುದು ಒಕ್ಕೂಟ ವ್ಯವಸ್ಥೆಯ ಮೂಲಭೂತ ಅವಶ್ಯಕತೆ.

ನಿಜವಾದ ಒಕ್ಕೂಟ ವ್ಯವಸ್ಥೆ ಜಾರಿಗೆ ಬರುವುದು ಯಾವಾಗ??
ಒಂದು ನಿಮಿಷದ ಮಟ್ಟಿಗೆ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ಬದಿಗಿಟ್ಟು ನೋಡೋಣ. ರಾಜ್ಯದ ಹತ್ತಿರ ಇರುವ ನೀರನ್ನ ಸರಿಯಾದ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ತುರ್ತಾಗಿ ಜಾರಿಗೆ ತರಬೇಕು. ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಬೇಕಾಗುವ ಮೊತ್ತ ಸಾವಿರಾರೂ ಕೋಟಿ ರೂಪಾಯಿಗಳು. ಈ ಭಾರಿ ಹಣವನ್ನು ಹೊಂದಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದೆ ಕೈಯೊಡ್ಡಲೇ ಬೇಕು. ನಮ್ಮ ರಾಜ್ಯ ದೇಶದ ಅತಿ ಹೆಚ್ಚು ತೆರೆಗೆ ಕಟ್ಟುವ ರಾಜ್ಯಗಳಲ್ಲಿ ಒಂದು. ಈಗಿರುವ ಹಣಕಾಸು ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳು ಕಟ್ಟುವ ತೆರಿಗೆ ಹಣವನ್ನು ಪಡೆಯುವ ಕೇಂದ್ರ ಸರ್ಕಾರ, ಆ ಒಟ್ಟು ಹಣದಲ್ಲಿ ಒಂದು ಭಾಗವನ್ನ ಎಲ್ಲಾ ರಾಜ್ಯಗಳ ನಡುವೆ ಹಂಚುತ್ತದೆ, ಈ ವ್ಯವಸ್ಥೆಯಿಂದಾಗಿ ಹೆಚ್ಚು ಕಷ್ಟಪಟ್ಟು ದುಡಿಯುವ ರಾಜ್ಯಗಳಿಗೆ ತಾನು ನೀಡಿದ ಅನುಪಾತದಲ್ಲಿ ವಾಪಸ್ ಕೇಂದ್ರದಿಂದ ಹಣ ಬರುವುದಿಲ್ಲ. ಇನ್ನೂ ದುಖಃದ ವಿಷಯವೆಂದರೆ ಕೇಂದ್ರ ನೀಡುವ ಹಣವನ್ನು ಕೇಂದ್ರ ಸರ್ಕಾರ ಹೇಳಿದ ಯೋಜನೆಗಳಿಗೆ ಮಾತ್ರ ಉಪಯೋಗಿಸಬೇಕು ಎಂದು ತಾಕೀತು ಮಾಡುತ್ತದೆ, ಬದಲಾಗಿ ಆ ಹಣವನ್ನು ರಾಜ್ಯಗಳು ಬೇರೆ ಅವಶ್ಯಕ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲಾ. ಹೀಗೆ ನಾವು ಕಟ್ಟುವ ತೆರಿಗೆಯ ಹಣವನ್ನು ನಮ್ಮ ರಾಜ್ಯಕ್ಕೆ ಅವಶ್ಯಕವಾದ ಯೋಜನೆಗಳಿಗೆ ಉಪಯೋಗಿಸಿಕೊಳ್ಳಲು ನಾವು ಮತ್ತಾರದೋ ಒಪ್ಪಿಗೆಗಾಗಿ ಕಾಯುವುದು ಎಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆ??? ಎಲ್ಲಿಯ ಒಕ್ಕೂಟ ವ್ಯವಸ್ಥೆ?? ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಹೇಗೆ ಕಡಿಮೆಯಾಗಿರುತ್ತದೋ, ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹಳ ಕಡಿಮೆ ಅಥವಾ ಬೇಕಾದಾಗ ಮಾತ್ರ ಅನ್ನುವಷ್ಟು ಇರುತ್ತದೆ. ಆದರೆ ಇವತ್ತಿನ ಪರಿಸ್ಥಿಯಲ್ಲಿ ಒಕ್ಕೂಟ ವ್ಯವಸ್ಥೆ ಕೇವಲ ಹೆಸರಿಗೆ ಮಾತ್ರ, ಅದು ಆಚರಣೆಗೆ ಇನ್ನೂ ಬಂದೇ ಇಲ್ಲಾ. ಇವತ್ತಿಗೂ ಸಹ ಎಲ್ಲಾ ಅಧಿಕಾರಗಳು ಕೇಂದ್ರ ಸರ್ಕಾರದ ಅಡಿಯಲ್ಲೇ ಕೊಳೆಯುತ್ತಾ ಬಿದ್ದಿವೆ.

ಜನ ಜಾಗೃತಿಯಿಂದ ಮಾತ್ರ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ನಾಡು, ದೇಶವನ್ನು ಕಟ್ಟಲು ಸಾಧ್ಯ. ಇಂಥ ವ್ಯವಸ್ಥೆ ನಮ್ಮದಾಗಲಿ ಅಂತ ಆಶಿಸುತ್ತಾ, ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ನಮ್ಮ ಜನಪ್ರತಿನಿಧಿಗಳು ಮನಗಂಡು ಅದರತ್ತ ಗಮನ ಹರಿಸಿ ನಮ್ಮ ಪಾಲಿಗೆ ದಕ್ಕಬೇಕಾಗಿರುವ ನೀರನ್ನು ಪಡೆಯುವಂತಾಗಲಿ....

ಗುರುವಾರ, ನವೆಂಬರ್ 25, 2010

ನಮ್ಮ ನಾಡಿನಲ್ಲಿ ಕೇವಲ ರಾಷ್ಟ್ರೀಯ ಪಕ್ಷಗಳು ಮಾತ್ರ ಇರಬೇಕೆ?

ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದ ರಾಜಕಾರಣ ಅವನ್ನತಿಯ ಹಾದಿ ಹಿಡಿದಿರುವುದು ನಿಮ್ಮ ಗಮನಕ್ಕೂ ಬಂದಿದೆ. ಈ ಸನ್ನಿವೇಶದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಯಡ್ಯೂರಪ್ಪನವರು, ರಾಜ್ಯದಲ್ಲಿ ಕೇವಲ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿ.ಜೆ.ಪಿ ಮಾತ್ರ ಇರಬೇಕು, ಇನ್ನಿತರ ಯಾವುದೇ ಪಕ್ಷಗಳು ಇರಬಾರದು ಅನ್ನುವ ಹೇಳಿಕೆಯನ್ನ ನೀಡಿದ್ದಾರೆ. ಇದು ಪತ್ರಿಕೆ ಹಾಗೂ ಟಿವಿಗಳಲ್ಲಿ ಸುದ್ದಿಯಾಗಿತ್ತು.

ನಮ್ಮ ನಾಡಿನಲ್ಲಿ ಕೇವಲ ರಾಷ್ಟ್ರೀಯ ಪಕ್ಷಗಳು ಮಾತ್ರ ಇರಬೇಕೆ?
ನಮ್ಮ ನಾಡಿನಲ್ಲಿ ಕೇವಲ ಬಿಜೆಪಿ ಹಾಗೂ ಕಾಂಗ್ರೆಸ್ ಮಾತ್ರ ಇರಬೇಕು ಅಂತ ಯಡ್ಯೂರಪ್ಪನವರು ಹೇಳಿದ್ದಾರೆ, ಇದರರ್ಥ ಕರ್ನಾಟಕದಲ್ಲಿ ಇವುಗಳನ್ನು ಹೊರತುಪಡಿಸಿ ಬೇರಾವುದೇ ಪ್ರಾದೇಶಿಕ ಪಕ್ಷಗಳು ಇರಬಾರದು ಅನ್ನುವುದು. ಈ ಮಾತು ಸಂವಿಧಾನ ಮೂಲ ಆಶಯಕ್ಕೆ ಧಕ್ಕೆ ತರುವಂತಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯಬ್ಬ ಪ್ರಜೆಗೂ ತನ್ನ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸುವ ಹಕ್ಕಿದೆ, ಕೇವಲ ರಾಷ್ಟ್ರೀಯ ರಾಜಕೀಯ ಪಕ್ಷಗಳು ಇರಬೇಕು ಅನ್ನುವುದು, ಜನರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತೆ.

ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿಗೆ ನ್ಯಾಯ ಸಿಕ್ಕಿಲ್ಲ
ಕಳೆದ ಆರು ದಶಕಗಳಿಂದ ನಮ್ಮ ನಾಡಿನಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಯಾವುದೇ ಸಮಸ್ಯಗಳಿಗೆ ಸಂಪೂರ್ಣ ಪರಿಹಾರ ನೀಡಲು ಅಥವಾ ಕೊಡಿಸಲು ಸಾಧ್ಯವಾಗಿಲ್ಲ. ಅಂತರ್ ರಾಜ್ಯ ವಿವಾದಗಳಿದ್ದಾಗ, ರಾಜ್ಯ-ಕೇಂದ್ರ ಸರಕಾರದ ವ್ಯವಹಾರಗಳಲ್ಲಿ ಅನ್ಯಾಯವಾದಾಗ, ರಾಷ್ಟ್ರೀಯ ಪಕ್ಷಗಳಿಂದ ನ್ಯಾಯ ಸಿಗುವುದು ಕಷ್ಟ ಸಾಧ್ಯ, ಕಾರಣ ಇವರುಗಳು ತಮ್ಮ ಹೈಕಮಾಂಡಿನ ಆದೇಶದಂತೆ ನಡೆಯಬೇಕು. ಆದರೆ ಈ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲು ಪ್ರಾದೇಶಿಕ ಪಕ್ಷಗಳು ಸಮರ್ಥವಾಗಿರುತ್ತವೆ, ಅವುಗಳು ಯಾವುದೇ ಹೈಕಮಾಂಡಿನ ಮರ್ಜಿಗಾಗಿ ಕಾಯಬೇಕಾಗಿಲ್ಲ. ಪ್ರಾದೇಶಿಕ ಪಕ್ಷಗಳು ಒಳ್ಳೆಯ ಆಡಳಿತ ನೀಡಲು ಸಾಧ್ಯ ಅನ್ನುವುದನ್ನು ನೆರೆಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ತೋರಿಸಿಕೊಟ್ಟಿವೆ. ಈ ನಾಡಿಗೆ ಬೇಕಾಗಿರುವುದು ಸರಿಯಾದ ನಾಯಕತ್ವ ಇರುವ, ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಪಕ್ಷಗಳು.